Tuesday, December 28, 2010

ಹಂಪಿ ಪ್ರವಾಸ - ೧

ಮುನ್ನುಡಿ

ಅದೇನೋ ಗೊತ್ತಿಲ್ಲ ಹಂಪಿ ಎಂದರೆ ಒಂದು ಬಗೆಯ ಆಕರ್ಷಣೆ, ಇನ್ನೂ ಹೋಗಿಲ್ಲವಲ್ಲ ಅನ್ನೋ ಬೇಸರ. ಅಲ್ಲಿಗೆ ಹೋಗೋ ಪ್ರವಾಸದ ಅವಕಾಶ ಸಿಕ್ಕಾಗೆಲ್ಲಾ ಎನೋ ಅಡ್ಡ ಬಂದು ತಪ್ಪಿಹೋದ ಹಿಂದಿನ ಅನೇಕ ಅನುಭವಗಳು. ಒಟ್ಟಿನಲ್ಲಿ ಹಂಪಿ ನನಗೆ ಹತ್ತಿರವಿದ್ದು ದೂರವಿದ್ದ ಸುಂದರಿಯೇ. ಈ ಸುಂದರಿ ಬಗ್ಗೆ ಆಲೂರು ವೆಂಕಟರಾಯರ ಪುಸ್ತಕ ಓದಿದಾಗ ಅವರಿಗೆ ಆದ ರೋಮಾಂಚನ, ಅವರು ಅನುಭವಿಸಿದ ಆ ಭೂಮಿಯ ಪ್ರೇರಪಣಾ ಶಕ್ತಿ ಇವೆಲ್ಲವೂ ಅಲ್ಲಿಗೆ ಸೆಳೆಯುತ್ತಲೇ ಇದ್ದವೂ. ಆದರೆ ನನಗೆ ಅಲ್ಲಿ ಹೋಗಿ ಸುಮ್ಮನೆ ಗೋಡೆ ಮುಟ್ಟಿಬರುವ ಆಸೆಗಿಂತ, ಆಗಿನ ಕಾಲ ಹೇಗೆ ಇತ್ತು, ನಮ್ಮ ಕನ್ನಡ ಸಾಮ್ರಾಜ್ಯ ಹೇಗೆ ಬಾಳಿತ್ತು, ಇಂದು ಹಾಳು ಹಂಪೆ ಎಂದು ಕರೆಯುತ್ತರಲ್ಲ ಅದು ಕಟ್ಟಡಗಳ ಸ್ಥಿತಿಯೋ ಇಲ್ಲ ನಮ್ಮ ಕನ್ನಡಿಗರ ಮನಸ್ಸಿನ ಸ್ಥಿತಿಯೋ ಎಂದು ತಿಳಿಯುವ ಭಾವನೆ. ಅಲ್ಲಿ ಹೋಗಿ ಒಬ್ಬ ಸಾಮನ್ಯ ಇತಿಹಾಸ ವಿಧ್ಯಾರ್ಥಿಯ ಹಾಗೆ ಅಲ್ಲಿ ಅಲೆಯಬೇಕು, ಬಂಡೆ, ಗುಡ್ಡ ಹತ್ತಬೇಕು, ಅವರು ಓಡಾಡಿದ ಜಾಗದಲ್ಲಿ ಓಡಾಡಿ ನಾವು ಪುಳಕಿತರಾಗಬೇಕು ಎಂದು ನಿಶ್ಚಯಿಸಿ ಕೇವಲ ೩ ದಿನದಲ್ಲಿ ಇದೇ ಕೆಲ್ಸ ಮಾಡಲು ಹೊರಟಿದ್ದ ತಂಡವನ್ನು ಸೇರಿಕೊಂಡೆ.


ಹಂಪಿ ಹಿನ್ನಲೆ

ತುಂಗಾ-ಭ್ರದ್ರ ತೀರದಲ್ಲಿ ಇರುವ ಪಂಪಾದೇವಿಯ ಕ್ಷೇತ್ರಕ್ಕೆ ಹಂಪಿ,ಹಂಪೆ ಎಂದು ಹೆಸರು ಬಂದಿದೆ. ಹೆಸರನ್ನು ಗಮನಿಸಿದರೆ ನಮಗೆ ಇಲ್ಲಿ ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಹಾಗೇಯೆ ಪಂಪೆ, ಪಂಪಿ ಹೋಗಿ ಹಂಪೆ, ಹಂಪಿ ಆಗಿರಬಹುದು ಎಂದು ನನ್ನ ಅನಿಸಿಕೆ.




ಬೆಂಗಳೂರಿನಿಂದ -ಹಂಪಿಗೆ

ಇದು ಬೆಂಗಳೂರಿನಿಂದ ೩೪೩ ಕಿ.ಮೀ ದೂರದಲ್ಲಿದೆ, ಬೆಂಗಳೂರಿನಿಂದ ದಿನವೂ ರಾಜಹಂ(ಹಿಂ)ಸಾ ಬಸ್ ಸೇವೆ ಇದೆ. ಇದು ಕ.ರಾ.ರ.ಸಾ.ಸಂ ಅವರ ಸೇವೆ, ರಾತ್ರಿ ೧೧.೦೦-೧೧.೩೦ ಒಳಗೆ ಹೋರಟು ಅಲ್ಲಿ ಬೆಳಿಗ್ಗೆ ಸೇರುತ್ತದೆ. ಮೇಲೆ ಹೇಳಿದ ಹಾಗೆ ಆ ದಿನಗಳಲ್ಲಿ ಇದ್ದ ರಸ್ತೆಯ ಅನುಭವ ಮಾಡಿಸಿದ್ದು ಚಿತ್ರದುರ್ಗ ಮತ್ತು ಹೊಸಪೇಟೆ ಮಾರ್ಗ. ಈ ದಾರಿಯಲ್ಲಿ ರಸ್ತೆ ಅನ್ನುವುದೇ ಇಲ್ಲ. ಬಸ್ ನಿಮ್ಮನ್ನು ಎತ್ತಿ, ಕುಲುಕಿ, ಲಾಲಿ ಹಾಡೊತ್ತೆ. ಆ ರಸ್ತೆಯಲ್ಲೂ ಕೂಡ ಅಭಿವೃದ್ಧಿಯೇ ನಮ್ಮ ಮಂತ್ರ ಅನ್ನುವ ರಾಜ್ಯ ಸರ್ಕಾರದ ಬೋರ್ಡುಗಳು ಅಣಕಿಸಿದರೆ ಅದು ನಿಮ್ಮ ವಕ್ರದೃಷ್ಟಿ ಅಷ್ಟೆ.

ಆ ದುರ್ಗಮ ದಾರಿಯಲ್ಲಿ ಸಂಚರಿಸುವಾಗ. ಬಸ್ಸಿನಲ್ಲಿ ನನ್ನ ಜೊತೆ ಇದ್ದವರಿಗೆ ನನ್ನ ತರಹ ಎನ್ ಕಚಡಾ ರಸ್ತೆಯಪ್ಪ ಎಂದು ಬೈದುಕೊಳ್ಳುವುದೇ ಆಗಿತ್ತು. ನಮ್ಮದು ಈ ಕಥೆ ಆದರೆ ಹಿಂದಿನ ಕಾಲದಲ್ಲಿ ಇದಕ್ಕಿಂತ ದುರ್ಗಮ ದಾದಿಯಲ್ಲಿ ಬಂದು ಯುದ್ದ ಮಾಡುತ್ತ ಇದ್ದ ಬೇರೆ ರಾಜ್ಯದ ಜನರ ಕಿಚ್ಚನ್ನು ಮೆಚ್ಚ್ದಬೇಕಲ್ಲವೇ ?? . ನಮಗೆ ೨ ತಾಸು ಪ್ರಯಾಣ ಸಾಕಪ್ಪ ಅನಿಸಿದರೆ ಅವರಿಗೆ ವರ್ಷಗಟ್ಟಲೇ ಪ್ರಯಾಣ ಯಾವ ಮಟ್ಟಿಗೆ ತ್ರಾಸು ಕೊಟ್ಟಿರಬಹುದು ಅಲ್ಲವೇ ?. ಆ ದಿನಗಳಿಗೆ ಕರೆದುಕೊಂಡು ಹೋದ ಆ ರಸ್ತೆಗೆ ಧನ್ಯವಾದ ಸಲ್ಲಿಸುತ್ತ.. ಮುಂದುವರೆಯೋಣ.

ಹಂಪಿಗೆ ಬಸ್ ಬೇಡ ಎಂದರೂ ೨ -೨.೩೦ ಗಂಟೆ ತಡವಾಗಿ ತಲಪುತ್ತಾನೆ. ಅದಕ್ಕಿಂತ ಉತ್ತಮ ಆಯ್ಕೆ ಎಂದರೆ ರೈಲಿನಲ್ಲಿ ಹೋಗುವುದು. ಅದೇ ಹಂಪಿ ಎಕ್ಸಪ್ರೆಸ್ ನಲ್ಲಿ ಹೊಸಪೇಟೆ ತನಕ ಬಂದು ಅಲ್ಲಿಂದ ಆಟೋ-ಬಸ್ ನಲ್ಲಿ ಹಂಪಿಯನ್ನು ತಲುಪಬಹುದು. ಇದು ಎಲ್ಲಾ ರೀತಿಯಲ್ಲಿ ಉತ್ತಮವಾದ ಆಯ್ಕೆ. ಹಾಯಾಗಿ ನಿದ್ದೆ ಮಾಡಿಕೊಂಡು, ಕೈಕಾಲಿಗೆ ಶ್ರಮ ಕೊಡದೇ ಸಾಗಬಹುದು. ಹೊಸಪೇಟೆಯಿಂದ ಹಂಪಿ ಸರಿ ಸುಮಾರು ೧೫-೧೬ ಕಿ.ಮಿ ಪ್ರಯಾಣ. ದಾರಿ ಮಧ್ಯ ಹಳೆ ಕಟ್ಟಡಗಳು ಕಂಡರೆ ಅದಕ್ಕಿಂತ ಹೆಚ್ಚು ಅಲ್ಲಿನ MLA ಆನಂದ್ ಸಿಂಗನ ಹೆಸರು ಕೃಷ್ಣದೇವರಾಯಕ್ಕಿಂತ ಹೆಚ್ಚು ಕಾಣಿಸುತ್ತದೆ ಮತ್ತು ಬೇಡವೆಂದರೂ ನೋಡ ಸಿಗುತ್ತದೆ.

ವಾಸ



ಹಂಪಿಯು ಮೊದಲಿಂದ ಅನೇಕ ದೇಶದವರನ್ನು ಆಕರ್ಷಣೆ ಮಾಡುತ್ತಲೆ ಇತ್ತು, ಇವತ್ತು ಹೇಗೆ ಮುಂಬಾಯಿ ವಾಣಿಜ್ಯ ನಗರ ಆಗಿದೆಯೋ ಹಾಗೆ ಅಂದಿನ ದಿನಗಳಲ್ಲಿ ಹಂಪಿ ದೊಡ್ಡ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿತ್ತು. ಆಮದು -ರಫ್ತು ಎರಡೂ ಎಗ್ಗಿಲ್ಲದೇ ಸಾಗಿತ್ತು, ಅಲ್ಲಿನ ಜನರಿಗೆ ಬೇರೆ ದೇಶದವರು ಹೊಸರಲ್ಲ ಮತ್ತು ಅವತ್ತು ಹೇಗೆ ಮರ್ಯಾದೆ ಕೊಡುತ್ತಾರೋ ಇವತ್ತಿಗೂ ಕೊಡುತ್ತಾರೆ, ಕಾರಣಗಳು ಬೇರೆ ಇರಬಹುದು ಆದರೆ ಆ ಜನರ ಬಗ್ಗೆ ಇರುವ ಮೋಹ ಮತ್ತು ಆಕರ್ಷಣೆ ಕಮ್ಮಿ ಆಗಿಲ್ಲ. ಇವತ್ತು ಹಂಪಿ ಗಲ್ಲಿ ಗಲ್ಲಿಯಲ್ಲಿ ಮನೆಗಳೂ LODGING ರೂಮುಗಳಾಗಿ ಪರಿವರ್ತನೆ ಆಗಿದೆ. ಸರಿ ಸುಮಾರು ೩೦೦೦ ರೂಮುಗಳು ಇದೆ. ಪ್ರತಿ ರೂಮಿನಲ್ಲಿ ಎಸಿ, attached bathroom, double cot ಹೀಗೆ ಅನೇಕ ವ್ಯವಸ್ಥೆಗಳು ವಿದೇಶಿಯರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಸೀಸನ್ ನಲ್ಲಿ ಪ್ರತಿ ರೂಮಿನ ಬೆಲೆ
೧೦೦೦-೨೦೦೦ ತನಕ ಹೋಗುತ್ತದೆ. ಸೀಜನ್ ಅಂದರೆ ಅಕ್ಟೋಬರ್ ಇಂದ ಫೆಬ್ರವರಿ ತನಕ , ಆಮೇಲೆ ಬಿಸಿಲು ಕಾಲದಲ್ಲಿ ಸೂರ್ಯನ ಶಾಖಕ್ಕೆ ಕಲ್ಲುಗಳು tan ಆಗಿ ಊರು ಬಿಕೋ ಅನ್ನುತ್ತ ಇರುತ್ತದೆ, ಹಾಗೇಯೆ ಮಳೆಗಾಲದಲ್ಲಿ ಕೂಡ ಹೆಚ್ಚು ಜನರು ಕಾಣ ಬರುವದಿಲ್ಲ.

ಊಟ-ಊಪಚಾರ



ವಿರುಪಾಕ್ಷ ಸ್ವಾಮಿ ದೇವಸ್ಥಾನದ ಹತ್ತಿರ ಅನೇಕ ಹೋಟೆಲ್ ತಲೆ ಎತ್ತಿವೆ, ಮುಖ್ಯವಾಗಿ ತುಂಗಾ ಸಂಗಮದಲ್ಲಿ ತಿಥಿ ಇತರೆ ಪಿತೃಕಾರ್ಯಗಳು ನಡೆಯುವ ಕಾರಣ ಅನೇಕ ಪೂಜಾರಿ ಮನೆಗಳಲ್ಲಿ ಊಟ ಸಿಗುತ್ತದೆ. ಇನ್ನು ವಿದೇಶಿಯರನ್ನೇ ಗಮನದಲ್ಲಿ ಇಟ್ಟುಕೊಂಡು ಅನೇಕ
ರೆಸ್ತೋರೆಂಟ್ ತಲೆ ಎತ್ತಿವೆ. ಅಲ್ಲಿನ ಮಂಡಕ್ಕಿ, ಮಿರ್ಚಿ, ಪಡ್, ಇಡ್ಲಿ-ವಡೆ ತಿಂಡಿಗೆ ಆದರೆ, ಒಳ್ಳೆ ಸಾರು,ಸಾಂಬಾರು,ಮಜ್ಜಿಗೆ ಹುಳಿ, ಚಟ್ನಿ ಊಟ ಮಧ್ಯಾಹ್ನ ಮತ್ತು ರಾತ್ರಿಗೆ ಸಿಗುತ್ತದೆ.ಅದನ್ನು ಬಿಟ್ಟರೆ ದಾರಿ ಮಧ್ಯೆ ಎಳೆನೀರು ಸಿಗುತ್ತದೆ, ಆದರೆ ಆ ಭೂಮಿಯ ಗುಣವೋ ಎನೋ
ನೀರು ತುಂಬಾ ಉಪ್ಪಾಗಿ ಇರುತ್ತದೆ. ಸಾಲದಕ್ಕೆ ಬಿಸಿಲಿನ ಝಳಪು ತುಂಬ ಇರುವದರಿಂದ ಎಲ್ಲಿಗೆ ಹೋದರು ಕುಡಿಯಲು ಚೆನ್ನಾಗಿ ನೀರು ತೆಗೆದುಕೊಂಡು ಹೋಗುವುದು ಉತ್ತಮ.

Monday, November 01, 2010

ಡಬ್ಬಿಂಗ್ ಬೇಕೇ ಬೇಡವೇ

ವಿಜಯ ಕರ್ನಾಟಕದ ನವೆಂಬರ್ ೧ ರ ವಿಶೇಶ ಲೇಖನ ಡಬ್ಬಿಂಗ್ ಕನ್ನಡವನ್ನು ಚಿರನಿದ್ರೆಗೆ ದೂಡಲಿದೆ ಹುಷಾರ್
ಲೇಖನವನ್ನು ಮೊದಲಿಗೆ ಓದಿದಾಗ ನನಗೆ ನಿಜಕ್ಕೂ ಭಯ ಆಯಿತು, ಅಯ್ಯೊ ನನ್ನ ಕನ್ನಡ , ೨೦೦೦ ಸಾವಿರ ವರುಷ ಹಳೆಯ ಇತಿಹಾಸ ಇರುವ ಕನ್ನಡ, ವಿಶ್ವ ಲಿಪಿಗಳ ರಾಣಿ ಎಂದು ಹೆಸರು ಪಡೆದಿರುವ ಕನ್ನಡ, ಜ್ಞಾನಪೀಠ ಪ್ರಶಸ್ತಿಗಳನ್ನು ಹೆಚ್ಚು ಪಡೆದಿರುವ ಕನ್ನಡ ..ಕೇವಲ ಡಬ್ಬಿಂಗ್ ಮಾಡಿದರೆ ಚಿರನಿದ್ರೆಗೆ ಜಾರುವ ಮಟ್ಟಿಗೆ ಬಂದಿದೆಯಾ ?. ಇವತ್ತು ಕನ್ನಡ ಚಿತ್ರಗಳ ಮೇಲೆ ನಮ್ಮ ಭಾಷೆ ನಿಂತಿದೆಯಾ ಅನ್ನೋ ಗೊಂದಲವನ್ನು ಮೊದಲಿಗೆ ಈಡು ಮಾಡಿತು.


ಇದು ಶೀರ್ಶಿಕೆಯಾಗಿ ಇದಕ್ಕೆ ತಕ್ಕ ಉತ್ತರ ಮತ್ತ್ತು ಯಾಕೆ ವಿರೋಧಿಸಬೇಕು ಎನ್ನುವ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಇಡಿ ಲೇಖನದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಿದರೂ ಬೇಕಾದ ವಿಷಯ ಸಿಗುವುದು ಕಮ್ಮಿಯೇ ಅಥಾವ ಇಲ್ಲವೇ ಇಲ್ಲ ಎನ್ನಬಹುದು.
ಲೇಖಕರು ಮೊದಲಿಗೆ ಕನ್ನಡ ಸಾಯುತ್ತ ಇದೆ ಎಂದು ತಿರ್ಮಾನಿಸಿ ಬಿಟ್ಟಿದ್ದಾರೆ, ಇನ್ನು ಅವರು ಯಾರಿಗೆ ಹುಷಾರ್ ಹೇಳುತ್ತ ಇದ್ದಾರೋ ಗೊತ್ತಿಲ್ಲ. ಲೇಕನ ಶುರುವಾಗುವುದೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಕೈಲಾಗತನ ಮತ್ತು ಅದರಲ್ಲಿ ಕುಳಿತಿರುವ ಅಧಿಕಾರಶಾಹಿಗಳ ಇಬ್ಬಂದಿತನ ಮತ್ತು ಇದರಿಂದ ಆಗಿರುವ ದುಷ್ಪರಿಣಾಮಗಳ ಬಗ್ಗೆ. ಅದರೆ ಲೇಖಕರು ಒಂದು ಕಡೆ ಇ ವರ್ಗವೇ ಇವತ್ತಿನ ಅವಸಾನಕ್ಕೆ ಕಾರಣ ಎಂದು ಬೈದು, ಅದೇ ಅವಸರದಲ್ಲಿ ಮುಂದೆ ಆ ಜನರೇ ಬಡಬಡಿಸುವ ಸವಕಲು ವಿಷಯವನ್ನೇ ಹೇಳುತ್ತ ಇದ್ದಾರೆ.

ಮೊದಲ ಅರ್ಧ ಭಾಗ , ಶೀರ್ಶಿಕೆ ಕನ್ನಡ ಚಲನಚಿತ್ರೋದ್ಯಮ ಬೆಳೆಯದಿರಲು ಕಾರಣಗಳೇನು ಎಂದು ಆಗಿದ್ದರೆ ಲೇಖನಕ್ಕೆ ಸ್ವಲ್ಪ ಅರ್ಥ ಬರುತ್ತ ಇತ್ತು, ಇದು ಸರಿ ಇಲ್ಲ, ಅಯ್ಯೊ ಆ ಕಡೆ ಜನ ಹೀಗೆ , ನಮ್ಮ ಅನೇಕ ಜಿಲ್ಲೆ ನಮ್ಮ ಕೈ ತಪ್ಪಿ ಹೋಗಿವೆ. ನಮ್ಮ ಸ್ವಾಭಿಮಾನದ ಕೊರತೆ, ಇದಕ್ಕೆಲ್ಲಾ ನೀವು ಕನ್ನಡಿಗರೇ ಕಾರಣ ಎಂದು ಬೈದು, ಆ ಸಮಸ್ಯೆಗಳ ಮೂಲಕ್ಕೆ ಇಳಿಯದೇ ದೂರುವ ಪ್ರವೃತ್ತಿಯನ್ನೇ ಮುಂದುವರೆಸುತ್ತಾರೆ.

ತದನಂತರ ಡಬ್ಬಿಂಗ್ ಸಮರ್ಥಿಸುವ ಜನರ ಮೇಲೆ ಇವರ ಕೋಪ ತಿರುಗಿ ಅವರನ್ನು ಆಡಿಕೊಂಡು, ಅವರಿಗೆ ಕೆಲವು ಅಡ್ಡ ಹೆಸರಿಟ್ಟು
ಅವರನ್ನು ಎಲ್ಲಾ ಸಮಸ್ಯೆಗಳಿಗೆ ದೂರುವುದು ಮತ್ತೊಮ್ಮೆ ಲೇಖಕರ ಬ್ರಾಂಡಿಂಗ್ ಸಂಸ್ಕ್ರುತಿ ತೋರಿಸುತ್ತದೆ. ಡಬ್ಬಿಂಗ್ ಬೇಕು ಅನ್ನುವ ಕನ್ನಡದ ಕಂದಮ್ಮಗಳು , ಯಾಕೆ ಬೇಕು ಎನ್ನುತ್ತಿವೆ ಎಂಬ ಮಾತನ್ನು ಕೇಳಿಸಿಕೊಳ್ಲದೇ, ಅದಕ್ಕೆ ಸರಿಯಾದ ಉತ್ತರ ಕೊಡದಿರುವ ಲೇಖಕರ ಸೂಕ್ಷ್ಮ ಮತ್ತು ಸಂವೇದನೆ ಬಗ್ಗೆ ಮಾತನಾಡುತ್ತಾರೆ ಮತ್ತು ತಾವೇ ಕನ್ನಡ ವೀರಪುತ್ರರೂ, ತಮ್ಮ ವಿಚಾರವನ್ನು ವಿರೋಧಿಸುವರು ಖನ್ನಡ ವೀರಪುತ್ರರು ಎಂಬ ಫರ್ಮಾನು ಹೊರೆಡಿಸುತ್ತಾರೆ.

ಮುಂದೆ ಯಾರಿಗೂ ಗೊತ್ತಿಲ್ಲದ ಇನ್ನೊಂದು ವಿಸ್ಮಯ ಕೂತೂಹಲಕಾರಿ ವಿಷಯವನ್ನು ನಮಗೆ ಹೊರಗೆಡುವುತ್ತಾರೆ.ಅದೆನೆಂದರೆ
ಅಸ್ಸಾಮಿ, ಬೆಂಗಾಳಿ, ಚೈನೀಸ್. ಭೋಜಪುರಿ, ಮರಾಠಿ ಚಿತ್ರಗಳು ಬೆಂಗಳೂರಿನ ಮಲ್ಟಿಪ್ಲೆಕ್ಸನಲ್ಲಿ ರಾಜರೋಷವಾಗಿ ಪ್ರದರ್ಶನಗೊಳ್ಳುತ್ತ ಇದೆ ಎನ್ನುತ್ತಾರೆ. ಆ ಭಾಷೆಗಳ ಚಿತ್ರಗಳು ಬೆಂಗಳೂರಿನ ಯಾವ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತ ಇದೆ ಎಂದು ಹೇಳಿದರೆ, ಅಲ್ಲಿನ ಜನಕ್ಕೆ ಈ ಮಾಹಿತಿಯನ್ನು ಕೊಡೋಣ, ಯಾಕೆಂದರೆ ಅಲ್ಲಿಯ ಚಿತ್ರಗಳು ಅಲ್ಲಿಯೇ ಓಡುತ್ತ ಇಲ್ಲ, ಅವಸಾನವಾಗಿದೆ ಎಂದು ಅಲ್ಲಿ ಜನ ನಂಬಿದ್ದಾರೆ. ಲೇಖಕರ ಡಿಸ್ಕವರಿಯನ್ನು ಅವರಿಗೆ ತಿಳಿಸಿದರೆ
ನಿಜಕ್ಕೂ ಅಲ್ಲಿಯ ಜನ ತುಂಬ ಸಂತೋಶ ಪಡುತ್ತಾರೆ.


ಒಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನುವದಕ್ಕೆ ಲೇಖಕರು ಅದೇ ಹಳಸಲು, ಸವಕಲು ಕಾರಣಗಳನ್ನು ಕೊಟ್ಟಿದ್ದಾರೆ .

A) ಕನ್ನಡ ಸಂಸ್ಕ್ರುತಿ- ನೆಲೆಗಟ್ಟು ನಾಶ ಆಗುತ್ತದೆ ಎಂದು.

ಏನು ಹಾಗೆಂದರೆ? ಯಾವ ಕನ್ನಡ ಸಂಸ್ಕೃತಿ ಸಿನಿಮಾ ನೋಡುವುದರಿಂದ ಉಳಿದಿದೆ ಅಥವಾ ಅಳಿದಿದೆ ತಿಳಿಸಿ. ನೀವು ಸಂಸ್ಕೃತಿ ಉಳಿಯಲು ಡಬ್ಬಿಂಗ್ ಬರಬಾರದು ಅನ್ನುವುದು ಗಟ್ಟಿಯಾದ ವಾದವಲ್ಲ. ಡಬ್ಬಿಂಗ್ ಮಾಡಿದರೆ ಸಂಸ್ಕೃತಿ ಹಾಳಾಗುತ್ತೆ ಅನ್ನುವವರು ನೇರವಾಗಿ ಆಯಾ ಭಾಷೆಗಳಲ್ಲೇ ಸಿನಿಮಾ ಬಂದಲ್ಲಿ ಸಂಸ್ಕೃತಿ ಜೊತೆಗೆ ಭಾಷೇನೂ ಹೋಗುತ್ತೆ ಅನ್ನೋದನ್ನು ಯಾಕೆ ಒಪ್ಪಲ್ಲ. ಭಾಷೆ ವಿಷಯಕ್ಕೆ ಬಂದರೆ ಸಿನಿಮಾದಿಂದಾನೆ ಭಾಷೆ ಉಳಿಯಲ್ಲ, ಅನ್ನುವರ್ಥದಲ್ಲಿ ಭಾಷೆ ಉಳಿಸೋದು ಭ್ರಮೆ ಅನ್ನೋ ಮಾತಾಡ್ತೀರಿ. ಆದ್ರೆ ಸಂಸ್ಕೃತಿ ಅಂದ ಕೂಡ್ಲೆ ಡಬ್ ಮಾಡುದ್ರೆ ಸಂಸ್ಕೃತಿ ಹಾಳಾಗುತ್ತೆ ಅಂತೀರಿ. ಯಾಕೀ ದ್ವಂದ್ವ ನಿಲುವು?

ಸಿನಿಮಾ ಅನ್ನುವುದು ಹುಟ್ಟುವ ಮುಂಚೆ ನಾಟಕ ಯಕ್ಷಗಾನ ಹರಿಕಥೆ ಇತ್ಯಾದಿ ದೇಸಿ ಕಲೆಗಳಿದ್ದವಲ್ಲಾ, ಅವೆಲ್ಲಾ ಸಿನಿಮಾ ಬಂದಿದ್ದರಿಂದ ಅಳಿದು ಹೋದವೇ? ಅಳಿದಿಲ್ಲಾ ಅನ್ನುವುದು ನಿಮ್ಮ ಉತ್ತರವಾದರೆ ಕನ್ನಡ ಚಿತ್ರರಂಗವೂ ಡಬ್ಬಿಂಗ್‍ ಸಿನಿಮಾಗಳ ನಡುವೆ ಉಳಿಯುವುದಿಲ್ಲ ಅನ್ನುವ ಆತಂಕ ಇಲ್ಲ. ಅಕಸ್ಮಾತ್ ನಿಮ್ಮ ಉತ್ತರ ಅಳಿದಿವೆ ಅನ್ನುವುದಾದರೆ ಸಾವಿರಾರು ವರ್ಷದ ಇತಿಹಾಸ ಇರುವ ಇಂತಹ ಕಲೆಗಳನ್ನು ಸಿನಿಮಾ ನಾಶ ಮಾಡುತ್ತಿರುವುದರಿಂದ ಚಿತ್ರರಂಗಕ್ಕೆ ಬೀಗ ಜಡಿಯಬೇಕು ಅನ್ನುವ ವಾದ ಒಪ್ಪಬೇಕಾಗುತ್ತದೆ.

ಮಚ್ಚು ಲಾಂಗು ಸೆಕ್ಸು ಕ್ರೈಮು ಇಲ್ಲದ ಕನ್ನಡ ಚಿತ್ರಗಳು ಎಲ್ಲಿವೆ ಹೇಳಿ? ಕನ್ನಡ ಜನತೆ ಸಿನಿಮಾ ನೋಡಿ ಸಂಸ್ಕೃತಿ ಉಳಿಸಿಕೊಳ್ಳೋ ಅಗತ್ಯ ಇದೆಯಾ ಸಾರ್? ಸಂಸ್ಕೃತಿಯ ನಾಶ ಅನ್ನುವುದು ಸರಿಯಾದ ಬಳಕೆಯಲ್ಲ, ಅದು ಸಂಸ್ಕೃತಿಯ ಬದಲಾವಣೆ ಅಷ್ಟೆ. ಚಿತ್ರಮಂದಿರದಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣದ, ಕಂಡರೂ ವಾರದಲ್ಲಿ ಎತ್ತಂಗಡಿಯಾಗುವ ಕಲಾತ್ಮಕ ಚಿತ್ರದ ಹಣೆಪಟ್ಟಿಯ “ಗುಬ್ಬಚ್ಚಿಗಳು” ಥರದ ಸಿನಿಮಾ ತೆಕ್ಕೊಂಡು ಕೂತರೆ ಜನಾ ನೋಡಬೇಕಲ್ಲಾ ಸ್ವಾಮಿ?


ಇದನ್ನು ಹಿಂದೆ ತುಂಡು ಲಂಗದಲ್ಲಿ ನೃತ್ಯ ಮಾಡುತ್ತ, ಅಂಗ ಪ್ರದರ್ಶನ ಮಾಡುತ್ತ ಇರುವ ಅಂದಿನ ನಟಿಯರೂ ಕೂಡ ಹೇಳುತ್ತಾ ಬಂದಿದ್ದಾರೆ. ಇಲ್ಲ, ಕೈನಲ್ಲಿ ಮಚ್ಚು ಲಾಂಗ್ ಹಿಡಿದುಕೊಂಡು ಮಾರುದ್ದ ಡೈಲಾಗ್ ಹೊಡೆಯುವ ನಮ್ಮ ನಟರು ಪುನರ್ ಉಚ್ಚಾರ ಮಾಡಿದ್ದಾರೆ, ಅವರ ಭಕ್ತರ ಹಾಗೆ ಲೇಖಕರು ಅದನ್ನೆ ಉಚ್ಚರಿಸಿರುವುದು

ಮಚ್ಚು-ಲಾಂಗ್ - ಹೊಡೆತ- ಬಡೆತ ಚಿತ್ರಗಳು ನಮ್ಮ ಕನ್ನಡದಲ್ಲಿ ೧೦.ಕ್ಕೆ ೭ ರ ಹಾಗೆ ಬರುತ್ತಾ ಇದೆ. ಇದೇನಾ
ನಮ್ಮ ನೆಲೆಗಟ್ಟು ?

ಬೇರೆ ಭಾಶೆಯ ಚಿತ್ರವನ್ನು ಮಕ್ಕಿ-ಕಾಮಕ್ಕಿ ಇಳಿಸುವಾಗ ಆ ಭಾಷೆಯ ಗಿರಿಜಾ ಮೀಸೆ, ಬಟ್ತೆ, ಗೌಂಡರ್ ಉಡುಗೆ ( ಪುಟ್ನಂಜ , ಯಜಮಾನ ನೆನಪಿಸಿಕೊಳ್ಳಿ) ನಮ್ಮ ಸಂಸ್ಕ್ರುತಿಯನ್ನು ತೋರಿಸುತ್ತ ಇದೆಯಾ.

ವರ್ಶಕ್ಕೆ ೧೨೦+ ಚಿತ್ರಗಳು ತೆರೆಕಾಣುತ್ತವೆ, ಇವುಗಳಲ್ಲಿ ಕನ್ನಡ ಸಂಸ್ಕ್ರುತಿಯನ್ನು ತೋರಿಸುವ, ನಮ್ಮ ನೆಲೆಗಟ್ಟನ್ನು ಸಾರುವ
ಯಾವ ಚಿತ್ರ ಬಂದಿದೆ ?... ಅಲ್ಲ ಪ್ರೇಕ್ಷಕ ಕನ್ನಡಿಗರು ಸಂಸ್ಕ್ರುತಿ, ಆಚಾರ ಹೀನರೇ ??. ಕನ್ನಡ ಚಿತ್ರಗಳಿಂದ ನಾವು ನಮ್ಮ ಸಂಸ್ಕ್ರುತಿ, ಆಚಾರ ಕಲಿಯುವ ಕರ್ಮ ಬಂದಿದೆಯಾ ?. ಅಷ್ತಕ್ಕೂ ಕನ್ನಡದ ಸಂಸ್ಕ್ರುತಿಯನ್ನು ಕಲಿಸುವ ಮೇಷ್ಟ್ರ ಸ್ಥಾನವನ್ನು
ಚಿತ್ರರಂಗದ ಮಂದಿ ಹೊಂದಿದ್ದಾರಾ ?. ಚಿತ್ರರಂಗ ಇಲ್ಲದೇ ಇದ್ದಾಗ ಕನ್ನಡಿಗರು ಅನಾಗಾಗರಿಕರು ಆಗಿದ್ದರಾ ಇಲ್ಲ ಶಿಲಾಯುಗದಲ್ಲಿ ಇದ್ದರಾ ?. ಹೊಸದಾಗಿ ನಮ್ಮ ಸಂಸ್ಕ್ರುತಿಯನ್ನು ಕಲಿಯಲು ಇಲ್ಲ ಉಳಿಸಲು.

ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನುವುದು ಕನ್ನಡಿಗರ ಮೂಲಭೂತ ಹಕ್ಕು. ಅದನ್ನು ಬೇಡ ಅನ್ನೋದು ವ್ಯಕ್ತಿ ಸ್ವಾತಂತ್ರ ಹರಣ ಮಾಡಿದಂತೆ ಅಲ್ಲವೇನು?

B) ಲಕ್ಷಾಂತರ ಜನ ಬೀದಿಗೆ ಬೀಳುತ್ತಾರೆ.

ಅಲ್ಲ ಸ್ವಾಮಿ ಲೇಖನದಲ್ಲಿ ಭಾಷೆ ಭಾಷೆ ಎಂದು ಹೇಳಿ ಕೊನೆಗೆ ಬಂದು ನಿಂತಿದ್ದು ೨೫ ಸಾವಿರ ಕಾರ್ಮಿಕ ವರ್ಗಕ್ಕೆ. ಸ್ವಾಮಿ ಪ್ರೇಕ್ಷಕ ಜನ ಇದಕ್ಕಿಂತ ಹೆಚ್ಚಿಗೆ ಇದೆ, ಅದರಲ್ಲೂ ಕೋಟಿಯಲ್ಲಿ ಇದೆ. ಮೊನ್ನೆ ಒಬ್ಬರು ಕನ್ನಡ ನಿರ್ಧೇಶಕರು ಹೇಳಿದ ಹಾಗೆ ಕನ್ನಡ ಚಿತ್ರರಂಗ ಕಾರ್ಮಿಕ ವರ್ಗದಲ್ಲಿ ಮೂಲತ ಕನ್ನಡಿಗರು ಎಷ್ತು ಜನ ಇದ್ದಾರೆ, ಮುಕ್ಕಾಲು ಭಾಗ ವಲಸೆ ಬಂದವರೇ ಎಂದು. ಸುಮ್ಮನೆ ಉದಯ ಟಿವಿಯ ಸಿಬ್ಬಂದಿ ವರ್ಗ ಇಲ್ಲ ವಾಹಿನಿಗಳ ತಂತ್ರಜ್ಹರ ವರ್ಗದ ಹೆಸರನ್ನು ನೋಡಿ, ನಿಮಗೆ ತಿಳಿಯತ್ತದೆ. ಕನ್ನಡ ಚಿತ್ರವೂ ಇಲ್ಲದಿದ್ದಾಗ ಕೂಡ ಕೆಲಸ ಇಲ್ಲದೇ ನಿರುದ್ಯೋಗವಿರಲಿಲ್ಲ. ೫ ಲಕ್ಷ ಜನ ನಂಬಿಕೊಂಡಿದ್ದ ಲಾಟರಿ ಮುಚ್ಚಿದಾಗ ಇರದ ಅಕ್ಕರೆ
ಈಗ ನಮ್ಮ ಜನರಿಗೆ ಬಂದಿರುವುದು ವಿಪರ್ಯಾಸ. ೬ ಕೋಟಿ ಜನಕ್ಕೆ ಸಹಾಯ ಆಗುತ್ತದೆ ಎಂದರೆ ೨೫ ಸಾವಿರ ಯಾವ ಮಹಾ ?
ಅಷ್ತಕ್ಕೂ ಭಾಷೆಗಿಂತ ದೊಡ್ಡದು ಯಾವುದು ಇದೆ ?


ಯಾಕೆ? ಡಬ್ಬಿಂಗ್ ಶುರುವಾದರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯೋದು ನಿಂತುಹೋಗುತ್ತಾ? ವರ್ಷಕ್ಕೆ 125 ಸಿನಿಮಾ ತೆಗೆಯೋ ಉದ್ಯಮ ಯಾಕೆ ಬೀದಿಗೆ ಬೀಳುತ್ತೆ ಹೇಳಿ. ರಿಮೇಕು ರಾಜರು ಮನೆ ಸೇರ್ಕೋತಾರೆ ಅಷ್ಟೆ. ಈ ನೆಲದ ಸೊಗಡಿನ ಸಂಸ್ಕೃತಿಯ ಚಿತ್ರಣವನ್ನು ಯಾವ ಡಬ್ಡ್ ಸಿನಿಮಾನೂ ಕೊಡಕ್ಕಾಗಲ್ಲ. ಡಬ್ಬಿಂಗ್ ನಿಷೇಧ 60ರ ದಶಕದಲ್ಲಿ ಶುರುವಾಗಿದ್ದು. ಆದರೆ ಅದಕ್ಕೂ ಮುನ್ನ ಡಬ್ಬಿಂಗ್ ಇದ್ದ ಕಾಲದಲ್ಲಿ ಮಾಯಾಬಜಾರ್ ಥರದ ಚಿತ್ರಗಳು ಡಬ್ ಆಗಿ ಬರುತ್ತಿದ್ದ ಕಾಲದಲ್ಲಿ ಕನ್ನಡದಲ್ಲಿ ಡಾ.ರಾಜ್‍ಕುಮಾರ್ ಎನ್ನುವ ಪ್ರತಿಭೆ ಹೊರಬಂದಿದ್ದು, ರಣಧೀರ ಕಂಠೀರವ ಥರದ ಸಿನಿಮಾ ಬಂದಿದ್ದು. ಇಷ್ಟಕ್ಕೂ ಆಗ ಡಬ್ಬಿಂಗ್ ಇತ್ತು, ಇಲ್ಲಿ ಸಿನಿಮಾ ತೆಗೆಯೋ ಅನುಕೂಲಗಳೇ ಇರಲಿಲ್ಲ. ನಿರ್ಮಾಪಕರು, ನಿರ್ದೇಶಕರು, ಸ್ಟೂಡಿಯೊ, ಸಂಗೀತ, ಕ್ಲಾಪ್ ಬಾಯ್, ಲೈಟ್ ಬಾಯ್ ಎಲ್ಲಕ್ಕೂ ಚನ್ನೈಯನ್ನೇ ಅವಲಂಬಿಸುವಂತಹ ಪರಿಸ್ಥಿತಿ ಇದ್ದಾಗಲೂ ಕನ್ನಡ ಚಿತ್ರಗಳು ಬರುತ್ತಿದ್ದವಲ್ಲ ಸ್ವಾಮಿ? ಯಾಕೆಂದರೆ ನಮ್ಮತನ ಅನ್ನೋದನ್ನು ಡಬ್ ಚಿತ್ರಗಳು ಬಿಂಬಿಸಲು ಸಾಧ್ಯವೇ ಇಲ್ಲ. ಹಾಗಾಗಿ ಕನ್ನಡ ಚಿತ್ರಗಳು ಆಗಲೂ ಬರುತ್ತಿದ್ದವು.
ಮುಂದೂ ಬರುತ್ತಿರುತ್ತವೆ

೬೦ ದಶಕದಲ್ಲಿ ಇದ್ದ ಸ್ಥಿತಿಯೇ ಇನ್ನು ಇದೆಯಾ , ನಾವು ೫೦ ವರುಷದಲ್ಲಿ ಎನು ಉದ್ದಾರ ಆಗಿಲ್ವ್ವ, ಹಾಗಿದ್ದಲ್ಲಿ ಇನ್ನು ಮುಂದೆ ಆಗುತ್ತಿವಿ ಅನ್ನೋದು ಎಷ್ಟರ ಮಟ್ಟಿಗೆ ಸತ್ಯ ?. ಆಗಿದ್ದ ನಿಜಾವಾದ ಸಮಸ್ಯೆಯನ್ನು ಇನ್ನೂ ಸುಮ್ಮನೆ ಗುಮ್ಮ ತೋರಿಸುವುದು ಹೇಗಪ್ಪ ಇದೆ ಎಂದರೆ

ಹಿಂದೆಲ್ಲಾ STD ಬೂತ್ ಅಂದ್ರೆ ಸಕ್ಕತ್ ದುಡ್ಡು ಹುಟ್ತಿತ್ತು, ಪರಊರಿಗೆ ಕರ ಮಾಡಬೇಕು ಎಂದರೆ
ಬೂತ್ ಮುಂದೆ ಸಾಲು ಸಾಲು ನಿಲ್ಲಬೇಕಿತ್ತು, ಅನೇಕರಿಗೆ ಅದು ಉದ್ಯೋಗ ಕೊಟ್ಟಿತ್ತು, ಅದರಲ್ಲೂ ಹೆಚ್ಚಾಗಿ ಅಂಗವಿಕಲರಿಗೆ.

ಮೊಬೈಲ್ ಬಂತು, ಆಗ ಆ ಜನ ನಮ್ಮ ಕೆಲ್ಸ ಹೋಗೊತ್ತೆ, ಬೀದಿಗೆ ಬೀಳ್ತಿವಿ ಯಾರು ಕರ್ನಾಟಕದಲ್ಲಿ ಮೊಬೈಲ್ ಬಳಸಬಾರದು, ಎಲ್ಲಾ ನಮ್ಮ ಬೂತ್ ಬಳಸಬೇಕು ಅಂತ ಹಠ ಮಾಡಿದ್ದರೆ ನೀವೆಲ್ಲಾ ಒಪ್ಪಿಕೊಂಡು ಸುಮ್ಮನೆ ಇರುತ್ತಿದ್ದರಾ, ಅಲ್ಲ ಈಗ ಮೋಬೈಲ್ ಬಳಸುವಾಗ ಆ ಕುಟುಂಬಗಳ ಬಗ್ಗೆ ಯೊಚನೆ ಮಾಡಿದ್ರಾ ಯಾವಗಾಲಾದರೂ ??
ಹೀಗೆ ಹೊಸತನ, ತಂತ್ರಜ್ಞಾನ ಬೇಡ ಅಂತ ಹೇಳುವುದು ಬರಿ ಕಲಾವಿದರಲ್ಲ ಇಡಿ ಕನ್ನಡಿಗರೇ ಎಲ್ಲರ ಮುಂದೆ ಬೀದಿಗೆ ಬೀಳುವ ಹಾಗೆ ಮಾಡುತ್ತದೆ


C) ಇವಾಗಿನ ಕನ್ನಡ ಚಿತ್ರಗಳಿಂದ ಕನ್ನಡಿಗರಿಗೆ ಸಂಪೂರ್ಣ ನ್ಯಾಯ ಮತ್ತು ಕೆಲ್ಸ ಸಿಗುತ್ತ ಇದೆಯಾ ?

೧) ಪರಭಾಷೆಯ ಹಿರೋಯಿನ್ ಯಾಕೆ ಬೇಕು ??, ಹಾಗೆ ಮಾಡಿದಾಗ ನಮ್ಮ ಕನ್ನಡ ನಟಿಯರಿಗೆ ಕೆಲ್ಸ ಹೋಗೊಲ್ವಾ

೨) ಪರಭಾಷೆಯ ಸವೆದ ಸಂಗೀತ ಯಾಕೆ ಬೇಕು, ಅದನ್ನು ಕೇಳಿದವರಿಗೆ ನೇಟಿವಿಟಿ ಅನಿಸುತ್ತದೆಯಾ , ಇಲ್ಲ ಸ್ವಂತಿಕೆ ಇದೆ ಅನಿಸುತ್ತೆದಾ. ಅಷ್ಟಕ್ಕೂ ಸಂಗೀತ ನಿರ್ಧೇಶಕರ ಕೆಳಗಡೆ ಅನೇಕ ಕೆಲ್ಸ ಮಾಡುವರಿಗೆ ಕೆಲಸ ಹೋಗುವದಿಲ್ಲವಾ ?

೩) ಕನ್ನಡ ಗಾಯಕರು ಬೇಡ, ಎಲ್ಲರಿಗೂ ಕುಮಾರ್ ಸಾನು, ಸೋನು ನಿಗಮ್, ಚಿತ್ರಾನೇ ಬೇಕು. ಯಾಕೆ ಕನ್ನಡದ ಗಾಯಕರಿಗೆ ಇದರಿಂದ ಅವಕಾಶ ತಪ್ಪಿ ಹೋಗೋಲ್ವಾ

೪) ಕ್ಯಾಮೆರಾಮೆನ್ ಕೂಡ ಬೇರೆ ಭಾಶೆಯವರೆ ಬೇಕು, ಆಗ ಯಾಕೆ ಯಾರೂ ಚಕಾರ ಎತ್ತೊಲ್ಲ ?

೫) ಶೂಟಿಂಗ್ ಮಾಡೊಕ್ಕೆ ಪರದೇಶವೇ ಬೇಕಾ, ನಮ್ಮ ಕನ್ನಡದ ನೆಲದಲ್ಲಿ ತೆಗೆದರೆ ಎಷ್ಟೋಂದು ಪ್ರವಾಸೋದ್ಯಮಕ್ಕೆ ನೆರವಾಗಿ ಕನ್ನಡಿಗರಿಗೆ ಸಹಾಯ ಆಗೊಲ್ವಾ, ಇದರಿಂದ ಅನೇಕ ಕನ್ನಡ ಕುಟುಂಬಗಳಿಗೆ ಅನ್ಯಾಯ ಆಗೊಲ್ವಾ

೫) ಹಾಡಿನಲ್ಲಿ ಕುಣಿಯುವದಕ್ಕೆ ವಿದೇಶಿ ಕಲಾವಿದರೇ ಬೇಕಾ , ನಮ್ಮ ನೆಲದ ಮಕ್ಕಳು ಗೆಜ್ಜೆ ಹಾಕೊಂಡು ಇದ್ದಾರ ಕುಣಿಯದೇ ಇರೊಕ್ಕೆ ?, ಅವರಿಗೆ ಕೆಲ್ಸ ಹೋಗೊಲ್ವಾ

೬) ಮಚ್ಚು,ಲಾಂಗುಗಳ ಸಾಲು ಸಾಲು ಚಿತ್ರ ಬರುತ್ತಿದೆಯೆಲ್ಲಾ, ಅದೇನು ಈ ಕನ್ನಡ ಮಣ್ಣಿನ ಸಂಸ್ಕೃತಿ ತೋರಿಸುತ್ತದಾ ಇಲ್ಲಾ ನಮ್ಮ ನೇಟಿವಿಟಿ, ಕ್ರಿಯೇಟಿವಿಟಿ ತೋರಿಸುತ್ತದೆಯಾ ?

೭) ಪರಭಾಶೆಯ ಚಿತ್ರವೂ ಬೆಂಗಳೂರಿನಲ್ಲಿ ಆ ಭಾಶೆಯಲ್ಲಿ ತೆರೆಕಂಡು ೧-೨ ವರುಶ ಆದಮೇಲೆ ಕನ್ನಡಕ್ಕೆ ಡಿಫೆರೆಂಟ್ ಅಂತ ಹಳಸು ಕೊಟ್ಟು, ಆ ಚಿತ್ರಕ್ಕೆ ಸರ್ಕಾರದ ಸಬ್ಸಿಡಿ, ತೆರಿಗೆ ವಿನಾಯತಿ ಕೇಳುವ ಬದಲು ಅದನ್ನೇ ಮೊದಲೆ ಕನ್ನಡದಲ್ಲಿ ತಂದರೆ ತಪ್ಪೇನು ?

ಹೀಗೆ ಸಾಲು ಸಾಲು ಕೊಡಬಹುದು, ಎಷ್ಟೊಂದು ಜನರಿಗೆ ಅನ್ಯಾಯ ಆಗುತ್ತಿದೆ ಎಂದು, ಇದೆಲ್ಲಾ ಇದ್ದರೂ ನಾವು ಅದನ್ನು ಕನ್ನಡ ಸಿನೆಮಾ ಅನ್ನುವುದು ಆದರೆ ಡಬ್ಬಿಂಗ್ ಮಾಡಿದ ಚಿತ್ರ ಯಾಕೆ ಕನ್ನಡ ಚಿತ್ರ ಆಗುವದಿಲ್ಲ ??

ಡಬ್ಬಿಂಗ್ ಬೇಡ ಅನ್ನುವವರು ಮೊದಲು ಅಪ್ಪಟ್ತ ಕನ್ನಡ ಚಿತ್ರ ಮಾಡಲಿ ಆಮೇಲೆ ಪರ-ವಿರೋಧ ಮಾತಾಡೊಣ ಅಲ್ವಾ


D) ಪ್ರೇಕ್ಷಕ ಚಲನಚಿತ್ರ ನೋಡುವುದು ಸಂಸ್ಕ್ರುತಿ ಕಲಿಯುವದಕ್ಕೆ

ಕನ್ನಡಿಗರೇ ಅಲ್ಲ ಜಗತ್ತಿನಲ್ಲಿ ಯಾವುದೇ ಪ್ರೇಕ್ಷಕ ಚಲನಚಿತ್ರ ಮಂದಿರಕ್ಕೆ ಹೋಗುವುದು ಮನರಂಜನೆಗೆ. ತನ್ನ ಮನಸ್ಸಿನಲ್ಲಿ ೧೦೮ ಅಡ್ಡಿ,ಚಿಂತೆಗೆಳಿದ್ದರೂ ದುಡ್ಡು ಕೊಟ್ಟು ೩ ಗಂಟೆ ಅವುಗಳನು ಮರೆಯಲು ಪ್ರಯತ್ನ ಮಾಡುತ್ತಾನೆ. ಅವನಿಗೆ ನಾವು ಕೊಟ್ಟಿದ್ದು ನೀನು ನೋಡಬೇಕು, ಹೆಚ್ಚಿನದು ಕೇಳಬಾರದು ಎಂದರೆ ಅವನು ತನ್ನ ಮನರಂಜನೆಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಆ ಸೂಕ್ಷತೆಯನ್ನು ಅರ್ಥ ಮಾಡಿಕೊಳ್ಳದೇ ಅಯ್ಯೊ .. ನಮ್ಮ ಕನ್ನಡಿಗರಿಗೆ ಸ್ಬಾಭಿಮಾನವಿಲ್ಲ , ನಮ್ಮ ಕೈ ತಪ್ಪಿ ಹೋಗಿವೆ ಆ ಜಿಲ್ಲೆಗಳೂ ಎಂದು ಬಾಯಿ ಬಡಿದುಕೊಂಡರೆ ವಾಸ್ತ್ವವ ಅರ್ಥ ಮಾಡಿಕೊಳ್ಳದ ಲೂಸ್ ಟಾಕ್ ಆಗುತ್ತದೆ. ಬಡವ ನೀ ಮಡಗಿದಂಗೆ ಇರು ಎಂದು ಕನ್ನಡ ಪ್ರೇಕ್ಷಕರನ್ನು ಕಾಣುವ ತಾತ್ಸರವೇ ಕನ್ನಡ ಚಿತ್ರರಂಗವನ್ನು ಈ ಪರಿಗೆ ನಿಲ್ಲಿಸಿದೆ.

ಅಷ್ತಕ್ಕೂ ಸ್ವಂತ ಕಥೆಯನ್ನು ಕೊಟ್ಟ ಚಿತ್ರಗಳನ್ನು ಕನ್ನಡಿಗ ಅಪ್ಪಿಕೊಂಡಿಲ್ಲವೇ ??


E) ಕನ್ನಡ ಚಿತ್ರರಂಗ ಮಸಣದ ಕಡೆ ಮುಖ ಮಾಡಿದೆ.

ಇದಕ್ಕೆ ಪ್ರೇಕ್ಷಕ ಕಾರಣರಲ್ಲ, ಇದು ಸ್ವಂಕೃತ ಅಪರಾಧ, ಅದಕ್ಕೆ ಡಬ್ಬಿಂಗ್ ಬೇಡ ಅನ್ನುವುದು ನಿಜವಾದ ಸಮಸ್ಯೆಯಿಂದ ದೂರ ಹೋದ ಹಾಗೆ. ಅಷ್ತಕ್ಕೂ ಮಾತಿಗೆ ಮುಂಚೆ ತಮಿಳ್-ತೆಲುಗು ಕಡೆ ನೋಡಿ ಅನ್ನುವ ಜನರಿಗೆ ಅಲ್ಲಿರುವ ಡಬ್ಬಿಂಗ್ ಕಾಣುವದಿಲ್ಲವೇ ?

ಕಾರಣಗಳನ್ನು ಹುಡುಕುತ್ತ ಹೋದರೆ ..ನಮಗೆ ಕಾಣುವುದು

೧) ಸರಿಯಾದ ವರ್ಗ ಅಧಿಕಾರದಲ್ಲಿ ಇಲ್ಲದೇ ಇರುವುದು.
೨) ಕನ್ನಡ ಚಲನಚಿತ್ರೋದ್ಯಮವನ್ನು ನಡೆಸುತ್ತ ಇರುವವರು ಭಟ್ಟಂಗಿತನ
೩) ಚಲನಚಿತ್ರ ಮಂದಿರದ ಕೊರತೆ
೪) ಸವಕಲು ರಿಮೇಕ್ ಚಿತ್ರಗಳು.
೫) ಮಾರುಕಟ್ಟೆ ವಿಸ್ತರಣೆ ಮಾಡದೇ ಇರುವುದು
೬) ಸಮರ್ಥ ನಾಯಕತ್ವದ ಕೊರತೆ.
೭) ಮುಖ್ಯವಾಗಿ ಕನ್ನಡ ಪ್ರೇಕ್ಷಕರನ್ನು ಕಡೆಗಣಿಸಿ, ಇವರು ನೋಡಿ ಇಷ್ಟ ಪಟ್ಟು ತೆಗೆದರೆ ನೋಡಬೇಕು ಇಲ್ಲವಾದರೆ ಇಲ್ಲ ಅನ್ನೊ ದೋರಣೆ.

ಪರಭಾಷೆಯನ್ನು ಕಲಿತು ಆಯಾ ಭಾಷೆಯನ್ನು ನೋಡಿದರು ತಪ್ಪಿಲ್ಲ, ಆದರೆ ಅದು ಕನ್ನಡದಲ್ಲಿ ಬರುವುದು ಬೇಡ ಅನ್ನುವ ದೋರಣೆಯಿಂದ ಅನುಭವಿಸುವುದು ಬರೀ ಭಾಷೆ ಅಷ್ಟೆ. ಕನ್ನಡಿಗನಿಗೆ ತನ್ನ ಮನರಂಜನೆ ತನ್ನ ಭಾಷೆಯಲ್ಲೇ ಸಿಕ್ಕರೆ ಮಾತ್ರ ಕನ್ನಡ ಉಳಿಯುವುದು ಇಲ್ಲ ಅದು ಚಿರನಿದ್ರೆಗೆ ಜಾರುವುದು.

Tuesday, July 13, 2010

ಒಂದೇ ಸುದ್ದಿ, ಹತ್ತು ಬೇರೆ ವರದಿ.


೨೦೦೪ ರಲ್ಲಿ ಅತಿ ಹೆಚ್ಚು ಸೆನ್ಸೆಷನ್ ಮಾಡಿದ್ದು ಶುಭಾ-ಗಿರೀಶ್ ಕ್ರೈಂ ಸ್ಟೋರಿ, ಆ ದಿನಗಳಲ್ಲಿ ಬರುತ್ತಿದ್ದ ರವಿ ಬೆಳೆರೆಗೆ ನಡೆಸಿಕೊಡುತ್ತಿದ್ದ ಕ್ರೈಂ ಸ್ತೋರಿಯಲ್ಲಿ ಬಂದು ದೊಡ್ಡ ಸಂಚಲನ ಮೂಡಿತ್ತು. ಮುಖ್ಯವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜನರ ಬಾಯಲ್ಲಿ ಇದೇ ಸುದ್ದಿ. ನನ್ನ ಅನೇಕ ಕನ್ನಡೇತರರು ಅರ್ಥ ಆಗದೇ ಇದ್ದರೂ ಆ ಕಾರ್ಯಕ್ರಮವನ್ನು ನೋಡಿದ್ದರು.
ಆ ಹುಡುಗಿಗೆ ಎನು ಬಂದಿತ್ತು ಕೇಡು, ಎಷ್ಟು ಮುದ್ದಾಗಿದ್ದ, ಒಳ್ಳೆ ಜಿರಳೆ ತರ ( ಹಾಯ್ ಬೆಂಗಳೂರು ನಲ್ಲಿ ಹಾಗೆ ಬಂದಿದ್ದ ನೆನಪು) ಇದ್ದಾನೆ ಅವಳ ಬಿಎಫ್ ಎಂದು ಕಾಮೆಂಟ್ ಮಾಡಿದ್ದರು.

ಮುಂದಿನ ದಿನಗಳಲ್ಲಿ ಅವಳು ಜಾಮೀನು ಪಡೆದು ಬಿಡುಗಡೆ ಹಕ್ಕಿಯಾದಳು ಆಮೇಲೆ ಅಮೇರಿಕಾಗೆ ಹೋದಳು, ಹುಡುಗ ಅಪ್ಪ ಪುತ್ರ ಶೋಕದಲ್ಲಿ ಸತ್ತರು ಅಂತ ಕೇಳಿ, ಈ ದೇಶದ ಕಥೆ ಇಷ್ಟೆ ಕಣಮ್ಮೋ , ಚಿಂತೆ ಮಾಡಿ ಲಾಭ ಇಲ್ಲಮ್ಮೋ ಅಂತ ಹಾಡಿದ್ದೆವು.

ನಿನ್ನೆ ಆ ಕೇಸ್ ಸತ್ತಿಲ್ಲ ಇನ್ನು ಜೀವಂತ ಇದೆ, ಅವಳಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿದು ಸಂತೋಷ ಆಯಿತು, ಆದರೆ ಆ ಸುದ್ದಿಯನ್ನು ಓದಲು ಬೇರೆ ಬೇರೆ ಮಾಧ್ಯಮಕ್ಕೆ ಮೊರೆ ಹೊಕ್ಕರೆ ಒಂದೊಂದರಲ್ಲಿ ಒಂದೊಂದು ಸುದ್ದಿ. ನಗಬೇಕೊ ಅಳಬೇಕೊ ತಿಳಿಯದು.

ಕನ್ನಡ ಪತ್ರಿಕೆಗಳು ಹುಡುಗ ಕೆಲ್ಸ ಮಾಡುತ್ತಿದ್ದ ಕಂಪೆನಿ ಬಗ್ಗೆ ಬಾಯಿಗೆ ಬಂದ ಹಾಗೆ ಬರೆದಿದ್ದರೆ, ಇನ್ನು ಬೆಂಗಳೂರು ಮಿರರ್ ಟ್ಯಾಬ್ ಸುಳ್ಳು ಸರಮಾಲೆಯನ್ನೇ ಸಾರಿಸಿದೆ.

ಮೊದಲಿಗೆ thatskannada ನೊಡೋಣ

ಹುಡುಗನ ಹೆಸರು ಗಿರೀಶ್, , ದೊಡ್ಡ ಸಾಫ್ಟ್ ವೇರ್ ಕಂಪೆನಿ ಇಂಟೆಲ್ ನಲ್ಲಿ ಉದ್ಯೋಗ , ಹುಡುಗಿ ಹೆಸರು ಶುಭಾ, ಅವಳು ಡಿಸಿಪಿ ಪರಶಿವಮೂರ್ತಿ ಮಗಳು.

"S Parashivamurthy ಅವರು DCP (central) , ಶುಭಾ ತಂದೆ ಅಲ್ಲ. ಆಗ ಈ ಕೇಸ್ ಬಗ್ಗೆ ಅವರು ಹೇಳಿದ್ದು ಎನು ಅಂತ ಗೊತ್ತ ?/

Parashivamurthy said: “We will ask her to postpone the trip till the case is solved. She is in a state of shock, and we are not suspecting her. Since she is the lone eyewitness to the murder and we need her co-operation to solve it.’’


ಕನ್ನಡಿಗರ ಹೆಮ್ಮೆ ವಿಜಯ ಕರ್ನಾಟಕಕ್ಕೆ ಬಂದರೆ
ಅದರ ಪ್ರಕಾರ ಗಿರೀಶ್ ಐಬಿಎಂ ನಲ್ಲಿ ಕೆಲಸ ಮಾಡುವ ಉದ್ಯೋಗಿ,

ಅದೇ ಹೊಸದಿಗಂತದ ಹಳೇ ಕಥೆ..
ರಿಂಗ್‍ರೋಡ್ ರಸ್ತೆಯಲ್ಲಿ ಇರುವ ಇನ್ಫೋಸಿಸ್ ಉದ್ಯೋಗಿ ಮೃತ ಗಿರೀಶ್

ಅದೇ ಕಥೆಯನ್ನು ಸಂಜೆವಾಣಿ ಕೂಡ ಹೇಳಿದೆ. ಒಂದರಲ್ಲಿ ದ್ವಿಚಕ್ರ ವಾಹನ ಎಂತಿದ್ದರೆ, ಇನ್ನೊಂದರಲ್ಲಿ ಕಾರ್ ಎಂತಿದೆ.

Bangalore Mirror ge ಬಂದ್ರೆ
ಅತಿ ಹೆಚ್ಚು ತಪ್ಪುಗಳು ಕಾಣಸಿಗುತ್ತದೆ.

"Shubha, however, was in love with her college friend from MMS College of Law in Jayanagar, Arun Verma. "

>> ಅದು ಬಿ ಎಂ ಎಸ್ ಕಾಲೇಜು.

November 30, 2003
Girish, 23, engaged to Shubha, 21, at Banashankari

>> ಆಗ ಗಿರೀಶನಿಗೆ ವಯಸ್ಸು ೨೭, ೨೩ ಅಲ್ಲ.

" Girish visited Shubha at her place and she persuaded him to go out with her for a drive and dinner. Girish took her to his Intel office and even introduced her to his colleagues after which they went to Thank God Its Friday (TGIF) on Old Madras Road for dinner. After dinner Shubha convinced him to go to the flight landing point, to which place Arun and Venkatesh followed them.
ಆದರೆ ಪೋಲಿಸ್ ಮತ್ತು ಎಲ್ಲಾ ಮಾಧ್ಯಮಗಳ ಪ್ರಕಾರ ..

On December 3, police said, Shubha forced Girish to take her out for dinner and made him stop his bike near the flight landing point on the Ring Road. At the same time, Arun and Venkatesh too, were waiting for them on the other side of the road.



ನಿಜಕ್ಕೂ ಸುದ್ದಿ ಇದರಲ್ಲಿ ಸರಿ ಇದೆ ಎನ್ನಬಹುದು.

It is the case of 27-year-old B.V. Girish, an Intel staffer, who was murdered by two assailants on December 3, Shubha was then 21. Daughter of lawyer Shankaranarayana, she was studying final year at BMS College of Law

ಮಜಾ ಅಂದರೆ, ಈ ಪ್ರಕರಣವನ್ನು ಕೇಳಿದ ಹುಡುಗರು ಒಂದೆ ಹಾಡು ಹಾಡುತ್ತ ಇದ್ದರು ..
"ಹುಡಿರ್ ಎಂದ್ರೆ ಡೇಜಂರಪ್ಪೋ ಹುಶಾರಾಗಿರಪ್ಪೋ , ಬೆಣ್ಣೆ ಮಾತು ನಂಬಿದ್ರೆ ಬೆಪ್ಪರಾಗ್ತಿರಪ್ಪೋ .."


Saturday, June 26, 2010

ಕೃಷ್ಣನ ಲವ್ ಸ್ಟೋರಿ - krishanan Love story - Movie Review

ಒಂದು ಚಿತ್ರ ಗೆಲ್ಲುವದಕ್ಕೆ ಇಲ್ಲ ಸೋಲುವದಕ್ಕೆ ನಿರ್ದೇಶಕನೇ ಕಾರಣ, ಅವನಿಲ್ಲದೇ ಎನೂ ಇಲ್ಲ. ಅತಿರಥ ಮಹಾರಥರನ್ನು ಹಾಕಿಕೊಂಡರೂ ಸರಿಯಾದ ವೇಗ ಮತ್ತು ಕಥೆ ಇರದಿದ್ದಲ್ಲಿ ಪ್ರೇಕ್ಷಕ ಮಹಾಪ್ರಭುವಿಗೆ ತಾತ್ಸರವೇ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತಿಚಿಗೆ ತೆರೆಕಂಡ ರಾವಣ್ ಚಿತ್ರ, ಚಿತ್ರದ ಎಲ್ಲ ವಿಭಾಗದಲ್ಲೂ ಭಾರತದ ದಿ ಬೆಸ್ಟ ಅಂತವರನ್ನೇ ಹಾಕಿಕೊಂಡ್ವಿ ಎಂದು ಮಾಡಿದ ಚಿತ್ರ ಸರಿಯಾದ ನಿರ್ದೇಶನ ಇಲ್ಲದಿದ್ದರಿಂದ ಮಕಾಡೆ ಮಲಗಿತು. ಇದೇ ಮಾತುಗಳನ್ನು ಬೇರೆ ರೀತಿಯಲ್ಲಿ ಹೇಳಿದ ಶಶಾಂಕ್ ಮಾತು ಅನೇಕರಿಗೆ ಅಪಥ್ಯ ಅನಿಸಿದರೂ ಆಶ್ಚರ್ಯವಿಲ್ಲ. ಮೊಗ್ಗಿನ ಮನಸ್ಸು ಎಂಬ ನಾಯಕಿ ಪ್ರಧಾನ ಚಿತ್ರವನ್ನು ತೆಗೆದು
ಅನೇಕ ಕನ್ನಡ ಚಿತ್ರ ನೋಡದ ಹುಡುಗಿಯರನ್ನು ತಮ್ಮ ಹಿಂದಿನ ಜೀವನಕ್ಕೆ ಕರೆದುಕೊಂಡು ಹೋಗಿ ನಾಸ್ಟಲಜಿಕ್ ಮಾಡಿದ
ಶಶಾಂಕ್ ಅವರಿಂದ ಅದಕ್ಕಿಂತ ಹೆಚ್ಚಾಗಿ ಈ ಚಿತ್ರದಲ್ಲಿ ಅಪೇಕ್ಷೆ ಇತ್ತು ಜೊತೆಗೆ ಚಂದ್ರು ತರ ಪ್ರೇಮ್ ಕಹಾನಿ ಮಾಡಿ ಬಿಡುತ್ತಾರ ಅನ್ನೋ ಭಯ ಕೂಡ. ಇವುಗಳ ನಡುವೆ ಚಿತ್ರಕ್ಕೆ ಹೋದಾಗ ಭರವಸೆ ಸುಳ್ಳಾಗದೇ ಇದ್ದಿದ್ದು ಸಂತೋಷದ ವಿಷಯ.

ಕನ್ನಡ ಚಿತ್ರಗಳನ್ನು ಗಾಂಧಿನಗರದಲ್ಲೇ ನೋಡಬೇಕು ಅನ್ನೊ ಹಿಂದಿನ ಕಾಲದ ರಿವಾಜಿಗೆ ಬಿದ್ದ ನಾನು ಸಾಗರ ಚಿತ್ರ ಮಂದಿರದಲ್ಲಿ
ನೋಡಿದೆ. ಹಾಗೆ ನೋಡುವದಕ್ಕೆ ಮುಖ್ಯ ಕಾರಣ ಚಿತ್ರವನ್ನು ನಾವು ಮಾತ್ರ ಅನುಭವಿಸದೇ ನೂರಾರು ಜನರ ಭಾವನೆಗಳ ಜೊತೆ ಅನುಭವಿಸಬಹುದು.


ಫುಲ್ ಪೀಲಿಂಗ್ ಮಗಾ ಅನ್ನೊ ಟ್ಯಾಗ್ ಲೈನೊಂದಿದೆ ಕೃಷ್ಣನ ಪ್ರೀತಿ ಕಥೆ ತೆರೆದುಕೊಳ್ಳೊತ್ತ್ರೆ. ಗಲ್ಲಿ ಕ್ರಿಕೆಟನೊಂದಿಗೆ ಆರಂಭವಾಗೋ ಕಥೆ ನಾಯಕ ಕೃಷ್ಣನ ಮತ್ತು ಅವನ ಗಾಡಿ ಹೊಂಬೆಗೌಡ ಜೊತೆ ಪರಿಚಯಗೊಳ್ಳೊತ್ತೆ. ಗುದ್ದಾಟಕ್ಕೆ, ಹೊಡೆದಾಟಕ್ಕೆ ಅವನ ಮತ್ತು ಅವನ ಪಟಾಲಂ ಸದಾ ರೆಡಿ. ಅವನ ಗೆಳೆಯರಲ್ಲಿ ಅದೇ ಪಂಡಿತ, ಹೀಗೂ ಉಂಟೆ ಮೈನಸ್ , ಡಡಿಯಾ ಚಿತ್ರ ವಿಚಿತ್ರ ಗೆಳೆಯರು ಸದಾ ನಾಯಕನ ಬೆನ್ನಿಗೆ ಅಂಟಿಕೊಂಡು ಗಾರ್ಮೆಟ್ಸಗೆ ಬಟ್ಟೆ ಸರಬಾರಾಜು ಮಾಡುತ್ತ, ಸಮಯ ಸಿಕ್ಕಾಗ ಗಲ್ಲಿ ಕ್ರಿಕೆಟ್ ಆಡುತ್ತ, ಧಮ್,ಎಣ್ಣೆ ಹಾಕುತ್ತ ಕಾಲ ಕಳೆಯುತ್ತ ಇರುತ್ತಾರೆ.

ನಾಯಕನದು ಚಿಕ್ಕ ಸಂಸಾರ, ಕಿರಾಣಿ ಅಂಗಡಿ ನಡೆಸುತ್ತ ಇರುವ ಅಪ್ಪ ಕೆಂಪೇಗೌಡ , ಗೃಹಿಣಿ ಅಮ್ಮ ಮತ್ತು ಮುದ್ದಿನ ತಂಗಿಯ ಜೊತೆ ಒಲವೇ ಜೀವನ ಲೆಕ್ಕಾಚಾರ ಹಾಕಿಕೊಂಡು, ತಿಂಗಳ ಕೊನೆಯಲ್ಲಿ ಖರ್ಚಿಗೆ ಎನಪ್ಪಾ ಮಾಡುವುದು ಅಂತ ಯೋಚನೆಯೊಂದು ಬಿಟ್ಟರೆ ಬೇರೆ
ಯಾವುದೇ ರೀತಿ ಕಮ್ಮಿ ಇರುವದಿಲ್ಲ. ಅಪ್ಪನಿಗೋ ಮಗನ ಮೇಲೆ ಅತಿಯಾದ ಮಮಕಾರ ಮತ್ತು ನಂಬಿಕೆ. ಪಿಯುಸಿ ಫೇಲ್ ಆಗಿದ್ದರೂ ಕೂಡ ಮುಂದೊಂದು ದಿನ ಉದ್ದಾರ ಆಗುತ್ತಾನೆ ಅನ್ನೊ ದೃಡ ವಿಶ್ವಾಸ. ಇವರ ಸಂಸಾರದಲ್ಲಿ ಇನ್ನೊಂದು ಪಾತ್ರ ಅಂದರೆ ಹೊಂಬೆಗೌಡ ಅನ್ನೊ ಎಮಹಾ ಬೈಕ್. ಇದು ವಂಶ ಪರ್ಯಂಪರವಾಗಿ ಮಗನಿಗೆ ಬಳುವಾಳಿಯಾಗಿ ಕೊಟ್ಟು ತನ್ನ ಅಪ್ಪನ ಹೆಸರನ್ನೇ ಇಟ್ಟಿರುತ್ತಾನೆ.

೨ ಸ್ಟ್ರೋಕ್ ಗಾಡಿಯಾದ ಇದು ಅವಗಾವಗ ಮುನಿಸು ಮಾಡಿಕೊಂಡು ನಿಲ್ಲುವುದು, ಚೆನ್ನಾಗಿ ಹೊಗೆ ಕಕ್ಕುವುದು ಮಾಡುವದರಿಂದ ಗೆಳೆಯರು ನಾಯಕನನ್ನು ಹೊಗೆ ಎಂದು ನಾಮಕರಣ ಮಾಡಿರುತ್ತಾರೆ. ಒಂದು ದಿನ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ನಾಯಕಿಯನ್ನು ಪರಿಚಯಿಸುವ ಕೆಲಸವನ್ನು ಹೊಂಬೆಗೌಡ ಮಾಡುತ್ತದೆ. ದಾರಿಯಲ್ಲಿ ಕೆಟ್ಟು ನಿಂತಾಗ ಅಲ್ಲೇ ನಾಯಕಿ ಆಡುತ್ತಿದ್ದ ಗಿಲ್ಲಿ ದಾಂಡು ಬಂದು ಇವನಿಗೆ ತಗಲುತ್ತದೆ. ಅಲ್ಲಿಂದ ಅವರ ಪರಿಚಯ, ಮಾತುಕತೆ , ಕಾಫಿಡೇಗೆ ಬಂದು ನಿಲ್ಲುತ್ತದೆ.
ಆದರೆ ಓದು ಮುಗಿಯುವ ತನಕ ಪ್ರೀತಿ ಪ್ರೇಮ ಎಲ್ಲಾ ಬೇಡ ನಾಯಕಿ ಕೃಷ್ನನ ಪ್ರೀತಿಗೆ ಬ್ರೇಕ್ ಹಾಕುತ್ತಾನೆ. ಆದರೂ ನಾಯಕನಿಗೆ ಸಂತೋಷ ಯಾಕೆ ಅಂದರೆ ಅವನ ಗಲ್ಲಿ ಕ್ರಿಕೇಟ್ ಎನಿಮಿ ಕೂಡ ನಾಯಕಿಯನ್ನು ಪಟಾಯಿಸಲು ಹೊರಟು ಇವರಿಬ್ಬರ ಮಧ್ಯೆ
ಪಂದ್ಯ ಎರ್ಪಾಡು ಆಗಿರುತ್ತದೆ.

ಗ್ಲಾಮರ್ ಗೊಂಬೆ ನಾಯಕಿಯಾಗಿ ರಾಧಿಕ ಗೀತಾ ಪಾತ್ರದಲ್ಲಿ ಹುದುಗಿಹೋಗಿದ್ದಾರೆ, ಗಾರ್ಮೆಂಟಿನಲ್ಲಿ ಕೆಲ್ಸ ಮಾಡುವ ಅಮ್ಮ
ಕುರುಪ್ಪು ಹಾಕುತ್ತ ರೋಲ್ ಕಾಲ್ ಮಾಡುವ ಅಣ್ಣ, ಅವನ ಪಾಪದ ದುಡ್ಡಿನಲ್ಲಿ ಒಳ್ಲೆ ಬಟ್ಟೆ ಹಾಕುತ್ತ ಮಜ ಮಾಡುವ ನಾಯಕಿ ಇರುವುದು ಮಾತ್ರ ಒಂದು ಕೊಂಪೆಯಲ್ಲಿ. ನೂರಾರು ಕನಸುಗಳು, ಆದರೆ ಅದನ್ನು ಹುದುಗಿಡಬೇಕಾದ ಬಡತನ ನಾಯಕಿಯನ್ನು
ಕೇವಲ ಓದಿಗೆ ಮೀಸಲಾಗಿ ಇಟ್ಟಿರುತ್ತದೆ.


ಸನ್ನೀವೇಶಗಳು ಅಂದುಕೊಂಡ ಹಾಗೆ ಇರದೆ ನಾಯಕಿಯ ಅಮ್ಮನಿಗೆ ಉಬ್ಬಸ ಬಂದು ಅವಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ, ಆಗ ನೆರವಿಗೆ ಬಂದ ನಾಯಕ ಬೇಡವೆಂದರೂ ಅವಳ ಮನಸ್ಸನ್ನು ಗೆಲ್ಲುತ್ತಾನೆ. ಅದರೆ ಅವನ ಕಂಜೂಸ್ ಬುದ್ದಿ, ಅವನ ಕಷ್ತವನ್ನು ಅರಿತ ನಾಯಕಿ ಅವನ ಸಂಗಡ ಇರುವ ತನಕ ಅವನೇ ಬೇಕೆಂದು ಬಯಸುತ್ತ, ಅವನು ಮರೆಯಾದ ಮೇಲೆ ವಾಸ್ಲವಕ್ಕೆ ಬಂದು ಇದೇ ಜೀವನವನ್ನು ಆಯ್ಕೆ ಮಾಡಿಕೊಳ್ಲಬೇಕಾ. ಪ್ರೀತಿ ಪ್ರೇಮ ಕೇವಲ ಮನಸ್ಸಿಗೆ ಚೆಂದ, ವಾಸ್ಲವಕ್ಕೆ ಬೇಕಾಗಿರುವುದೇ ಬೇರೆ ಎಂಬ
ತಾತ್ವಿಕ ನಿರ್ಣಯಕ್ಕೆ ಬರುತ್ತಾಳೆ ಮತ್ತು ಅದೇ ಅವಳ ಅಚಲ ನಿರ್ಧಾರಕ್ಕೆ ಕಾರಣ ಆಗುತ್ತದೆ.

ಆ ನಿರ್ದಾರವೇ ನಾಯಕನನ್ನು ಬಿಟ್ಟು ನರೇಂದ್ರನ ಜೊತೆ ಹೋಗುವುದು, ಧರ್ಮಸ್ಥಳಕ್ಕೆ ಹೋಗುವಾಗ ದುರ್ವಿಧಿಯಿಂದ ಅಪಘಾತವಾಗಿ ನರೇಂದ್ರ ಸಾವನ್ನು ಅಪ್ಪಿ, ನಾಯಕಿ ಮತ್ತೆ ಮನೆಗೆ ಸೇರುತ್ತಾಳೆ. ಆದರೆ ಸಮಾಜ ಅವಳನ್ನು ನೋಡುವ ರೀತಿ
ಆದ ನೋವು ಮತ್ತು ಕೃಷ್ಣನಿಗೆ ಮೋಸ ಮಾಡಿದೆ ಅನ್ನೊ ಗಿಲ್ಟ ಅವಳನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತ ಇರುತ್ತದೆ. ಆ ಹತಾಷೆ, ನೋವು, ಯಾರಿಗೂ ಹೇಳಿಕೊಳ್ಳಲಾಗದ ಬೇಸರ ಅವಳನ್ನು ಪ್ರಪಂಚದ ದೃಷ್ಟಿಯಲ್ಲಿ ಮಾನಸಿಕ ರೋಗಿಯನ್ನಾಗಿ ಮಾಡಿರುತ್ತದೆ.
ಆದರೆ ಅವಳನ್ನೇ ಬಯಸುವ ಕೃಷ್ಣ ಮತ್ತೆ ಅವಳನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸುತ್ತಾನೆ. ಆದರೆ ಅವನು ಮಾಡುವ ಪ್ರತಿಯೊಂದು ಪ್ರೀತಿಯ ಕೆಲಸ ನಾಯಕಿಗೆ ಇನ್ನಷ್ಟೂ ಹಿಂಸೆ ಉಂಟುಮಾಡುತ್ತ ಇರುತ್ತದೆ, ಇದನ್ನು ಯಾರೂ ಅರ್ಥ ಮಾಡಿಕೊಳ್ಳುವದಿಲ್ಲ.

ಮೊದಲಾರ್ಧ ನಿಧಾನವಾಗಿ ಸಾಗಿ, ಎನಪ್ಪಾ ಎಲ್ಲ ಕಡೆ ನಾಯಕಿ ಪ್ರಧಾನ ಚಿತ್ರ ಎಂದುಕೊಂಡು ಬರೆದಿದ್ದಾರೆ ಆದ್ರೆ ಎನು ಇಲ್ಲವಲ್ಲ
ಅಂದುಕೊಂಡಗಾ ಮಿಂಚಿನ ರೀತಿ ಎರಡನೇ ಭಾಗ ಸಾಗುತ್ತದೆ.

ನಾಯಕಿಯ ಹತಾಷೆ ಕೋಪವಾಗಿ ಬದಲಾದಾಗ ಹೆಣ್ಣು ಆಡುವ ರೀತಿ, ಮಾತು , ಹತಾಷೆ ಎಲ್ಲವನ್ನು ಬಹಳ ಚೆನ್ನಾಗಿ ಅನುಭವಿಸಿ
ರಾಧಿಕ ಪಂಡಿತ್ ಮಾಡಿದ್ದಾರೆ. ನಿಜಕ್ಕೂ ಅದನ್ನು ಶಶಾಂಕ್ ತೆಗೆಸಿದ್ದಾರೆ.

ನಾಯಕಿಯನ್ನು ಬದಲಾಯಿಸಿ ಮತ್ತೆ ಮದುವೆಯಾಗುತ್ತಾನ ಇಲ್ಲ ನಾಯಕಿ ಇವನ ಪ್ರೀತಿಯಿಂದ ಮತ್ತೆ ದೂರ ಆಗುತ್ತಾಳ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ.






+ve ಅಂಶಗಳು

- ಉತ್ತಮ ನಿರ್ಧೇಶನ
- ಸುಮಧುರ ಸಂಗೀತ ಮತ್ತು ಸಾಹಿತ್ಯ
- ಕೈಲಾಶ್ ಕೈರ್ ದ್ವನಿಯ ಹಾಡು.
- ರಾಧಿಕ ಅತ್ಯುತ್ತಮ ಅಭಿನಯ ಮತ್ತು ಮುದ್ದು ಮುಖ
- ಬೈಕ್ ಪಾತ್ರ
- ಪೋಷಕ ಪಾತ್ರಗಳು.
- ಲಕ್ಷೀ ಹೆಗಡೆಯ ಪಾತ್ರ
-

ಇದರ ಜೊತೆಗೆ ನನಗೆ ಸರಿ ಕಾಣದೇ ಇದ್ದಿದ್ದು..

- ನಾಯಕಿ ಕಾರಿನ ಅಪಘಾತದಲ್ಲಿ ನೋವು ಅನುಭವಿಸಿರುತ್ತಾಳೆ, ಅದ್ದರಿಂದ ಮತ್ತೆ ಕಾರಿನಲ್ಲಿ ಕೂರುವ ಬಗ್ಗೆ ಅವಳಿಗೂ ಮತ್ತು ಅವಳ ಮನೆಯವರಿಗೂ ಒಂದು ರೀತಿಯ ಭಯ, ಹಿಂಜರಿಕೆ ಇರುತ್ತದೆ, ಆದರೆ ಅದು ಚಿತ್ರದಲ್ಲಿ ಎಲ್ಲೂ ವ್ಯಕ್ತವಾಗಿಲ್ಲ. once bitten twice shy ಅನ್ನುವುದು ಸಾಮಾನ್ಯ ಅಂಶ, ಆದರೆ ಚಿತ್ರದಲ್ಲಿ ಆ ಸಂವೇದನೆ ಸ್ವಲ್ಪವೂ ವ್ಯಕ್ತವಾಗಿಲ್ಲ.

- ನಾಯಕಿ ಬಡತನ ಅವಳ ಡಿಸೈನರ್ ವೇರ್ ಬಟ್ಟೆಗಳಿಗೆ ಮತ್ತು ಮೇಕಪಗೆ ಅಡ್ಡಿ ಬರದೇ ಇರುವುದು.
ಇದರಿಂದ ಮೊದಲರ್ದದಲ್ಲಿ ನಾಯಕಿಯು ಕೊಂಪೆಯಲ್ಲಿ ವಾಸ ಮಾಡುವ ಹುಡುಗಿಯರ ಪಾತ್ರಕ್ಕೆ ಹೊಲದೇ ಮೊಗ್ಗಿನ ಮನಸ್ಸು ಹುಡುಗಿಯ ಪಾತ್ರಕ್ಕೆ ಹೋಲುತ್ತದೆ.

[ ಅದೇ ಎರಡನೇ ಭಾಗ ಇದಕ್ಕೆ ಅಪವಾದ. ಮನೋರೋಗಿ ನಾಯಕಿಯನ್ನು ಪರಿಚಯಿಸುವಲ್ಲಿ ಶಶಾಂಕ್ ಗೆದ್ದಿದ್ದಾರೆ.
ಯಾವುದೋ ಬಟ್ತೆ, ತಲೆ ಕೆದರಿದ ಕೂದಲು, ಬಟ್ಟೆ ಮೇಲೆ ಇರದ ವ್ಯವಧಾನ ಇದು ಮೊದಲಿನ ಕನ್ನಡಿ ಮುಂದೆ ನಿಂತು ಪರೀಕ್ಷೇಗೆ ತಡವಾಗಿ ಹೋದ ನಾಯಕಿಯ ತದ್ವಿರುದ್ದ ರೂಪ ಕೊಡುತ್ತದೆ. ಅವಳ ನೋವು ಮತ್ತು ಜೀವನದ ಮೇಲೆ ಬೇಸರ ಯಾವ ರೀತಿಯಲ್ಲಿ ಕಾಡಿದೆ ಎಂದು ಚೆನ್ನಾಗಿ ತೋರಿಸಿದ್ದಾರೆ. ]

- ಶರಣ್ ಕಾಮಿಡಿಯನ್ನು ಸರಿಯಾಗಿ ಬಳಸಿಕೊಳ್ಳದೇ, ಅವನ ಮೂಲಕ ಹೆಣ್ಣು ಪಟಾಯಿಸುವುದೇ ಬೆಡ್ಡಿಗೆ ಅನ್ನುವುದನ್ನು ತಮಾಷೆಯಾಗಿ ತೋರಿಸಿರುವ ರೀತಿ.

- ಅಜಯ್ ರಾವ್ ಎಲ್ಲಾ ಸನ್ನೀವೇಶದಲ್ಲೂ ಒಂದೇ ರೀತಿ ಅಭಿನಯ. ತಾಜಮಹಲ್ ಗುಂಗಿನಿಂದ ಆಚೆ ಬಂದರೆ ಅವರು ಒಳ್ಳೆಯದು.

- ಎಲ್ಲ ಪಾತ್ರಗಳಲ್ಲೂ ಹಣದ ಮುಂಗಟ್ಟು ಇರುತ್ತದೆ, ಆದರೆ ಅವರು ಹಾಕುವ ಬಟ್ಟೆಗಳು ಮಾತ್ರ ಬ್ರಾಂಡೆಡ್.

- ಅನಗತ್ಯ ಮಳೆ

- ೭೫% ನಿಜವಾದ ಕಥೆ ಎಂಬ ಶೀರ್ಶಿಕೆ ಇದ್ದರೂ, ಹಲವು ಕಡೆ ಸಿನೀಮಿಯ ಅನಿಸುತ್ತ ಇತ್ತು.

- ಯಾಕೋ ಉಮಾಶ್ರೀ ಬಡ ತಾಯಿ ಪಾತ್ರಕ್ಕೆ ಬ್ರಾಂಡ್ ಅಗುತ್ತ ಇದ್ದಾರೆ ಅನಿಸುತ್ತದೆ. ಹೇಗೆ ಬಿರಾದರ್ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆದ ಹಾಗೆ.


ಒಟ್ಟಿನಲ್ಲಿ ಸಂಸಾರ ಸಮೇತ ನೋಡಬಹುದಾದ ಉತ್ತಮ ಚಿತ್ರ. Dont miss it.

ನನ್ನ ರೇಟಿಂಗ್ ೭/೧೦.

ಇದನ್ನು ಬರೆಯಲು ಸಹಾಯ ಮಾಡಿದ Alvear Pedro Ximénez (1927 Montilia-Moriles) ಅವರಿಗೆ ತುಂಬು ಕೃತಜ್ಞತೆಗಳು.

Wednesday, June 23, 2010

ಕ್ರೀಡಾ ವರದಿ - ಕನ್ನಡ ಮಾಧ್ಯಮಗಳ ತಾತ್ಸಾರ

ಯಾಕೊ ಕಾಣೆ ಕನ್ನಡ ಪತ್ರಿಕೆಗಳಲ್ಲಿ ಮಾಧ್ಯಮದಲ್ಲಿ ರಾಜಕೀಯ,ಸಿನಿಮಾ ವಿಶಯಗಳು ಬಂದ ಹಾಗೆ ಅರ್ಥಶಾಸ್ತ್ರ, ಕ್ರೀಡೆ ಸುದ್ದಿಗಳು ಬರುವದಿಲ್ಲ. ಸುದ್ದಿಗಳೆಲ್ಲಾ ಸಪ್ಪೆ ಅನಿಸುತ್ತದೆ, ಅದರಲ್ಲೂ ಹೆಚ್ಚಾಗಿ ಆಂಗ್ಲದ ಅನುವಾದ ಅನಿಸುತ್ತದೆ. ಸ್ವಲ್ಪವೂ ಅನುಭವಿಸಿ ಬರೆದ ಹಾಗೆ ಕಾಣುವದಿಲ್ಲ.

ಪುಟ್ಬಾಲ್ ಹಬ್ಬ ನಡಿತಾ ಇರೊದೆನೊ ಸರಿ, ಆದರೆ ಅದರ ಸುದ್ದಿಗಳನ್ನು ಕನ್ನಡ ಪತ್ರಿಕೆಗಳಲ್ಲಿ ಓದುವಾಗ ಎಲ್ಲಾ ಮರೆತು ಓದಬೇಕು.
ಬರೀ ಬೇಕು ಅಂತ ಬರೆಯುತ್ತಾರೆ ಅನಿಸುತ್ತದೆ, ಒಂದೇ ಒಂದು ಲೇಖನದಲ್ಲೂ ಆಟ ನೋಡಿ ಬರೆದ ಹಾಗೆ ಕಾಣುವದಿಲ್ಲ, ಎಲ್ಲಾ ಆಂಗ್ಲದ
ಕನ್ನಡ ಅನುವಾದ ಅನಿಸುತ್ತದೆ.ಅನುವಾದ ಮಾಡುವರಿಗೆ ಹೆಸರುಗಳು ಬಹಳ ತಿಕ್ಕಾಟ ಕೊಡುತ್ತವೆ, ಅನುವಾದ ಮಾಡುವಾಗ ಕೂಡ ಅನೇಕ ತಪ್ಪುಗಳು ಕಾಣುತ್ತದೆ.

ಇಂದಿನ ವಿಜಯಕರ್ನಾಟಕ ನೋಡಿ..

ಪುಟ ೧೪ ರಲ್ಲಿ ಗುಂಪು ಎ ನಲ್ಲಿ ಮೆಕ್ಸಿಕೋ ಅಗ್ರಸ್ಥಾನದಲ್ಲಿ ಇದೆ, ಆದರೆ ಅಲ್ಲಿ ಉರುಗ್ವೆ ಇರಬೇಕಿತ್ತು.


ಅದೇ ೧೬ ಪುಟಕ್ಕೆ ಬಂದರೆ ಪೌಲೊ ರೈಸಿಯ ಇಟಲಿ ನಿರ್ಣಾಯಕ ಪಂದ್ಯ ಅನ್ನುವ ಲೇಖನದ ತುಂಬಾ ಸ್ಲೊವೇನಿಯಾ ಅಂತ ಬರೆದಿದ್ದಾರೆ, ಅದು ಸ್ಲೊವಾಕಿಯಾ. ಇದನ್ನು ಓದಿದರೆ ಅನಿಸುವುದು, ಆ ಲೇಖನವನ್ನು ಅನುವಾದಿಸಿದವರಿಗೆ ಸ್ವಲ್ಪವೂ ಪುಟ್ಬಾಲ್ ಗಂಧ-ಗಾಳಿ ಇಲ್ಲ ಅಂತ. ಯಾಕೆಂದರೆ ನಿನ್ನೆ ಪಂದ್ಯ ನೋಡಿದ್ದರೆ ಖಂಡಿತಾ ಈ ಪ್ರಮಾದ ಆಗುತ್ತ ಇರಲಿಲ್ಲ.




ಅದಕ್ಕೂ ಮಜಾ ಅಂದರೆ ಪೌಲೊ ರೋಸಿಯನ್ನು ಬ್ರೆಜಿಲ್ ಆಟಾಗಾರ ಎಂದು ಹೆಸರಿಸಿದ್ದಾರೆ, ನನಗೆ ಗೊತ್ತಿರುವ ಪೌಲೊ ರೋಸಿ ೧೯೮೨ ಇಟಲಿಯ ನಾಯಕ ಆಗಿದ್ದ, ಆ ಪಂದ್ಯಾವಳಿಯಲ್ಲಿ ೬ ಗೋಲು ಬಾರಿಸಿ ಗೋಲ್ಡನ್ ಬೂಟ್ ಪಡೆದ.


ಇನ್ನು ಹೊಸದಿಗಂತಕ್ಕೂ ತಪ್ಪುಗಳಿಗೂ ಹಳೇ ನಂಟಿದೆ. ಅದರ ಪುಟ ೯ರಲ್ಲಿ ಇಂಗ್ಲೆಡ್ ೨ - ಸ್ಲೊವೇನಿಯಾ ೦ ಪೋಟೊ ಅಂತ ಹಾಕಿ ಅದೇ ವರದಿಯಲ್ಲಿ "ಇಂಗ್ಲೆಡ್ ತಂಡಕ್ಕೆ ಎರಡನೇ ಗೋಲು ಬಾರಿಸಲು ಅವಕಾಶ ಲಭ್ಯವಾಗಲಿಲ್ಲ" ಅಂತ ಕೊಸರಿದೆ.



ಹಾಗಿದ್ದರೆ ಇನ್ನೊಂದು ಗೋಲು ಬಾರಿಸಿದವರು ಯಾರು ?
ಇಂತಹ ವಿಸ್ಮಯಗಳು ಕಣ್ ಮುಂದೆ ಬಂದಾಗ ನಂಬದೇ ಇರುವದಕ್ಕೆ ಸಾಧ್ಯವೇ ಇಲ್ಲ, ಆದರೆ ಬುದ್ದಿ ಇದನ್ನು ಒಪ್ಪುವದಿಲ್ಲ. ಇಂತಹ ಮಾಧ್ಯಮ ವಿಸ್ಮಯಗಳ ನಡುವೆ ನಮ್ಮಲ್ಲಿ ಮೂಡುವ ಒಂದೆ ಒಂದು ಪ್ರಶ್ನೆ ..ಹೀಗೂ ಉಂಟೆ.

Thursday, June 17, 2010

ನಾವು ಸ್ನೇಹ ಜೀವಿ ,,,ಲೋಕದಲ್ಲಿ ತಮಿಳ್ ಚಿರಂಜೀವಿ.

ನಿನ್ನೆ ತಮಿಳುನಾಡು ಸರಕಾರ ಚಿನ್ನತಂಬಿಯ ಸೌಹರ್ದತೆಯ ಕೆಲ್ಸವನ್ನು ಮೆಚ್ಚಿ ಶಾಲು ಹೊದಿಸಿ ವಿಶ್ವ ತಮಿಳು ಸಮಾವೇಶಕ್ಕೆ
ಆಹ್ಬಾನಿಸಿದ ಸುದ್ದಿ ಬಂದಿದೆ. ನಿಜಕ್ಕೂ ಇದು ಬಹಳ ಶ್ಲಾಷನೀಯ, ಶತಮಾನಗಳಿಂದ ಇದ್ದ ವೈರುಧ್ಯವನ್ನು ಕೇವಲ ಮೂರ್ತಿ ಉದ್ಘಾಟನೆಯಿಂದ ಬಗೆಹರಿಸಿ ಎರಡೂ ರಾಜ್ಯದ ಮಧ್ಯೆ ಮಧುರ ಮೈತ್ರಿಯನ್ನು ಶುರು ಮಾಡಿದ ಕೀರ್ತಿ ನಮ್ಮ ಮುಮ ಗೆ ಸೇರುತ್ತದೆ.

ಇದೇ ನಿಟ್ಟಿನಲ್ಲಿ ನಮ್ಮ ಭಾಂಧವ್ಯ ಬೆಳೆಯಬೇಕು ಎಂದರೆ ನಮ್ಮ ಸರ್ಕಾರ ಇನ್ನು ಹೆಚ್ಚು ತಮಿಳು ಸ್ನೇಹಿ ಯೋಜನೆಗಳನ್ನು ಹಾಕಿಕೊಳ್ಲಬೇಕು. ಆ ನಿಟ್ಟಿನಲ್ಲಿ ೧೧ ಸಾಮಾನ್ಯ ಅಂಶದ ಈ ಯೋಜನೆಯನ್ನು ನಮ್ಮ ಕನ್ನಡ ಸರ್ಕಾರ ಮಾಡಿದರೆ ..ತಮಿಳ್ ಚಿರಂಜೀವಿ ಆಗುತ್ತದೆ.

೧) ನಮ್ಮ ಸರ್ಕಾರದಿಂದ ಮುಮ ನೇತೃತ್ವದಲ್ಲಿ ಅಧಿಕೃತ ನಿಯೋಗವನ್ನು ಕೊಂಡ್ಯೊಯ್ಯಬೇಕು. ಇದರಲ್ಲಿ ನಮ್ಮ ರಾಜ್ಯದಲ್ಲಿ ಇರುವ ಘಣ್ಮುಗಂ ಇತರೆ ತಮಿಳು ವಿದ್ವಾಂಸರು ಒಳಗೊಳ್ಳಬೇಕು.

೨) ನಮ್ಮ ರಾಜ್ಯದಿಂದ ತಮಿಳಿಗೆ ಕೊಡುಗೆ ಎನ್ನುವ ಸಾಕ್ಷಚಿತ್ರವನ್ನು ಮಾಡಬೇಕು, ಇದನ್ನು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ತಯಾರಿಸಿದರೆ ಒಳ್ಳೆಯದು ಮನು ಬಳಿಗಾರ ನೇತೃತ್ವದಲ್ಲಿ

೩) ನಮ್ಮ ಕನ್ನಡ ಮೇರು ಸಾಹಿತಿಗಳಾದ ಚಿಮೂ, ಜಿ ಎಸ್ ಎಸ್ ಅವರನ್ನು ಒಳಗೊಂಡ ಸಾಹಿತಿ ವೃಂದವನ್ನು ಅಲ್ಲಿಗೆ ಕೊಂಡೊಯ್ಯಬೇಕು. ಜೊತೆಗೆ ಆರ್ ಎಸ್ ಎಸ್ ನಾಯಕರು ಇದ್ದರೆ ಇನ್ನು ಮೆರಗು.

೪) ತಮಿಳು ಹೋರಾಟಗರ ಮೇಲೆ ಎಲ್ಲ ಕೇಸುಗಳನ್ನು ವಾಪಿಸ್ ಪಡೆಯಬೇಕು.

೫) ಪೆರಿಯಾರ್ ಹೆಸರಿನಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಒಂದು ನಾಡೋಜ ಪ್ರಶಸ್ತಿ ಹೊರಬರಬೇಕು,

೬) ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಡುವ ಸಹಕಾರ ಮೊತ್ದದ ೧/೩ ಭಾಗವನ್ನು ಇನ್ನು ಮುಂದೆ ತಮಿಳು ಸಮ್ಮೇಳನಕ್ಕೆ ಕೊಡಬೇಕು. ಹಾಗೇ ವೀರ ಸಾವರ್ಕರ್, ಗುರೂಜಿ, ಹೆಗಡೆವಾರ್ ದೇಶಭಕ್ತರ ಮೇಲೆ ಚಿಕ್ಕ ಚಿಕ್ಕ ಪುಸ್ತಕಗಳನ್ನು ಸರಕಾರ ಮುದ್ರಿಸಿ ಎಲ್ಲ ಶಾಲೆಗಳಲ್ಲೂ ಹಂಚಬೇಕು.

೭) ಬೆಂಗಳೂರಿನಲ್ಲಿ ಮುಂದಿನ ಸಮ್ಮೇಳನ ಮಾಡಲು ಸರ್ಕಾರ ಬಿಡ್ ಸಲ್ಲಿಸಬೇಕು. ಮುಂದಿನ ವಿಶ್ವ ತಮಿಳು ಸಮಾವೇಶ ನಡೆಸಲು ಇಗಲೇ ತಯಾರಿ ಆರಂಭಿಸಬೇಕು.

೮) ೨ ನೇ ಅಧಿಕೃತ ಭಾಷೆಯಾಗಿ ತಮಿಳನ್ನು ಬಿಬಿಎಂಪಿಯಲ್ಲಿ ಸ್ಥಾನ ಕೊಡಬೇಕು. ಮತ್ತು ಎಲ್ಲಾ ಬಿಬಿಎಂಪಿಯ ಕಾರ್ಯಕ್ರಮಗಳನ್ನು, ಸುತ್ತೊಲೆಗಳನ್ನು ತಮಿಳ್ ಮಕ್ಕಳಗೆ ಓದಲು ಅನಕೂಲ ಮಾಡಿಕೊಡಬೇಕು.

೯) ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಪಿಪಿಪಿ ಮಾದರಿಯಲ್ಲಿ ತಮಿಳುನಾಡು ಸರ್ಕಾರದ ಜೊತೆ ಸೇರಿ ಅದನ್ನು INTER NATIONAL TAMIL SCHOOL ಮಾಡಿ ನೆಲದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು.

೧೦) ಈ ಕಾರ್ಯಕ್ರಮವನ್ನು ಸನ್ ಅವರ ಉದಯದಲ್ಲಿ ಅಲ್ಲದೇ ನಮ್ಮ ಕನ್ನಡ ಕಸ್ತೂರಿ, ಚಂದನದಲ್ಲೂ ನೇರ ಪ್ರಸಾರ ಮಾಡಿಸಬೇಕು.

೧೧) ಶ್ರೀಲಂಕಾದಲ್ಲಿ ತಮಿಳ್ ಹೋರಾಟ ಗಮನಿಸಿ, ಪ್ರಭಾಕರನ್ ಪುತ್ಥಳಿಯನ್ನು ಬೆಂಗಳೂರಿನ ಮೆಜಸ್ತೀಕನ ರೈಲ್ವೇ ನಿಲ್ದಾಣದ ಎದುರು ಅನಾವರಣ ಗೊಳ್ಳಿಸಬೇಕು. ( ಈಗಿರುವ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಅನಾವರಣಗೊಳಿಸುತ್ತೆವೆ ಎಂದು ಹೇಳಿ....)

೧೨) ಕೇವಲ ಕನ್ನಡ ಚಿತ್ರಕ್ಕೆ ಇರುವ ಸಬ್ಸಿಡಿಯನ್ನು ತಮಿಳು ಚಿತ್ರಗಳಿಗೂ ವಿಸ್ತರಿಸಬೇಕು, ಹೆಚ್ಚಾಗಿ ತಮಿಳು ಚಿತ್ರ ನೋಡುವ ಸ್ಲಂ ಮತ್ತು ಬಡವರಿಗೆ ಹೆಚ್ಚಿನ ಅನಕೂಲ ಆಗುತ್ತದೆ.

ಇದಕ್ಕೆ ವಿರೋಧ ಪಡಿಸುವರನ್ನು ಶಿಕ್ಷೆಗೆ ಗುರಿಮಾಡಬೇಕು, ೩೦೭,೩೦೨ ಕೇಸ್ ಜಡಿಯಬೇಕು ಎಂದು ಹೇಳಬೇಕಾಗಿಲ್ಲ ಅಲ್ಲವೇ ??

Saturday, June 12, 2010

ಹಣದ ಚೀಲ ಕಳೆದುಹೋಗಿದೆ..ಸಹಾಯ ಮಾಡಿ.

ಕನ್ನಡ ಲೇಖಕಿ ಮಂಗಳಾ ಸತ್ಯನ್ ಅವರ ಮಿಂಚೆಯನ್ನು ಹ್ಯಾಕ್ ಮಾಡಿದ ಕದೀಮರು ಅವರನ್ನು ಹಣದ ಚೀಲ ಕಳೆದುಹೋಗಿದೆ ಹಗರಣದಲ್ಲಿ ಸಿಲುಕಿಸಿದ್ದಾರೆ ಎಂಬುದು ಸುದ್ದಿ. ಇದೇ ರೀತಿ ಮಣಿಶಂಕರ್ ಅಯ್ಯರಗೆ ಕೂಡ ಆಗಿತ್ತು ಎಂದು ಸ್ಮರಿಸಬಹುದು.

ಎನಿದು ಹಣದ ಚೀಲ ಕಳೆದುಹೋಗಿದೆ ಹಗರಣ ಅಂತ ಯೋಚನೆ ಮಾಡುತ್ತ ಇದ್ದೀರಾ ??

ಪ್ರಸಿದ್ದ ವ್ಯಕ್ತಿಗಳ ಅದರಲ್ಲೂ ಸ್ವಲ್ಪ ವಯಸ್ಸು ಆದವರ ( ೪೫+ ) ಮಿಂಚೆಗಳನ್ನು ಹ್ಯಾಕ್ ಮಾಡಿ ಅವರ ಹೆಸರಿಂದ ಅವರ ಎಲ್ಲಾ ಗೆಳೆಯರಿಗೂ ಮಿಂಚೆ ಮಾಡುತ್ತಾರೆ. ಇದಕ್ಕೆ ಅವರು ಆಯ್ಕ್ರೆ ಮಾಡುವ ವ್ಯಕ್ತಿಗಳು ಎಂದರೆ ಹೆಚ್ಚಾಗಿ ಓಡಾಡುವ ಜನ ಮತ್ತು ದೇಶ ವಿದೇಶಗಳನ್ನು ಸುತ್ತತ್ತ ಇರುತ್ತಾರಲ್ಲ, ಅಕೆಡಾಮಿಕನಲ್ಲಿ ಇರುವುರು. ಅದರಲ್ಲೂ ನಿವೃತ್ತಿ ಆದವರು ಸಿಕ್ಕಿದರೆ ಬಂಪರ್.

ಆ ಮಿಂಚೆಯು ಹೀಗೆ ಇರುತ್ತದೆ

ಒಂದು ಮಿಂಚೆ ಅಡ್ರೆಸ್ ಬುಕನಲ್ಲಿ ಇರುವ ಎಲ್ಲಾ ವಿಳಾಸಕ್ಕೂ ಹೋಗುತ್ತದೆ., ಇದನ್ನು ನೋಡಿದ ಗೆಳೆಯರು ತಡ ಮಾಡದೇ ಹಣ ಕಳಿಸುತ್ತಾರೆ. ಅದರಲ್ಲೂ ದೇಶದಲ್ಲಿ ಇದ್ದವರು
ಅವರ ಮನೆಗೆ ಪೋನಾಯಿಸೋ ವಿಚಾರಿಸಿದರೆ ವಿದೇಶದಲ್ಲಿ ಇರುವರು ಸುಮ್ಮನೆ ಸಹಾಯ ಮಾಡಿ ಬಿಡುತ್ತಾರೆ. ಮಿಂಚೆ ಹ್ಯಾಕ್ ಆಗಿದೆ ಎಂದು ತಿಳಿದು, ಪೋಲಿಸರಿಗೆ ಕಂಪ್ಲೇಟ್ ಕೊಟ್ಟು , ತಮ್ಮ ಮಿಂಚೆಯನ್ನು ಮತ್ತೆ ಪಡೆಯುವಷ್ಟರಲ್ಲಿ ಹಣ ತೆಗೆದುಕೊಂಡವರು ಪರಾರಿ.

ಆ ಮಿಂಚೆ ಹೀಗೆ ಇರುತ್ತದೆ.

Hello,

How are you doing?hope all is well with you, i am sorry that i didn’t inform you about my traveling to England for a Seminar.

I need a favor from you as soon as you recieve this e-mail because i misplaced my wallet on my way to the hotel where my money,and other valuable things were kept, i will like you to assist me with a loan urgently. I will be needing the sum of $2,500 to sort-out my hotel bills and get myself back home.

I will appreciate whatever you can afford to help me with, i’ll pay you back as soon as i return. Kindly let me know if you can be of help? so that i can send you the details to use when sending the money through western union.

Your reply will be greatly appreciated.


ಅದ್ದರಿಂದ ಹುಷಾರ್ ಆಗಿ ಇರಲು, ಕೆಲವು ನಿಯಮಗಳನ್ನು ಪಾಲಿಸಬೇಕು.

* ಗುಪ್ತಪದವನ್ನು ಜಟಿಲವಾಗಿಡಿ, ಅದರಲ್ಲಿ $^^*&( ಅಕ್ಷರ ಮತ್ತು ಸಂಖ್ಯೆ ಇರಬೇಕು.

* ಕಾಲಕ್ಕೆ ತಕ್ಕ ಹಾಗೆ ಬದಲಾಯಿಸುತ್ತ್ತ ಇರಿ.

* ನಿಮ್ಮ ವಿಳಾಸಪಟ್ಟಿಯನ್ನು export ಮಾಡಿಕೊಂಡು ಇಟ್ಟುಕೊಳ್ಳಿ.

* ಕಾಲಕ್ರಮದಲ್ಲಿ ನಿಮ್ಮ ಮಿಂಚೆಯನ್ನು PST ಆಗಿ ಉಳಿಸಿಕೊಳ್ಳಿ.

* ಎಲ್ಲಿ ಕೂಡ ನಿಮ್ಮ ಮಿಂಚೆ, ಗುಪ್ತಪದವನ್ನು ಕೊಡಬೇಡಿ.

* ನಿಮಗೆ ಹೀಗೆ ಆಗಿದ್ದಲ್ಲಿ, ಮೊದಲು ನಿಮ್ಮ ಇನ್ನೊಂದು ಮಿಂಚೆಯಿಂದ ವಿಳಾಸಪಟ್ಟಿಯಲ್ಲಿರುವ ಎಲ್ಲರಿಗೂ ಕಳಿಸಿ.

* ಹಾಗೆ ನಿಮ್ಮ ಪೋನ್ ಪಟ್ಟಿಯಲ್ಲಿ ಇರುವ ಎಲ್ಲರಿಗೂ ಚಿಕ್ಕೋಲೆ ಕಳಿಸಿ, ಆ ಮಿಂಚೆಯನ್ನು ಉದಾಸೀನ ಮಾಡೊಕ್ಕೆ ಹೇಳಿ.

ಒಟ್ಟಿನಲ್ಲಿ, ತಂತ್ರಜ್ಞಾನ ಮುಂದುವರೆದ ಹಾಗೆ ಹೊಸ ಹೊಸ ಬಗೆಯ ಮೋಸಗಳು ಬರುತ್ತ ಇರುತ್ತವೆ. ಹುಶಾರಾಗಿರಿ.

Wednesday, June 09, 2010

ಸಣ್ಣ ಕಥೆ - ವರ್ತುಲ

ನಿಮ್ಮ ವಯಸ್ಸಲ್ಲಿ ನಾವು ಹೇಗೆ ಇದ್ವಿ ಗೊತ್ತ ?, ಬೆಳಿಗ್ಗೆ ಮನೆ ಬಿಟ್ಟರೆ ಮನೆ ಸೇರುತ್ತ ಇದ್ದಿದ್ದು ಸಂಜೆ. ಅಮ್ಮ ಊಟಕ್ಕೆ ಬಾರೊ
ಅಂತ ಕರೆಯುತ್ತಲೆ ಇದ್ರು, ಅದ್ರೆ ಆಟ ಅಡೊವಾಗ ಊಟ, ಬಾಯಾರಿಕೆ ಯಾವುದು ಬೇಡ. ಅಪ್ಪ ಬರೊ ಹಾಗೆ ಮನೆ ಒಳಗೆ ಸೇರಿಕೊಂಡು, ಪುಸ್ತಕ ಹಿಡಿದುಕೊಳ್ಳುತ್ತ ಇದ್ದೆ. ಪುಸ್ತ್ಕಕ ಹಿಡಿದುಕೊಂಡರು, ಆಚೆ ಗೆಳೆಯರು ಈಗ ಎನು ಆಡುತ್ತ ಇರುತ್ತಾರೆ ಅಂತ
ಅಪ್ಪ ಪೂಜೆಗೆ ಕುಳಿತಿರುವುದೇ ಕುಳಿತರೆ ಮತ್ತೆ ಆಟಕ್ಕೆ ಹೋರಡುತ್ತ ಇದ್ದೆ ಅಂತ ಮಗಳ ಮುಂದೆ ಬಡಾಯಿ ಕೊಚ್ಚುಕೊಳ್ಳುತ್ತ ಇದ್ದೆ.

ಹೌದ ಅಪ್ಪ .. ಅಜ್ಜಿ ನಿಮಗೆ ಬೈತಾ ಇರಲಿಲ್ವಾ ? ಅಂತ ಮಗಳು ಬಾಯಿ ಬಿಟ್ಕೊಂಡು ಕೇಳುತ್ತ ಇದ್ದಳು.

ಅಯ್ಯೊ ನನ್ನ ಮಾತು ಎಲ್ಲಮ್ಮ ಕೇಳುತ್ತಾನೆ, ಚೆನ್ನಾಗಿ ಓದುತ್ತ ಇದ್ದ ಮತ್ತು ಚೆನ್ನಾಗಿ ಮಾರ್ಕ್ಸ ತೆಗಿತಾ ಇದ್ದ ಆದ್ದರಿಂದ ಅವನನ್ನು
ಅವನ ಪಾಡಿಗೆ ಬಿಟ್ಟಿದ್ದೆವು. ಬಿಸಿಲಲ್ಲಿ ಆಡಿ ಆಡಿ ಕಪ್ಪಾಗಿ ಬಿಟ್ಟ ಅಂತ ಅಮ್ಮ ತಗಾದೆ ತೆಗೆದರು.

ನಮ್ಮ ಬೀದಿಯಲ್ಲಿ ನಾವು ಒಡೆಯದ ಗಾಜು ಇಲ್ಲ, ಅನೇಕ ಮನೆಯ ಜನರು ನಮ್ಮನ್ನು ಅಟ್ಟುತ್ತ ಇದ್ದರು , ಎಷ್ಟೊ ಸಾರಿ
ನಮ್ಮ ಬ್ಯಾಟು,ಬಾಲನ್ನು ಕಿತ್ತುಕೊಂಡು ಬಿಡುತ್ತ ಇದ್ದರು, ಆದರೂ ನಾವು ಆಡುತ್ತ ಇದ್ವೀ ..

ಡಳ್.. ಅಂತ ಗಾಜು ಒಡೆದ ಶಬ್ದ .. ಒಳಗಡೆ ಟೆನಿಸ್ ಬಾಲ್ ಬಂದಿತು. ತಕ್ಷಣ ಆಚೆ ಹೋದ ನಾನು
ಬೀದಿಗೆ ಬಂದು ..." ಒಡಿಹೋಗುತ್ತ ಇದ್ದ ಹುಡುಗರನ್ನು ಉದ್ದೇಶಿಸಿ
" ಎಯ್ ಯಾವನೋ ಅವನು , ಕೈಗೆ ಸಿಕ್ಕಿದರೆ ಹುಟ್ಟಿಸಿಲ್ಲ ಅನಿಸಿಬಿಡ್ತಿನಿ. .. ಹಾ .." ಅಂತ ಒಂದೇ ಉಸಿರಿನಿಂದ ಹೇಳುತ್ತ ಇದ್ದೆ.
ಆ ಬಂದ ಮಗಳು ..
"ಎನಾಯ್ತು ಅಪ್ಪಾ , ನೀವು ಚಿಕ್ಕ ವಯಸ್ಸಲ್ಲಿ ಮಾಡಿದ ಕೆಲ್ಸವನ್ನೇ ಅವರು ಮಾಡಿದ್ದಾರೆ ಅಲ್ವಾ " ಅಂತ ಹೇಳಿದಳು.

ಒಂದು ನಿಮಿಷ ನನ್ನ ಮೇಲೆ ನನಗೆ ಪಿಚ್ಚೆನಿಸಿತು, ೫ ನಿಮಿಷ ಮುಂಚೆ ಇದೇ ಕೆಲ್ಸವನ್ನು ಪ್ರತಾಪ ಎಂದು ಬೀಗುತ್ತ ಇದ್ದ ನಾನು, ಇವತ್ತು ಅವರನ್ನು ಬೈಯುತ್ತ ಇದ್ದೆನಲ್ಲ. ಮುಂದೆ ಆ ಮಕ್ಕಳು ಇದನ್ನೆ ಪ್ರತಾಪವಾಗಿ ಹೇಳಿಕೊಳ್ಳಲಿ ಎಂದು

" ಸುಮ್ನೆ ಆ ಮಕ್ಕಳಿಗೆ ಭಯ ಹುಟ್ಟಿಸಿದೆ ಅಷ್ಟೆ, ಬಾ ಒಳಗಡೆ ನಡಿ." ಎಂದು ನಗುತ್ತ ಮಗಳನ್ನು ಒಳಗಡೆ ಕರೆದುಕೊಂಡು ಹೋದೆ.

Tuesday, June 08, 2010

ಶುರುವಾಗಿದೆ ಫುಟ್ಬಾಲ್ ಹಬ್ಬ..

ಮತ್ತೆ ಶುರುವಾಗಿದೆ ಫುಟ್ಬಾಲ್ ಹಬ್ಬ.. ೪ ವರುಷಗಳ ಹಿಂದೆ ಇದರ ಬಗ್ಗೆ ಬರೆದಿದ್ದು ಇಷ್ಟು ಬೇಗನಾ ಅಂತ ಅನಿಸಿದೆ ...

ಇದು ೧೯ನೇ ಫಿಪಾ ವಿಶ್ವಕಪ್ ಪಂದ್ಯಾವಳಿ. ಇದು ಜೂನ್ ೧೧ ರಿಂದ ೧೧ ಜುಲೈ ತನಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾನಲ್ಲಿ ನಡೆಯಲಿದೆ. ಇದಕ್ಕೆ ಬಂದ ತಂಡಗಳೆಲ್ಲಾ ತಮ್ಮ ಖಂಡದಲ್ಲಿ ೨೦೦೭ ಆಗಸ್ಟನಿಂದ ಅರ್ಹತಾ ಸುತ್ತು ಆಡಿಕೊಂಡು ಬಂದಿದೆ.


* ಮೊದಲ ಬಾರಿಗೆ ಇದು ಆಫ್ರಿಕಾ ಖಂಡದಲ್ಲಿ ನಡೆಯಿತ್ತಿದೆ, ಅದ್ದರಿಂದ ದಕ್ಷಿಣ ಆಫ್ರಿಕಾ ಅರ್ಹತೆ ಗಳಿಸಿದೆ.

* ಎಲ್ಲಾ ಪಂದ್ಯಗಳು ಸಾಕರ್ ಸಿಟಿ - ಜೊಹೆನ್ಸಬರ್ಗ, ಕೇಪ ಟೌನ್, ಪ್ರಿಟೋರಿಯಾ, ಪೊಲೊವಾನೆ, ರುಸ್ತನಬರ್ಗ, ಬ್ಲೋಮಫೊಟೆನ್ ನಗರದಲ್ಲಿ ನಡೆಯಲಿವೆ.

* ಪ್ರಶಸ್ತಿ ಮೊತ್ತ ಸರಿ ಸುಮಾರು ೩೦.೨ ಮಿಲಿಯನ್, ಕೊನೆಯ ೧೬ ಸುತ್ತಿಗೆ ಬರುವರು ಕೂಡ ೯ ಮಿಲಿಯನ್ ದುಡ್ಡು ಗೆಲ್ಲುತ್ತಾರೆ.

* ಈ ಸಲದ ಸಯ್ಪುಗೆ( ಮಸ್ಕಟ್ ) ಹಸಿರು ಕೂದಲು ಇರುವ ಚಿರತೆ. ZAKUMI ಎಂದು ಹೆಸರು. ZA ಅಂದ್ರೆ South Africa, KUMI ಅಂದ್ರೆ ಹತ್ತು.


* ನಮ್ಮ ದೇಶದಲ್ಲಿ epsn-star ವಾಹಿನಿಯಲ್ಲಿ ಈ ಪಂದ್ಯಾವಳಿಗಳನ್ನು ನೋಡಬಹುದು.

* ೮ ಗುಂಪುಗಳಿವೆ, ಪ್ರತಿ ಗುಂಪಿನಲ್ಲಿ ೪ ತಂಡ ಇವೆ. ಇದರಲ್ಲಿ ೨ ತಂಡ ಅರ್ಹತೆ ಗಳಿಸುತ್ತವೆ ಮುಂದಿನ ಹಂತಕ್ಕೆ.

* ದಿಗ್ಗಜರ ಹೋರಾಟದ ಗುಂಪು ಎಂದು ಇದ್ದುದರಲ್ಲಿ "ಗುಂಪು ಜಿ" ಎಂದು ಹೇಳಬಹುದು.

* ಅತಿ ಸಪ್ಪೆ ಗುಂಪು ಎಂದರೆ ಗ್ರೂಪ್ ಸಿ ಅನ್ನಬಹುದು.

* ಯಾವುದರಿಂದ ಯಾರು ಆಯ್ಕೆ ಆಗುತ್ತಾರೆ ಎಂದು ನಾನು ಭ್ರಮಿಸಿದ್ದೇನೆ. ಅದನ್ನು ತದಾ ಬದಲಾಯಿಸುತ್ತ ಹೋಗುತ್ತೆನೆ.
ನನ್ನ ಆಯ್ಕೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೆನೆ.


Group A
Group B
Group C
Group D
Group E
Group F
Group G
Group H
FRA
ARG
ALG
AUS
CMR
ITA
BRA
CHI
MEX
GRE
ENG
GER
DEN
NZL
CIV

HON

RSA
KOR
SVN
GHA
JPN
PAR
PRK
ESP
URU
NGA
USA
SRB
NED
SVK
POR

SUI




ಮುಗಿಯುವ ತನಕ ಇದರ ಬಗ್ಗೆ ಮಾತನಾಡುತ್ತ ಇರೋಣ ..

Sunday, June 06, 2010

ಮುಖ್ಯಮಂತ್ರಿಗಳಿಗೆ ಒಂದು ಪತ್ರ...



ಮಾನ್ಯ ಮುಖ್ಯಮಂತ್ರಿಗಳೇ,


ವಿಶ್ವ ಹೂಡಿಕೆದಾರರ ಸಮಾವೇಶ ಅದ್ಭುತವಾಗಿ ನಡೆದಿದ್ದು, ಅದನ್ನು ಅತ್ಯುತ್ತಮವಾಗಿ ನಡೆಸಿದ ನಿಮ್ಮ ಸರ್ಕಾರಕ್ಕೆ ಅಭಿನಂದನೆಗಳು.
ಈ ಸಮಾವೇಶದಿಂದ ಲಕ್ಷಾಂತರ ಕೋಟಿ ಕರ್ನಾಟಕದಲ್ಲಿ ಹೂಡಿಕೆ ಆಗುತ್ತಿದೆ, ಲಕ್ಷಾಂತರ ಕೋಟಿ ಉದ್ಯೋಗ ಸೃಷ್ಟಿ ಆಗುತ್ತಿದೆ,
ಇದರಿಂದ ಅನೇಕ ಕನ್ನಡಿಗರಿಗೆ ಉದ್ಯೋಗ ದೊರೆತು ನಮ್ಮ ರಾಜ್ಯದ ನಿರುದ್ಯೋಗ ಸಮಸ್ಯೆ ಕಮ್ಮಿಯಾಗುವುದು ಎಂದು ಎಲ್ಲರ ಆಶಯವಾಗಿದೆ.

ಹಾಗೆ ಆಗಬೇಕಾದರೆ ಆ ಉದ್ಯೋಗಗಳು ನಮ್ಮವರಿಗೆ ಸಿಗಬೇಕು, ಸರೋಜಿನಿ ಮಹಿಷಿ ವರದಿಯನ್ನು ಮಾರ್ಪಡಿಸಿ, ಅನುಷ್ಠಾನ ಮಾಡಬೇಕು. ಅದಕ್ಕೂ ಮುಖ್ಯವಾಗಿ ಆ ಉದ್ಯೋಗ ಮಾಡಲು ನಮಲ್ಲಿ ಮಾನವ ಸಂಪನ್ಮೂಲ ಇದೆಯಾ ಎಂದು ನಾವು ಯೋಚಿಸಬೇಕು,
ಇಲ್ಲದಿದ್ದರೆ ಆ ನಿಟ್ಟಿನಲ್ಲಿ ನಾವು ಕೆಲ್ಸ ಮಾಡಬೇಕು, ಹೆಚ್ಚು ಹೆಚ್ಚು ನಿಪುಣತೆಯನ್ನು ಸೃಷ್ಟಿ ಮಾಡಬೇಕು.
ಇಲ್ಲವಾದಲ್ಲಿ ನಾವು ಹಸುವಿಗೆ ಹುಲ್ಲು ಹಾಕಿ, ಬೇರೆ ಯಾರೋ ಹಾಲು ಕರೆದು ಕೊಂಡ ಹಾಗೆ ಆಗುತ್ತದೆ. ಆ ನಿಪುಣತೆ ಇರುವ ಇಲ್ಲ ಕಲಿತು ಬರುವ ಪರರಾಜ್ಯದವರಿಗೆ ಕಮ್ಮಿ ಇಲ್ಲ. ಬಂಡವಾಳ ನೆಪದಲ್ಲಿ ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.


ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಸಿಗಲು ಮತ್ತು ಪ್ರಾದೇಶಿಕ ಅಸಮಾನತೆಯನ್ನು ತಡೆಯಲು ಕನ್ನಡಿಗರಿಗೆ ಎಲ್ಲ ಉದ್ಯೋಗ ಅವಕಾಶಗಳು ಸಿಗಬೇಕು. ಅದ್ದರಿಂದ ಉದ್ಯೋಗ ಮಾಹಿತಿ ಕೇಂದ್ರ ಮತ್ತು ಎಲ್ಲ ಸಚಿವಾಲಯಗಳು ಬೇಕಾಗುವ ನಿಪುಣತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಆಯಾ ಕ್ಷೇತ್ರಗಳ ದಿಗ್ಗಜರೊಂದಿಗೆ ಕೈ ಜೋಡಿಸಿ ನಮ್ಮ ಕನ್ನಡಿಗರ ನಿಪುಣತೆಯನ್ನು ಹೆಚ್ಚು ಮಾಡಬೇಕು.

ಬೇರೆ ರಾಜ್ಯದಿಂದ ಬರುವರಿಗೆ ADVANTAGE KARNATAKA ಆಗದೆ, ನಮ್ಮ ಜನರಿಗೆ ಕೆಲಸ ದೊರಕಲಿ ಎಂದು ಆಶೀಸೋಣ. ನಿಮ್ಮ ಎಲ್ಲ ಯೋಜನೆಗಳಿಗೆ ನಮ್ಮ ಬೆಂಬಲವಿದೆ.


ನಿಮ್ಮ ವಿಶ್ವಾಸಿ


ವಿ ಸೂ:- ಚಿತ್ರಗಳು ಅದನ್ನು ತೆಗೆದವರದ್ದೇ ಆಗಿರುತ್ತದೆ, ಆದ್ದರಿಂದ ಹಕ್ಕು-ಕಾಯಿದೆ ಎಲ್ಲ ಚಿತ್ರ ತೆಗೆದವರದ್ದು, ನಂದೇನು ಇಲ್ಲ.

Saturday, June 05, 2010

ಬಂಡವಾಳ ಬರಲಿ ಆದರೆ ಉದ್ಯೋಗವು ಕೈ ಬಿಡದಿರಲಿ

ವಿಶ್ವ ಹೂಡಿಕೆದಾರರ ಸಮಾವೇಶ ನಡೆದಿದ್ದೇನೊ ಸರಿ, ಅದರಿಂದ ಲಕ್ಷಾಂತರ ಕೋಟಿ ಕರ್ನಾಟಕದಲ್ಲಿ ಹೂಡಿಕೆ ಆಗುತ್ತಿದೆ, ಲಕ್ಷಾಂತರ ಕೋಟಿ ಉದ್ಯೋಗ ಸೃಷ್ಟಿ ಆಗುತ್ತಿದೆ, ಆದರೆ ಆ ಉದ್ಯೋಗ ಮಾಡಲು ನಮಲ್ಲಿ ಮಾನವ ಸಂಪನ್ಮೂಲ ಇದೆಯಾ ಎಂದು ಸರ್ಕಾರ ಯೋಚಿಸಬೇಕು, ಇಲ್ಲದಿದ್ದರೆ ಆ ನಿಟ್ಟಿನಲ್ಲಿ ಕೆಲ್ಸ ಮಾಡಬೇಕು, ಹೆಚ್ಚು ಹೆಚ್ಚು ನಿಪುಣತೆಯನ್ನು ಸೃಷ್ಟಿ ಮಾಡಬೇಕು. ಇಲ್ಲವಾದಲ್ಲಿ ಹಸುವಿಗೆ ಹುಲ್ಲು ಹಾಕಿ, ಬೇರೆ ಯಾರಿಗೋ ಹಾಲು ಕೊಟ್ಟ ಹಾಗೆ ಆಗುತ್ತದೆ. ಆ ನಿಪುಣತೆ ಇರುವ ಇಲ್ಲ ಕಲಿತು ಬರುವ ಪರರಾಜ್ಯದವರಿಗೆ ಕಮ್ಮಿ ಇಲ್ಲ. ಬಂಡವಾಳ ನೆಪದಲ್ಲಿ
ಅನಿಯಂತ್ರಿತ ವಲಸೆ ಆದಲ್ಲಿ ಮುಂದೊಂದು ದಿನ ಅದು ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತದೆ.

ಯಾಕೆ ಎಂದರೆ ...
* ಭೂಮಿ ಕೊಟ್ಟವರು ನಿರ್ಗತಿಕರಾಗಿರುತ್ತಾರೆ.
* ಎಲ್ಲಿಂದಲೋ ಬಂದವರು ಕೆಲ್ಸ ಗಿಟ್ಟಿಸಿಕೊಂಡಿರುತ್ತಾರೆ.
* ಭೂಮಿ ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ತಮ್ಮ ನೆಲದಲ್ಲೇ ಉದ್ಯೋಗ ಇರುವದಿಲ್ಲ.
* ಇದು ಪ್ರಾದೇಶಿಕ ಅಸಮಾನತೆಯನ್ನು ಇನ್ನು ಹೆಚ್ನು ಮಾಡುತ್ತದೆ.
* ದಿನದ ಊಟಕ್ಕೆ ಆಸೆಪಟ್ಟು ಚಿಕ್ಕ ಪರಿಹಾರ ಇಸ್ಕೊಂಡು ಭೂಮಿ ರೈತ ಕೊಟ್ಟರೆ, ವರ್ಷದ ಕೂಳು ಕಳೆದುಕೊಳ್ಳುವುದು ಶತಸಿದ್ಧ.
* ಹೆಚ್ಚು ಜನಸಂಖ್ಯೆ ಆದ ಹಾಗೆ, ಅವರಿಗೆ ಮೂಲಭೂತ ಸೌಕರ್ಯಗಳ ಮೇಲೆ ಸರಕಾರ ಬಂಡವಾಳ ಹೂಡಬೇಕು.



ನಮಗೆ ಲಾಟರಿ ಬಂದಿದೆ ಎಂದು ಬೀಗಬಾರದು, ಇಲ್ಲಿನ ಭೂಮಿ, ನೆಲ, ಜಲ, ಖನಿಜ ಸಂಪತ್ತು , ವಿದ್ಯುತ್ ಇವುಗಳನ್ನು
ನಾವು ಪಣಕ್ಕಿಟ್ಟು ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸುತ್ತಿದ್ದೆವೆ. ಇಲ್ಲಿ ಬಂಡವಾಳ ಹೂಡಿರುವರಿಗೆ ದುಡ್ಡೆ ಮುಖ್ಯ , ಅದು ಸಿಗಲು ಆವರಿಗೆ ಕನ್ನಡಿಗರೂ ಒಂದೇ, ತಮಿಳರು ಒಂದೇ. ಅದ್ದರಿಂದ ಸರ್ಕಾರ‍ ಮತ್ತೊಮ್ಮೆ ನಿರ್ಲಕ್ಷ ಮಾಡಿದರೆ , ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ. ನಮ್ಮ ನೆಲದಲ್ಲೇ ನಾವು ಪರಕೀಯರು ಅನಿಸುತ್ತದೆ.

ಪರಕೀಯರಿಗೆ ADVANTAGE KARNATAKA ಆಗದೆ, ದೂಳು ಕಟ್ಟಿರುವ ಉದ್ಯೋಗ ಮಾಹಿತಿ ಕೇಂದ್ರ ಜಾಗೃತವಾಗಲಿ ಎಂದು ಆಶಿಸೋಣ.

Saturday, May 22, 2010

ಕೈಟ್ಸ ಚಿತ್ರ ತಡೆಯೂ ಮತ್ತು ನಮ್ಮ ಜನರ ತಪ್ಪುಗ್ರಹಿಕೆಯು.

ನಮ್ಮ ದುಡ್ಡು ನಮ್ಮ ಕಾಸು, ಯಾರು ಇವರು ಕೇಳೊಕ್ಕೆ ??, ಇದು ಭಾರತ, ಅದರಲ್ಲೂ ರಾಷ್ತ್ರಭಾಷೆ ಹಿಂದಿ ಭಾಷೆ ಚಿತ್ರ ಬಿಡುತ್ತಿಲ್ಲ ಅಂದ್ರೆ ಎನು ??

ಹಿಂದಿ ಚಿತ್ರ ಯಾವುದನ್ನು ಬಿಡುವದಿಲ್ಲವಂತೆ, ನಾವೇನು ಕನ್ನಡ ಚಿತ್ರ ನೋಡಬೇಕಾ ?.

ಕ್ವಾಲಿಟಿ ಇರುವ ಚಿತ್ರ ಮಾಡಿ, ಯಾಕೆ ನೋಡೊಲ್ಲ ಹೇಳಿ, ಅದನ್ನು ಬಿಟ್ಟು ಪರಭಾಷೆ ಚಿತ್ರಗಳನ್ನು ತಡೆದರೆ ಕನ್ನಡ ಚಿತ್ರ ಬೆಳೆಯುತ್ತದೆ ಅನ್ನುವುದು ಸುಳ್ಳು. ಕರ್ನಾಟಕ ತಾಲಿಬಾನ್ ಆಗುತ್ತಿದೆ, ಶಿವಸೇನ ಮಾದರಿ ದಬ್ಬಾಳಿಕೆ ನಡೆಯುತ್ತಿದೆ,
ಕನ್ನಡ ಹೋರಾಟಗಾರರಿಗೆ ಬುದ್ದಿ ಇಲ್ಲ.

ಇದೆಲ್ಲಾ ನಿನ್ನೆ ಆಂಗ್ಲ ಮತ್ತು ಹಿಂದಿ ಪ್ರಾಯೋಜಿತ ಮಾಧ್ಯಮ ವಾಹಿನಿಯಲ್ಲಿ ಬಂದ ಸುದ್ದಿ. ಅಷ್ಟಕ್ಕೂ ಈ ಪಾಟಿ ಅತಿರೇಕ ಸುದ್ದಿಯನ್ನು ಬಿತ್ತರಿಸಿದ ಮತ್ತು ತಪ್ಪು ಸುದ್ದಿಯನ್ನು ಹರಡಿದ ಮತ್ತು ವಿಷಯವನ್ನು ತಿರುಚಿದ ಆ ಜನರಿಗೆ ಒಂದು ಸಲಾಮ್.

ಈ ಸುದ್ದಿಯನ್ನು ನೋಡಿರುವ ಅನೇಕ ಕನ್ನಡಿಗರು, ನಾವು ಅವರ ತರ ಇಲ್ಲ ಕಣ್ರಿ, ನಾವು ಕನ್ನಡಿಗರು ಸಹಿಷ್ನುರು , ಇದು ತಪ್ಪು ಅಂತ ಮೊದಲೇ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಬೇಕಿದ್ದರೆ ಆ ಮಾಧ್ಯಮಗಳ ಮುಂದೆ ಬಹು ಸಂಖ್ಯಾತ ಕನ್ನಡಿಗರಿಗೆ ಈ ಚಿತ್ರ ಬೇಕು, ಯಾವುದೋ ರೌಡಿಗಳಿಗೆ ಬೇಡ ಅಂದರೆ ನಮಗೆ ಬೇಡವೇ ??, ಇದರಿಂದ ಭಾಷೆ ಬೆಳೆಯುತ್ತದೆಯೇ ?? ಎಂದು ಪ್ರಶ್ನೆ ಹಾಕುತ್ತಾರೆ.

ಅಷ್ಟಕ್ಕೂ ವಿಷಯ ಎನು ??

ಕರ್ನಾಟಕದಲ್ಲಿ ಇರುವ ಒಪ್ಪಂದಕ್ಕಿಂತ ಹೆಚ್ಚು ಕಡೆ ಕೈಟ್ಸ ಚಿತ್ರ ಬಿಡುಗಡೆ ಮಾಡಿದ್ದರು, ಅನೇಕ ಕನ್ನಡ ಚಿತ್ರಗಳಿಗೆ ಕೊಕ್ ಕೊಡಲಾಯಿತು. ಅದ್ದರಿಂದ ಒಪ್ಪಂದದ ಪ್ರಕಾರ ನಡೆದುಕೊಳ್ಳಿ ಇಲ್ಲ ಚಿತ್ರ ಬಿಡುಗಡೆಗೆ ನಾವು ಬಿಡುವದಿಲ್ಲ ಎಂದು ಬಸಂತ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಆ ಚಿತ್ರದ ನಿರ್ಮಾಪಕರು ಮಾತುಕತೆಗೆ ಬರಬೇಕು ಎಂದು ಪಟ್ಟು ಹಿಡಿದರು. ಆದರೆ ಹಿಂದಿ ಮತ್ತು ಆಂಗ್ಲ ಮಾಧ್ಯಮಕ್ಕೆ ಅದು ಬೇಕಿರಲಿಲ್ಲ .... ಚಲನಚಿತ್ರ ಮಂದಿರದಿಂದ ಜನರನ್ನು ಓಡಿಸಿದ ಕ್ರಮ ಪುಂಡಾಟಿಕೆ ಎಂದು ಬಿಂಬಿಸುವುದು, ಇದು ಕನ್ನಡೇತರ ಚಿತ್ರಗಳ ವಿರುದ್ಧ ಹೋರಾಟ, ಪ್ರಜಾಪ್ರಭುತ್ವಕ್ಕೆ ಹೊಡೆತ ಎಂದು ತೋರಿಸುವುದೇ ಆಗಿತ್ತು.

ಕಳಪೆ ಗುಣಮಟ್ಟದ ಚಿತ್ರಮಂದಿರಗಳೂ

ನಮ್ಮ ಕನ್ನಡ ಚಿತ್ರಕ್ಕೆ ಇರುವುದೇ ಚಿಕ್ಕ ಮಾರುಕಟ್ಟೆ, ಚಿತ್ರಕ್ಕೆ ದುಡ್ಡು ಬರಬೇಕು ಎಂದರೆ ಇಲ್ಲಿನ ಚಿತ್ರಮಂದಿರದಿಂದಲೇ ಬರಬೇಕು.
ಈ ಚಿತ್ರಮಂದಿರಗಳು ಬೇರೆಯವರ ಪಾಲಾಗಿ ನಮಗೆ ಅತಿ ಕೆಟ್ಟ ಚಲನಚಿತ್ರ ಮಂದಿರಗಳು ಸಿಕ್ಕಾಗ, ಚಿತ್ರ ಚೆನ್ನಾಗಿದ್ದರೂ ಅಲ್ಲಿನ ಕೊಳಕಿಗೆ ಜನ ದೂರ ಹೊಗುವುದೇ ಹೆಚ್ಚು. ಯೋಚನೆ ಮಾಡಿ ನಮ್ಮಲ್ಲೇ ಎಷ್ಟು ಜನ ಸಲೀಸಾಗಿ ನಮ್ಮ ಕುಟುಂಬವನ್ನು
ಮೆಜಸ್ಟೀಕ್ ನ ಚಲನಚಿತ್ರ ಮಂದಿರಕ್ಕೆ ಕರೆದುಕೊಂಡು ಹೋಗುತ್ತೆವೆ ??, ಎಲ್ಲರಿಗೂ ಕಾಡುವುದು ಭಯವೇ ಮತ್ತು ಅಲ್ಲಿನ
ಕೊಳಕು ಪರಿಸರ.
ಇದೆ ಮುಂದುವರಿದರೆ ಕನ್ನಡ ಚಿತ್ರಗಳು ಅಂದರೆ ಕೊಳಕು ಅಂತ ಕ್ಲೀಷೆ ಬಂದರೂ ಆಶ್ಚರ್ಯ ಅಲ್ಲ.

ಇದರ ಮೇಲೆ ಒಳ್ಲೆ ಚಿತ್ರಮಂದಿರಗಳು ಕೇವಲ ಪರಭಾಷೆ ಚಿತ್ರಕ್ಕೆ ಮೀಸಲು. ನಿಜ ವಸ್ತುಸ್ಥಿತಿ ಬೇರೆಯದೆ ಇದೆ, ಚಲನಚಿತ್ರ ಮಂದಿರದವರೇ ಖುದ್ದಾಗಿ ಇದಕ್ಕೆ ಮುಂದಾಗಿದ್ದಾರೆ. ಬಾಡಿಗೆ ದುಡ್ಡು ಒಂದೆ ಆದರೂ ಅವರಿಗೆ ಬೇಕಾಗಿರುವುದು ಹೆಚ್ಚಿನ ದುಡ್ಡು.
ಎಲ್ಲೋ ಇರುವ ನಿರ್ಮಾಪಕರಿಗೆ ಕಿವಿಗೆ ಹೂವ ಇಟ್ಟು ಹೆಚ್ಚಿನ ಕಾಸು ಮಾಡುತ್ತಾರೆ, ಆದರೆ ಇಲ್ಲೇ ಸ್ಥಳೀಯರು ಇರುವ ಚಿತ್ರಗಳಲ್ಲಿ ಇದು ಸಾಧ್ಯವಿಲ್ಲ.




ಕುಚೇಲನ್ ಬಿಟ್ಟು ಕೈಟ್ಸ ಬಾಲಗೋಂಚಿ ಕತ್ತರಿಸಿದರೆ ಸಾಲದು.

ಆವತ್ತು ರಜನಿಕಾಂತ್ ಚಿತ್ರ ಬಂದಾಗ ಕೆ ಎಫ್ ಸಿ ಜನರೇ ನಿಂತು ಬಿಡುಗಡೆ ಮಾಡಿಸಿ, ರಜನಿ ಕನ್ನಡವನೂ ಅದು ಇದು ಅಂತ ಕಾಗೆ ಹಾರಿಸಿದ್ದು ಹಸಿರು ಇದ್ದಾಗ, ಅದನ್ನೇ ನೆಪ ಮಾಡಿಕೊಂಡು ಚಿರಂಜೀವಿ ಕೂಡ ಬರುತ್ತಾನೆ ಇಲ್ಲ ಹೃತಿಕ್ ಗಾಳಿಪಟ ಹಾರಿಸುತ್ತಾನೆ. ಎಲ್ಲರಿಗೂ ಕರ್ನಾಟಕದಿಂದ ಬರುವ ಆದಾಯ ಬೋನಸ್, ಆದರೆ ಇದು ನಮ್ಮ ಚಲನಚಿತ್ರದ ಮೇಲೆ ಪರಿಣಾಮ ಮಾಡುತ್ತದೆ. ಅದ್ದರಿಂದ ಕೇವಲ ಕೈಟ್ಸಗೆ ಬಿಟ್ಟರೆ ನಾಳೆ ರಾವಣ್ ಬರುತ್ತದೆ, ನಾಳಿದ್ದು ರಜನೀಯ ರೋಬಾಟ್ ಬರುತ್ತದೆ.
ಪ್ರತಿಭಟನೆ ಮಾಡಿದ ಅನೇಕರೂ ಸ್ವಲ್ಪ ದಿಟ್ಟತನ ಮತ್ತು ಸ್ವಾಭಿಮಾನ ತೋರಿಸಬೇಕು.

ಇಷ್ಟೆ ಮಾಡಿ ಗೆದ್ದೆವು ಎಂದು ಬಿಮ್ಮಿದರೆ ಸಾಲದು, ಕನ್ನಡ ಚಿತ್ರಮಂದಿರಗಳ ಗುಣಮಟ್ಟ ಹೆಚ್ಚು ಮಾಡಬೇಕು ಮತ್ತು ಹೆಚ್ಚು ಜನರನ್ನು
ಆಕರ್ಷಿಸುವ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಬೇಕು.

ಕನ್ನಡಕ್ಕೆ ಡಬ್ ಆಗಿ ಬರಲಿ
ಕೊನೆಯದಾಗಿ ದಕ್ಷಿಣ ಕರ್ನಾಟಕಕ್ಕೆ ಬರುವ ಪರಭಾಷೆ ಚಿತ್ರಗಳಲ್ಲಿ ೨೧ ಕಡೆಯಲ್ಲಿ ಕನಿಷ್ಟ ಪಕ್ಷ ೧೫ ಕಡೆ ಕನ್ನಡಕ್ಕೆ ಡಬ್ ಆಗಿ ಬಿಡಬೇಕು. ಭಾಷೆಗಿಂತ ಜನರು ದೊಡ್ಡವರಲ್ಲ, ನಮ್ಮ ಮನರಂಜನೆ ನಮ್ಮ ಭಾಷೆಯಲ್ಲಿ ಇರಬೇಕು ಅನ್ನುವುದೇ ದೊಡ್ಡ ಮಾನದಂಡ ಆಗಬೇಕು.


ಕೊಸರು:- ಪೇಜ್ ೩ ರಲ್ಲಿ ಕನ್ನಡ ನಟ ನಟಿಯರೇ ಈ ಹಿಂದಿ ಚಿತ್ರದ ಪ್ರೀಮಿಯರ್ ಹೋಗಿ ಬಂದಿರುತ್ತಾರೆ. ಬಹಳ ಚೆನ್ನಾಗಿದೆ ಎಂದು ಹೊಗಳುತ್ತಾರೆ ...

Sunday, May 16, 2010

ಸುಳ್ಳು ಕಲಿಸಲು ಯಾವ ಶಾಲೆ ಸೇರಿಸಿದರೂ ಒಂದೇ ?

ಯಾವ ಶಾಲೆಗೆ-ಕಾಲೇಜಿಗೆ ಮಕ್ಕಳನ್ನು ಸೇರಿಸಬೇಕು ಅನ್ನೋ ಬಗ್ಗೆ ಇವತ್ತು ಚಡ್ದಿ ಮುಖವಾಣಿ ಹೊಸ ದಿಗಂತದಲ್ಲಿ ೧೬ ಮೇ , ಹ .ಬಾ. ಮಲ್ಯ ಅವರ ಒಂದು ಲೇಖನ ಬಂದಿದೆ. ಹೊರನೋಟಕ್ಕೆ ಇದು ಶಾಲ ಕಾಲೇಜುಗಳನ್ನು ಆಯ್ಕೆ ಮಾಡುವ ಬಗ್ಗೆ ಇದೆ ಎಂದುಕೊಂಡು ಓದಿದರೆ ತಪ್ಪು. ಮೊದಲಿನಿಂದ ಕೊನೆ ತನಕ ಇದು ಅದೇ ಹಳೆ ವರಾತವನ್ನು ಎತ್ತಿ ಹಿಡಿಯುತ್ತದೆ.

ಹಿಂದೆ ನಾವು ಎಲ್ಲಾ ಕಂಡುಹಿಡಿದಿದ್ದೆವು ??

ಹಿಂದೆ ನಮ್ಮ ಭಾರತದಲ್ಲಿ ಅದರಲ್ಲೂ ಗುರುಕುಲ ಪದ್ದಿತಿಯಲ್ಲಿ ವಿದ್ಯೆ ಬಹಳ ಚೆನ್ನಾಗಿತ್ತು, ಎರೊಪ್ಲೈನ್, ನ್ಯೂಕಲಿಯರ್ ಅಸ್ತ್ರ, ಇಂಟರನೆಟ್ ಎಲ್ಲಾ ಆಗಿನ ಕಾಲದಲ್ಲೆ ಕಂಡುಹಿಡಿದಿದ್ದರು, ಆ ವಿದ್ಯೆಯನ್ನು ಅಥರ್ವಣ ವೇದದಲ್ಲಿ ಹೇಳಲಾಗಿತ್ತು. ಅದನ್ನು ಅಪಹರಿಸಿದ ಪಾಶ್ಚತ್ಯರು ಅದನ್ನು ಓದಿ ಮತ್ತೊಮ್ಮೆ ಕಂಡು ಹಿಡಿದರು ಅನ್ನೊ ಮಾತು ಇಲ್ಲ ಮಿಂಚೆ ನಿಮಗೆ ಬಂದಿರಬಹುದು. ಅದರೆ ಇನ್ನು ಕಂಡುಹಿಡಿಯಬೇಕಾಗಿರುವುದು ಇದೆ ಅಲ್ಲವೇ .. ಅವುಗಳನ್ನು ಆ ಗೀರ್ವಾಣ ಭಾಷೆಯಲ್ಲಿ ಬರೆದಿರಬೇಕಲ್ಲವೇ ?, ಅದನ್ನು ಜಗತ್ತಿಗೆ ಹೇಳುವದಕ್ಕೆ ಯಾಕೆ ಮೀನಾಮೇಷ ಎಣಿಸುತ್ತ ಇದ್ದಾರೆ ಎಂದು ತಿಳಿಯುತ್ತ ಇಲ್ಲ.

ಮಕಾಲೆ ಮಾಡಿದ ಪಾಪ
ಇನ್ನೊಂದು ಬಹಳ ಪ್ರಚಲಿತ ಮಾತು ಇಲ್ಲ ಉಲ್ಲೇಖ ಎಂದರೆ ಅಂದಿನ ಶಿಕ್ಷಣ ಬಹಳ ಚೆನ್ನಾಗಿತ್ತು, ಆ ಶಿಕ್ಷಣವನ್ನು ಪಡೆದ ಜನ ಮೌಡ್ಯಗಳಿಂದ ದೂರ ಇದ್ದರು. ಆಗ ಬತ್ತಿ ಇಡುವದಕ್ಕೆ ಮೆಕಾಲೆ ಬಂದ, ಅವನು ಅವರ ಸಂಸತ್ತಿನಲ್ಲಿ ಮಾಡಿದ ಭಾಷಣದ ಮಾತುಗಳನ್ನು ತಿರುಚಿ, ದೇಶವನ್ನು ನಾಶ ಮಾಡಬೇಕಾದರೆ ಇಲ್ಲ ಸಂಸ್ಕ್ತುತಿಯನ್ನು ಹಾಳು ಮಾಡಬೇಕಾದರೆ ಆವ್ರಿಗೆ ನಮ್ಮ ಶಿಕ್ಷಣ ಕೊಡಬೇಕು, ಇದರಿಂದ ಅವರು ನಮ್ಮ ಗುಲಾಮರಾಗುತ್ತಾರೆ ಅಂತ ಯೋಚನೆ ಮಾಡಿ ನಮ್ಮನ್ನು ಬ್ರಿಟಿಷ್ ವಿದ್ಯಾಭ್ಯಾಸಕ್ಕೆ
ಹಾಕಿದರು. ಆವತ್ತಿನಿಂದ ನಮ್ಮ ಶ್ರೇಷ್ತ ಮಟ್ಟದ ಧಾರ್ಮಿಕ, ಸಾಂಸ್ಕೃತಿಕ , ಆಧ್ಯಾತ್ಮಿಕ ನೆಲಗಟ್ಟು ನಾಶ ಆಯಿತು.

ಜಾತಿ ಪದ್ಧತಿ, ಸತಿ, ಸಹಗಮನ , ಮೇಲು-ಕೀಳು ನಂಬಿಕೆಗಳು ಇದ್ದ ಆ ಕಾಲದಲ್ಲಿ ಯಾವ ಮಟ್ಟಿಗೆ ನಮ್ಮ ಶಿಕ್ಷಣವಿತ್ತು, ಇದು ಯಾವ ಸಾಂಸ್ಕ್ರುತಿಕ ಶ್ರೀಮಂತಿಕೆಯನ್ನು ಸಾರುತ್ತಿತ್ತು ಎಂದು ಒಮ್ಮೆ ಯೋಚನೆ ಮಾಡಿದರೆ ಆಗಿನ ಕಾಲ ಚೆನ್ನಾಗಿತ್ತು ನಮ್ಮದು
ಭಾರತೀಯ ಧರ್ಮ, ಹಿಂದು ರಾಷ್ಟ್ರ ಅನ್ನೋ ಅಂತೆ ಕಂತೆಗಳ ಮಾತುಗಳು ಪೊಳ್ಳು ಅನಿಸುತ್ತದೆ.

ಅಂಗ್ಲ ಆಗಲಿಲ್ಲ ಆಮ್ಲಜನಕ

ಒಂದು ಕಡೆ ಇಂಗ್ಲೀಷ್ ಇಂದ ದೇಶ ಹಾಳಾಯಿತು ಅನ್ನುವುದು ಲೇಖಕರ ವಾದವಾದರೆ, ಇನ್ನೊಂದು ಕಡೆ ನಮ್ಮ ಭವ್ಯ ಪರಂಪರೆಯನ್ನು , ನಮ್ಮ ರಾಷ್ಟೀಯತೆಯನ್ನು ಅಳಿಸಿಹಾಕಲು ಆಗಲಿಲ್ಲ, ಹೆಗಡೆವಾರ್,ಸಾರ್ವಕರ್ ಅನ್ನೋ ದೇಶಪ್ರೇಮಿಗಳು(!!)
ಇಂಗ್ಲೀಷ ಶಿಕ್ಷಣದಿಂದ ಪ್ರಜಾಪ್ರಬುತ್ವದ ಬಗ್ಗೆ ಅರಿವು ಮೂಡಿ ರಾಷ್ಟೀಯ ಸ್ವಾತಂತ್ರ ಆಂದೋಲನಕ್ಕೆ ನಾಂದಿ ಹಾಡಿದರು ಎಂದು
ಹೇಳುತ್ತಾರೆ.
ಮುಂದೆ ನಮ್ಮ ಸಾಂಸ್ಕೃತಿಕ ರಾಷ್ಟೀಯತೆಯನ್ನು , ಧರ್ಮವನ್ನು ಅವಹೇಳನ ಮಾಡುವ ಮಟ್ಟಿಗೆ ಇಂಗ್ಲೀಷ್ ಶಿಕ್ಷಣ ಬೆಳದಿದೆ. ಈ ಕೆಲಸವನ್ನು ಹಿಂದೆ ಕೈಸ್ತ ಮಿಷನರಿಗಳು ಮಾಡುತ್ತ ಇದ್ದವೂ, ಈಗಲೂ ನಡೆಯುತ್ತ ಇದೆ.

ಹಿಂದೂ ಸಂಸ್ಥೆಗಳು
ಹಿಂದೆ ಸೇವಾ, ವಿಧ್ಯಾಬ್ಯಾಸ ಕ್ಷೇತ್ರಗಳು ಮಿಷನರಿಗೆ ಮೀಸಲಾಗಿದ್ದವು, ಅದರಲ್ಲಿ ಲಾಭಾಂಶ ನೋಡಿ ಇವತ್ತು ಎಲ್ಲರೂ ಆ ದಂದೆಗೆ ಇಳಿದಿದ್ದಾರೆ, ಇದರಲ್ಲಿ ಯಾವ ಮಿಷನರಿ, ಮಠ, ಸಂಸ್ಥೆಗಳು ಹೊರತಲ್ಲ. ಎಲ್ಲಾ ಮಠಗಳ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಕೂಡ ಇವೆ. ಇದರಿಂದ ಮತಾಂತರಕ್ಕೆ ಹಿನ್ನಡೆ ಅಗಿದೆ ಅನ್ನುವುದು ಲೇಖಕರ ವಾದವಾದರೆ, ಮತಾಂತರ ಹೆಚ್ಚುತ್ತಿದೆ ಅನ್ನೋ ಸನಾತನಿ ವಾದ ಇನ್ನೊಂದಡೆ. ಯಾವುದನ್ನು ಕೊಳ್ಳುವುದು ??
ಅಷ್ಟಕ್ಕೂ ಸೇವಾ,ಧಾರ್ಮಿಕ ,ಆರೋಗ್ಯದಲ್ಲಿ ಕೆಲಸ ಮಾಡುತ್ತಿರುವ ಮಠಗಳು ಡೊನೆಷನ್ ತೆಗೆದುಕೊಳ್ಳತ್ತ ಇಲ್ಲವೇ, ಇಂಗ್ಲೀಷ್ ಭಾಷಾ ಮಾಧ್ಯಮದಲ್ಲೇ ಬೋದಿಸುತ್ತ ಇಲ್ಲವೇ. ಅಷ್ಟ್ಯು ಯಾಕೆ ಹೆಗಡೆವಾರ್ ಹುಟ್ಟು ಹಾಕಿದ ಆರ್ ಎಸ್ ಎಸ್ ನಡೆಸುತ್ತ ಇರುವ rashtrothana Skool ಮಾಧ್ಯಮವೇನು ??,
ಅವರ ಮಿಂಬಲೆ ಯಾಕೆ ಇಂಗ್ಲೀಷನಲ್ಲಿ ಇದೆ ?
ಅಲ್ಲಿ ವಿಧ್ಯಾಭ್ಯಾಸ ಉಚಿತವೇ ??, ವ್ಯಾಪಾರೀಕರಣವಿಲ್ಲವೇ ಅನ್ನೊ ಪ್ರಶ್ನೆಗಳಿಗೆ ಲೇಖಕರು ತಮ್ಮ ಲೇಖನದಲ್ಲಿ ಹೇಳದಿರುವುದು ಸ್ವಪಕ್ಷಪಾತ ಮತ್ತು ಜಾಣಕುರುಡು ತೋರಿಸುತ್ತದೆ.

ಹಿಂದಿ ರಾಷ್ಟ್ರಭಾಷೆ. ಮತ್ತು ಸಂಸ್ಕೃತ ಎಲ್ಲಾ ಭಾಷೆಗಳ ಅಮ್ಮ

ಲೇಖಕರು ಮುಂದುವರೆಯುತ್ತ ತಮ್ಮ ಅಜ್ಣಾನವನ್ನು ಮುಂದುವರೆಸಿದ್ದಾರೆ, ಅವರ ಪ್ರಕಾರ ಇಂಗ್ಲೀಷ್ ಯಾವತ್ತು ನಮ್ಮ ರಾಷ್ತಭಾಷೆ ಹಿಂದಿಯ ಸ್ಥಾನ ಪಡೆಯಬಾರದು ಮತ್ತು ಮುಂದಿನ ದಿನಗಳಲ್ಲಿ ಅದು ಸೊರಗಿ ಸಂಪರ್ಕ ಭಾಷೆಯಾಗಿ ನಮ್ಮ ಹಿಂದಿಯು ಆಕ್ರಮಿಸಬೇಕು ಎಂಬುದು. ಯಾಕೆ ಎಂದರೆ ಹಿಂದಿ ನಮ್ಮ ನೆಲದ ಭಾಷೆ ಮತ್ತು ಇಂಗ್ಲೀಷ್ ಬೇರೆ ನೆಲದ ಭಾಷೆ.
ಹಾಗೆ ನೋಡಿದರೆ ನಮ್ಮ ಕನ್ನಡಿಗರಿಗೆ ಮೊದಲು ಪರಿಚಯ ಆಗಿದ್ದು ಇಂಗ್ಲೀಷ್ , ಹಿಂದಿಯಲ್ಲ. ಅಷ್ಟಕ್ಕೂ ಎರಡೂ ನಮ್ಮ ನೆಲದ
ಭಾಷೆಗಳಲ್ಲ, ವಿಶ್ವಕ್ಕೆ ಸಂಪರ್ಕ ಭಾಷೆಯಾಗಿ ನಾವು ಇಂಗ್ಲೀಷ್ ಬಳಸಬೇಕೆ ವಿನಹ ಹಿಂದಿಯಲ್ಲ. ಹಿಂದಿಗೆ ಆ ಸ್ಥಾನ ಕೊಟ್ಟರೆ
ಎಕ್ ದೇಶ್ - ಎಕ್ ಭಾಷೆ ಅಂತ ಬಡಬಡಿಸುವ ಬಿಮಾರು ರಾಜ್ಯದ ಗೂಂಡಾಗಳಿಗೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ.

ಲೇಖಕರು ಸ್ವಲ್ಪ ರಾಷ್ಟ್ರಭಾಷೆ- ಸಂಸ್ಕ್ರುತದ ಅಮ್ಮ ನಂಟಿನ ಬಗ್ಗೆ ಸ್ವಲ್ಪ ಗೂಗಳ್ ಮಾಡಿದರೆ ಅನೇಕ ವಿಷಯಗಳು ತಿಳಿಯುತ್ತವೆ.
ಭವ್ಯ ಭಾರತದ , ಸಾಂಸ್ಕ್ರುತಿಕ ಪ್ರತಿನಿಧಿ , ಧರ್ಮ ವಿಧ್ಯಾಬ್ಯಾಸ ಮಾಡಿರುವ ಲೇಖಕರು ಇಷ್ಟು ಕೂಡ ಮಾಡಿಲ್ಲ ಎಂದರೆ ..ಅಕಟಕಟ

ಶಿಕ್ಷಣ ಮಾತೃಭಾಷೆಯಲ್ಲೇ ... ಉನ್ನತ ಶಿಕ್ಷಣ ರಾಷ್ಟ್ರಭಾಷೆಯಲ್ಲಿ.

ಇಡಿ ಲೇಖನದಲ್ಲಿ ಇದೊಂದೆ ಮೆಚ್ಚತಕ್ಕ ಅಂಶ , ಆದ್ರೆ ಹಾಗೆ ಹೇಳಿ ಮುಂದಿನ ಸಾಲುಗಳಲ್ಲಿ ಲೇಖಕರು ಹೇಳುವುದು
ಉನ್ನತ ಶಿಕ್ಷಣವನ್ನು ಹಿಂದಿ ಇಲ್ಲ ಸಂಸ್ಕೃತದ ಮೂಲಕ ಕೊಡಿಸಬೇಕೆಂತೆ. ಅಲ್ಲ ಸ್ವಾಮಿ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲೇ
ಕೊಟ್ತರೆ ಆಗುವ ನಷ್ತವೇನು ?. ಅಷ್ಟಕ್ಕೂ ನಮ್ಮ ಎಷ್ಟೋ ಭಾಷೆಗಳು ಹಿಂದಿಗಿಂತ ಹಳೆಯದು ಮತ್ತು ಪ್ರಭಲವಾಗಿದೆ.

ನಮ್ಮ ನೆಲದಲ್ಲಿ ಮಾತೃ ಭಾಷೆಯಲ್ಲಿ ಓದಿದ ಮಕ್ಕಳು ಹಿಂದಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಸುಲಭವೇ ??, ಒಮ್ಮೆ ಹಿಂದಿ ಹೇರಿಕೆಯಲ್ಲಿ ನಲಗುತ್ತಿರುವ ಕನ್ನಡ ಕಂದಮ್ಮಗಳ ಪಾಡನ್ನು ಲೇಖಕರು ಮನಗಾಣಬೇಕು. ಜೊತೆಗೆ ಅವರ ಮಾತೃಭಾಷೆ, ರಾಷ್ಟ್ರಭಾಷೆ, ಗೀರ್ವಾಣ ಭಾಷೆ hirearchy ಬಿಟ್ಟು ಈ ಒಕ್ಕೂಟದಲ್ಲಿ ಕನ್ನಡವೂ ರಾಷ್ಟಭಾಷೆ, ಅದು ನಾವ ಭಾಷೆಗೂ ಕಮ್ಮಿ ಇಲ್ಲ
ಮತ್ತು ಉನ್ನತ ಶಿಕ್ಷಣ ಅದರಲ್ಲಿ ಆಸಾಧ್ಯ ಅನ್ನೊ ಕೀಳರಿಮೆ ಬಿಡಬೇಕು.

ಶಿಕ್ಷಣ ಮಾಧ್ಯಮದಲ್ಲಿ ರಾಷ್ಟ್ರಭಾಷೆ.

ಲೇಖಕರ ವಾದ ಇಲ್ಲಿ ಬಹಳ ಚೆನ್ನಾಗಿದೆ, ಜಗತ್ತಿನಲ್ಲಿ ಎಲ್ಲಾ ದೇಶಗಳು ತಮ್ಮ ರಾಷ್ಟ್ರಭಾಷೆಯಲ್ಲಿ ಶಿಕ್ಷಣ ಕೊಡುತ್ತಿವೆ ಅದಕ್ಕೆ ಅವು ಉದ್ದಾರೆ ಆಗಿದೆ, ಹಾಗೆ ನಮ್ಮ ದೇಶದಲ್ಲಿ ಹಿಂದಿಯಲ್ಲಿ ಉನ್ನತ ಶಿಕ್ಷಣ ಕೊಡಬೇಕು, ಇಂಗ್ಲೀಷನ್ನು ಆ ಸ್ಥಾನಕ್ಕೆ ಕೊಂಡೋಯ್ಯಬಾರದು
ಎಂದು.
ಅವರು ಕೊಟ್ಟ ಉದಾ ದೇಶದಲ್ಲಿ ಇರುವುದು ಒಂದು ಜನಾಂಗ, ಒಂದು ಭಾಷೆ. ಯಾವುದು ನಮ್ಮ ನೆಲದ ತರ ಒಕ್ಕೂಟವಲ್ಲ. ಸಾಲದಕ್ಕೆ ಅವರು ಮನಗಾಣಬೇಕಾಗಿರುವುದು ಅಲ್ಲಿ ರಾಷ್ಟ್ರಭಾಷೆ ಎಂದು ಅಲ್ಲ, ಅದು ಮಾತೃಭಾಷೆ ಎಂದು. ತಮ್ಮ ಲೇಖನದಲ್ಲಿ ಅವರೇ ಹೇಳಿದ ಹಾಗೆ ಶಿಕ್ಷಣವನ್ನು ಯಾರೇ ಆಗಲಿ ತಮ್ಮ ಮಾತೃಭಾಷೆಯಲ್ಲಿ ಓದಿದರೆ ಹೆಚ್ಚು ಪರಿಣಾಮಕಾರಿ ಎಂದು. ಅದನ್ನು ಬಿಟ್ಟು ಅದನ್ನು ತಪ್ಪು ಅರ್ಥೈಸಿ ಹಿಂದಿ ಹೇರಿಕೆಗೆ ಮುಂದಾಗುವ ಕ್ರಮ ಸಲ್ಲದು. ಇದು ಯಾವ ರೀತಿ ಮಹತ್ತರ ಹೊಣೆಗಾರಿಕೆ ಎಂದು ಲೇಖಕರೇ ಉತ್ತರಿಸಬೇಕು ??


ಪೊಳ್ಳು ರಾಷ್ತೀಯತೆ

ಕನ್ನಡ ಕೇವಲ ಮನೆಭಾಷೆ
ಹಿಂದಿ ದೇಶದ ರಾಷ್ಟ್ರಭಾಷೆ
ಕನ್ನಡಕ್ಕಿಂತ ಹಿಂದೆ ಹೆಚ್ಚು ದೊಡ್ಡದು
ಎಲ್ಲ ಭಾಷೆಗಳಿಗೆ ಅಮ್ಮ ಸಂಸ್ಕೃತ
ಸಂಸ್ಕೃತ ಮತ್ತು ಹಿಂದಿ ಬೇಡ ಅನ್ನುವುರು ದೇಶದ್ರೋಹಿಗಳು
ಕನ್ನಡ-ಕನ್ನಡಿಗ-ಕರ್ನಾಟಕ ಅಂತ ಹೇಳುವುದು ದೇಶ ಒಡೆಯುವ ಕೆಲಸ
ಹಿಂದು ಧರ್ಮ ರಕ್ಷಸಿದರೆ ದೇಶ ಉಳಿಯುವುದು

ಈ ತರಹದ ಗೊಡ್ಡು ಉಪದೇಶಗಳನ್ನು ನಾವು ಕೇಳುತ್ತಲೆ ಇರುತ್ತೆವೆ. ವಿಪರ್ಯಾಸವೆಂದರೆ ನಮ್ಮ ಆಳುವ ಪ್ರಭುಗಳಿಗೂ ಇದರ ಛಾಯೆ ಇದೆ ಎಂದರೆ ಮಿಷನರಿಗಳಿಗಿಂತ ಹೆಚ್ಚು ಸುಳ್ಳು ಪ್ರಚಾರವನ್ನು ಮಾಡಿದ್ದಾರೆ ಎಂದು ಅರ್ಥ ಅಲ್ಲವೇ ??. ಇಂತಹ ಸುಳ್ಳು ಹೇಳಿಕೆಯಿಂದ ಮಕ್ಕಳ ಸರ್ವೋತೋಮುಖ ಬೆಳವಣಿಗೆ ಸಾಧ್ಯವೇ ..ಲೇಖಕರೇ ಉತ್ತರಿಸಬೇಕು.

Monday, February 01, 2010

ಟೊಳ್ಳು ರಾಷ್ಟೀಯತೆ , ಕನಪ್ಯೂಸ್ಡ ಪ್ರಾದೇಶಿಕತೆ

ಮುಂಬಾಯಿನಲ್ಲಿ ಮಾತ್ರ ಬೇರೆಯವರು ಎನು ಕಿಸಿಬಾರದು, ಅದೇ ಬೇರೆ ನೆಲದಲ್ಲಿ ಮರಾಠಿ ಪುಂಡಾಟಿಕೆ ಮಾಡಬಹುದು
ಇಂತಹ ದ್ವಂದ್ವ ನೀತಿಯನ್ನು ಮಾಡುತ್ತಿರುವ ಮರಾಠಿ ರಾಜಕೀಯ ಪಕ್ಷಗಳು ಮೊದಲು ಜಾಗೃತಿ ತಂದುಕೊಳ್ಳಬೇಕು.
ಹೇಗೆ ತಮ್ಮತನ ಆವ್ರಿಗೆ ದೊಡ್ದದೋ ಹಾಗೆ ಬೇರೆಯವರಿಗು ಅದು ದೊಡ್ಡದು ಅಂತ ಮನಗಾಣಬೇಕು. ಸ್ಥಳೀಯರಿಗೆ ಉದ್ಯೋಗ,
ಮುಖ್ಯವಾಹಿನಿಗೆ ಎಲ್ಲರೂ ಸೇರಬೇಕು ಅನ್ನೊ ಅವರ ನೀತಿ ಒಪ್ಪೋಣ, ಆದರೆ ತಮ್ಮ ವಿಚಾರಧಾರೆಯನ್ನು ತಮ್ಮ ನೆಲಕ್ಕೆ ಸ್ತೀಮಿತ ಗೊಳಿಸಿದರೆ ಉತ್ತಮ. ಅದನ್ನು ಬಿಟ್ಟು ಬೇರೆ ನೆಲದಲ್ಲಿ ತಮ್ಮ ವಾದವಿಟ್ಟರೆ ಅದು ಪುಂಡಾಟಿಕೆ ಅಲ್ಲದೆ ಬೇರೆನೂ ಅಲ್ಲ.

ಅಬು ಆಜ್ಮಿ ಮತ್ತು ಆರ್ ಆರ್ ಪಾಟೀಲಗೆ ಎನಿದೆ ವ್ಯತ್ಯಾಸ ??, ಇ ಪ್ರಶ್ನೆಗೆ ಶಿವಸೇನೆ ಹಿಡಿದು
ಕನ್ನಡಿಗರು ಕ್ರೂರಿಗಳು, ಪಾಕಿಸ್ತಾನಕ್ಕಿಂತ ಕೆಟ್ಟವರು , ಕೈ ಕತ್ತರಿಸಿ, ಕಾಲು ತೆಗೆಯಿರಿ, ಬೆಂಕಿ ಹಚ್ಚಿ ಇಂತಹ ಮಾತುಗಳನ್ನು
ನಮ್ಮ ನೆಲಕ್ಕೆ ಬಂದು ಆಡಿ ಎನು ಆಗಿಲ್ಲದಂತೆ ಹೋಗುವ ಅಲ್ಲಿನ ಮಂತ್ರಿ ಮಹೋದಯರು ಈ ನಡುವೆ ಅಲ್ಲಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಹರಿಸಲು ಬೆಳಗಾವಿಯ ನೆಪ ಮಾಡಿದ್ದಾರೆ.

ನಮ್ಮ ಸರ್ಕಾರಕ್ಕೆ ಇದು ಪ್ರಚೋದಕ ಭಾಷಣ ಅನಿಸುವುದೇ ಇಲ್ಲ ... ಇದು ಪ್ರತಿ ವರುಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ತರಹ ಅಂತ ಸುಮ್ಮನಾಗಿದ್ದಾರೆ.



ನಮ್ಮ ನೆಲದಲ್ಲಿ ಕನ್ನಡಿಗರು ಗೆದ್ದು ಆಯ್ಕೆ ಆದರೆ ಅದು ಪುಂಡಾಟಿಕೆ , ದೌರ್ಜನ್ಯವಂತೆ.
ದಶಕಗಳಿಂದ ಎಂ.ಇ.ಎಸ್ ಅನ್ನುವರ ಕೈಗೆ ಸಿಕ್ಕ ಆ ಪ್ರದೇಶಗಳು ಎಷ್ಟು ಹಾಳಾಗಿವೆ ಅಂದರೆ ಹೇಳಲಾಗದು, ಇವರು ಹೇಳುತ್ತಿರುವ
ಮತ್ತು ಸೇರಲು ಬಯಸುತ್ತಿರುವ ಪ್ರದೇಶ ಎನು ಅಮೇರಿಕಾ ಅಲ್ಲ. ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿರುವ ಪ್ರದೇಶಕ್ಕೆ ನಮ್ಮನ್ನು ಸೇರಿಸಿ ನಾವು ಉದ್ದಾರ ಆಗುತ್ತೇವೆ ಅಂತ ತಾರಮಯ್ಯ ಕಥೆ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಅವರ ಆಳ್ವೆಕೆಯಲ್ಲಿ ಅವರು ಕನ್ನಡಿಗರ ಮೇಲೆ ಮಾಡಿದ ದೌರ್ಜನ್ಯಕ್ಕೆ ಲೆಕ್ಕ ಉಂಟೆ. ಇವತ್ತು ಅಧಿಕಾರ ಇಲ್ಲದೆ ಪಾಪರ್ ಆಗಿರುವ ಇವರು
ರಾಜಕೀಯ ಮಾಡುತ್ತ ಇದ್ದಾರೆ.

ನಮ್ಮ ಘನ ಸರ್ಕಾರಕ್ಕೆ ಮರಾಠಿಗರ ಮೇಲೆ ದೌರ್ಜನ್ಯ ಮಾಡಬೇಡಿ ಅಂತ ಪತ್ರ ಬರುತ್ತದೆ. ಆ ಪತ್ರದಲ್ಲಿ ಖಾನಪೂರ ಅನ್ನೋ ಊರು ಮಹರಾಷ್ತ್ರಕ್ಕೆ ಸೇರಿದೆ ಅಂತ ಹೇಳುತ್ತದೆ. ಇದೇನು ಗೂಗಲ್ ಇಲ್ಲ ಅಮೇರಿಕಾ
ಮಾಡಿದ ಪ್ರಮಾದ ಅಲ್ಲ. ಉಪರಾಷ್ಟ್ರಪತಿ ಕಚೇರಿಯಿಂದ ಬರುವ ಪತ್ರ. ಅದೇ ಅರುಣಾಚಲ ಪ್ರದೇಶದ ಒಂದು ಭಾಗ ಚೀನಗೆ ಸೇರಿದೆ ಅಂದ ವರದಿ ಮಾಡಿದರೆ ಇಲ್ಲಿ ನಮ್ಮ ಕನ್ನಡ ನೆಲದಲ್ಲಿ ಸರ್ಕಾರ ಹೇಳಿಕೆ ಕೊಡುತ್ತದೆ. ವಿದ್ಯಾರ್ಥಿ ಪರಿಷತ್ತು ರಸ್ತಾ ರೋಕೊ ಮಾಡುತ್ತದೆ. ಹಿಂದು ಬುದ್ದಿಜೀವಿಗಳು ಪುಂಖಾನುಪುಂಖವಾಗಿ ಬರೆಯುತ್ತಾರೆ. ಇದನ್ನು ತಪ್ಪು ಮಾಡಿದ ಅಮೇರಿಕಾ ಸಂಸ್ಥೆಗಳು ಮೂಸಿ ನೋಡುವದಿಲ್ಲ. ಆ ವಿಷ್ಯ ಅವರಿಗೂ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಯಾವಗ ನಮ್ಮ ನೆಲದ ಭಾಗ ಬೇರೆ ರಾಜ್ಯಕ್ಕೆ ಸೇರಿದೆ ಅಂದರೆ ಎಲ್ಲ ಗಪ್ ಚುಪ್,
ನೋ ಕಾಮೆಂಟ್ಸ. ಬೇಕಿದ್ದರೆ ಈ ಸೋಗಲಾಡಿ ರಾಷ್ತ್ರೀಯ ಜಾಗೃತಿ ದೈನಿಕಗಳು ಇದರಲ್ಲಿ ತಪ್ಪೇನಿದೆ ಎಲ್ಲಾ ಭಾರತದಲ್ಲಿ ಇದೇ ಅಲ್ವಾ ಅಂತ ಮಾತನಾಡುತ್ತಾರೆ.