Tuesday, February 27, 2007

ಭಾಷಾಭಿವೃದ್ದಿ...ಒಂದು ಚಿಂತನೆ.

ಜಗತ್ತಿನಲ್ಲಿ ಭಾಷೆಯಲ್ಲಿ ಮುಖ್ಯ ಅಂಶ ಕಾಣುವದೆನೆಂದರೆ ಕಾಲಕ್ರಮೇಣ ಅದರಲ್ಲಿ ಬದಲಾವಣೆ,ಇದು ನಿರಂತರ ಮತ್ತು ಸ್ವಾಭಾವಿಕ. ಭಾಷೆಯಲ್ಲಿ ಮೂಲ ರೂಪ ಅನೇಕ ಬಾರಿ ಬದಲಾವಣೆಗೊಂಡು ಇನ್ನೊಂದು ರೂಪವನ್ನು ತಾಳಿದೆ,ಇದ್ದ ರೂಪ ಹೋಗುವುದು,ಇನ್ನೊಂದು ಹೊಸ ರೂಪ ಬರುವುದು ನಿತ್ಯ ನಡೆಯುವ ಘಟನೆಗಳು.

ಇಂಥ ಬದಲಾವಣೆಯನ್ನು ತಪ್ಪು-ಸರಿ ಎಂದು ಅಳೆಯಲು ಹೋಗಬಾರದು,ರೂಪಾಂತರಕ್ಕೆ ಅನೇಕ ಕಾರಣಗಳಿರುತ್ತದೆ,ರೂಪಾಂತರ ರಾತ್ರೊ-ರಾತ್ರಿ ಆಗುವ ಒಂದು ಪ್ರಕ್ರಿಯೆ ಅಲ್ಲ. ಅನೇಕ ವರುಷ,ಕೆಲವು ಸಾರಿ ಶತಮಾನಗಳೇ ಬೇಕಾಗಬಹುದು. ಮಹಾತ್ಮನವರು ಹೋಗಿ ಮಹಾತ್ಮವರು ಆಗಿದೆ, ಇದನ್ನು ಸದೃಶಕಾರಲೋಪ ಎನ್ನುತ್ತಾರೆ, ಹಾಗೆ ಕಾಗದ ಹೋಗಿ ಕಾದಗ ಆಗಿದೆ. ಇದನ್ನು ವರ್ಣಪಲ್ಲಟ ಎನ್ನುತ್ತಾರೆ. ಗಮನಿಸಿನೋಡಿ ಅಕ್ಷರಗಳು ಹಿಂದೆ ಮುಂದೆ ಆಗುತ್ತದೆ. ಅನೇಕ ಬಾರಿ ಪ್ರತಿ ಮನುಷ್ಯನಿಗೂ ತಾನು ಆಡುವ ಭಾಷೆಯಲ್ಲಿ ವರ್ಣಪಲ್ಲಟ ಮಾಡುವುದು ಸರ್ವೆಸಾಮನ್ಯ. ಅವಸರವಾಗಿ ಮಾತನಾಡುವಾಗ ಇದು ಹೆಚ್ಚು ಆಗುತ್ತದೆ, ಬಹುಶ ವರ್ಣಪಲ್ಲಟವೇ ಉಳಿದಿರಬಹುದು.

ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಈ ರೀತಿ ಬದಲಾವಣೆ ಆದಾಗ ಮೂಲರೂಪ ಹಾಗು ಬದಲಾದ ರೂಪ ಎರಡನ್ನು ಬಳಸಿಕೊಳ್ಳಬಹುದು. ಹಿಂದೆ ಹೇಳಿದ ಹಾಗೆ ರೂಪಾಂತರಕ್ಕೆ ದ್ವನಿಯೇ ಮುಖ್ಯ ಅಂಶವೆಂದರೆ ತಪ್ಪಾಗಲಾರದು. ಭೌಗೋಳಿಕವಾಗಿ ಭಾಷೆ ಕೂಡ ಅನೇಕ ಪ್ರಭೇದಗಳನ್ನು ಪಡೆದಿದೆ ಅದರಲ್ಲಿ ""ಪ್‍ವು" "ಅ" ಆಗಿ ಪರಿವರ್ತನೆಯಾಗಿರುವುದು. ಅರಸೀಕೆರೆ,ಹಾಸನ,ಮೈಸೂರಿನ ಕೆಳಭಾಗದ ಜನರಲ್ಲಿ ಇದು ಹೆಚ್ಚು ಕಾಣುತ್ತದೆ. ಇದು ತಪ್ಪಲ್ಲ,ಇದು ಸ್ವಾಭಾವಿಕ. ಅದನ್ನು ಹೀಯಾಳಿಸಬಾರದು,ಆ ಪದಗಳನ್ನು ನಮ್ಮ ಪದ ಭಂಡಾರದಲ್ಲಿ ಇಟ್ಟುಕೊಳ್ಳಬೇಕು. ಸಂದರ್ಭಕ್ಕೆ ತಕ್ಕ ಹಾಗೆ ಇವುಗಳನ್ನು ಬಳಸಿಕೊಳ್ಳುವುದು ನಮಗೆ ಬಿಟ್ಟಿದ್ದು. ಉದಾ:- ಕಾಲು ಎಂದರೆ ೨ ಅರ್ಥವಿದೆ,ಒಂದು ವಾಕ್ಯದಲ್ಲಿ ಬಳಸುವ ಬಳಕೆಯಿಂದ ಅದರ ಅರ್ಥ ಬದಲಾಗುತ್ತದೆ. ಹಿಂದೆ ಪಾಲುವಿನ ಮೂಲರೂಪಕ್ಕೆ ಬೇರೆ ಅರ್ಥ ಕೂಡ ಬಂದಿದೆ,ಆದರೆ ೨ ಅರ್ಥಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು.


ಅನೇಕ ಬಾರಿ ಕಾಲಕ್ರಮೇಣ ಶಬ್ಧಗಳು ಕೂಡ expire ಆಗುತ್ತವೆ ಅಂದರೆ ತಪ್ಪಾಗಲಾರದು, ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಪದಗಳು ಆಗಿನ ಸಮಾಜದ ವಸ್ತುಗಳ ಹೆಸರುಗಳು ಇಂದು ಕೇಳಸಿಗದು,ಕೇಳಿದರೂ ಅದರ ಅರ್ಥವನ್ನು ಮನದಲ್ಲಿ ಚಿತ್ರಣ ಬರದು, ಮುಂದೆ ಇದರ ಹೊಸ ಪದಗಳು ಹಳೆಯ ಪದಗಳನ್ನು ಹಿಂದೆ ಹಾಕುತ್ತವೆ. ಭಾಷೆಯ ಬದಲಾವಣೆಯನ್ನು TIME and SPACE ಗಳಲ್ಲಿ ಅಳೆಯಬಹುದು, ಅಂದರೆ ಭಾಷೆಯ ಬದಲಾವಣೆಗೆ ಕಾಲ ಮತ್ತು ದೇಶಗಳೆ ಕಾರಣ.ಒಂದು ಸಂಸಾರ ಹೇಗೆ ಬೇರೆಯಾಗಿ ಬೇರೆ ಬೇರೆಯಾಗಿ ವಾಸಿಸಿ ಅವರದೇ ಹೊಸ ಸಂಸಾರದ ಕಟ್ಟ್ಟಳೆಯನ್ನು ತರುತ್ತಾರೊ,ಹಳೆ ಪದ್ಧತಿಗಳನ್ನು ಹೊಸ ಪದ್ದತಿಗಳನ್ನಾಗಿ ಮಾಡಿಕೊಳ್ಳುತ್ತಾರೋ ಹಾಗೆ ಭಾಷೆಯಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣಬಹುದು. ಇದನ್ನು ತಮಿಳ್ ಭಾಷೆಯಲ್ಲಿ ಚೆನ್ನಾಗಿ ಕಾಣಬಹುದು, ದಕ್ಷಿಣ ಆಫ್ರಿಕಾಗೆ ಹೋದ ತಮಿಳರ ಭಾಷೆ,ಶ್ರೀಲಂಕಾದಲ್ಲಿ ನೆಲಸಿರುವ ಜನರ ಭಾಷೆ, ಮತ್ತು ನಮ್ಮ ತಮಿಳುನಾಡಿನ ಜನರ ಭಾಷೆಯನ್ನು ನೋಡಿದರೆ, ೩ ಬೇರೆ ಭಾಷೆಯಾಗಿ ಕಾಣತ್ತದೆ. ಇಲ್ಲಿ ಕಾಲ-ಮತ್ತು-ದೇಶಗಳ ಅಂತರವೇ ಮುಖ್ಯ ಕಾರಣ. ಒಂದು ಪ್ರದೇಶಕ್ಕೆ ಹೋಗಿ ನೆಲಸಿರುವವರ ಮೇಲೆ ಅಲ್ಲಿನ ಬಾಹ್ಯ ಅಂಶಗಳು ಬಹಳ ಪ್ರಭಾವ ಮಾಡುತ್ತದೆ.ಇದಕ್ಕೆ ನಾನು ಹೇಳಿದ್ದ ಮೈಸೂರಿನ ಕೆಳ ಇರುವರಿಗೆ "ಅ" ಮತ್ತು "ಹ" ಕಾರ ಉಚ್ಚಾರಣೆಯ ಬಗ್ಗೆ ಬೇಧವಿದೆ. ಇದು ಇಂದಿನ ಬದಲಾವಣೆಯಲ್ಲ, ಶತನಾನಗಳಷ್ಟು ಹಳೇಯದು ಎಂದು ಪಂಡಿತರ ಅಂಬೋಣ. ೧೯೪೦ ದಶಕದಲ್ಲೇ ನಮ್ಮ ಕೈಲಾಸಂ ಇದರ ಬಗ್ಗೆ ಜೋಕ್ ಮಾಡಿದ್ದಾರೆ.


ಈ ಅಂಶ ಅಲ್ಲಿಂದ ಆಚೆ ಹೋಗದಿರಲು ಪ್ರಕೃತಿಯು ಒಂದು ಕಾರಣವಿರಬಹುದು. ಈ ಬದಲಾವಣೆ ಅಲ್ಲಿಂದ ಆಚೆ ಹೋಗದಿರಲು ಸುತ್ತ ಇರುವ ಬೆಟ್ಟ-ಗುಡ್ಡ ಕಾರಣವಿರಬಹುದು. ಇದು ಕೂಡ ನಮ್ಮ ಒಂದು ಭಾಷೆಯೇ ಎಂದು ನಾವು ಮರೆಯಬಾರದು. ಒಂದು ಉಪಭಾಷೆ ಪ್ರಾದೇಶಿಕ,ಸಾಮಾಜಿಕಗಳಿಂದ ಒಡೆಯುತ್ತದೆ, ಹಿಂದೆ ದ್ರಾವಿಡ ಭಾಷೆಯಲ್ಲಿ ದಕ್ಶಿಣ,ಮಧ್ಯ ಮತ್ತು ಉತ್ತರ ದ್ರಾವಿಡ ಭಾಷೆಗಳಾಗಿದ್ದವು. ದಕ್ಶಿಣ ದ್ರಾವಿಡ ಕನ್ನಡ,ತಮಿಳ್,ತೆಲುಗು ಆದವು ಮತ್ತೆ ವ್ಯತ್ಯಾಸಗಳು ಬಂದು ಕನ್ನಡ ಕೊಡವ ಮತ್ತು ಬಡಗ ಆಯಿತು. ಭಾಷೆಯು ಒಂದು ಸಂಸಾರವಿದ್ದ ಹಾಗೆ ಇಂದಿನ ಕಾಲದ ಹಾಗೆ nuclear ಕುಟುಂಬಗಳನ್ನು ನಾವು ಕಾಣಬಹುದು. ಭಿನ್ನತೆ ಇರುತ್ತದೆ ಆದರ ಭಿನ್ನತೆಯಲ್ಲಿ ಎಕತೆ ಇರುತ್ತದೆ.

ಇದರ ಮುಂದುವರೆದ ಭಾಗ .....