Monday, April 24, 2006

ಡಾ||ರಾಜ್‍ಗೆ ನಮನ

ನಮ್ಮಲ್ಲಿ ಕನ್ನಡದ ಕಿಚ್ಚನ್ನು ತಂದ ನಮ್ಮ ಅಣ್ಣ ಇವತ್ತು ಬದುಕಿದ್ದರೆ ೭೮ ವರ್ಷ ವಯಸ್ಸಾಗುತ್ತ ಇತ್ತು, ಅದರೆ ಅವರು ನಮ್ಮನ್ನು ಬಿಟ್ಟಿ ಅಗಲಿರುವ ಸಂಗತಿಯನ್ನು ಮನವು ಒಪ್ಪಿಕೊಳ್ಳುವದಿಲ್ಲ, ನಮ್ಮ ಮನದಲ್ಲಿ ಖಾಯಂ ಆಗಿ ಇರುವ ಮಹಾನ್ ಚೇತನಕ್ಕೆ ಇಂದು ಪ್ರತಿಯೊಬ್ಬ ಕನ್ನಡಿಗನು ಕನ್ನಡ ಸೇವೆ ಮಾಡುವ ಮೂಲಕ ನಿಜವಾದ ಶ್ರದ್ಧಾಂಜಲಿ ಕೊಡಬೇಕಾಗಿದೆ.

ನಾನು ಕನ್ನಡಿಗ, ನನ್ನ ಭಾಷೆಗೆ ಹೋರಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿ ಅದನ್ನು ನಮ್ಮ ವೀರ ಅರಸುಗಳ ಚಿತ್ರಗಳ ಮೂಲಕ ನಮಗೆ ತೊರಿಸಿ ನಮ್ಮಲ್ಲಿ ಸತ್ತಂತೆ ಇದ್ದ ಆತ್ಮಸ್ಥೈರ್ಯವನ್ನು ತುಂಬಿದ್ದು . ಭಾಷೆಯ ವಿಷಯಕ್ಕೆ ಬಂದಾಗ ಯಾವ ನಟನು ಮಾಡಿರದ ಕೆಲಸವನ್ನು ನಮ್ಮ ಅಣ್ಣ ಮಾಡಿದ್ದಾರೆ. ಸುಮ್ಮನೆ ಚಿತ್ರದಲ್ಲಿ ಕನ್ನಡ ಭಾವುಟ ಹಾರಿಸಿ, ಕನ್ನಡವೇ ನಮ್ಮ ಅಮ್ಮ" ಅಂತ ಬುರುಡೆ ಬಿಡುವ ನಾಯಕರಿಂದ ಹೆಚ್ಚು ಅಪೇಕ್ಷೆ ಮಾಡಲಾಗದ ಈ ಕಾಲದಲ್ಲಿ ಸ್ಪಂದಿಸಿ ಅದಕ್ಕೆ ಜೀವ ಕೊಟ್ಟಿದ್ದು ಕೇವಲ ಡಾರಾಜ್.

ಗೋಕಾಕ್ ಚಳುವಳಿಯ ಸಮಯದಲ್ಲಿ ಲಕ್ಷಾಂತರ ಕನ್ನಡಿಗರನ್ನು ಉದ್ದೇಶಿಸಿ ಅವರು ಆಡಿದ ಮಾತುಗಳು ಮತ್ತು ಹರಿಸಿದ ಕಣ್ಣೀರಿಗೆ ಅಂದಿನ ಗುಂಡುರಾವ್ ಸರಕಾರ ಕೊಚ್ಚಿ ಹೊಗಿದ್ಧು ಇತಿಹಾಸ.

ಕೇವಲ ಒಂದು ಗಂಟೆ ಕನ್ನಡ ಕಾರ್ಯಕ್ರಮಗಳು ಮೀಸಲು ಇರುವಾಗ, ಉರ್ದು ವಾರ್ತೆಗೆ ೧೦ ನಿಮಿಷ ಕೊಟ್ಟು ಕನ್ನಡಕ್ಕೆ ಧಕ್ಕೆ ತಂದ ನಿರ್ದೆಶಕ ಹಕ್ ಕ್ರಮವನ್ನು ಖಂಡಿಸಿ ಚಳುವಳಿ ಆರಂಭವಾದಗ, ಡಾರಾಜ್ ಅವರು ಹೇಳಿದ ಒಂದು ಮಾತಿಗೆ ಮೊಯ್ಲಿ ಸರಕಾರ ನಡುಗಿ ತಾಂತ್ರಿಕ ದೊಷಗಳಿಂದ ನಿಲ್ಲಿಸಿ , ಕನ್ನಡ ವಿರೊಧಿ ಹಕ್ ವರ್ಗವಣೆ ಮಾಡಿದ್ದು ಅವರ ಶಕ್ತಿಯನ್ನು ತೋರಿಸುತ್ತದೆ.

Sword of Tippu Sultan ಕನ್ನಡಕ್ಕೆ ಡಬ್ ಮಾಡಲು ಸಂಜಯ್ ಖಾನ್ ಹೋದಾಗ ಅದನ್ನು ನಿಲ್ಲಿಸಿ ಅನೇಕ ಕಿರುತೆರೆಯನ್ನು ನಂಬಿದ್ದ ಜೀವಗಳನ್ನು ಉಳಿಸಿದ್ದು ನಮ್ಮ ರಾಜ್.

ಹೀಗೆ ಡಾರಾಜ್ ಕನ್ನಡ ಸಮಸ್ಯೆ ಎಷ್ಟೆ ಚಿಕ್ಕದಾದರೂ ಅದಕ್ಕೆ ಸ್ಪಂದಿಸಿ ಅದಕ್ಕೆ ಜಯ ತಂದು ಕೊಟ್ಟಿದ್ದಾರೆ, ಇವರ ನಿಷ್ಠೆ ಮತ್ತು ಆದರ್ಶ ನಮ್ಮ ಇಂದಿನ ಪೀಳಿಗೆಗೆ ಮಾದರಿ.

ಇಂದು ಕರ್ನಾಟಕದಲ್ಲಿ ಯಾವ ಹುಡುನನ್ನು ಕರೆದು ಮಿಮಿಕ್ರಿ ಮಾಡು ಅಂದರೆ ಮೊದಲು ಮಾಡುವುದು ನಮ್ಮ ಅಣ್ಣ ಅವರ ಅಣಿಮುತ್ತುಗಳನ್ನು, ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮಿಮಿಕ್ರಿ ಮಾಡುವಾಗ ನಾವು ಅವರ ಭಾವನೆಗಳನ್ನು ನಮ್ಮಲ್ಲಿ ಬರಸಿಕೊಂಡು ಮಾಡಬೇಕು. ನೋಡಿ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಡಾರಾಜ್ ಹಾಸುಹೊಕ್ಕಿದ್ದಾರೆ.

ಅವರ ಹಾಗೆ ಶುದ್ಧ ಕನ್ನಡವನ್ನು ನಮ್ಮ ದೈನಂದಿನ ಕೆಲಸಗಳಲ್ಲಿ ಬಳಸುತ್ತ, ಕನ್ನಡದ ಸಮಸ್ಯೆ ನಮ್ಮ ಸಮಸ್ಯೆ,ಅದಕ್ಕೆ ಪರಿಹಾರ ನಾವೇ ಕಂಡು ಹಿಡಿಯಬೇಕು ಎಂಬ ಸಂಕಲ್ಪದೊಂದಿಗೆ ಮಾಡುವ ಕನ್ನಡ ಕೆಲಸವೇ ಅವರಿಗೆ ನಾವು ತೋರಿಸುವ ನಿಜವಾದ
ಶ್ರದ್ಧಾಂಜಲಿ.