Thursday, May 25, 2006

Councelling(ಮಾರ್ಗದರ್ಶನ) ಅವಶ್ಯಕತೆ .....




ಪಿ.ಯು.ಸಿ ಫಲಿತಾಂಶದ ನಂತರ ಬೆಂಗಳೂರಿನಲ್ಲೇ ಸುಮಾರು ೧೦-೧೨ ಆತ್ಮಹತ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಜಕ್ಕೂ ಮನಸ್ಸಿಗೆ ಆ ಸುದ್ದಿಗಳನ್ನು ಕೇಳಿ ಪಿಚ್ಚು ಅನಿಸುತ್ತದೆ. ಯಾಕೆ ಬದುಕಿ ಬಾಳಬೇಕಾದ ಹೂವುಗಳು ಹೀಗೆ ಮಾಡಿಕೊಂಡವು ಅಂತ ಬೇಸರವಾಗುತ್ತದೆ. ಪಿ.ಯು.ಸಿ ಹೋಯಿತು ಅಂದರೆ ಜೀವನ ಮುಳುಗಿ ಹೋಗಿಲ್ಲ, ಇಂದು ಅನೇಕ ವೃತ್ತಿಗಳನ್ನು ತೆಗೆದುಕೊಳ್ಳಬಹುದು. ಅದರಲ್ಲಿ INTERIOR DESIGNING ಪ್ರಮುಖವಾದುದು.

ಇದಕ್ಕೆ ಪೂರಕವಾಗಿ ಪದವಿ ಮುಗಿಸಿ ಕೆಲಸವನ್ನು ಅರಿಸುವ ಜನರು, ಕೆಲಸ ಸಿಗಲಿಲ್ಲ ಅಂತ ಗೊತ್ತಾದರೆ ಬೇಗ ಮನೋವೈಫಲ್ಯಕ್ಕೆ ಈಡಾಗಿ ಆತ್ಮಹತ್ಯಗೆ ಶರಣಾಗುತ್ತಾರೆ. ಅನೇಕ ಕಡೆ ನಿಮಗೆ ಕೇಳಿರಬಹುದು ನಮ್ಮವರಿಗೆ ಕೆಲಸ ಸಿಗುತ್ತಿಲ್ಲ ಅಂತ, ಆದರೆ ಒಬ್ಬರು ಯಾಕೆ ಸಿಗುತ್ತ್ತಿಲ್ಲ, ಚಿಕ್ಕ ಊರುಗಳಿಂದ ಬಂದವರಿಗೆ ಎನು ತರಬೇತಿ ಕೋಡಬೇಕು ಎಂಬುದರ ಬಗ್ಗೆ
ಯೋಚಿಸದೆ ಇದ್ದಾಗ, ಎಲೆ ಮರೆಕಾಯಿಯಾಗಿ ಇದಕ್ಕ್ಕೆ ಕೆಲಸ ಮಾಡುತ್ತಿರುವ ಬನವಾಸಿ-ಬಳಗಕ್ಕೆ ಅಭಿನಂದನೆ ಸಲ್ಲಿಸಬೇಕು.

ಬೆಂಗಳೂರಿಗೆ ಬಂದು ಉದ್ಯೋಗವನ್ನು ಅರಸುವ ಕನ್ನಡಿಗರಿಗೆ ವೃತ್ತಿ ಮಾರ್ಗದರ್ಶನ ಮಾಡಿ, ನಮ್ಮ ಜನರಿಗೆ ಕೆಲಸ ಸಿಗಲು ಬನವಾಸಿ ಬಳಗ ದುಡಿಯುತ್ತಲೆ ಇದೆ. ಇಲ್ಲಿಯವರೆಗೆ 7 ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿ ಸುಮಾರು ೧೦೦+ ಜನರಿಗೆ ಕೊಡಿಸಲು ನೆರವಾಗಿದೆ. ಈ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ೫೦೦+ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಇದರಲಿ ಬಿ.ಇ, ಬಿ.ಕಾಂ, ಬಿ.ಎಸ್ಸಿ ಪದವಿಯನ್ನು ಪಡೆದ ಅನೇಕ ಪದವಿಧರರು ಇದ್ದಾರೆ. ಕರ್ನಾಟಕದ ಪ್ರತಿ ಜಿಲ್ಲೆಗೂ ಈ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗುವುದು ಅವರ ಆಸೆ, ಇದಕೆ ಪೂರಕವಾಗಿ ಒಂದು ಕಾರ್ಯಕ್ರಮ ಮೈಸೂರಿನಲ್ಲಿ ನಡೆದಿದೆ.

೮ನೇ ವೃತ್ತಿ ಮಾರ್ಗದರ್ಶನದ ಆಹ್ವಾನಪತ್ರವನ್ನು ನಾನು ಇಲ್ಲಿ ಲಗತ್ತಿಸಿದ್ದೇನೆ. ಇದರ ಜೊತೆಗೆ ಇಂದಿನ ಪಿ.ಯು.ಸಿಯಲ್ಲಿ ನೊಂದವರಿಗೆ councelling ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರೆ ಒಳ್ಳೆಯದು.

(ಚಿತ್ರಗಳು ಕೃಪೆ:- ಬನವಾಸಿ ಬಳಗ)

ಗೋ...........................ಲ್


"go ಜರ್ಮನಿ" ಇದು ಜಗತ್ತಿನ ಎಲ್ಲಾ ಫುಟ್ಬಾಲ್ ಪ್ರಿಯರ ವಾಕ್ಯ, ಭಾರತದಲ್ಲಿ ಫುಟ್ಬಾಲ್ ಅಷ್ಟು ಪ್ರಸಿದ್ಧಿ ಪಡೆಯದಿದ್ದರೂ ವಿಶ್ವ ಕಪ್ ಬಂದರೆ ಸಾಕು
ನಮ್ಮ ಮನ-ಮನೆಗಳಲ್ಲಿ ಫುಟ್ಬಾಲ್ ಹಾಸುಹೊಕುತ್ತದೆ. ಮನೆಯಲ್ಲಿ ಒಬ್ಬರು ಒಂದು ತಂಡವನ್ನು ಬೆಂಬಲಿಸಿದರೆ ಇನ್ನೊಬ್ಬರು ಇನ್ನೊಂದು ತಂಡವನ್ನು ಬೆಂಬಲಿಸಿ ಮನೆಯೇ ಒಂದು ಮೈದಾನ ಆಗುತ್ತದೆ.
ನನಗೆ ವಿಶ್ವಕಪ್ ಫುಟ್ಬಾಲ್ ಬಹಳ ಹಿಂದಿನ ಪರಿಚಯ, ನಾನು ನೋಡಲು ಶುರು ಮಾಡಿದ್ದು ೧೯೮೬ ವಿಶ್ವಕಪ್‍ನಿಂದ. ಆಗ ನಮ್ಮ ಮನೆಯಲ್ಲೇ ಎರಡು ಬಣ ಆಗಿತ್ತು,ಒಂದು ಬಣ ಅರ್ಜೇಂಟಿನಾಗೆ ಬೆಂಬಲ ನೀಡಿದರೆ ಇನ್ನೊಂದು ಪಶ್ಚೀಮ ಜರ್ಮನಿಗೆ ಬೆಂಬಲ ಕೊಟ್ಟರು.
ಆ ವಿಶ್ವಕಪ್ ನನಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸಿತು. ಮರಾಡೋನ ಆಟ ನೋಡಿ ನಾವು ಎಷ್ಟು ಪ್ರಭಾವಿತರಾಗಿದ್ದಿವಿ ಅಂದರೆ ಅಂದು ಕ್ರಿಕೆಟ್ ಆಟದ ಚೆಂಡಿನಲ್ಲಿ ನಾವು ಫುಟ್ಬಾಲ್ ಆಡಿದ್ದೆ ಆಡಿದ್ದು.
ಇನ್ನೂ ಫುಟ್ಬಾಲ್ ಇತಿಹಾಸದಲ್ಲಿ ಎಂದು ಮರೆಯಲಾಗದ ಪಂದ್ಯವೆಂದರೆ ಕ್ವಾಟರಫೈನಲ್ಸ್‍ನ ಅರ್ಜೇಂಟಿನಾ ಮತ್ತು ಇಂಗ್ಲೆಡ್ ಪಂದ್ಯ. ಆ ಪಂದ್ಯದಲ್ಲಿ ಮರಾಡೊನ ಗೋಲ್ ಯಾರು ತಾನೇ ಮರೆಯಲೂ ಸಾಧ್ಯ.
೨-೧ ಅಂತರದಲ್ಲಿ ಪಂದ್ಯವನ್ನು ಗೆದ್ದ ಅರ್ಜೇಂಟಿನಾ ತಾನೂ ವಿಶ್ವಚಾಂಪಿಯನ್ ಎಂದೂ ಸಾಬೀತು ಪಡಿಸಿತ್ತು.
ಅಲ್ಲಿಂದ ನನ್ನ ಬೆಂಬಲ ಅರ್ಜೇಂಟಿನಾಗೆ ಮೀಸಲಾಗಿತ್ತು.

೧೯೯೦ರ ಇಟಾಲಿಯಾ ಸಮಯದಲ್ಲಿ ಮೊದಲ ಪಂದ್ಯದಲ್ಲಿ ಕ್ಯಾಮರೂನ್ ಎದುರು ಸೋತು ಸುಣ್ಣವಾದಾಗ ಬೇಸರ ಹೊಂದಿದ ಅನೇಕರಲ್ಲಿ ನಾನು ಒಬ್ಬ.ಆ ಸಮಯದಲ್ಲಿ ಇಟಲಿ ಆಟ ನೋಡಿ ನನ್ನ ಬೆಂಬಲ ತಂಡಗಳಲ್ಲಿ ಇಟಲಿಯನ್ನು ಸೇರಿಸಿಕೊಂಡಿದ್ದೆ.
ಆದರೆ ವಿಶ್ವಕಪ್‍ನಲ್ಲಿ ಡಾರ್ಕಹಾರ್ಸ್ ತರ ಬಂದ ಕ್ಯಾಮರೂನ್ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ರೊಜರ್ ಮಿಲ್ಲಾ ಆಟವನ್ನು ಯಾರು ತಾನೇ ಮರೆಯಲು ಸಾದ್ಯ?,
ಕೊಲಂಬಿಯ ಗೋಲ್ಕೀಪರ್ ಮಾಡಿದ ನಗೆಪಾಟಿಲಿನಲ್ಲಿ ಗೆದ್ದ ರೊಜರ್ ಮಿಲ್ಲ ತಮ್ಮ ತಂಡವನ್ನು ಕೊನೆಯ ೮ರ ಸುತ್ತಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ೧೯೮೬ ಗೋಲ್ಡನ್ ಬುಟ್ ವಿಜೇತ ಗ್ಯಾರಿ ಲಿನ್ಕರ್ ಮತ್ತು ಗಜ್ಜಾ(gasgoni)ಸಹಾಯದಿಂದ ಕ್ಯಾಮರೂನ್ ಪಂದ್ಯ
ಸೋತರು ನಮ್ಮ ಮನದಲ್ಲಿ ಸದಾ ನೆಲಸಿದರು.

ಮುಂದಿನ ವಿಶ್ವಕಪ್‍ಗಳಲ್ಲಿ ನಾನು ಬೆಂಬಲಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಲಿಲ್ಲ,ಬ್ಯಾಟಿಸ್ಟುಟಾ,ಆರ್ಟೆಗೋ ಮುಂತಾದ ಆಟಗಾರರನ್ನು ಹೊಂದಿದ್ದು ಅರ್ಜೇಂಟಿನಾ ಅಂದುಕೊಂಡ ಹಾಗೆ ಆಡಲಿಲ್ಲ.
ಬ್ರೆಜಿಲ್ ಮೈಲುಗೆ ಪ್ರಭಲವಾಗಿ ಇತರರ ಆಟ ಕೇವಲ ನೀರಸವಾಗಿ ಕಂಡಿತು. ಈ ಬಾರಿ ನನ್ನ ಮೆಚ್ಚಿನ ತಂಡಗಳು ಉತ್ತಮ ಪ್ರದರ್ಶನ ನೀಡುತ್ತವೆ ಎಂದು ನಾನು ನಂಬಿದ್ದೇನೆ.
ಆದರೆ ಒಂದು ಆಟಗಾರನ ಮೇಲೆ ಅವಲಂಬಿತರಾಗಿರುವ ತಂಡಗಳು ಪೆಟ್ಟು ಅನುಭವಿಸುವುದು ಸರ್ವೆಸಾಮಾನ್ಯ. ಆದರೆ ಬ್ರೆಜಿಲ್ ತಂಡ ನೋಡಿದರೆ ಒಬ್ಬರನ್ನು ಇನ್ನೊಬ್ಬರು ಅಷ್ಟೆ ಪ್ರಭಾವಶಾಲಿಯವರು ಬದಲಾಯಿಸುತ್ತಾರೆ.
ಕ್ರೆಸ್ಪೊ,ಐಮಾರ್,ಡೆಲೆಸ್ಯಾನ್ಡ್ರೊ ಮುಂತಾದ ಅನುಭವಿ ಆಟಗಾರರು ಇದ್ದರೂ ಅರ್ಜೇಂಟಿನಾ ಬ್ರೆಜಿಲ್ ಎದುರೂ ಸಪ್ಪೆ ಆಗುತ್ತದೆ.

ಪ್ರತಿ ವಿಶ್ವಕಪ್‍ನಲ್ಲಿ ಹೆಚ್ಚು ಗೋಲ್ ಬಾರಿಸಿದವರಿಗೆ ಚಿನ್ನದ ಬೂಟ್ ಕೊಡುತ್ತಾರೆ, ೮೬ರಲ್ಲಿ ಗ್ಯಾರಿ ಲಿನ್ಕರ್ ಗೆದ್ದರೆ, ೯೦ ಶಿಲಾಚಿ,೯೪ ರಲ್ಲಿ ಸ್ಟೊಟಿಚಿಕೊವ್ ಮತ್ತು ಸಾಲೆನೆಕೊ , ೯೮ರಲ್ಲಿ ಡೆವಾನ್ ಸೂಕರ್,೦೨ರಲ್ಲಿ ರೊನಾಲ್ಡೊ ಗೆದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಆಟಗಾರರು ಒಬ್ಬರೇ ತಮ್ಮ ತಂಡದ ಯಶಸ್ಸಿಗೆ ಕಾರಣರಾದರು.

ಈ ಸಲದ ವಿಶ್ವಕಪ್‍ನಲ್ಲಿ ಯಾರು ಆ ಸ್ಥಾನವನ್ನು ಹೊಂದುತ್ತಾರೆ ಎಂದು ನಾನು ಕಾದು ಕುಳಿತಿರುವೆ. ಇನ್ನೂ ನೀವು ??

Tuesday, May 23, 2006

ಭಾರತವನ್ನು ಆಳಿದ ಕನ್ನಡ ಅರಸರು .....


ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ನಮಗೆ ಕಾಣುವುದು ನಮ್ಮ ಕನ್ನಡ ದೇಶದ ಅರಸು ಮನೆತನಗಳು ಇಂದಿನ ಭಾರತದ ಮೂಲೆ ಮೂಲೆಗೆ ಹೋಗಿ ಅಲ್ಲಿ ಆಳಿ ಬಾಳಿದವರು ಅಂತ. ಇಂತಹ ವಲಸೆಗೆ ಅನೇಕ ಕಾರಣಗಳು ನಮಗೆ ಕಂಡು ಬರುತ್ತದೆ, ಪುಲಕೇಶಿಯ-೨ ಕಾಲದಲಿ ಚಾಲುಕ್ಯರ ಒಂದು ಶಾಖೆಯನು ಇಂದಿನ ಗುಜರಾತಿನಲ್ಲಿ ಇಟ್ಟಿದ್ದರು,ಅಂದರೆ ರಾಜ್ಯ ವರ್ಧನೆಯಾಗಿ ಇದು ಆದರೆ, ಕರ್ನಾಟ ಸೇನರದು ಬೇರೆ, ಇವರು ಇಂದಿನ ಬೆಂಗಾಲ ಮತ್ತು ಹಿಮಾಚಲ ಪ್ರದೇಶಗಳನ್ನು ಆಳಿದರು. ಇವರು ತಮ್ಮ ನೆರೆಹೊರೆಯವರ ಆಕ್ರಮಣಕ್ಕೆ ಬೇಸರ ಹೊಂದಿ ಬೆಂಗಾಳಕ್ಕೆ ಹೋದರು. ಅಲ್ಲಿ ನೆಲಸಿ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅಲ್ಲಿನ ವಂಗ ಪ್ರಜೆಗಳಲ್ಲಿ ತಂದರು.
ಕಾಲಕ್ರಮೇಣ ನಮ್ಮ ಭಾಷೆಯನ್ನು ಬೆಂಗಾಲಿ ಜೊತೆ ಸೇರಿಸಿಕೊಂಡು ಮಾತನಾಡಲು ಆರಂಭಿಸಿದರು.ಮುಂದೆ ಹಿಮಾಚಲಕ್ಕೆ ಹೋದಾಗ ಅಲ್ಲಿನ ಹುಡುಗಿಯರನ್ನು ಮದುವೆಯಾಗಿ ಹಿಂದಿಯನ್ನು ತಮ್ಮ ಭಾಷೆಯಾಗಿ ಬಳಸಿಕೊಂಡರು, ಅಲ್ಲಿಗೆ ಕನ್ನಡದ ಜೊತೆ ಇದ್ದ ನಿಕಟ ಸಂಪರ್ಕ ಮುರಿದು ಬಿತ್ತು.
ಈ ಸೇನ ವಂಶದವರು ಚಿಕ್ಕಮಂಗಳೂರು ಜಿಲ್ಲೆಯ ಮತ್ತು ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲೂಕಿನ ಪ್ರದೇಶಗಳನ್ನು ಕ್ರಿ.ಶ ೭ ಶತಮಾನದಿಂದ ೧೧ ಶತಮಾನದವರೆಗೆ ಆಳಿದರೆಂದು ಹೇಳುತ್ತಾರೆ.ಇವರು ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದರು ಮತ್ತು ಖಚರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಅಂತ ಅನೇಕರ ಅಭಿಪ್ರಾಯ. ೧೧ನೇ ಶತಮಾನದಲ್ಲಿ ಸಾಮಂತಸೇನನು ಅಂತರಿಕ ಆಕ್ರಮಣಗಳನ್ನು ಹಿಮ್ಮೆಟ್ಟುವಲ್ಲಿ ವಿಫಲನಾಗಿ ಬೇಸತ್ತು ಬೆಂಗಾಲಕ್ಕೆ ಬಂದ ಅಂದು ಹೇಳುತ್ತಾರೆ. ಮುಂದೆ ಇವರ ವಂಶದ ಹೇಮಂತಸೇನ ಬಿಜೋಯಸೇನ,ಬಲ್ಲಾಳಸೇನ ಮುಂತಾದವರು ತಮ್ಮ ರಾಜ್ಯವನ್ನು ವಿಸ್ತರಿಸಿದರು.ಗಮನಿಸಿದರೆ, ಬಲ್ಲಾಳ ಎನ್ನುವ ಪದ ಹೋಯ್ಸಳರ ಬಲ್ಲಾಳ ಬಣದಿಂದ ಬಂದಿರಬಹುದು ಎಂದು ಅನಿಸುತ್ತದೆ. ಇ ಬಲ್ಲಾಳಸೇನನು ಬೆಂಗಾಲ್ ಮತ್ತು ಆಸ್ಸಾಂ ಆಳಿದನೆಂದು ಹೇಳಲಾಗಿದೆ.ಮುಂದೆ ಬೆಂಗಾಲ್‍ಗೆ ಮುಸ್ಲಿಂ ಆಕ್ರಮಣ ಹೆಚ್ಚಾದಾಗ ಹಿಮಾಚಲಪ್ರದೇಶ ಕಡೆ ವಲಸೆಹೋದರು. ಅಲ್ಲಿ ಸೇನಾವಂಶದ ಸಂಸ್ಥಾಪಕ ಬೀರಸೇನನು.
ಹೀಗೆ ನಮ್ಮ ಕನ್ನಡಿಗರಿಗೆ ನಮ್ಮನ್ನು ಆಳಿದವರು ಗೊತ್ತೆ ವಿನಹ ನಾವು ಯಾರನ್ನು ಆಳಿದಿವಿ ಎಂದು ತಿಳಿದಿಲ್ಲ.ಅದಕ್ಕೆ ನೋಡಿ ಕನ್ನಡದ ಎಷ್ಟು ಪದಗಳು ಗುಜರಾಥಿ ಮತ್ತು ಬೆಂಗಾಲಿಯಲ್ಲಿ ಕಂಡು ಬರುತ್ತವೆ.
ಕನ್ನಡದಿಂದ ಗುಜರಾಥಿಗೆ:- ಮೋಜು,ಕಾಥಿ,ಮಾಳೊ ..
ಕನ್ನಡದಿಂದ ಬೆಂಗಾಲಿಗೆ:- ವಾಶಲ ನಮ್ಮ ವಾಗಿಲ್ ಎಂಬ ಪದದಿಂದ ಹುಟ್ಟಿರುವುದು.
ಬೆಂ -- ಕನ್ನಡ
ನಿರಾಲ- ನೆರಳು
ಖಟವ - ಕಟ್ಟಿಗೆ
ಕಟಾಲ್ - ಕಡಲು
ತೋಡ - ತೋಡೆ
ಕಲ್ಲ - ಕಳ್ಳ
ಹೀಗೆ ಸಾಲು ಸಾಲು ಪದಗಳನ್ನು ಕೊಡಬಹುದು. ಅಲ್ಲಿನ ಭಾಷೆಯ ಮೇಲೆ ನಮ್ಮ ಪದಗಳ ಛಾಯೆ ಕಾಣಸಿಗುತ್ತದೆ.
ಅಷ್ಟೆ ಅಲ್ಲ, ಅಲ್ಲಿನ ದುರ್ಗಾಪೂಜೆಯನ್ನು ಹೇಳಿಕೊಟ್ಟವರು ನಮ್ಮ ಕನ್ನಡಿಗರೇ.

(ಕೃಪೆ :- ಹಿಮಾಲಯವನ್ನಾಳಿದ ಕನ್ನಡ ಸೇನರು)

Tuesday, May 09, 2006

ಅ.ನ.ಕೃ ಒಂದು ನೆನಪು.


ಹಿಂದೆ ಅ.ನ.ಕೃ ಬಗ್ಗೆ ನಾನು ಹಿಂದೆ ತಿಳಿದಿದ್ದು ಒಬ್ಬ ಸಾಹಿತಿಯಾಗಿ, ಅವರು ಸಂಧ್ಯಾರಾಗ,ಗಾಜಿನ ಮನೆ,ಗೌರಿ ಮುಂತಾದ ಕೃತಿಗಳನ್ನು ಬರೆದವರೆಂದು. ಅಷ್ಟರ ಮಟ್ಟಿಗೆ ನನ್ನ ಜ್ಞಾನ ಸೀಮಿತವಾಗಿತ್ತು. ಆದರೆ ಕನ್ನಡ ಹೋರಾಟದ ಬಗ್ಗೆ ನನಗೆ ಹೆಚ್ಚು ಆಸಕ್ತಿ ಮೂಡಿ, ಹೆಚ್ಚು ಅಧ್ಯಯನ ಮಾಡಿದಾಗ, ಹೆಚ್ಚು ಹೆಚ್ಚು ಕಂಡ ಹೆಸರು ಅ.ನ.ಕೃ.
ಅಲ್ಲಿಂದ ಅವರ ಬಗ್ಗೆ ನನ್ನ ಕೂತುಹಲ ಹೆಚ್ಚಾಯಿತು, ಕನ್ನಡಕ್ಕೆ ಮನೆಯಲ್ಲಿ ಕುಳಿತು Dialogue ಹೊಡೆಯುತ್ತಿದ್ದ ಆ ಕಾಲದಲ್ಲಿ, ಬೀದಿಗೆ ಇಳಿದು, ಜನರನ್ನು ಸಂಘಟಿಸಿ ತಮ್ಮ ವಾಜ್ಞ್ಮೆಯಿಂದ ಇತರರಿಗೆ ಕನ್ನಡ ಚಳುವಳಿಯ ಮಹತ್ವವನ್ನು ಅರಿವು ಮಾಡಿಕೊಟ್ಟ ಮಹನೀಯರು ನಮ್ಮ ಅ.ನ.ಕೃ.

ಅ.ನ.ಕೃ ಬಗ್ಗೆ ನಮ್ಮ ಬರಹ ಶೇಷಾದ್ರಿ ವಾಸುವಿನ ಅಂತರಜಾಲ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು, ಅಲ್ಲಿ ಅವರ ಬಗ್ಗೆ ಅವರ ಒಡನಾಡಿಗಳು ಆಡಿದ ಮಾತು ಮತ್ತು ಅನಿಸಿಕೆಗಳನ್ನು ಹಾಕಿದ್ದಾರೆ. ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಅದನ್ನು ಒಮ್ಮೆ ಓದಲೇ ಬೇಕು. ಸಮಗ್ರ ಮಾಹಿತಿಯನ್ನು ಓದಗಿಸಿದ ಬರಹ ವಾಸುವಿನ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.

ಅ.ನ.ಕೃ ಬಗ್ಗೆ ನಾನು ಓದಿದ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೆನೆ.

ಅ.ನ.ಕೃ ಅವರ ನೇರನುಡಿ:- ನಮಗೆ ತಿಳಿದ ಹಾಗೆ ಅ.ನ.ಕೃ ಅವರ ಭಾಷಣಗಳಿಗೆ , ಅವರು ಮಂಡಿಸುತ್ತಿದ್ದ ಕನ್ನಡ ಪರವಾದ ವಿಚಾರಗಳಿಗೆ ಮಾರು ಹೋದ ಶೋತೃಗಳು ಬಹಳ ವಿರಳ ಅನ್ನಬಹುದು. ತಮ್ಮ ಮನಸ್ಸಿಗೆ ಸರಿಹೋಗದ ವಸ್ತುನಿಷ್ಠವಾದ ಸಂಗತಿ ಯಾವುದೇ ಇದ್ದರೂ ಅದನ್ನು ಅವರು ದಯಾದಾಕ್ಷಿಣ್ಯವಿಲ್ಲದೇ ಖಂಡಿಸುತ್ತಿದ್ದರು. ಅದ್ದರಿಂದಲೇ ಅವರನ್ನು ಜನರಲ್ಲದೇ, ರಾಜಕೀಯ ನಾಯಕರು ಗೌರವಿಸುತ್ತಿದ್ದರು.

ಒಮ್ಮೆ ಧರ್ಮರಾಯನ ಗುಡಿಯ ಸಮೀಪ ಸಂಯುಕ್ತರಂಗದ ಸಭೆ, ಆ ಸಭೆಯಲ್ಲಿ ಸಮಾಜವಾದಿ ನಾಯಕರಾಗಿದ್ದ ಎಸ್.ಗೋಪಾಲಗೌಡ(ಶಾಂತವೇರಿ ಗೋಪಾಲಗೌಡ) ಭಾಗವಹಿಸಿದ್ದರು. ಅದೇ ತಾನೇ ವಿಧಾನಸಭೆಯಲ್ಲಿ ಅಂದಿನ ರಾಜ್ಯಪಾಲರ ಭಾಷಣವನ್ನು ಕಾಲಿನಿಂದ ತುಳಿದು ಪ್ರತಿಭಟನೆ ಮಾಡಿದ್ದರು. ಅ.ನ.ಕೃ ಅಂದು ಆ ಸಭೆಯಲ್ಲಿ ಎಲ್ಲರ ಎದುರು ಗೋಪಾಲಗೌಡರ ವರ್ತನೆಯನ್ನು ಟೀಕಿಸಿದರು. ಅದನ್ನು ಕೇಳಿ ಗೌಡರ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿ ಗೊಂದಲ ಆರಂಭವಾದಗ ಖುದ್ದು ಗೋಪಾಲಗೌಡರೇ ಅ.ನ.ಕೃ ನನ್ನ ಗುರುಗಳು, ಅವರು ಹೇಳಿದ ಮೇಲೆ ಮುಗಿಯಿತು, ನಾನು ನನ್ನ ಕ್ರಮಕ್ಕೆ ಕ್ಷಮೆ ಕೇಳುತ್ತೆನೆ ಎಂದರು. ಇಂದು ನಮಗೆ ಆ ನೇರನುಡಿಯ ಸಾಹಿತಿಗಳು ಸಿಗುವದಿಲ್ಲ, ರಾಜಕೀಯ ನಾಯಕರ ಉಘೇ ಉಘೇ ಮಾಡಿದರೆ ತಮಗೆ ಆಗುವ ಅನಕೂಲ ಎನು ಎಂದು ಚಿಂತಿಸುವ ಸಾಹಿತಿಗಳು ಇರುವ ಕಾರಣಕ್ಕೆ ನಮಗೆ ಅ.ನ.ಕೃ ಆದರ್ಶಪ್ರಿಯರಾಗುತ್ತಾರೆ.

ಅ.ನ.ಕೃ ಅವರ ಮಾತಿನ ಶೈಲಿ:- ಬಲ್ಲವನೇ ಬಲ್ಲ ಬೆಲ್ಲದ ರುಚಿಯನ್ನು ಅನ್ನುವ ಹಾಗೆ ಅವರ ಭಾಷಣವನ್ನು ಕೇಳಿದ ಜನರನ್ನು ಮಾತನಾಡಿಸಿ ನೋಡಿ ಇನ್ನೂ ಅವರ ಮಾತುಗಳನ್ನು ನೆನೆಯುತ್ತಾರೆ. ಎಂದರೆ ಎಷ್ಟರ ಮಟ್ಟಿಗೆ ಅವರ ಮಾತುಗಳು ನಮ್ಮ ಜನರ ಮೇಲೆ ಪ್ರಭಾವ ಬೀರಿದ್ದವು ಅಂತ ತಿಳಿಯುತ್ತದೆ.
ಒಮ್ಮೆ ಐ.ಟಿ.ಐ ಕಾರ್ಖಾನೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಅ.ನ.ಕೃ, ಅಂದು ಅಲ್ಲಿ ನೆರೆದಿದ್ದ ಕನ್ನಡೇತರರನ್ನು ಉದ್ದೇಶಿಸಿ ಮಾಡಿದ ಭಾಷಣ ನಿಜಕ್ಕೂ ಒಂದು ಮರೆಯಲಾಗದ ಘಟನೆ. ಅವರು ತಮ್ಮ ಭಾಷಣದಲ್ಲಿ ಕನ್ನಡ ಚಳುವಳಿ, ಕನ್ನಡ ಇತಿಹಾಸ ಮತ್ತು ಸಂಘಟನೆಯ ಅವಶ್ಯಕತೆಯನ್ನು ಮನಮುಟ್ಟುವ ಹಾಗೆ ವಿವರಿಸಿದರು.
ಮೂರನೆಯ ದಿನ ಆ ಭಾಷಣವನ್ನು ಕೇಳಿದ್ದ ಕನ್ನಡೇತರ ಕಾರ್ಮಿಕರು ತಾವು ಕನ್ನಡ ಚಳುವಳಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆವು, ಅ.ನ.ಕೃ ನಮ್ಮ ಕಣ್ಣು ತೆರೆಸಿದರು ಅಂತ ಹೇಳಿದನ್ನು ಐ.ಟಿ.ಐನ ಶ್ರೀ ಚಂದ್ರಶೇಖರ್ ಮರೆಯುವದಿಲ್ಲ.


ನಮಗೆ ಇಂದು ಸುಮ್ಮನೆ ತಣ್ಣನೇ ಕೋಣೆಯಲ್ಲಿ ಪ್ರಚಾರಕ್ಕೆ ಕೊಡುವ ಹೇಳಿಕೆಗಳ ಸಾಹಿತಿಗಳು ಬೇಕಿಲ್ಲ, ಇಲ್ಲಾ ಸುಮ್ಮನೆ ಒಬ್ಬಂಟಿಯಾಗಿ ಕತ್ತೆ/ಚಪ್ಪಲಿ ಮೆರವಣಿಗೆ ಮಾಡಿ ಕನ್ನಡ ಚಳುವಳಿಯ cheap ಮಾಡಿರುವ ನಾಯಕರುಗಳ ಮಧ್ಯೆ ಬೀದಿಗೆ ಇಳಿದು ಹೋರಾಟ ಮಾಡುವ, ಕನ್ನಡಿಗರನ್ನು ಸಂಘಟಿಸುವ, ನಿಸ್ವಾರ್ಥ ಅ.ನ.ಕೃ ಅಂತ ಕನ್ನಡ ಸೇನಾನಿ ಬೇಕಾಗಿದ್ದಾರೆ.

ಇಂತ ಮಹಾನ್ ಚೇತನ ಹುಟ್ಟಿದ ಮನೆ ಇಂದು ಬೂಟ್ ಮಾರುವ ಅಂಗಡಿಯಾಗಿದೆ, ಇದೇ ನಮ್ಮ ಮರ್ಯಾದೆ. ಈ ನಿಟ್ಟಿನಲ್ಲಿ
ನಮ್ಮ ಘನ ಸರ್ಕಾರ ಕ್ರಮ ಕೈಗೊಂಡು ಅದನ್ನು ಒಂದು ಸ್ಮಾರಕ ಮಾಡಿ ನಮ್ಮ ರಾಜ್ಯಕ್ಕೆ ಒಪ್ಪಿಸಿದರೆ ಅದೇ ಅವರಿಗೆ ತೋರಿಸುವ ದೊಡ್ಡ ವಂದನೆ.

ಕೊಸರು:- ಕನ್ನಡ ಚಳುವಳಿಯಿಂದ ದೂರ ಸರಿದಿದ್ದರೂ ರಾಜಾಜಿ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದಾಗ
ಡಿ.ವಿ.ಜಿ,ಜಿ.ಪಿ.ರಾಜರತ್ನಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಕೇವಲ ನಮ್ಮ ಅ.ನ.ಕೃ.

Monday, May 08, 2006

ಕನ್ನಡ ಸಂಸ್ಕೃತ ಜನ್ಯ ಭಾಷೆಯೇ ????

ಎಪ್ಪ್ಪಾ ಎಪ್ಪಾ ಈ ವಿಷಯದ ಬಗ್ಗೆ ಅನೇಕ ಕಡೆ ಬರಿದಿದ್ದೆನೆ, ಆದರೂ ನಮ್ಮ ಜನ ಇಂದಿಗೂ ಕನ್ನಡ ಸಂಸ್ಕೃತ ಜನ್ಯ ಭಾಷೆ, ಭಾರತದ ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ತಾಯಿ ಅಂತ ಹೇಳುತ್ತಾರೆ. ಈ ಕಾರಣಕ್ಕೆ ಅನೇಕ ಬಾರಿ ಕನ್ನಡ ಸಂಸ್ಕೃತದ ಎದುರು ಸೋತಿದೆ.

ಕನ್ನಡಕ್ಕೆ ಅಷ್ಟೆ ಅಲ್ಲ, ದ್ರಾವಿಡ ಭಾಷೆಗಳೆಲ್ಲವೂ ತಮ್ಮದೇ ಆದ ವೈಶಿಷ್ಟ ಹೊಂದಿವೆ. ಕನ್ನಡದ ಅಸಾಧರಣ ಲಕ್ಷಣಗಳನ್ನು ಹಿಂದೆ ಕೇಶಿರಾಜ ಹೇಳಿದ್ದ.

ಕನ್ನಡ ಯಾಕೆ ಸಂಸ್ಕೃತ ಜನ್ಯವಲ್ಲ ಎಂದು ತಿಳಿದುಕೊಳ್ಳೊಣ.

೧) ಕನ್ನಡದಲ್ಲಿ ನಿರ್ಜೀವ ಮತ್ತು ಬುದ್ಧಿಹೀನ ವಿಷಯಗಳ ಪದಗಳು ನಪುಸಂಕವೇ ಆಗಿವೆ. ಸಂಸ್ಕೃತದಲ್ಲಿ ಹಾಗಿಲ್ಲ.

೨) ವಿಶೇಷಣಗಳಿಗೆ ವಿಭಕ್ತಿಪ್ರತ್ಯಯಗಳು ಅನ್ವಯವಾಗುವದಿಲ್ಲ.

೩) ಕರ್ಮಣಿ ಪ್ರಯೋಗ ಕನ್ನಡದಲ್ಲಿ ಕಾಣುವದಿಲ್ಲ.

(Ref :- Dr.Coldwel)

೪) ಶಬ್ಧಾಂತ್ಯ ಸ್ವರ :- ದ್ರಾವಿಡ ಭಾಷೆಗಳ ಶಬ್ಧಗಳು ವ್ಯಂಜನಾಂತವಾಗುವುದು ಕಡಿಮೆ.
ಅಂದರೆ ಅಂಗ್ಲ ಭಾಷೆಯಲ್ಲಿ ಕ್ಯಾಪ್ ಇದ್ದರೆ ಕನ್ನಡದಲ್ಲಿ ಅದು ಕ್ಯಾಪು ಅಂತ ಆಗಿರುತ್ತದೆ.
ಅಹಂ ಸಂಸ್ಕೃತದಲ್ಲಿ ವ್ಯಂಜನಾಂತವಾದರೆ, ನಾನು ಅಂತ ಕನ್ನಡದಲ್ಲಿ ಸ್ವರಾಂತ್ಯವಾಗುತ್ತದೆ.

೫) Vocalic Harmony:- ಇದಕ್ಕೆ ಸ್ವರಾನುರೂಪತೆ ಎಂದು ಕರೆಯುತ್ತಾರೆ. ವ್ಯಾಕರಣ ನಿಯಮಗಳ ಪ್ರಕಾರ
"ನಿಲ್ಲು" ಎಂಬ ಧಾತುವಿನ ವರ್ತಮಾನ ರೂಪ "ನಿಲ್ಲುತ್ತೇನೆ" ಎಂದಾಗುತ್ತದೆ. ಆದರೆ ಸ್ವರಾನುರೂಪತೆ ಇಂದ ಅದು
"ನಿಲ್ತಿನಿ" ಅಂತ ಬದಲಾಯಿಸುತ್ತದೆ. ಇದು ಸಂಸ್ಕೃತದಲ್ಲಿ ಇಲ್ಲಾ.

೬) ನಮ್ಮ ಭಾಷೆಯಲ್ಲಿ ಲಿಂಗ-ವಿವಕ್ಶೆಯು ಅಸ್ಪಷ್ಟವಾಗದೇ ಕ್ರಮಭದ್ದವಾಗಿದೆ, ಅದೇ ಅರ್ಯ ಭಾಷೆಗಳಲ್ಲಿ ಒಂದು ವಸ್ತುವಿನ ಬುದ್ಧಿಶಕ್ತಿ ಇದ್ದುದೇ or ಇಲ್ಲವೇ ಎಂಬುವುದರ ಮೇಲೆ ಅವಲಂಬಿಸಿದೆ.

೭) ನಮ್ಮ ಭಾಷೆಯಲ್ಲಿ ದ್ವಿ-ವಚನವಿಲ್ಲ.

ಸಂಸ್ಕೃತದಲ್ಲಿ ಗಜ: ಗಜೌ ಗಜಾ: ಆದರೆ
ಕನ್ನಡದಲ್ಲಿ ಗಜಂ ಗಜರ್ ಆಗುತ್ತದೆ.

ಸಂಸ್ಕೃತದಲ್ಲಿ ಎಕವಚನ ಮತ್ತು ಬಹುವಚನಕ್ಕೆ ಬೇರೆ ವಿಭಕ್ತಿ ಪ್ರತ್ಯಯ ಇರುತ್ತದೆ, ಹಾಗೇ ನಮ್ಮ ಭಾಷೆಯಲ್ಲಿ ಇಲ್ಲ.

೮) ಸಂಖ್ಯಾವಾಚಕಗಳು:- ನೋಡಿ ನಮ್ಮ ಸಂಖ್ಯಾವಾಚಕಗಳಿಗೂ ಮತ್ತು ಸಂಸ್ಕೃತದ ಸಂಖ್ಯಾವಾಚಕಗಳಿಗೆ ಸಂಬಂಧವೇ ಇಲ್ಲಾ. ನಾವು ಹತ್ತು ಅಂದರೆ ಅವರು ದಶ ಅನ್ನುತ್ತಾರೆ. ಅದೇ ಹಿಂದಿ ಭಾಷೆಯನ್ನು ತೆಗೆದುಕೊಂಡರೆ ನಿಮಗೆ ಅದರಲ್ಲಿ ಸಂಸ್ಕೃತದ ಛಾಯೆ ಕಾಣುತ್ತದೆ. ಸಂಸ್ಕೃತದ "ದಶ", ಹಿಂದಿಯಲ್ಲಿ ದಸ್ ಆಗುತ್ತದೆ.

೯) ಸರ್ವನಾಮಗಳಲ್ಲಿ ನಮ್ಮ ಭಾಷೆಯಲ್ಲಿ inclusive and Exclusive ಎಂಬ ಎರಡು ಬಗೆಯ ಸರ್ವನಾಮಗಳು ಕಂಡು ಬರುತ್ತವೆ. ಇದು ಸಂಸ್ಕೃತದಲ್ಲಿ ಇಲ್ಲಾ.

೧೦) ಗುಣವಾಚನಕ್ಕೆ ಲಿಂಗಭೇದವಿಲ್ಲ :- ಸಂಸ್ಕೃತದಲ್ಲಿ ಗುಣವಾಚನ ಲಿಂಗ ಅನುಸಾರಿಯಾಗಿ ಕೆಲಸ ಮಾಡುತ್ತದೆ.

ಉದಾ:- "ಪಾವನ" ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಪಾವನ ಭಗವಾನ್
ಸ್ಥ್ರೀಲಿಂಗ:- ಪಾವನೀ ಭಗವತೀ
ನಪುಂಸಕ:- ಪಾವನ: ಅನಿಲ:
ಹಾಗೆಯೇ "ಶುದ್ಧ" ಗುಣವಾಚನವು.

ಅದೇ ನಮ್ಮ ಭಾಷೆಯಲ್ಲಿ ವಿಭಕ್ತಿಪ್ರತ್ಯಯ ಹಚ್ಚುವ ಗೋಜಿಲ್ಲ.
ಉದಾ:- "ಸುಂದರ " ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಸುಂದರ ರಾಮ

ಸ್ಥ್ರೀಲಿಂಗ:-ಸುಂದರ ಸೀತೆ
ನಪುಂಸಕ:-ಸುಂದರ ಮೃಗ


೧೧) ಕ್ರಿಯಾಪದಗಳು:- ನಮ್ಮ ಕ್ರಿಯಾಪದಗಳು ಧಾತುಗಳೂ ನಾಮಪದಗಳೂ ಎರಡು ಆಗಿವೆ. ಮತ್ತು ನಮ್ಮಲ್ಲಿ ಎರಡು ನಿಷೇಧ ರೂಪಗಳಿವೆ "ಅಲ್ಲ" ಮತ್ತು "ಇಲ್ಲ". ಒಂದರ ಗುಣವನ್ನು ಇನ್ನೊಂದು ನಿರಾಕರಿಸುತ್ತದೆ.
ಅವನು ರಾಮನಲ್ಲ :- ಇದರಲ್ಲಿ ಅವನು ಬೇರೆ ಯಾರೋ, ಅಸ್ತಿತ್ವದ ಪ್ರಶ್ನೆ ಮಾಡುತ್ತದೆ.
ಅವನು ಸುಂದರನಲ್ಲ:- ಇದರಲ್ಲಿ ಗುಣಗಳನ್ನು ನಿರಾಕರಿಸುತ್ತದೆ.

೧೨) ನಮ್ಮ ಭಾಷೆಯಲ್ಲಿ ರಕ್ತ ಸಂಬಂಧವು ಚೆನ್ನಾಗಿ ಬಿಡಿಸಲಾಗಿದೆ.
ಉದಾ:- ಸೋದರ ಅನ್ನುವುದು ಸಂಸ್ಕೃತದಲ್ಲಿ ಒಂದೇ, ಆದರೆ ದೊಡ್ಡವರೇ ಇಲ್ಲಾ ಚಿಕ್ಕವರೇ ಎಂದು ಹೇಳಲು ಆಗುವದಿಲ್ಲ.
ನಮ್ಮ ಭಾಷೆಯಲ್ಲಿ "ಅಣ್ಣ" ಮತ್ತು "ತಮ್ಮ" ಅಂತ specific ಆಗಿ ಇದೆ.

೧೩) ಲಿಪಿ:- ಯಾವ ವಿಧದಲ್ಲೂ ನಮಗೂ ದೇವನಾಗಿರಿ ಲಿಪಿಗೂ ತಾಳೆ ಹಾಕಲು ಆಗುವದಿಲ್ಲ.

೧೪) ನಮ್ಮ ಭಾಷೆಗಳಲ್ಲಿ "ಟವರ್ಗ" ಹೆಚ್ಚೆಂದು ಪಂಡಿತರ ಅಭಿಮತ ಇದು ಸಂಸ್ಕೃತದಲ್ಲಿ ಕಾಣ ಸಿಗುವದಿಲ್ಲ.

೧೫) ನಮ್ಮ ಭಾಷೆಯ ಉಚ್ಚಾರಣೆ ಪ್ರಥಮ ವರ್ಣದ ಮೇಲೆ ಇದೆ, ಅದೇ ಸಂಸ್ಕೃತದ ಭಾಷೆಗಳಲ್ಲಿ ಅದು ತೃತೀಯ ವರ್ಣದ ಮೇಲೆ ಇದೆ.
ಕನ್ನಡ:- ಪುಸ್ತಕ
ಮರಾಠಿ:- ಪುಸ್ತSಕ್

(Ref:- RU Dharwadkar)


ಇನ್ನೂ ಭಾಷ ಬೆಳವಣಿಗೆಗೆ ಬಂದರೆ ಭಾಷ ತಜ್ಞರ ಅಭಿಮತದಲ್ಲಿ ಯಾವ ಭಾಷೆಗೆ ತೆಗೆದುಕೊಂಡು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದೋ ಆ ಭಾಷೆ ಬೆಳೆಯುತ್ತದೆ. ಇಂದು ಆಂಗ್ಲ ಭಾಷೆಯನ್ನು ತೆಗೆದುಕೊಂಡರೆ ಅದು ಎಲ್ಲಾ ಭಾಷೆಯಿಂದ ಪದಗಳನ್ನು ಎರವಲು ಪಡೆದಿದೆ. ಭಾಷ ಬೆಳವಣಿಗೆಯಲ್ಲಿ ಇದು ಸರ್ವೇ ಸಾಮನ್ಯ. ಕನ್ನಡದ ಗಿಡಕ್ಕೆ ಸಂಸ್ಕೃತ ಜೀವಸತ್ವ(vitamin) ಇಲ್ಲಾ ಗೊಬ್ಬರ ಆಗಿದೆ. ಕನ್ನಡ ಬೆಳೆಯಲು ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಉಪಸರ್ಗದಿಂದ(ಪ್ರ,ವೀ) ಆರಂಭವಾಗುವ ಅನೇಕ ಶಬ್ದಗಳು ಕನ್ನಡಕ್ಕೆ ಸಂಸ್ಕೃತದಿಂದ ಬಂದಿವೆ, ಆ ಪದಗಳನ್ನು ಬರೆಯಲು ಕೆಲವು ಅಕ್ಷರಗಳು ಬಂದಿವೆ. ಇದರಿಂದಲೇ ಕನ್ನಡ ದೄಷಿಕ ಮತ್ತು ಶ್ರವಣದಲ್ಲಿ ಎಕರೂಪತೆ ಸಾಧಿಸಿದೆ. ತಮಿಳ್ ಕೂಡ ಪದಗಳ ಎರವಲು ಪಡೆದಿದೆ, ಆದರೆ ಅದನ್ನು ಬರೆಯಲು ಅಕ್ಷರವನ್ನು ಪಡೆಯದೆ ಅವರ ಭಾಷೆ ಇಂದೂ ಗೊಂದಲ ಗೂಡಾಗಿದೆ.


ಹಾಗೇ ಅಲ್ಲ ಕನ್ನಡವೂ ಸಂಸ್ಕೃತಕ್ಕೆ ಅನೇಕ ಪದಗಳನ್ನು ನೀಡಿದೆ. ಅದ್ದರಿಂದ ಇದು ಕೊಟ್ಟು-ತೆಗೆದುಕೊಳ್ಳುವ ಒಂದು ಸಂಸ್ಕೃತಿ ಅಷ್ಟೆ.

ಅದ್ದರಿಂದ ಇಲ್ಲಿ ತಾಯಿ-ಮಗು ಸಂಬಂಧ ಬರುವದಿಲ್ಲ, ಇದು ಪಕ್ಕದ ಮನೆಯ aunty ಸಂಭಂದ ಬರುತ್ತದೆ. ಪಕ್ಕದ ಮನೆಯ aunty ಸಹಾಯ ಪಡೆದ ಕ್ಷಣ ನಾವು ಅವರಿಂದ ಜನ್ಯ(ಹುಟ್ಟಿದವರು) ಆಗುವದಿಲ್ಲ.ಆ ಸಂಬಂಧ ಬಂದಾಗ ಅನೇಕ ವಂಶವಾಹಿನಿಯ ಗುಣಗಳು ಕಾಣಿಸಬೇಕು, ಮೇಲೆ ಹೇಳಿದ ಹಾಗೆ ಅದು ಕನ್ನಡದಲ್ಲಿ ಸ್ವಲ್ಪವೂ ಕಾಣುವದಿಲ್ಲ, ಅದೇ ನೋಡಿ ಹಿಂದ್ವಿಯ ಬೆಳವಣಿಗೆಯನ್ನು ಅಲ್ಲಿ ಆ ತಾಯಿ-ಮಗುವಿನ ಸಂಬಂಧ ಎದ್ದು ಕಾಣುತ್ತದೆ.


ಕೊಸರು:- ಸುಮ್ಮನೇ ಇಲ್ಲದಿರುದನ್ನು ಹೇಳಿ ನಮ್ಮ ಭಾಷೆಯ ಬಗ್ಗೆ ಕೀಳೆರಿಮೆ ಬೆಳಸಿಕೊಳ್ಳಬೇಡಿ.

Thursday, May 04, 2006

ಚಿನ್ನದ ಆಸೆಯೋ-ಅಕ್ಷಯ ತದಿಗೆಯೋ

ಕಳೆದ ೨ ವರ್ಷಗಳಲ್ಲಿ ನಮ್ಮ ಕನ್ನಡಿಗರಲ್ಲಿ ಹೊಸ ಹುಚ್ಚು ಶುರುವಾಗಿದೆ, ಅಕ್ಷಯ ತದಿಗೆಯ ದಿನ ಚಿನ್ನ ಕೊಂಡರೆ ಅದು ದ್ವಿಗುಣ ಆಗುವುದು ಅಂತ. ಚಿನ್ನದ ಮೊಟ್ಟೆ ಬಗ್ಗೆ ಕಥೆಗಳಲ್ಲಿ ಕೇಳಿದ್ದಿವೆ ಆದರೆ ಚಿನ್ನ ಕೂಡ ಮೊಟ್ಟೆ ಇಡುತ್ತದೆಯೇ ಅಂತ ನಮಗೆ ಹೊಸ ವಿಷಯ. ಇದರ ಹಿಂದಿನ ರಹಸ್ಯವನ್ನು ಭೇದಿಸಲು ಹೊರಟ ನಾವು ನಿಂತಿದ್ದು ಒಂದು ಆಭರಣಗಳ ಅಂಗಡಿ ಮುಂದೆ.

ಧನುರ್ಮಾಸ ಕಳೆದು ಮದುವೆಗಳು ಶುರು ಆದ ಹಾಗೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಹೋಯಿತು,ಅದು ಮಾರ್ಚ-ಎಪ್ರಿಲ್ ತಿಂಗಳಲ್ಲಿ ಅದು ಎಂದು ಕಂಡು ಕಾಣದ ಬೆಲೆಗೆ ಹೋಯಿತು. ಇದಕ್ಕೆ ಮುಖ್ಯ ಕಾರಣ. ಚಿನ್ನ ಆಭರಣಕರು ಹೆಚ್ಚು ಹೆಚ್ಚು ಚಿನ್ನವನ್ನು ಕೊಂಡ ಪರಿಣಾಮ. ನಿಮಗೆ ಗೊತ್ತೊ ಇಲ್ಲವೋ ಮಾರ್ಕೆಟ್ ಬೆಲೆಯಲ್ಲಿ ಯಾವ ಅಂಗಡಿಯವನು ಚಿನ್ನ ತೆಗೆದುಕೊಂಡಿರುವದಿಲ್ಲ, ಬೆಲೆ ತುಂಬಾ ಕಮ್ಮಿ ಇದ್ದಾಗ ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿರುತ್ತಾರೆ. ಅಂದರೆ ಮಾರ್ಕೆಟನಲ್ಲಿ ಚಿನ್ನಕ್ಕೆ ೯೦೦/ಗ್ರಾಂ ಗೆ ಇದ್ದರೆ ಅವರಿಗೆ ಒಂದು ಗ್ರಾಮ್ ಮೇಲೆ ೮೦೦ ಲಾಭ ಇರುತ್ತದೆ.

ಇನ್ನೂ ಈ ಅಕ್ಷಯ-ತದಿಗೆ ವಿಷಯಕ್ಕೆ ಬರೋಣ, ಇದು ಆಭರಣಕಾರರು ಕಂಡು ಕೊಂಡ ಹೊಸ ಉಪಾಯ. ಹಿಂದಿನಿಂದ ನಮ್ಮ ದೇಶದಲ್ಲಿ ಧರ್ಮಕ್ಕೆ ಅದನ್ನು ಗುರುತಿಸಿದರೆ ಅದಕ್ಕೆ ಸಿಕ್ಕುವ ಬೆಲೆಯೇ ಬೇರೆ ಮತ್ತು ಅದನ್ನು ಪ್ರಶ್ನಿಸುವ ಸಮಾಜ ನಮ್ಮಲ್ಲಿ ಹೆಚ್ಚು ಇಲ್ಲಾ. ಅದೇ ಕಾರಣಕ್ಕೆ ಚಿನ್ನದ ಆಭರಣಕಾರರು ಈ ಹೊಸದಿನವನ್ನು ಕಂಡು ಹಿಡಿದಿದ್ದು. ೨ ವರ್ಷಗಳಿಂದ ಸುಮ್ಮನೆ hype ಮಾಡಿ ನಮ್ಮ ಹೆಂಗಸರನ್ನು ನಂಬಿಸಿ, ಜನ ಮರಳೊ ಜಾತ್ರೆ ಮರಳೊ ಅನ್ನುವ ಹಾಗೆ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು.
ನಮ್ಮ ಜನರಿಗೆ ಅಮವಾಸ್ಯೆ ದಿನ ಕೊಂಡ ಚಿನ್ನದ ಬೆಲೆಗೂ ಮತ್ತು ಅಕ್ಷಯ ತದಿಗೆ ಕೊಂಡ ಚಿನ್ನಕ್ಕೆ ಬೆಲೆ ಬೇರೆ ಇರುವದಿಲ್ಲ ಅನ್ನುವ ಸಾಮನ್ಯಜ್ಞಾನ ಇಲ್ಲಾ.

ನೋಡಿ , ಎಪ್ರಿಲ್ ಕೊನೆಯ ವಾರದವರೆಗೂ ಚಿನ್ನದ ಬೆಲೆಯನ್ನು ಎರಿಸಿ, ಒಂದೆರೆಡು ದಿನಗಳ ಮುಂಚೆ ಬೆಲೆಯನ್ನು ಸ್ವಲ್ಪ ಕಮ್ಮಿ ಮಾಡಿ ಜನರನ್ನು ತಮ್ಮತ್ತ ಆಕರ್ಷಿಸಿಕೊಂಡರು. ನಮ್ಮ ಜನ ಚಿನ್ನ ಒಳ್ಳೆ ಬಿಟ್ಟಿ ಕೊಡುತ್ತ ಇದ್ದಾರೆ ಅನ್ನುವ ಹಾಗೆ ಮುಗ್ಗಿಬಿದ್ದರು.
ಕನ್ನಡಿಗರಿಗೆ ಸ್ವಂತಿಕೆ ಅನ್ನುವುದು ಇಲ್ಲಾ ಅಂತ ಮತ್ತೊಮ್ಮೆ ಈ ಪ್ರಕರಣ ಸಾಬೀತು ಪಡಿಸಿತು.

ಕೊಸರು:- ಆ ದಿನ ಚಿನ್ನಕೊಂಡು ದ್ವಿಗುಣ ಮಾಡಿಕೊಂಡವರು ದಯವಿಟ್ಟು ನನಗೆ ಸ್ವಲ್ಪ ತಿಳಿಸಿ.

Tuesday, May 02, 2006

ನಾವೇಕೆ ಹೀಗೆ ???


ಕರ್ನಾಟಕ ಕಂಡ ಸಾರ್ವಭೋಮರಲ್ಲಿ ರಾಷ್ಟ್ರಕೂಟರು,ಚಾಲುಕ್ಯರು,ಹೋಯ್ಸಳರು,ವಿಜಯನಗರ ಮತ್ತು ಕದಂಬರು ಅನೇಕರು ನಮ್ಮ ರಾಜ್ಯಗಳನ್ನು ೧೦೦೦-೧೫೦೦ ವರ್ಷಗಳು ಆಳಿದರು. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಪೂರ್ವಜರೇ ನಮ್ಮ ಪೂರ್ವಜರು, ಇವರಲ್ಲಿನ ಹರಿದ ರಕ್ತವೇ ನಮ್ಮಲ್ಲಿ ಇಂದು ಹರಿಯುತ್ತಿರುವುದು, ಆದರೆ ಅವರಲ್ಲಿದ್ದ ಕಿಚ್ಚು, ಸ್ವಾಭಿಮಾನ ಮರೆಯಾಗಿ ಷಂಡತನ ಮತ್ತು ಕೀಳರಿಮೆ ಆವರಿಸಿದೆ.

ನಮ್ಮ ರಾಜರ ಮತ್ತು ಪೂರ್ವಿಕರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರದ ಕಾರಣವೇ ನಮಗೆ ಅನಿಸಿರುವುದು ನಾವು ಯಾವುದೋ ಹೇಡಿಗಳ ರಕ್ತಕ್ಕೆ ಹುಟ್ಟಿದೆವು, ನಮ್ಮಲ್ಲಿ ಅಥಿರಥ-ಮಹಾರಥರು ಇಲ್ಲಾ ಅಂತ. ನಿಮಗೆ ಗೊತ್ತಾ ಬೇರೆ ಭಾಷಿಕರನ್ನು ಕೇಳಿ ನೋಡಿ ಅವರ ಮಹಾನ್ ಅರಸುಗಳ ಬಗ್ಗೆ ಅಶೋಕ,ಚಂದ್ರಗುಪ್ತ ಎಂದು ಹೇಳುತ್ತಾರೆ, ಆದರೆ ಅವರು ಆಡುತ್ತ ಇದ್ದ ಭಾಷೆಯೇ ಬೇರೆ ಇಂದಿನವರು ಆಡುವ ಭಾಷೆಯೆ ಬೇರೆ. ಆದರೆ ನಮ್ಮ ರಾಜರು ಆಡುತ್ತಿದ್ದ ಭಾಷೆಯನ್ನೆ ನಾವು ಇಂದು ಕೂಡ ಆಡುತ್ತ ಇದ್ದೇವೆ. ಆ ಮಹಾನ್ ಚೇತನಗಳು ನಡೆದಾಡಿದ ನೆಲವನ್ನೇ ನಾವು ಇಂದು ತುಳಿಯುತ್ತಿರುವುದು. ನಮ್ಮ ಸ್ವಂತ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲಾಗದೇ ನಾವು ಇತರರ ಜೊತೆ ಇಲ್ಲಾ ರಾಷ್ಟ್ರೀಯತೆಯ ಹೆಸರಲ್ಲಿ ಹಿಂದೂಸ್ಥಾನಿ ಎಂದು ಗುರುತಿಸಿಕೊಳ್ಳುವುದು
ನಿಜಕ್ಕೂ ಕೀಳೆರಿಮೆಯ ಸಂಗತಿ.

ಆನಾದಿ ಕಾಲದಿಂದಲೂ ಮೆರೆದ, ಇತಿಹಾಸದಲ್ಲಿ ಹೆಸರು ಮಾಡಿದ ಈ ಪ್ರದೇಶವೇ ನಮ್ಮ ಜನುಮಭೂಮಿ. ಈ ಹಿಂದೂಸ್ಥಾನ ಅನ್ನುವುದು ಮೊಗಲರು ಬಂದಾಗ ಹುಟ್ಟಿದ ಪದ, ಆದರೆ ನಿಮಗೆ ಗೊತ್ತಾ ಮಹಭಾರತದ ಸಮಯದಲ್ಲಿ ನಮ್ಮ ಕರ್ನಾಟಕದ ಹೆಸರಿದೆ.
"ಕರ್ಣಾಟಕ ಮಹಿಷಕಾ ವಿಕಲ್ಪ ಮೂಷಕಸ್ತದಾ ಝೀಲ್ಲಿಕಾ:"
-ಭೀಷ್ಮಪರ್ವ

ಅಂದರೆ ನಮ್ಮ ಈ ನಾಡು ೫೦ ವರುಷಗಳ ಕೆಳಗೆ ಒಂದಾಗಿದ್ದು ಅಲ್ಲ. ಹರಪ್ಪ-ಮೊಹೆಂಜದಾರೋನಲ್ಲಿ ನಮ್ಮ ನಾಡನ್ನು ಪ್ರತಿಬಿಂಬಿಸುವ ಚಿತ್ರಗಳು ಇವೆ. ನಾಗರೀಕತೆಯ ತೊಟ್ಟಿಲಿನ ಸಮಯದಲ್ಲೂ ನಮ್ಮ ನಾಡು ಇತ್ತು ಎಂದು ತಿಳಿಯುತ್ತದೆ.
ಇಷ್ಟು ಹಳೆಯ ಪ್ರಾಚೀನ ಸಂಸ್ಕೃತಿ ಇರುವ ನಾವು ಇಂದು ಷಂಡರ ಹಾಗೆ ಇತರರ ಜೊತೆ ಗುರುತಿಸಿಕೊಳ್ಳುವ ಔಚಿತ್ಯವೇನು ??
ಅವರ ಭಾಷೆಯನ್ನು ಕಲಿತು, ಅವರ ಹಾವ-ಭಾವಗಳನ್ನು ಅನುಕರೀಣಿಸುವ ಕರ್ಮವೇನು ??

ನಮ್ಮ ರಾಜರು ಯಾರು ಚಿನ್ನದ ಚಮಚದ ಜೊತೆ ಹುಟ್ಟಿದವರಲ್ಲ, ಪ್ರತಿ ವಂಶವನ್ನು ಕಟ್ಟಿದವರ ಹಿಂದೆ ಒಂದು ದೊಡ್ಡ ಕಥೆ ಇದೆ. ಶೌರ್ಯ ಮತ್ತು ಸಾಧನೆಯ ಸಂಕೇತವಿದೆ. ಬೆವರು, ರಕ್ತ ಸುರಿಸಿ ರಾಜ್ಯವನ್ನು ಕಟ್ಟಿದರು, ಉತ್ತರದವರ ಜೊತೆ ಮತ್ತು ತಮಿಳರ ಜೊತೆ ಕಾದಾಡಿ ತಿಪ್ಪೆಗಳನ್ನು ಉಪ್ಪರಿಗೆಯಾಗಿ, ಸೆರೆಮನೆಯನ್ನು ಅರಮನೆಯಾಗಿ ಬದಲಾಯಿಸಿದ ಮಹಾನ್ ಪುರುಷರು ಕೇವಲ ನಮ್ಮ ಪೂರ್ವಜರು ಮಾತ್ರ.

೧೦೦೦-೧೫೦೦ ವರ್ಷಗಳು ಅವ್ಯಾಹತವಾಗಿ ನಮ್ಮ ಕನ್ನಡ ವಂಶದವರ ಕೈಯಲ್ಲಿ ಆಳಿದ ಪುಣ್ಯಭೂಮಿ ನಮ್ಮದು. ಕರ್ನಾಟಕವೆಂದರೇ ಇಂದಿನ ಭೌಗೋಳಿಕ ನಾಡೇ ? ಈ ಪ್ರದೇಶವನ್ನು ನಮ್ಮವರೂ ಆಳಿದರೆ ಎಂದು ನಮ್ಮಲ್ಲಿ ಪ್ರಶ್ನೆ ಮೂಡಬಹುದು.

"ಕಾವೇರಿಯಿಂದಮಾ ಗೋದಾವರಿ ವರಮಿರ್ಥ ನಾಡದ ಕನ್ನಡದೊಳ್ ಭಾವಿಸಿದ
ಜನಪದಂ ವಸುಧಾ ವಳಯ ವೀಲಿನ ವಿಶದ ವಿಷಯ ವಿಶೇಷಂ"
-ಕವಿರಾಜ ಮಾರ್ಗ

ಇದು ೯ನೇ ಶತಮಾನದ ಶ್ರೀವಿಜಯನ "ಕವಿರಾಜಮಾರ್ಗ"ದ ಸಾಲುಗಳು. ಅಂದಿನ ರಾಜಧಿರಾಜ ಕನ್ನಡವೀರ ನೃಪತುಂಗನ ಕಾಲದಲ್ಲಿ ಕರ್ನಾಟಕದ ವಿಸ್ತಿರ್ಣ ಮತ್ತು ಅಲ್ಲಿನ ಜನರ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದಾನೆ ನೋಡಿ. ಗಮನಿಸಬೇಕಾದ ಅಂಶವೆಂದರೆ ಅಂದಿನ ಭಾಷೆ ನಾವು ಇಂದು ಆಡುತಿದ್ದ ಭಾಷೆ ಅಲ್ಲವೇ ??

ಸುಲಭವಾಗಿ ನಮಗೆ ಇದು ಅರ್ಥವಾಗುತ್ತದೆ, " ಉತ್ತರದ ಗೋದಾವರಿಯಿಂದ , ದಕ್ಷಿಣದ ಕಾವೇರಿವರೆಗೆ ಆ ರಾಜನ ಸಂಸ್ಥಾನ ಹಬ್ಬಿತ್ತು. ಅಲ್ಲಿನ ಕನ್ನಡ ಜನರು ವಿವೇಕಿಗಳು,ಧೈರ್ಯಶಾಲಿಗಳು ಮತ್ತು ಇಲ್ಲಿನ ಸಮಾಜ ಈಡಿ ಜಗತ್ತಿನಲ್ಲಿ ವಿಶೇಷ".
ಅಲ್ಲಿನವರೆಗೂ ನಮ್ಮ ರಾಜ್ಯ ಹಬ್ಬಿತ್ತು ಅಂತ ಅಲ್ಲಿ ಸಿಕ್ಕ ಕಲ್ಲಿನ ಅವಶೇಷಗಳೇ ಪುರಾವೆ. ಅಷ್ಟೆ ಅಲ್ಲ ಇಂದಿನ ಮಹರಾಷ್ಟ ರಾಜ್ಯದ ಅನೇಕ ಊರಿನ ಹೆಸರುಗಳು ಕನ್ನಡದಲ್ಲಿ ಇರುವುದೇ ಇದಕ್ಕೆ ನಿದರ್ಶನ.
"ಕೆಂದೂರು,ಕಣಕವಲ್ಲಿ,ಗಾಣಗಪುರ,ಶಿರೋಳ, ಕಲ್ಲಮಠ,ಪೊಯನಾಡು,ಕಳಸ" ಇದಲ್ಲದೇ "ಕೃಷ್ಣಂಭಟ್ಟ, ಅಣ್ಣಂಭಟ್ಟ ಊರುಗಳ ಹೆಸರಲ್ಲಿ "ಮಂ"ಕಾರವು ಕನ್ನಡ ಪ್ರತ್ಯಯವಾಗಿದೆ.


ಯಾಕೆ ನಮಗೆ ನಮ್ಮ ಪುಲಕೇಶಿ,ತೈಲಪ,ಮಯೂರವರ್ಮ,ಗೊವಿಂದ-೩,ವಿಕ್ರಮಾದಿತ್ಯ ಆದರ್ಶರಾಗುವದಿಲ್ಲ, ಅವರ ಕಥೆ ಕೇಳುತ್ತಿದ್ದರೆ ನಮಗೆ ರೋಮಾಂಚನ ಏಕೆ ಆಗುವದಿಲ್ಲ, ಇವರು ನಮ್ಮ ಪೂರ್ವಜರು ಎಂದು ಎದೆ ತಟ್ಟಿ ಹೇಳಲು ಸಂಕೋಚವೇಕೆ.ಗಾಂಡುಗಳಾಗಿ ಬದುಕಿದ್ದು ಸಾಕು, ಗಂಡುಗಲಿಯಾಗಿ ಎಂದು ಇವರು ನಮಗೆ ನೀತಿಪಾಠ ಹೇಳುತ್ತಿಲ್ಲವೇ ?


ಕೊಸರು:- ಮಕ್ಕಳಿಗೆ ನಮ್ಮ ಇಂದಿನ ಪಾಲಕರು ಹೆಚ್ಚಾಗಿ ನಮ್ಮ ರಾಜರ ಕಥೆಗಳನ್ನು ಹೇಳುವದಿಲ್ಲ, ಯಾಕೆ ಅಂದರೆ ಅವರಿಗೆ ಗೊತ್ತಿರುವದಿಲ್ಲ. ಅಮರಚಿತ್ರಕಥಾ ಮುಂತಾದ ಮಕ್ಕಳ ಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ ಚಕಾರವಿಲ್ಲ. ರಾಜರು ಅಂದರೆ ಅಶೋಕ,ಚಂದ್ರಗುಪ್ತ,ಶಿವಾಜಿ ಕಥೆಗಳು ಕಾಣುತ್ತದೆ. ಅದ್ದರಿಂದ ನಮ್ಮ ರಾಜರ ಕಥೆಗಳ ಅಮರಚಿತ್ರಕಥೆಯನ್ನು ಪ್ರಕಟಿಸಬೇಕು.
ಇಲ್ಲಾ ನನ್ನಂತ ಸಾವಿರಾರು ಜನರಿಗೆ ಕನ್ನಡ ಕಿಚ್ಚನ್ನು ಹತ್ತಿಸಿದ ಕನ್ನಡ ಕುಲಪುರೋಹಿತ ದಿ ಶ್ರೀ ಆಲೂರು ವೆಂಕಟರಾಯರು ಮತ್ತೆ ಹುಟ್ಟಿ ಬರಬೇಕು.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.