Friday, April 17, 2009
ಯಾರೇ ಬಂದ್ರು ನಮಗೆ ಸಿಗೋದು sec 307 ಮತ್ತು 302.
ಕೇಂದ್ರದಲ್ಲಿ ನಡಿತಾ ಇರೋ ದೊಂಬರಾಟದಲ್ಲಿ ಒಬ್ಬರು ಅಧಿಕಾರ ಮುಂಚೂಣಿ ಹಿಡಿಬಹುದು, ಅಪರೇಷನ್ , ಕುದುರೆ ವ್ಯಾಪರ , ಆಮಿಷಾ, ರೆಸಾರ್ಟ್ ರಾಜಕೀಯ ಶುರು ಆಗೋದೆ ಆವಗಲೇ. ಲೆಕ್ಕಕ್ಕೆ ಇಲ್ಲದವರು ಜೋರು ಮಾಡುವದಕ್ಕೆ ಆಗೋದು, ಅಲ್ಪಮತದವರು ಬಹುಮತದವರನ್ನು ಆಡಿಸೋದು ಮುಂದೆ ನಡಿಯೊತ್ತೆ.
ಸರಿ, ಮುಂದೆ ಇವೆಲ್ಲಾ ಮಾಡಿ ಯು.ಪಿ.ಎ ಅಧಿಕಾರಕ್ಕೆ ಬರುತ್ತಾರೆ ಅಂತ ನೊಡೋಣ , ಹಾಗೇ ಆಗುವದಕ್ಕೆ ತಮಿಳುನಾಡಿನಿಂದ ಡಿ.ಎಂ.ಕೆ , ಮಹರಾಷ್ಟ್ರದಿಂದ, ಗೋವಾ ಮತ್ತು ಎ.ಪಿ ಇಂದ ಎಂಪಿಗಳು ಕಾರಣ ಆಗಿರುತ್ತಾರೆ. ಕರ್ನಾಟಕದಿಂದ ಆಯ್ಕೆ ಆಗುವ ೭-೮ ಎಂಪಿಗಳು ಆಟಕ್ಕುಂಟು ಲೆಕ್ಕಕಿಲ್ಲ ಅನ್ನೊ ರೀತಿ. ಕರ್ನಾಟಕದ ಕಾಂಗ್ರೆಸ್ ಅತಿರಥರೆಲ್ಲಾ ಸೋತ ಕಾರಣ ಒಬ್ಬರೂ ನಮ್ಮ ರಾಜ್ಯವನ್ನು ಕೇಳೊಲ್ಲ. ಆಳೂರಿಗೆ ಉಳಿದವನೆ ಗೌಡ ಅನ್ನೊ ಹಾಗೆ ಮುನಿಯಪ್ಪ ಅನ್ನೊ ವೇಸ್ಟಗಳಿಗೆ ಮಂತ್ರಿ ಪದವಿ ಬರೊತ್ತೆ. ಒಬ್ಬರಿಗೂ ಕ್ಯಾಬಿನೇಟ್ ಪದವಿ ದಕ್ಕುವದಿಲ್ಲ. ದಲಿತ ಕೋಟದಲ್ಲಿ ಖರ್ಗೆಗೆ ಮಂತ್ರಿ ಪದವಿ ಬರಬಹುದು, ಅದು ಅವರಿಗೆ ಹಿಡಿಸದ ಬೇರೆಯವರೂ ಮುಟ್ಟದ ಖಾತೆ ಆಗಿರುತ್ತದೆ.
ಸೋತ ಕಾಂಗ್ರೆಸ್ ಅತಿರಥರಿಗೆ ನಿರಾಶ್ರಿತರ ಯೋಜನೆಯಲ್ಲಿ ಈ ಮಂಡಳಿ, ಇಲ್ಲಾ ರಾಜ್ಯಪಾಲರನ್ನಾಗಿ ಮಾಡಲಾಗೊತ್ತೆ.
ಕಾಂಗ್ರೆಸ್ ಇಂದ ನಮ್ಮ ರಾಜ್ಯಕ್ಕೆ ದಕ್ಕೊದೇನೂ??
* ಕ್ಯಾಬಿನೇಟ ಮಂತ್ರಿ ಮಂಡಲ ಸಭೆಯಲ್ಲಿ ಕನ್ನಡ ದನಿಯೇ ಇರುವದಿಲ್ಲ. ಕರ್ನಾಟಕದ ವಿರುದ್ಧ ತೀರ್ಪು ಮತ್ತು ಅನ್ಯಾಯ ಖಚಿತ.
* ನಮ್ಮ ಕಾಂಗ್ರೆಸ್ ಎಂ.ಪಿಗಳನ್ನು ಕೇಳುವರಿರೊಲ್ಲ, ಇವರಿಗೆ ಎನು ಮಾಡಬೇಕೆಂದು ತಿಳಿಯುವದಿಲ್ಲ. ಅತ್ತ ಸಂಸತ್ತಿನಲ್ಲಿ ಎನು ಮಾತನಾಡಬೇಕೆಂದು ತಿಳಿಯದೇ, ಇತ್ತ ರಾಜ್ಯಕ್ಕೆ ಬರಲಾಗದೇ ಕರ್ನಾಟಕ ಭವನದಲ್ಲಿ ಕಾರ್ಡ್ಸ ಆಡುತ್ತ ಕಾಲಹರಣ ಮಾಡಿ ಎಂ.ಪಿ ಲ್ಯಾಡ್ ಹಣಕ್ಕೆ ಕಾಯುತ್ತಿರುವುದೇ ಕೆಲಸ ಆಗೊತ್ತೆ.
* ಕರ್ನಾಟಕ ಸಮಸ್ಯೆ ಬಂದಾಗ ಅದನ್ನು ಸಂಸತ್ತಿನಲ್ಲಿ ಎತ್ತೊಕ್ಕೆ ಹೈಕಮಾಂಡ್ ಭಯ, ಎಲ್ಲಿ ಸರಕಾರವನ್ನು ಪೇಚಿಗೆ ಸಿಲುಕಿಸುತ್ತೆವೋ ಅಂತ.
ಬಿ.ಜೆ.ಪಿ ಇಂದ ನಮ್ಮ ರಾಜ್ಯಕ್ಕೆ ದಕ್ಕೊದೇನೂ??
ಇನ್ನು ಬಿಜೆಪಿರೂಢ ಎನ್.ಡಿ.ಏ ಅಧಿಕಾರಕ್ಕೆ ಬಂತು ಅಂತ ಅಂದುಕೊಳ್ಳೋಣ, ದಕ್ಷಿಣದ ಪ್ರಾದೇಶಿಕ ಪಕ್ಷಗಳ ಸಹಾಯ ಇಲ್ಲದೇ ಸರಕಾರ ಮಾಡುವದಕ್ಕೆ ಆಗುವುದೇ ಇಲ್ಲ.
* ಅನಂತ್ ಕುಮಾರ್ ಕ್ಯಾಬಿನೇಟ್ ಮಂತ್ರಿ ಆಗಬಹುದು, ಕೆಲವು ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಚಾಲನೆ ಸಿಗಬಹುದು. ಆದರೆ ಅವೂ ಬರೀ ಬೆಂಗಳೂರಿಗೆ ಸೀಮಿತ ಆಗುವ ಸಾಧ್ಯತೆ ಹೆಚ್ಚು. ಯಾಕೆ ಆದರೆ ಅವರ ನೇಷನ್ ಫರ್ಸ್ಟನಲ್ಲಿ ಕರ್ನಾಟಕ ಗಣನೆಗೆ ಬರುವುದೇ ಇಲ್ಲ.
* ಕಷ್ಟ ಪಟ್ಟು ಸರಕಾರ ಮಾಡಿರುವ ಕಾರಣ ಕೃಷ್ಣಾ -ಕಾವೇರಿ ವಿಷಯದಲ್ಲಿ ಬಾಯಿ ಮುಚ್ಚಿಕೊಂಡು ಇರುತ್ತಾರೆ.
* ಶಿವಸೇನೆಯು ಗಡಿ ವಿಷಯ ಕೆದಕುತ್ತ ಇದ್ದರೆ ನಮ್ಮ ರಾಜ್ಯ ಸರಕಾರ ಚಕಾರ ಎತ್ತೊಲ್ಲ, ಹಾಗೆ ಎತ್ತಿದರೆ ಮರುದಿನವೇ ಪ್ರಧಾನ ಮಂತ್ರಿ ಅಡ್ವಾಣಿ(ಜೀ)ಯಿಂದ ಕರೆ .." ಯಡಿಯೂರಪ್ಪ ಸುಮ್ಮನೇ ಇರುವದಕ್ಕೆ ಎನು ತೆಗೆದುಕೊಳ್ತಿರಾ, ಕಷ್ಟ ಪಟ್ಟು ಸರಕಾರ ಮಾಡಿದ್ದೀವಿ, ಅದಕ್ಕೆ ಕಲ್ಲು ಹಾಕಬೇಡಿ, ಶಿವಸೇನೆ ಮಾಡಿದ್ದು ಮಾಡಲಿ. ಬೆಳಗಾವಿ ಯಾವ ರಾಜ್ಯದಲ್ಲಿದ್ದರೇನು ಭಾರತದಲ್ಲಿ ಇದೇ ತಾನೇ, ನೇಷನ್ ಫರ್ಸ್ಟ ಅಂತ ಮರೆತು ಬಿಟ್ಟೀರಾ" ಅಂತ ಹೇಳಿ ನಮ್ಮ ರಾಜ್ಯ ಸರಕಾರವನ್ನು ಷಂಡತನಕ್ಕೆ ದೂಡುತ್ತಾರೆ.
ಸೋತ ಪಕ್ಷದಲ್ಲಿ..
ಕಾಂಗ್ರೆಸ್ ಮತ್ತು ಬಿಜೆಪಿಯದು ಒಂದೇ ಪ್ರಲಾಪ. ನಮಗೆ ಅಧಿಕಾರ ಇಲ್ಲ ಎನೂ ಮಾಡುವದಕ್ಕೆ ಆಗುವದಿಲ್ಲ. ರಾಜ್ಯಕ್ಕೆ ಅನ್ಯಾಯ ಆಗ್ತಾ ಇದೆ, ತಕ್ಷಣ ಸರಕಾರ ರಾಜೀನಾಮೆ ಕೊಡಬೇಕು ಮತ್ತೊಮ್ಮೆ ಚುನಾವಣೆ( ೧೦೦೦೦ ಕೋಟಿ ಖರ್ಚು) ಮಾಡಬೇಕು.
ಎನ್.ಡಿ.ಎ ಅಧಿಕಾರಕ್ಕೆ ಬರದಿದ್ದರೆ ಗೆದ್ದ ಸೋತ ಎಂಪಿಗಳು ರಾಜ್ಯ ರಾಜಕರಣದಲ್ಲಿ ಬಿಜಿ ಆಗುತ್ತಾರೆ , ಕಮಲದಲ್ಲೇ ಆಪರೇಷನ್ ಆಗಬಹುದು.
ಒಟ್ಟಿನಲ್ಲಿ.
* ಕನ್ನಡ ಸಮಸ್ಯೆಗಳಿಗೆ ಪರಿಹಾರವಿಲ್ಲ.
* ಕನ್ನಡ ಕೂಗನ್ನು ದಿಲ್ಲಿ ಪ್ರಭುಗಳಿಗೆ ತಲುಪಿಸುವ ಕೆಲಸ ಕರವೇ ಮಾಡುತ್ತಲೇ ಇರಬೇಕು.
* ಕನ್ನಡಕ್ಕೆ ಆದ ಅನ್ಯಾಯವನ್ನು ಸರಿ ಪಡಿಸಿ ಅಂತ ನಿದ್ದೆಗೆ ಜಾರಿದ ಸದಸ್ಯರನ್ನು ಎಬ್ಬಿಸುತ್ತ ಇರಬೇಕು.
* ಆಕಸ್ಮಾತ್ ಹೋರಾಟ ದೊಡ್ಡ ರೀತಿಯಲ್ಲಿ ಆದರೆ ಅದನ್ನು ಹತ್ತಿಕ್ಕುವದಕ್ಕೆ ಕೇಂದ್ರದಲ್ಲಿ ಮುಜುಗರ ತಪ್ಪಿಸುವದಕ್ಕೆ ಬ್ರಹ್ಮಾಸ್ತ್ರ ಇದೆ ಅಲ್ವಾ.. ಅದೇ ಕನ್ನಡ ಹೋರಾಟಗಾರರ ಮೇಲೆ ಸೆಕ್ಷನ್ ೩೦೭ ಮತ್ತು ೩೦೨.
* ರಾಜ್ಯ ರೈತರು ಇನ್ನಾ ಹೆಚ್ಚು ಸಾಯಬಹುದು.
* ಕುಡಿಯುವ ನೀರಿಗೆ ಮತ್ತು ವಿದ್ಯುತಗೆ ಅಭಾವ ಆಗುತ್ತದೆ. ಆ ದೂರು ಐ.ಟಿ ದೊರೆಗಳಿಂದ ಪ್ರಧಾನಿಗೆ ತಲುಪಿ ಕೊನೆಗೆ ಗೊರುರು, ಶಿರಾ, ಕೊಪ್ಪಳ ಕತ್ತಲೆಯಲ್ಲಿ ಕರಗಿ ಬೆಂಗಳೂರಿನ ಐ.ಟಿ ಕಂಪನಿಗಳು ಜಗಮಗಿಸುತ್ತವೆ.
ಸೂಚನೆ:- Section 302 - Full Murder, Section 307 - Half murder