Tuesday, December 28, 2010

ಹಂಪಿ ಪ್ರವಾಸ - ೧

ಮುನ್ನುಡಿ

ಅದೇನೋ ಗೊತ್ತಿಲ್ಲ ಹಂಪಿ ಎಂದರೆ ಒಂದು ಬಗೆಯ ಆಕರ್ಷಣೆ, ಇನ್ನೂ ಹೋಗಿಲ್ಲವಲ್ಲ ಅನ್ನೋ ಬೇಸರ. ಅಲ್ಲಿಗೆ ಹೋಗೋ ಪ್ರವಾಸದ ಅವಕಾಶ ಸಿಕ್ಕಾಗೆಲ್ಲಾ ಎನೋ ಅಡ್ಡ ಬಂದು ತಪ್ಪಿಹೋದ ಹಿಂದಿನ ಅನೇಕ ಅನುಭವಗಳು. ಒಟ್ಟಿನಲ್ಲಿ ಹಂಪಿ ನನಗೆ ಹತ್ತಿರವಿದ್ದು ದೂರವಿದ್ದ ಸುಂದರಿಯೇ. ಈ ಸುಂದರಿ ಬಗ್ಗೆ ಆಲೂರು ವೆಂಕಟರಾಯರ ಪುಸ್ತಕ ಓದಿದಾಗ ಅವರಿಗೆ ಆದ ರೋಮಾಂಚನ, ಅವರು ಅನುಭವಿಸಿದ ಆ ಭೂಮಿಯ ಪ್ರೇರಪಣಾ ಶಕ್ತಿ ಇವೆಲ್ಲವೂ ಅಲ್ಲಿಗೆ ಸೆಳೆಯುತ್ತಲೇ ಇದ್ದವೂ. ಆದರೆ ನನಗೆ ಅಲ್ಲಿ ಹೋಗಿ ಸುಮ್ಮನೆ ಗೋಡೆ ಮುಟ್ಟಿಬರುವ ಆಸೆಗಿಂತ, ಆಗಿನ ಕಾಲ ಹೇಗೆ ಇತ್ತು, ನಮ್ಮ ಕನ್ನಡ ಸಾಮ್ರಾಜ್ಯ ಹೇಗೆ ಬಾಳಿತ್ತು, ಇಂದು ಹಾಳು ಹಂಪೆ ಎಂದು ಕರೆಯುತ್ತರಲ್ಲ ಅದು ಕಟ್ಟಡಗಳ ಸ್ಥಿತಿಯೋ ಇಲ್ಲ ನಮ್ಮ ಕನ್ನಡಿಗರ ಮನಸ್ಸಿನ ಸ್ಥಿತಿಯೋ ಎಂದು ತಿಳಿಯುವ ಭಾವನೆ. ಅಲ್ಲಿ ಹೋಗಿ ಒಬ್ಬ ಸಾಮನ್ಯ ಇತಿಹಾಸ ವಿಧ್ಯಾರ್ಥಿಯ ಹಾಗೆ ಅಲ್ಲಿ ಅಲೆಯಬೇಕು, ಬಂಡೆ, ಗುಡ್ಡ ಹತ್ತಬೇಕು, ಅವರು ಓಡಾಡಿದ ಜಾಗದಲ್ಲಿ ಓಡಾಡಿ ನಾವು ಪುಳಕಿತರಾಗಬೇಕು ಎಂದು ನಿಶ್ಚಯಿಸಿ ಕೇವಲ ೩ ದಿನದಲ್ಲಿ ಇದೇ ಕೆಲ್ಸ ಮಾಡಲು ಹೊರಟಿದ್ದ ತಂಡವನ್ನು ಸೇರಿಕೊಂಡೆ.


ಹಂಪಿ ಹಿನ್ನಲೆ

ತುಂಗಾ-ಭ್ರದ್ರ ತೀರದಲ್ಲಿ ಇರುವ ಪಂಪಾದೇವಿಯ ಕ್ಷೇತ್ರಕ್ಕೆ ಹಂಪಿ,ಹಂಪೆ ಎಂದು ಹೆಸರು ಬಂದಿದೆ. ಹೆಸರನ್ನು ಗಮನಿಸಿದರೆ ನಮಗೆ ಇಲ್ಲಿ ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಹಾಗೇಯೆ ಪಂಪೆ, ಪಂಪಿ ಹೋಗಿ ಹಂಪೆ, ಹಂಪಿ ಆಗಿರಬಹುದು ಎಂದು ನನ್ನ ಅನಿಸಿಕೆ.




ಬೆಂಗಳೂರಿನಿಂದ -ಹಂಪಿಗೆ

ಇದು ಬೆಂಗಳೂರಿನಿಂದ ೩೪೩ ಕಿ.ಮೀ ದೂರದಲ್ಲಿದೆ, ಬೆಂಗಳೂರಿನಿಂದ ದಿನವೂ ರಾಜಹಂ(ಹಿಂ)ಸಾ ಬಸ್ ಸೇವೆ ಇದೆ. ಇದು ಕ.ರಾ.ರ.ಸಾ.ಸಂ ಅವರ ಸೇವೆ, ರಾತ್ರಿ ೧೧.೦೦-೧೧.೩೦ ಒಳಗೆ ಹೋರಟು ಅಲ್ಲಿ ಬೆಳಿಗ್ಗೆ ಸೇರುತ್ತದೆ. ಮೇಲೆ ಹೇಳಿದ ಹಾಗೆ ಆ ದಿನಗಳಲ್ಲಿ ಇದ್ದ ರಸ್ತೆಯ ಅನುಭವ ಮಾಡಿಸಿದ್ದು ಚಿತ್ರದುರ್ಗ ಮತ್ತು ಹೊಸಪೇಟೆ ಮಾರ್ಗ. ಈ ದಾರಿಯಲ್ಲಿ ರಸ್ತೆ ಅನ್ನುವುದೇ ಇಲ್ಲ. ಬಸ್ ನಿಮ್ಮನ್ನು ಎತ್ತಿ, ಕುಲುಕಿ, ಲಾಲಿ ಹಾಡೊತ್ತೆ. ಆ ರಸ್ತೆಯಲ್ಲೂ ಕೂಡ ಅಭಿವೃದ್ಧಿಯೇ ನಮ್ಮ ಮಂತ್ರ ಅನ್ನುವ ರಾಜ್ಯ ಸರ್ಕಾರದ ಬೋರ್ಡುಗಳು ಅಣಕಿಸಿದರೆ ಅದು ನಿಮ್ಮ ವಕ್ರದೃಷ್ಟಿ ಅಷ್ಟೆ.

ಆ ದುರ್ಗಮ ದಾರಿಯಲ್ಲಿ ಸಂಚರಿಸುವಾಗ. ಬಸ್ಸಿನಲ್ಲಿ ನನ್ನ ಜೊತೆ ಇದ್ದವರಿಗೆ ನನ್ನ ತರಹ ಎನ್ ಕಚಡಾ ರಸ್ತೆಯಪ್ಪ ಎಂದು ಬೈದುಕೊಳ್ಳುವುದೇ ಆಗಿತ್ತು. ನಮ್ಮದು ಈ ಕಥೆ ಆದರೆ ಹಿಂದಿನ ಕಾಲದಲ್ಲಿ ಇದಕ್ಕಿಂತ ದುರ್ಗಮ ದಾದಿಯಲ್ಲಿ ಬಂದು ಯುದ್ದ ಮಾಡುತ್ತ ಇದ್ದ ಬೇರೆ ರಾಜ್ಯದ ಜನರ ಕಿಚ್ಚನ್ನು ಮೆಚ್ಚ್ದಬೇಕಲ್ಲವೇ ?? . ನಮಗೆ ೨ ತಾಸು ಪ್ರಯಾಣ ಸಾಕಪ್ಪ ಅನಿಸಿದರೆ ಅವರಿಗೆ ವರ್ಷಗಟ್ಟಲೇ ಪ್ರಯಾಣ ಯಾವ ಮಟ್ಟಿಗೆ ತ್ರಾಸು ಕೊಟ್ಟಿರಬಹುದು ಅಲ್ಲವೇ ?. ಆ ದಿನಗಳಿಗೆ ಕರೆದುಕೊಂಡು ಹೋದ ಆ ರಸ್ತೆಗೆ ಧನ್ಯವಾದ ಸಲ್ಲಿಸುತ್ತ.. ಮುಂದುವರೆಯೋಣ.

ಹಂಪಿಗೆ ಬಸ್ ಬೇಡ ಎಂದರೂ ೨ -೨.೩೦ ಗಂಟೆ ತಡವಾಗಿ ತಲಪುತ್ತಾನೆ. ಅದಕ್ಕಿಂತ ಉತ್ತಮ ಆಯ್ಕೆ ಎಂದರೆ ರೈಲಿನಲ್ಲಿ ಹೋಗುವುದು. ಅದೇ ಹಂಪಿ ಎಕ್ಸಪ್ರೆಸ್ ನಲ್ಲಿ ಹೊಸಪೇಟೆ ತನಕ ಬಂದು ಅಲ್ಲಿಂದ ಆಟೋ-ಬಸ್ ನಲ್ಲಿ ಹಂಪಿಯನ್ನು ತಲುಪಬಹುದು. ಇದು ಎಲ್ಲಾ ರೀತಿಯಲ್ಲಿ ಉತ್ತಮವಾದ ಆಯ್ಕೆ. ಹಾಯಾಗಿ ನಿದ್ದೆ ಮಾಡಿಕೊಂಡು, ಕೈಕಾಲಿಗೆ ಶ್ರಮ ಕೊಡದೇ ಸಾಗಬಹುದು. ಹೊಸಪೇಟೆಯಿಂದ ಹಂಪಿ ಸರಿ ಸುಮಾರು ೧೫-೧೬ ಕಿ.ಮಿ ಪ್ರಯಾಣ. ದಾರಿ ಮಧ್ಯ ಹಳೆ ಕಟ್ಟಡಗಳು ಕಂಡರೆ ಅದಕ್ಕಿಂತ ಹೆಚ್ಚು ಅಲ್ಲಿನ MLA ಆನಂದ್ ಸಿಂಗನ ಹೆಸರು ಕೃಷ್ಣದೇವರಾಯಕ್ಕಿಂತ ಹೆಚ್ಚು ಕಾಣಿಸುತ್ತದೆ ಮತ್ತು ಬೇಡವೆಂದರೂ ನೋಡ ಸಿಗುತ್ತದೆ.

ವಾಸ



ಹಂಪಿಯು ಮೊದಲಿಂದ ಅನೇಕ ದೇಶದವರನ್ನು ಆಕರ್ಷಣೆ ಮಾಡುತ್ತಲೆ ಇತ್ತು, ಇವತ್ತು ಹೇಗೆ ಮುಂಬಾಯಿ ವಾಣಿಜ್ಯ ನಗರ ಆಗಿದೆಯೋ ಹಾಗೆ ಅಂದಿನ ದಿನಗಳಲ್ಲಿ ಹಂಪಿ ದೊಡ್ಡ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿತ್ತು. ಆಮದು -ರಫ್ತು ಎರಡೂ ಎಗ್ಗಿಲ್ಲದೇ ಸಾಗಿತ್ತು, ಅಲ್ಲಿನ ಜನರಿಗೆ ಬೇರೆ ದೇಶದವರು ಹೊಸರಲ್ಲ ಮತ್ತು ಅವತ್ತು ಹೇಗೆ ಮರ್ಯಾದೆ ಕೊಡುತ್ತಾರೋ ಇವತ್ತಿಗೂ ಕೊಡುತ್ತಾರೆ, ಕಾರಣಗಳು ಬೇರೆ ಇರಬಹುದು ಆದರೆ ಆ ಜನರ ಬಗ್ಗೆ ಇರುವ ಮೋಹ ಮತ್ತು ಆಕರ್ಷಣೆ ಕಮ್ಮಿ ಆಗಿಲ್ಲ. ಇವತ್ತು ಹಂಪಿ ಗಲ್ಲಿ ಗಲ್ಲಿಯಲ್ಲಿ ಮನೆಗಳೂ LODGING ರೂಮುಗಳಾಗಿ ಪರಿವರ್ತನೆ ಆಗಿದೆ. ಸರಿ ಸುಮಾರು ೩೦೦೦ ರೂಮುಗಳು ಇದೆ. ಪ್ರತಿ ರೂಮಿನಲ್ಲಿ ಎಸಿ, attached bathroom, double cot ಹೀಗೆ ಅನೇಕ ವ್ಯವಸ್ಥೆಗಳು ವಿದೇಶಿಯರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಸೀಸನ್ ನಲ್ಲಿ ಪ್ರತಿ ರೂಮಿನ ಬೆಲೆ
೧೦೦೦-೨೦೦೦ ತನಕ ಹೋಗುತ್ತದೆ. ಸೀಜನ್ ಅಂದರೆ ಅಕ್ಟೋಬರ್ ಇಂದ ಫೆಬ್ರವರಿ ತನಕ , ಆಮೇಲೆ ಬಿಸಿಲು ಕಾಲದಲ್ಲಿ ಸೂರ್ಯನ ಶಾಖಕ್ಕೆ ಕಲ್ಲುಗಳು tan ಆಗಿ ಊರು ಬಿಕೋ ಅನ್ನುತ್ತ ಇರುತ್ತದೆ, ಹಾಗೇಯೆ ಮಳೆಗಾಲದಲ್ಲಿ ಕೂಡ ಹೆಚ್ಚು ಜನರು ಕಾಣ ಬರುವದಿಲ್ಲ.

ಊಟ-ಊಪಚಾರ



ವಿರುಪಾಕ್ಷ ಸ್ವಾಮಿ ದೇವಸ್ಥಾನದ ಹತ್ತಿರ ಅನೇಕ ಹೋಟೆಲ್ ತಲೆ ಎತ್ತಿವೆ, ಮುಖ್ಯವಾಗಿ ತುಂಗಾ ಸಂಗಮದಲ್ಲಿ ತಿಥಿ ಇತರೆ ಪಿತೃಕಾರ್ಯಗಳು ನಡೆಯುವ ಕಾರಣ ಅನೇಕ ಪೂಜಾರಿ ಮನೆಗಳಲ್ಲಿ ಊಟ ಸಿಗುತ್ತದೆ. ಇನ್ನು ವಿದೇಶಿಯರನ್ನೇ ಗಮನದಲ್ಲಿ ಇಟ್ಟುಕೊಂಡು ಅನೇಕ
ರೆಸ್ತೋರೆಂಟ್ ತಲೆ ಎತ್ತಿವೆ. ಅಲ್ಲಿನ ಮಂಡಕ್ಕಿ, ಮಿರ್ಚಿ, ಪಡ್, ಇಡ್ಲಿ-ವಡೆ ತಿಂಡಿಗೆ ಆದರೆ, ಒಳ್ಳೆ ಸಾರು,ಸಾಂಬಾರು,ಮಜ್ಜಿಗೆ ಹುಳಿ, ಚಟ್ನಿ ಊಟ ಮಧ್ಯಾಹ್ನ ಮತ್ತು ರಾತ್ರಿಗೆ ಸಿಗುತ್ತದೆ.ಅದನ್ನು ಬಿಟ್ಟರೆ ದಾರಿ ಮಧ್ಯೆ ಎಳೆನೀರು ಸಿಗುತ್ತದೆ, ಆದರೆ ಆ ಭೂಮಿಯ ಗುಣವೋ ಎನೋ
ನೀರು ತುಂಬಾ ಉಪ್ಪಾಗಿ ಇರುತ್ತದೆ. ಸಾಲದಕ್ಕೆ ಬಿಸಿಲಿನ ಝಳಪು ತುಂಬ ಇರುವದರಿಂದ ಎಲ್ಲಿಗೆ ಹೋದರು ಕುಡಿಯಲು ಚೆನ್ನಾಗಿ ನೀರು ತೆಗೆದುಕೊಂಡು ಹೋಗುವುದು ಉತ್ತಮ.