ತಿಂಗಳಿಗೆ ಒಮ್ಮೆ ನನಗೆ ಭಾರತೀಯನಾಗಲು ಹೆಮ್ಮೆ ಪಡು, ಇದನ್ನು ೧೦೦ ಜನರಿಗೆ ಕಳಿಸಿ ನಿನ್ನ ದೇಶಪ್ರೇಮವನ್ನು ಮೆರೆ ಎಂದು ಒಂದು ಮಿಂಚೆ ಬರುತ್ತಲೆ ಇರುತ್ತದೆ. ಅನೇಕ ವರುಷಗಳ ಹಿಂದೆ ಅದನ್ನು ಕಳಿಸಿದವರಿಗೆ ಬೈದು ಉತ್ತರ ಬರೆಯುತ್ತ ಇದ್ದೆ. ಆದರೆ ಇದು ಸಮಯ ಹರಣ ಎಂದೆನಿಸಿ, ದೇಶಪ್ರೇಮವನ್ನು ಮರೆಯುತ್ತ ಮಿಂಚೆಯನ್ನು ಸ್ಪಾಮ್ ಮಾಡುತ್ತ ಬಂದಿರುವೆ. ಆ ಮಿಂಚೆಯಲ್ಲಿ ಒಂದು ಸಾಲು ಇವತ್ತು ನನಗೆ ಮತ್ತೆ ಜ್ಞಾಪಕ ಬಂತು. ಅದೆನೆಂದರೆ ಮೊದಲ ನ್ಯೂಕ್ಲಿಯರ್ ಕಂಡು ಹಿಡಿದಿದ್ದು ಭಾರತೀಯರು, ಅದನ್ನು ಬಳಸಿದವರಲ್ಲಿ ರಾಮನು ಒಬ್ಬನು ..ಇತ್ಯಾದಿ. ಪೊಕ್ರಾನ್ ಆಗಿ ಕಲಾಂ ಗೆ ಹೆಸರು ಬರುತ್ತ ಇದ್ದ ಸಮಯದಲ್ಲಿ ಇ ಮಿಂಚೆ ಹೆಚ್ಚು ಹರಿದಾಡುತ್ತ ಇತ್ತು. ಅದರ ಸಾರಂಶವೆಂದರೆ ನಾವು ಆಗಲೇ ಕಂಡು ಹಿಡಿದಿದ್ದೆವು, ನಮ್ಮ ದೇವಾನು ದೇವತೆಗಳಿಗೆ ಮತ್ತು ಮಾನವರಿಗೆ ಅದು ಆಟದ ವಸ್ತು ಆಗಿತ್ತು.
ಆ ಜ್ಞಾನ ನಮ್ಮಲ್ಲಿ ಎಲ್ಲೊ ಇರಬೇಕು ಅಲ್ಲವೇ, ಅದು ಎಲ್ಲಿದೆ ಎಂದು ತಿಳಿಯುವದಕ್ಕೆ ನಮಗೆ ಸಂಸ್ಕೃತ ಜ್ಞಾನ ಬೇಕು. ಅದಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬೇಕು, ಪ್ರತಿ ರಾಜ್ಯದಲ್ಲಿ ೧೦೮ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾಲಯ ಬೇಕು.
ನಾವುಗಳು ಗಣತಿಯಲ್ಲಿ ಒಂದು ಪದ ಅರ್ಥ ತಿಳಿಯದಿದ್ದರೂ ಸಂಸ್ಕುತ ನನಗೆ ಗೊತ್ತಿರುವ ಭಾಷೆ ಎಂದು ಬರೆಸಬೇಕು.
ಇಷ್ಟೆಲ್ಲಾ ಮಾಡಿ ಸಂಸ್ಕೃತ ಪಂಡಿತರಿಂದ ನೀವು ನ್ಯೂಕ್ಲಿಯರ್ ಬಗ್ಗೆ ಕೇಳಿದರೆ ತಪ್ಪು ಆಗುತ್ತದೆ, ಅಷ್ಟೆಲ್ಲಾ ಓದಿದ ಜನರಿಂದ ಕೊನೆಗೆ ಆಚೆ ಬರುವುದು ಕೇವಲ ಕಾಳಿದಾಸ ಮತ್ತು ಬಾಣ ಅಷ್ಟೇ.
ತಮಾಷೆ ಸಾಕು.. ಇವತ್ತು ದೊಡ್ಡ ಸುನಾಮಿ ಬಡೆದು ಜಪಾನ್ ತತ್ತರ ಆಗಿದೆ, ಅಣು ವಿಕಿರಣ ಎಲ್ಲಡೆ ಹಬ್ಬುತ್ತಿದೆ. ಅಯ್ಯೋ ನಮಗೇನು ಚಿಂತೆ ಇಲ್ಲ ಟಿವಿ೯ ನಲ್ಲಿ ನೋಡಿದೆ ಎಂದು ಸುಮ್ಮನೆ ಆಗದೇ ನಾವು ಇವತ್ತು ಮನುಕುಲದ ಬಗ್ಗೆ ಚಿಂತೆ ಮಾಡಬೇಕಾಗಿದೆ. ಅಣುವಿಕಿರಣವನ್ನು ತಡೆಯುವ ಬಗ್ಗೆ ನಮ್ಮ ಸಂಸ್ಕೃತ ಗ್ರಂಧಗಳಲ್ಲಿ ಇಲ್ಲದೆಯೆ ಇರುತ್ತದೆಯೇ ?, ಅದನ್ನು ಹೆಕ್ಕಿ ಆಚೆ ಹಾಕಿ ಅನೇಕ ಮನುಕುಲವನ್ನು ರಕ್ಷಿಸಿದರೆ, ಜಗತ್ತಿಗೆ ಸಂಸ್ಕ್ರುತ ಬಗ್ಗೆ ಗೌರವ ಬರುತ್ತದೆ ಮತ್ತು ಅನುದಾನ ಸಿಗಲು ಸರ್ಕಸ್ ಮಾಡಬೇಕಾಗಿಲ್ಲ ಇಲ್ಲ ಮನೆ ಮುಂದೆ ಸ್ಟಿಕರ್ ಹಚ್ಚಿಕೊಳ್ಳಬೇಕಾಗಿಲ್ಲ.
ಮೊದಲು ವಾಸ್ತು, ಜ್ಯೋತಿಷ್ಯ, ಬಾಣ-ಕಾಳಿದಾಸ, ಇವರು ಬರೆದ ಪುಸ್ತಕಗಳನ್ನು ಬಂದು ಮಾಡಿ, ವಿಕಿರಣ ಬಗ್ಗೆ ಉಲ್ಲೇಖವಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕೆಂದು ಸರ್ಕಾರ ಅದೇಶಿಸಬೇಕು. ಮನುಕುಲದ ಅಳಿವು ಉಳಿವು ಇಂದು ಸಂಸ್ಕೃತದ ಮೇಲೆ ನಿಂತಿದೆ, ನಾವಿದ್ದರೆ ಅಲ್ಲವೇ ನಾಳೆ ಸಂಸ್ಕೃತ ಇರುವುದು ?.