Tuesday, May 09, 2006

ಅ.ನ.ಕೃ ಒಂದು ನೆನಪು.


ಹಿಂದೆ ಅ.ನ.ಕೃ ಬಗ್ಗೆ ನಾನು ಹಿಂದೆ ತಿಳಿದಿದ್ದು ಒಬ್ಬ ಸಾಹಿತಿಯಾಗಿ, ಅವರು ಸಂಧ್ಯಾರಾಗ,ಗಾಜಿನ ಮನೆ,ಗೌರಿ ಮುಂತಾದ ಕೃತಿಗಳನ್ನು ಬರೆದವರೆಂದು. ಅಷ್ಟರ ಮಟ್ಟಿಗೆ ನನ್ನ ಜ್ಞಾನ ಸೀಮಿತವಾಗಿತ್ತು. ಆದರೆ ಕನ್ನಡ ಹೋರಾಟದ ಬಗ್ಗೆ ನನಗೆ ಹೆಚ್ಚು ಆಸಕ್ತಿ ಮೂಡಿ, ಹೆಚ್ಚು ಅಧ್ಯಯನ ಮಾಡಿದಾಗ, ಹೆಚ್ಚು ಹೆಚ್ಚು ಕಂಡ ಹೆಸರು ಅ.ನ.ಕೃ.
ಅಲ್ಲಿಂದ ಅವರ ಬಗ್ಗೆ ನನ್ನ ಕೂತುಹಲ ಹೆಚ್ಚಾಯಿತು, ಕನ್ನಡಕ್ಕೆ ಮನೆಯಲ್ಲಿ ಕುಳಿತು Dialogue ಹೊಡೆಯುತ್ತಿದ್ದ ಆ ಕಾಲದಲ್ಲಿ, ಬೀದಿಗೆ ಇಳಿದು, ಜನರನ್ನು ಸಂಘಟಿಸಿ ತಮ್ಮ ವಾಜ್ಞ್ಮೆಯಿಂದ ಇತರರಿಗೆ ಕನ್ನಡ ಚಳುವಳಿಯ ಮಹತ್ವವನ್ನು ಅರಿವು ಮಾಡಿಕೊಟ್ಟ ಮಹನೀಯರು ನಮ್ಮ ಅ.ನ.ಕೃ.

ಅ.ನ.ಕೃ ಬಗ್ಗೆ ನಮ್ಮ ಬರಹ ಶೇಷಾದ್ರಿ ವಾಸುವಿನ ಅಂತರಜಾಲ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು, ಅಲ್ಲಿ ಅವರ ಬಗ್ಗೆ ಅವರ ಒಡನಾಡಿಗಳು ಆಡಿದ ಮಾತು ಮತ್ತು ಅನಿಸಿಕೆಗಳನ್ನು ಹಾಕಿದ್ದಾರೆ. ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಅದನ್ನು ಒಮ್ಮೆ ಓದಲೇ ಬೇಕು. ಸಮಗ್ರ ಮಾಹಿತಿಯನ್ನು ಓದಗಿಸಿದ ಬರಹ ವಾಸುವಿನ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.

ಅ.ನ.ಕೃ ಬಗ್ಗೆ ನಾನು ಓದಿದ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೆನೆ.

ಅ.ನ.ಕೃ ಅವರ ನೇರನುಡಿ:- ನಮಗೆ ತಿಳಿದ ಹಾಗೆ ಅ.ನ.ಕೃ ಅವರ ಭಾಷಣಗಳಿಗೆ , ಅವರು ಮಂಡಿಸುತ್ತಿದ್ದ ಕನ್ನಡ ಪರವಾದ ವಿಚಾರಗಳಿಗೆ ಮಾರು ಹೋದ ಶೋತೃಗಳು ಬಹಳ ವಿರಳ ಅನ್ನಬಹುದು. ತಮ್ಮ ಮನಸ್ಸಿಗೆ ಸರಿಹೋಗದ ವಸ್ತುನಿಷ್ಠವಾದ ಸಂಗತಿ ಯಾವುದೇ ಇದ್ದರೂ ಅದನ್ನು ಅವರು ದಯಾದಾಕ್ಷಿಣ್ಯವಿಲ್ಲದೇ ಖಂಡಿಸುತ್ತಿದ್ದರು. ಅದ್ದರಿಂದಲೇ ಅವರನ್ನು ಜನರಲ್ಲದೇ, ರಾಜಕೀಯ ನಾಯಕರು ಗೌರವಿಸುತ್ತಿದ್ದರು.

ಒಮ್ಮೆ ಧರ್ಮರಾಯನ ಗುಡಿಯ ಸಮೀಪ ಸಂಯುಕ್ತರಂಗದ ಸಭೆ, ಆ ಸಭೆಯಲ್ಲಿ ಸಮಾಜವಾದಿ ನಾಯಕರಾಗಿದ್ದ ಎಸ್.ಗೋಪಾಲಗೌಡ(ಶಾಂತವೇರಿ ಗೋಪಾಲಗೌಡ) ಭಾಗವಹಿಸಿದ್ದರು. ಅದೇ ತಾನೇ ವಿಧಾನಸಭೆಯಲ್ಲಿ ಅಂದಿನ ರಾಜ್ಯಪಾಲರ ಭಾಷಣವನ್ನು ಕಾಲಿನಿಂದ ತುಳಿದು ಪ್ರತಿಭಟನೆ ಮಾಡಿದ್ದರು. ಅ.ನ.ಕೃ ಅಂದು ಆ ಸಭೆಯಲ್ಲಿ ಎಲ್ಲರ ಎದುರು ಗೋಪಾಲಗೌಡರ ವರ್ತನೆಯನ್ನು ಟೀಕಿಸಿದರು. ಅದನ್ನು ಕೇಳಿ ಗೌಡರ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿ ಗೊಂದಲ ಆರಂಭವಾದಗ ಖುದ್ದು ಗೋಪಾಲಗೌಡರೇ ಅ.ನ.ಕೃ ನನ್ನ ಗುರುಗಳು, ಅವರು ಹೇಳಿದ ಮೇಲೆ ಮುಗಿಯಿತು, ನಾನು ನನ್ನ ಕ್ರಮಕ್ಕೆ ಕ್ಷಮೆ ಕೇಳುತ್ತೆನೆ ಎಂದರು. ಇಂದು ನಮಗೆ ಆ ನೇರನುಡಿಯ ಸಾಹಿತಿಗಳು ಸಿಗುವದಿಲ್ಲ, ರಾಜಕೀಯ ನಾಯಕರ ಉಘೇ ಉಘೇ ಮಾಡಿದರೆ ತಮಗೆ ಆಗುವ ಅನಕೂಲ ಎನು ಎಂದು ಚಿಂತಿಸುವ ಸಾಹಿತಿಗಳು ಇರುವ ಕಾರಣಕ್ಕೆ ನಮಗೆ ಅ.ನ.ಕೃ ಆದರ್ಶಪ್ರಿಯರಾಗುತ್ತಾರೆ.

ಅ.ನ.ಕೃ ಅವರ ಮಾತಿನ ಶೈಲಿ:- ಬಲ್ಲವನೇ ಬಲ್ಲ ಬೆಲ್ಲದ ರುಚಿಯನ್ನು ಅನ್ನುವ ಹಾಗೆ ಅವರ ಭಾಷಣವನ್ನು ಕೇಳಿದ ಜನರನ್ನು ಮಾತನಾಡಿಸಿ ನೋಡಿ ಇನ್ನೂ ಅವರ ಮಾತುಗಳನ್ನು ನೆನೆಯುತ್ತಾರೆ. ಎಂದರೆ ಎಷ್ಟರ ಮಟ್ಟಿಗೆ ಅವರ ಮಾತುಗಳು ನಮ್ಮ ಜನರ ಮೇಲೆ ಪ್ರಭಾವ ಬೀರಿದ್ದವು ಅಂತ ತಿಳಿಯುತ್ತದೆ.
ಒಮ್ಮೆ ಐ.ಟಿ.ಐ ಕಾರ್ಖಾನೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಅ.ನ.ಕೃ, ಅಂದು ಅಲ್ಲಿ ನೆರೆದಿದ್ದ ಕನ್ನಡೇತರರನ್ನು ಉದ್ದೇಶಿಸಿ ಮಾಡಿದ ಭಾಷಣ ನಿಜಕ್ಕೂ ಒಂದು ಮರೆಯಲಾಗದ ಘಟನೆ. ಅವರು ತಮ್ಮ ಭಾಷಣದಲ್ಲಿ ಕನ್ನಡ ಚಳುವಳಿ, ಕನ್ನಡ ಇತಿಹಾಸ ಮತ್ತು ಸಂಘಟನೆಯ ಅವಶ್ಯಕತೆಯನ್ನು ಮನಮುಟ್ಟುವ ಹಾಗೆ ವಿವರಿಸಿದರು.
ಮೂರನೆಯ ದಿನ ಆ ಭಾಷಣವನ್ನು ಕೇಳಿದ್ದ ಕನ್ನಡೇತರ ಕಾರ್ಮಿಕರು ತಾವು ಕನ್ನಡ ಚಳುವಳಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆವು, ಅ.ನ.ಕೃ ನಮ್ಮ ಕಣ್ಣು ತೆರೆಸಿದರು ಅಂತ ಹೇಳಿದನ್ನು ಐ.ಟಿ.ಐನ ಶ್ರೀ ಚಂದ್ರಶೇಖರ್ ಮರೆಯುವದಿಲ್ಲ.


ನಮಗೆ ಇಂದು ಸುಮ್ಮನೆ ತಣ್ಣನೇ ಕೋಣೆಯಲ್ಲಿ ಪ್ರಚಾರಕ್ಕೆ ಕೊಡುವ ಹೇಳಿಕೆಗಳ ಸಾಹಿತಿಗಳು ಬೇಕಿಲ್ಲ, ಇಲ್ಲಾ ಸುಮ್ಮನೆ ಒಬ್ಬಂಟಿಯಾಗಿ ಕತ್ತೆ/ಚಪ್ಪಲಿ ಮೆರವಣಿಗೆ ಮಾಡಿ ಕನ್ನಡ ಚಳುವಳಿಯ cheap ಮಾಡಿರುವ ನಾಯಕರುಗಳ ಮಧ್ಯೆ ಬೀದಿಗೆ ಇಳಿದು ಹೋರಾಟ ಮಾಡುವ, ಕನ್ನಡಿಗರನ್ನು ಸಂಘಟಿಸುವ, ನಿಸ್ವಾರ್ಥ ಅ.ನ.ಕೃ ಅಂತ ಕನ್ನಡ ಸೇನಾನಿ ಬೇಕಾಗಿದ್ದಾರೆ.

ಇಂತ ಮಹಾನ್ ಚೇತನ ಹುಟ್ಟಿದ ಮನೆ ಇಂದು ಬೂಟ್ ಮಾರುವ ಅಂಗಡಿಯಾಗಿದೆ, ಇದೇ ನಮ್ಮ ಮರ್ಯಾದೆ. ಈ ನಿಟ್ಟಿನಲ್ಲಿ
ನಮ್ಮ ಘನ ಸರ್ಕಾರ ಕ್ರಮ ಕೈಗೊಂಡು ಅದನ್ನು ಒಂದು ಸ್ಮಾರಕ ಮಾಡಿ ನಮ್ಮ ರಾಜ್ಯಕ್ಕೆ ಒಪ್ಪಿಸಿದರೆ ಅದೇ ಅವರಿಗೆ ತೋರಿಸುವ ದೊಡ್ಡ ವಂದನೆ.

ಕೊಸರು:- ಕನ್ನಡ ಚಳುವಳಿಯಿಂದ ದೂರ ಸರಿದಿದ್ದರೂ ರಾಜಾಜಿ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದಾಗ
ಡಿ.ವಿ.ಜಿ,ಜಿ.ಪಿ.ರಾಜರತ್ನಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಕೇವಲ ನಮ್ಮ ಅ.ನ.ಕೃ.