ಒಂದು ಚಿತ್ರ ಗೆಲ್ಲುವದಕ್ಕೆ ಇಲ್ಲ ಸೋಲುವದಕ್ಕೆ ನಿರ್ದೇಶಕನೇ ಕಾರಣ, ಅವನಿಲ್ಲದೇ ಎನೂ ಇಲ್ಲ. ಅತಿರಥ ಮಹಾರಥರನ್ನು ಹಾಕಿಕೊಂಡರೂ ಸರಿಯಾದ ವೇಗ ಮತ್ತು ಕಥೆ ಇರದಿದ್ದಲ್ಲಿ ಪ್ರೇಕ್ಷಕ ಮಹಾಪ್ರಭುವಿಗೆ ತಾತ್ಸರವೇ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತಿಚಿಗೆ ತೆರೆಕಂಡ ರಾವಣ್ ಚಿತ್ರ, ಚಿತ್ರದ ಎಲ್ಲ ವಿಭಾಗದಲ್ಲೂ ಭಾರತದ ದಿ ಬೆಸ್ಟ ಅಂತವರನ್ನೇ ಹಾಕಿಕೊಂಡ್ವಿ ಎಂದು ಮಾಡಿದ ಚಿತ್ರ ಸರಿಯಾದ ನಿರ್ದೇಶನ ಇಲ್ಲದಿದ್ದರಿಂದ ಮಕಾಡೆ ಮಲಗಿತು. ಇದೇ ಮಾತುಗಳನ್ನು ಬೇರೆ ರೀತಿಯಲ್ಲಿ ಹೇಳಿದ ಶಶಾಂಕ್ ಮಾತು ಅನೇಕರಿಗೆ ಅಪಥ್ಯ ಅನಿಸಿದರೂ ಆಶ್ಚರ್ಯವಿಲ್ಲ. ಮೊಗ್ಗಿನ ಮನಸ್ಸು ಎಂಬ ನಾಯಕಿ ಪ್ರಧಾನ ಚಿತ್ರವನ್ನು ತೆಗೆದು
ಅನೇಕ ಕನ್ನಡ ಚಿತ್ರ ನೋಡದ ಹುಡುಗಿಯರನ್ನು ತಮ್ಮ ಹಿಂದಿನ ಜೀವನಕ್ಕೆ ಕರೆದುಕೊಂಡು ಹೋಗಿ ನಾಸ್ಟಲಜಿಕ್ ಮಾಡಿದ
ಶಶಾಂಕ್ ಅವರಿಂದ ಅದಕ್ಕಿಂತ ಹೆಚ್ಚಾಗಿ ಈ ಚಿತ್ರದಲ್ಲಿ ಅಪೇಕ್ಷೆ ಇತ್ತು ಜೊತೆಗೆ ಚಂದ್ರು ತರ ಪ್ರೇಮ್ ಕಹಾನಿ ಮಾಡಿ ಬಿಡುತ್ತಾರ ಅನ್ನೋ ಭಯ ಕೂಡ. ಇವುಗಳ ನಡುವೆ ಚಿತ್ರಕ್ಕೆ ಹೋದಾಗ ಭರವಸೆ ಸುಳ್ಳಾಗದೇ ಇದ್ದಿದ್ದು ಸಂತೋಷದ ವಿಷಯ.
ಕನ್ನಡ ಚಿತ್ರಗಳನ್ನು ಗಾಂಧಿನಗರದಲ್ಲೇ ನೋಡಬೇಕು ಅನ್ನೊ ಹಿಂದಿನ ಕಾಲದ ರಿವಾಜಿಗೆ ಬಿದ್ದ ನಾನು ಸಾಗರ ಚಿತ್ರ ಮಂದಿರದಲ್ಲಿ
ನೋಡಿದೆ. ಹಾಗೆ ನೋಡುವದಕ್ಕೆ ಮುಖ್ಯ ಕಾರಣ ಚಿತ್ರವನ್ನು ನಾವು ಮಾತ್ರ ಅನುಭವಿಸದೇ ನೂರಾರು ಜನರ ಭಾವನೆಗಳ ಜೊತೆ ಅನುಭವಿಸಬಹುದು.
ಫುಲ್ ಪೀಲಿಂಗ್ ಮಗಾ ಅನ್ನೊ ಟ್ಯಾಗ್ ಲೈನೊಂದಿದೆ ಕೃಷ್ಣನ ಪ್ರೀತಿ ಕಥೆ ತೆರೆದುಕೊಳ್ಳೊತ್ತ್ರೆ. ಗಲ್ಲಿ ಕ್ರಿಕೆಟನೊಂದಿಗೆ ಆರಂಭವಾಗೋ ಕಥೆ ನಾಯಕ ಕೃಷ್ಣನ ಮತ್ತು ಅವನ ಗಾಡಿ ಹೊಂಬೆಗೌಡ ಜೊತೆ ಪರಿಚಯಗೊಳ್ಳೊತ್ತೆ. ಗುದ್ದಾಟಕ್ಕೆ, ಹೊಡೆದಾಟಕ್ಕೆ ಅವನ ಮತ್ತು ಅವನ ಪಟಾಲಂ ಸದಾ ರೆಡಿ. ಅವನ ಗೆಳೆಯರಲ್ಲಿ ಅದೇ ಪಂಡಿತ, ಹೀಗೂ ಉಂಟೆ ಮೈನಸ್ , ಡಡಿಯಾ ಚಿತ್ರ ವಿಚಿತ್ರ ಗೆಳೆಯರು ಸದಾ ನಾಯಕನ ಬೆನ್ನಿಗೆ ಅಂಟಿಕೊಂಡು ಗಾರ್ಮೆಟ್ಸಗೆ ಬಟ್ಟೆ ಸರಬಾರಾಜು ಮಾಡುತ್ತ, ಸಮಯ ಸಿಕ್ಕಾಗ ಗಲ್ಲಿ ಕ್ರಿಕೆಟ್ ಆಡುತ್ತ, ಧಮ್,ಎಣ್ಣೆ ಹಾಕುತ್ತ ಕಾಲ ಕಳೆಯುತ್ತ ಇರುತ್ತಾರೆ.
ನಾಯಕನದು ಚಿಕ್ಕ ಸಂಸಾರ, ಕಿರಾಣಿ ಅಂಗಡಿ ನಡೆಸುತ್ತ ಇರುವ ಅಪ್ಪ ಕೆಂಪೇಗೌಡ , ಗೃಹಿಣಿ ಅಮ್ಮ ಮತ್ತು ಮುದ್ದಿನ ತಂಗಿಯ ಜೊತೆ ಒಲವೇ ಜೀವನ ಲೆಕ್ಕಾಚಾರ ಹಾಕಿಕೊಂಡು, ತಿಂಗಳ ಕೊನೆಯಲ್ಲಿ ಖರ್ಚಿಗೆ ಎನಪ್ಪಾ ಮಾಡುವುದು ಅಂತ ಯೋಚನೆಯೊಂದು ಬಿಟ್ಟರೆ ಬೇರೆ
ಯಾವುದೇ ರೀತಿ ಕಮ್ಮಿ ಇರುವದಿಲ್ಲ. ಅಪ್ಪನಿಗೋ ಮಗನ ಮೇಲೆ ಅತಿಯಾದ ಮಮಕಾರ ಮತ್ತು ನಂಬಿಕೆ. ಪಿಯುಸಿ ಫೇಲ್ ಆಗಿದ್ದರೂ ಕೂಡ ಮುಂದೊಂದು ದಿನ ಉದ್ದಾರ ಆಗುತ್ತಾನೆ ಅನ್ನೊ ದೃಡ ವಿಶ್ವಾಸ. ಇವರ ಸಂಸಾರದಲ್ಲಿ ಇನ್ನೊಂದು ಪಾತ್ರ ಅಂದರೆ ಹೊಂಬೆಗೌಡ ಅನ್ನೊ ಎಮಹಾ ಬೈಕ್. ಇದು ವಂಶ ಪರ್ಯಂಪರವಾಗಿ ಮಗನಿಗೆ ಬಳುವಾಳಿಯಾಗಿ ಕೊಟ್ಟು ತನ್ನ ಅಪ್ಪನ ಹೆಸರನ್ನೇ ಇಟ್ಟಿರುತ್ತಾನೆ.
೨ ಸ್ಟ್ರೋಕ್ ಗಾಡಿಯಾದ ಇದು ಅವಗಾವಗ ಮುನಿಸು ಮಾಡಿಕೊಂಡು ನಿಲ್ಲುವುದು, ಚೆನ್ನಾಗಿ ಹೊಗೆ ಕಕ್ಕುವುದು ಮಾಡುವದರಿಂದ ಗೆಳೆಯರು ನಾಯಕನನ್ನು ಹೊಗೆ ಎಂದು ನಾಮಕರಣ ಮಾಡಿರುತ್ತಾರೆ. ಒಂದು ದಿನ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ನಾಯಕಿಯನ್ನು ಪರಿಚಯಿಸುವ ಕೆಲಸವನ್ನು ಹೊಂಬೆಗೌಡ ಮಾಡುತ್ತದೆ. ದಾರಿಯಲ್ಲಿ ಕೆಟ್ಟು ನಿಂತಾಗ ಅಲ್ಲೇ ನಾಯಕಿ ಆಡುತ್ತಿದ್ದ ಗಿಲ್ಲಿ ದಾಂಡು ಬಂದು ಇವನಿಗೆ ತಗಲುತ್ತದೆ. ಅಲ್ಲಿಂದ ಅವರ ಪರಿಚಯ, ಮಾತುಕತೆ , ಕಾಫಿಡೇಗೆ ಬಂದು ನಿಲ್ಲುತ್ತದೆ.
ಆದರೆ ಓದು ಮುಗಿಯುವ ತನಕ ಪ್ರೀತಿ ಪ್ರೇಮ ಎಲ್ಲಾ ಬೇಡ ನಾಯಕಿ ಕೃಷ್ನನ ಪ್ರೀತಿಗೆ ಬ್ರೇಕ್ ಹಾಕುತ್ತಾನೆ. ಆದರೂ ನಾಯಕನಿಗೆ ಸಂತೋಷ ಯಾಕೆ ಅಂದರೆ ಅವನ ಗಲ್ಲಿ ಕ್ರಿಕೇಟ್ ಎನಿಮಿ ಕೂಡ ನಾಯಕಿಯನ್ನು ಪಟಾಯಿಸಲು ಹೊರಟು ಇವರಿಬ್ಬರ ಮಧ್ಯೆ
ಪಂದ್ಯ ಎರ್ಪಾಡು ಆಗಿರುತ್ತದೆ.
ಗ್ಲಾಮರ್ ಗೊಂಬೆ ನಾಯಕಿಯಾಗಿ ರಾಧಿಕ ಗೀತಾ ಪಾತ್ರದಲ್ಲಿ ಹುದುಗಿಹೋಗಿದ್ದಾರೆ, ಗಾರ್ಮೆಂಟಿನಲ್ಲಿ ಕೆಲ್ಸ ಮಾಡುವ ಅಮ್ಮ
ಕುರುಪ್ಪು ಹಾಕುತ್ತ ರೋಲ್ ಕಾಲ್ ಮಾಡುವ ಅಣ್ಣ, ಅವನ ಪಾಪದ ದುಡ್ಡಿನಲ್ಲಿ ಒಳ್ಲೆ ಬಟ್ಟೆ ಹಾಕುತ್ತ ಮಜ ಮಾಡುವ ನಾಯಕಿ ಇರುವುದು ಮಾತ್ರ ಒಂದು ಕೊಂಪೆಯಲ್ಲಿ. ನೂರಾರು ಕನಸುಗಳು, ಆದರೆ ಅದನ್ನು ಹುದುಗಿಡಬೇಕಾದ ಬಡತನ ನಾಯಕಿಯನ್ನು
ಕೇವಲ ಓದಿಗೆ ಮೀಸಲಾಗಿ ಇಟ್ಟಿರುತ್ತದೆ.
ಸನ್ನೀವೇಶಗಳು ಅಂದುಕೊಂಡ ಹಾಗೆ ಇರದೆ ನಾಯಕಿಯ ಅಮ್ಮನಿಗೆ ಉಬ್ಬಸ ಬಂದು ಅವಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ, ಆಗ ನೆರವಿಗೆ ಬಂದ ನಾಯಕ ಬೇಡವೆಂದರೂ ಅವಳ ಮನಸ್ಸನ್ನು ಗೆಲ್ಲುತ್ತಾನೆ. ಅದರೆ ಅವನ ಕಂಜೂಸ್ ಬುದ್ದಿ, ಅವನ ಕಷ್ತವನ್ನು ಅರಿತ ನಾಯಕಿ ಅವನ ಸಂಗಡ ಇರುವ ತನಕ ಅವನೇ ಬೇಕೆಂದು ಬಯಸುತ್ತ, ಅವನು ಮರೆಯಾದ ಮೇಲೆ ವಾಸ್ಲವಕ್ಕೆ ಬಂದು ಇದೇ ಜೀವನವನ್ನು ಆಯ್ಕೆ ಮಾಡಿಕೊಳ್ಲಬೇಕಾ. ಪ್ರೀತಿ ಪ್ರೇಮ ಕೇವಲ ಮನಸ್ಸಿಗೆ ಚೆಂದ, ವಾಸ್ಲವಕ್ಕೆ ಬೇಕಾಗಿರುವುದೇ ಬೇರೆ ಎಂಬ
ತಾತ್ವಿಕ ನಿರ್ಣಯಕ್ಕೆ ಬರುತ್ತಾಳೆ ಮತ್ತು ಅದೇ ಅವಳ ಅಚಲ ನಿರ್ಧಾರಕ್ಕೆ ಕಾರಣ ಆಗುತ್ತದೆ.
ಆ ನಿರ್ದಾರವೇ ನಾಯಕನನ್ನು ಬಿಟ್ಟು ನರೇಂದ್ರನ ಜೊತೆ ಹೋಗುವುದು, ಧರ್ಮಸ್ಥಳಕ್ಕೆ ಹೋಗುವಾಗ ದುರ್ವಿಧಿಯಿಂದ ಅಪಘಾತವಾಗಿ ನರೇಂದ್ರ ಸಾವನ್ನು ಅಪ್ಪಿ, ನಾಯಕಿ ಮತ್ತೆ ಮನೆಗೆ ಸೇರುತ್ತಾಳೆ. ಆದರೆ ಸಮಾಜ ಅವಳನ್ನು ನೋಡುವ ರೀತಿ
ಆದ ನೋವು ಮತ್ತು ಕೃಷ್ಣನಿಗೆ ಮೋಸ ಮಾಡಿದೆ ಅನ್ನೊ ಗಿಲ್ಟ ಅವಳನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತ ಇರುತ್ತದೆ. ಆ ಹತಾಷೆ, ನೋವು, ಯಾರಿಗೂ ಹೇಳಿಕೊಳ್ಳಲಾಗದ ಬೇಸರ ಅವಳನ್ನು ಪ್ರಪಂಚದ ದೃಷ್ಟಿಯಲ್ಲಿ ಮಾನಸಿಕ ರೋಗಿಯನ್ನಾಗಿ ಮಾಡಿರುತ್ತದೆ.
ಆದರೆ ಅವಳನ್ನೇ ಬಯಸುವ ಕೃಷ್ಣ ಮತ್ತೆ ಅವಳನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸುತ್ತಾನೆ. ಆದರೆ ಅವನು ಮಾಡುವ ಪ್ರತಿಯೊಂದು ಪ್ರೀತಿಯ ಕೆಲಸ ನಾಯಕಿಗೆ ಇನ್ನಷ್ಟೂ ಹಿಂಸೆ ಉಂಟುಮಾಡುತ್ತ ಇರುತ್ತದೆ, ಇದನ್ನು ಯಾರೂ ಅರ್ಥ ಮಾಡಿಕೊಳ್ಳುವದಿಲ್ಲ.
ಮೊದಲಾರ್ಧ ನಿಧಾನವಾಗಿ ಸಾಗಿ, ಎನಪ್ಪಾ ಎಲ್ಲ ಕಡೆ ನಾಯಕಿ ಪ್ರಧಾನ ಚಿತ್ರ ಎಂದುಕೊಂಡು ಬರೆದಿದ್ದಾರೆ ಆದ್ರೆ ಎನು ಇಲ್ಲವಲ್ಲ
ಅಂದುಕೊಂಡಗಾ ಮಿಂಚಿನ ರೀತಿ ಎರಡನೇ ಭಾಗ ಸಾಗುತ್ತದೆ.
ನಾಯಕಿಯ ಹತಾಷೆ ಕೋಪವಾಗಿ ಬದಲಾದಾಗ ಹೆಣ್ಣು ಆಡುವ ರೀತಿ, ಮಾತು , ಹತಾಷೆ ಎಲ್ಲವನ್ನು ಬಹಳ ಚೆನ್ನಾಗಿ ಅನುಭವಿಸಿ
ರಾಧಿಕ ಪಂಡಿತ್ ಮಾಡಿದ್ದಾರೆ. ನಿಜಕ್ಕೂ ಅದನ್ನು ಶಶಾಂಕ್ ತೆಗೆಸಿದ್ದಾರೆ.
ನಾಯಕಿಯನ್ನು ಬದಲಾಯಿಸಿ ಮತ್ತೆ ಮದುವೆಯಾಗುತ್ತಾನ ಇಲ್ಲ ನಾಯಕಿ ಇವನ ಪ್ರೀತಿಯಿಂದ ಮತ್ತೆ ದೂರ ಆಗುತ್ತಾಳ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ.
+ve ಅಂಶಗಳು
- ಉತ್ತಮ ನಿರ್ಧೇಶನ
- ಸುಮಧುರ ಸಂಗೀತ ಮತ್ತು ಸಾಹಿತ್ಯ
- ಕೈಲಾಶ್ ಕೈರ್ ದ್ವನಿಯ ಹಾಡು.
- ರಾಧಿಕ ಅತ್ಯುತ್ತಮ ಅಭಿನಯ ಮತ್ತು ಮುದ್ದು ಮುಖ
- ಬೈಕ್ ಪಾತ್ರ
- ಪೋಷಕ ಪಾತ್ರಗಳು.
- ಲಕ್ಷೀ ಹೆಗಡೆಯ ಪಾತ್ರ
-
ಇದರ ಜೊತೆಗೆ ನನಗೆ ಸರಿ ಕಾಣದೇ ಇದ್ದಿದ್ದು..
- ನಾಯಕಿ ಕಾರಿನ ಅಪಘಾತದಲ್ಲಿ ನೋವು ಅನುಭವಿಸಿರುತ್ತಾಳೆ, ಅದ್ದರಿಂದ ಮತ್ತೆ ಕಾರಿನಲ್ಲಿ ಕೂರುವ ಬಗ್ಗೆ ಅವಳಿಗೂ ಮತ್ತು ಅವಳ ಮನೆಯವರಿಗೂ ಒಂದು ರೀತಿಯ ಭಯ, ಹಿಂಜರಿಕೆ ಇರುತ್ತದೆ, ಆದರೆ ಅದು ಚಿತ್ರದಲ್ಲಿ ಎಲ್ಲೂ ವ್ಯಕ್ತವಾಗಿಲ್ಲ. once bitten twice shy ಅನ್ನುವುದು ಸಾಮಾನ್ಯ ಅಂಶ, ಆದರೆ ಚಿತ್ರದಲ್ಲಿ ಆ ಸಂವೇದನೆ ಸ್ವಲ್ಪವೂ ವ್ಯಕ್ತವಾಗಿಲ್ಲ.
- ನಾಯಕಿ ಬಡತನ ಅವಳ ಡಿಸೈನರ್ ವೇರ್ ಬಟ್ಟೆಗಳಿಗೆ ಮತ್ತು ಮೇಕಪಗೆ ಅಡ್ಡಿ ಬರದೇ ಇರುವುದು.
ಇದರಿಂದ ಮೊದಲರ್ದದಲ್ಲಿ ನಾಯಕಿಯು ಕೊಂಪೆಯಲ್ಲಿ ವಾಸ ಮಾಡುವ ಹುಡುಗಿಯರ ಪಾತ್ರಕ್ಕೆ ಹೊಲದೇ ಮೊಗ್ಗಿನ ಮನಸ್ಸು ಹುಡುಗಿಯ ಪಾತ್ರಕ್ಕೆ ಹೋಲುತ್ತದೆ.
[ ಅದೇ ಎರಡನೇ ಭಾಗ ಇದಕ್ಕೆ ಅಪವಾದ. ಮನೋರೋಗಿ ನಾಯಕಿಯನ್ನು ಪರಿಚಯಿಸುವಲ್ಲಿ ಶಶಾಂಕ್ ಗೆದ್ದಿದ್ದಾರೆ.
ಯಾವುದೋ ಬಟ್ತೆ, ತಲೆ ಕೆದರಿದ ಕೂದಲು, ಬಟ್ಟೆ ಮೇಲೆ ಇರದ ವ್ಯವಧಾನ ಇದು ಮೊದಲಿನ ಕನ್ನಡಿ ಮುಂದೆ ನಿಂತು ಪರೀಕ್ಷೇಗೆ ತಡವಾಗಿ ಹೋದ ನಾಯಕಿಯ ತದ್ವಿರುದ್ದ ರೂಪ ಕೊಡುತ್ತದೆ. ಅವಳ ನೋವು ಮತ್ತು ಜೀವನದ ಮೇಲೆ ಬೇಸರ ಯಾವ ರೀತಿಯಲ್ಲಿ ಕಾಡಿದೆ ಎಂದು ಚೆನ್ನಾಗಿ ತೋರಿಸಿದ್ದಾರೆ. ]
- ಶರಣ್ ಕಾಮಿಡಿಯನ್ನು ಸರಿಯಾಗಿ ಬಳಸಿಕೊಳ್ಳದೇ, ಅವನ ಮೂಲಕ ಹೆಣ್ಣು ಪಟಾಯಿಸುವುದೇ ಬೆಡ್ಡಿಗೆ ಅನ್ನುವುದನ್ನು ತಮಾಷೆಯಾಗಿ ತೋರಿಸಿರುವ ರೀತಿ.
- ಅಜಯ್ ರಾವ್ ಎಲ್ಲಾ ಸನ್ನೀವೇಶದಲ್ಲೂ ಒಂದೇ ರೀತಿ ಅಭಿನಯ. ತಾಜಮಹಲ್ ಗುಂಗಿನಿಂದ ಆಚೆ ಬಂದರೆ ಅವರು ಒಳ್ಳೆಯದು.
- ಎಲ್ಲ ಪಾತ್ರಗಳಲ್ಲೂ ಹಣದ ಮುಂಗಟ್ಟು ಇರುತ್ತದೆ, ಆದರೆ ಅವರು ಹಾಕುವ ಬಟ್ಟೆಗಳು ಮಾತ್ರ ಬ್ರಾಂಡೆಡ್.
- ಅನಗತ್ಯ ಮಳೆ
- ೭೫% ನಿಜವಾದ ಕಥೆ ಎಂಬ ಶೀರ್ಶಿಕೆ ಇದ್ದರೂ, ಹಲವು ಕಡೆ ಸಿನೀಮಿಯ ಅನಿಸುತ್ತ ಇತ್ತು.
- ಯಾಕೋ ಉಮಾಶ್ರೀ ಬಡ ತಾಯಿ ಪಾತ್ರಕ್ಕೆ ಬ್ರಾಂಡ್ ಅಗುತ್ತ ಇದ್ದಾರೆ ಅನಿಸುತ್ತದೆ. ಹೇಗೆ ಬಿರಾದರ್ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆದ ಹಾಗೆ.
ಒಟ್ಟಿನಲ್ಲಿ ಸಂಸಾರ ಸಮೇತ ನೋಡಬಹುದಾದ ಉತ್ತಮ ಚಿತ್ರ. Dont miss it.
ನನ್ನ ರೇಟಿಂಗ್ ೭/೧೦.
ಇದನ್ನು ಬರೆಯಲು ಸಹಾಯ ಮಾಡಿದ Alvear Pedro Ximénez (1927 Montilia-Moriles) ಅವರಿಗೆ ತುಂಬು ಕೃತಜ್ಞತೆಗಳು.