ಯಾಕೊ ಕಾಣೆ ಕನ್ನಡ ಪತ್ರಿಕೆಗಳಲ್ಲಿ ಮಾಧ್ಯಮದಲ್ಲಿ ರಾಜಕೀಯ,ಸಿನಿಮಾ ವಿಶಯಗಳು ಬಂದ ಹಾಗೆ ಅರ್ಥಶಾಸ್ತ್ರ, ಕ್ರೀಡೆ ಸುದ್ದಿಗಳು ಬರುವದಿಲ್ಲ. ಸುದ್ದಿಗಳೆಲ್ಲಾ ಸಪ್ಪೆ ಅನಿಸುತ್ತದೆ, ಅದರಲ್ಲೂ ಹೆಚ್ಚಾಗಿ ಆಂಗ್ಲದ ಅನುವಾದ ಅನಿಸುತ್ತದೆ. ಸ್ವಲ್ಪವೂ ಅನುಭವಿಸಿ ಬರೆದ ಹಾಗೆ ಕಾಣುವದಿಲ್ಲ.
ಪುಟ್ಬಾಲ್ ಹಬ್ಬ ನಡಿತಾ ಇರೊದೆನೊ ಸರಿ, ಆದರೆ ಅದರ ಸುದ್ದಿಗಳನ್ನು ಕನ್ನಡ ಪತ್ರಿಕೆಗಳಲ್ಲಿ ಓದುವಾಗ ಎಲ್ಲಾ ಮರೆತು ಓದಬೇಕು.
ಬರೀ ಬೇಕು ಅಂತ ಬರೆಯುತ್ತಾರೆ ಅನಿಸುತ್ತದೆ, ಒಂದೇ ಒಂದು ಲೇಖನದಲ್ಲೂ ಆಟ ನೋಡಿ ಬರೆದ ಹಾಗೆ ಕಾಣುವದಿಲ್ಲ, ಎಲ್ಲಾ ಆಂಗ್ಲದ
ಕನ್ನಡ ಅನುವಾದ ಅನಿಸುತ್ತದೆ.ಅನುವಾದ ಮಾಡುವರಿಗೆ ಹೆಸರುಗಳು ಬಹಳ ತಿಕ್ಕಾಟ ಕೊಡುತ್ತವೆ, ಅನುವಾದ ಮಾಡುವಾಗ ಕೂಡ ಅನೇಕ ತಪ್ಪುಗಳು ಕಾಣುತ್ತದೆ.
ಇಂದಿನ ವಿಜಯಕರ್ನಾಟಕ ನೋಡಿ..
ಪುಟ ೧೪ ರಲ್ಲಿ ಗುಂಪು ಎ ನಲ್ಲಿ ಮೆಕ್ಸಿಕೋ ಅಗ್ರಸ್ಥಾನದಲ್ಲಿ ಇದೆ, ಆದರೆ ಅಲ್ಲಿ ಉರುಗ್ವೆ ಇರಬೇಕಿತ್ತು.
ಅದೇ ೧೬ ಪುಟಕ್ಕೆ ಬಂದರೆ ಪೌಲೊ ರೈಸಿಯ ಇಟಲಿ ನಿರ್ಣಾಯಕ ಪಂದ್ಯ ಅನ್ನುವ ಲೇಖನದ ತುಂಬಾ ಸ್ಲೊವೇನಿಯಾ ಅಂತ ಬರೆದಿದ್ದಾರೆ, ಅದು ಸ್ಲೊವಾಕಿಯಾ. ಇದನ್ನು ಓದಿದರೆ ಅನಿಸುವುದು, ಆ ಲೇಖನವನ್ನು ಅನುವಾದಿಸಿದವರಿಗೆ ಸ್ವಲ್ಪವೂ ಪುಟ್ಬಾಲ್ ಗಂಧ-ಗಾಳಿ ಇಲ್ಲ ಅಂತ. ಯಾಕೆಂದರೆ ನಿನ್ನೆ ಪಂದ್ಯ ನೋಡಿದ್ದರೆ ಖಂಡಿತಾ ಈ ಪ್ರಮಾದ ಆಗುತ್ತ ಇರಲಿಲ್ಲ.
ಅದಕ್ಕೂ ಮಜಾ ಅಂದರೆ ಪೌಲೊ ರೋಸಿಯನ್ನು ಬ್ರೆಜಿಲ್ ಆಟಾಗಾರ ಎಂದು ಹೆಸರಿಸಿದ್ದಾರೆ, ನನಗೆ ಗೊತ್ತಿರುವ ಪೌಲೊ ರೋಸಿ ೧೯೮೨ ಇಟಲಿಯ ನಾಯಕ ಆಗಿದ್ದ, ಆ ಪಂದ್ಯಾವಳಿಯಲ್ಲಿ ೬ ಗೋಲು ಬಾರಿಸಿ ಗೋಲ್ಡನ್ ಬೂಟ್ ಪಡೆದ.
ಇನ್ನು ಹೊಸದಿಗಂತಕ್ಕೂ ತಪ್ಪುಗಳಿಗೂ ಹಳೇ ನಂಟಿದೆ. ಅದರ ಪುಟ ೯ರಲ್ಲಿ ಇಂಗ್ಲೆಡ್ ೨ - ಸ್ಲೊವೇನಿಯಾ ೦ ಪೋಟೊ ಅಂತ ಹಾಕಿ ಅದೇ ವರದಿಯಲ್ಲಿ "ಇಂಗ್ಲೆಡ್ ತಂಡಕ್ಕೆ ಎರಡನೇ ಗೋಲು ಬಾರಿಸಲು ಅವಕಾಶ ಲಭ್ಯವಾಗಲಿಲ್ಲ" ಅಂತ ಕೊಸರಿದೆ.
ಹಾಗಿದ್ದರೆ ಇನ್ನೊಂದು ಗೋಲು ಬಾರಿಸಿದವರು ಯಾರು ?
ಇಂತಹ ವಿಸ್ಮಯಗಳು ಕಣ್ ಮುಂದೆ ಬಂದಾಗ ನಂಬದೇ ಇರುವದಕ್ಕೆ ಸಾಧ್ಯವೇ ಇಲ್ಲ, ಆದರೆ ಬುದ್ದಿ ಇದನ್ನು ಒಪ್ಪುವದಿಲ್ಲ. ಇಂತಹ ಮಾಧ್ಯಮ ವಿಸ್ಮಯಗಳ ನಡುವೆ ನಮ್ಮಲ್ಲಿ ಮೂಡುವ ಒಂದೆ ಒಂದು ಪ್ರಶ್ನೆ ..ಹೀಗೂ ಉಂಟೆ.