Sunday, March 16, 2008

೧೯೬೬ರ ಕುವೆಂಪು ಭಾಷಣ ..


ಆವತ್ತು ಫೆಬ್ರವರಿ ೨೭ನೇ ತಾರೀಖು, ೧೯೬೬ ಇಸವಿ. ಅಂದರೆ ೩೨ ವರುಷಗಳ ಹಿಂದಿನ ಮಾತು. ಆವತ್ತಿನ ವಿಶೇಷವೆಂದರೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಪದವಿಯನಿತ್ತು ಸನ್ಮಾನಿಸಿದರು. ಆ ಸಂಧರ್ಬದಲ್ಲಿ ಕುವೆಂಪು ಮಾತಾಡಿದ ಭಾಷಣ ನಿಜಕ್ಕೂ ಅದ್ಭುತ, ಇಂದಿಗೂ ಪ್ರಸ್ತುತ ಅನ್ನುವ
ಹಾಗೆ ಆಗಿನ ಕಾಲದಲ್ಲಿ ಕನ್ನಡ ಕಣ್ಣಿನಲ್ಲಿ ಕನಸು ಕಂಡ ಮಹಾನ್ ಜೀವಿ.

ಅವರ ಭಾಷಣದ ಕೆಲ ತುಣುಕುಗಳನ್ನು ನಿಮ್ಮ ಮುಂದೆ ಇಡುತ್ತ ಇದ್ದೇನೆ.

" ಭಾಷಾನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದಾಗಲೇ ನಮ್ಮ ಪ್ರಜಾಸತ್ತಾತ್ಮಕವಾದ ರಾಜ್ಯಾಂಗ ಈ ಪ್ರಾದೇಶಿಕ ವೈಶಿಷ್ಟವನ್ನು ಕಾನೂನುಭದ್ಧವಾಗಿಯೆ ಗುರುತಿಸಿದಂತಿದೆ.
ಆದ್ದರಿಂದ ಆಯಾ ಪ್ರದೇಶದ ಭಾಷಾ ಪ್ರದೇಶದ ರಾಜ್ಯ್ದದಲ್ಲಿ ಇರುವ ವಿಶ್ವವಿಧ್ಯಾಲಯಗಳು ಆಯಾ ಪ್ರದೇಶದ ಭಾಷಾ ಸಾಹಿತ್ಯ ಕಲಾ ಸಂಸ್ಕೃತಿಗಳಿಗೆ ವಿಶೇಷ ಪ್ರೋತ್ಸಾಹವೀಯುವುದು ಅತ್ಯಗತ್ಯ.
ಏಕೆಂದರೆ ಆಯಾ ಪ್ರಾದೇಶಿಕ ವಿಶ್ವವಿದ್ಯಾಲಯಗಳು ಆ ಕೆಲ್ಸ ಮಾಡದೆ ಇದ್ದರೆ ಪ್ರಪಂಚದ ಇನ್ಯಾವ ವಿದ್ಯಾಸಂಸ್ಥೆಗಳು ಅದನ್ನು ಮಾಡುವದಿಲ್ಲ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳು ಕನ್ನಡ ನುಡಿಯ,ಸಾಹಿತ್ಯದ,ಇತಿಹಾಸದ ,ಕಲೆಯ ಮತ್ತು ಸಂಸ್ಕೃತಿಯ ರಕ್ಷಣೆ ಪೋಷಣೆಗಳನ್ನು ನಿರ್ಲಕ್ಷಿಸಿದರೆ ಅದು ಕಡಲ ಪಾಲಾದಂತೆಯೆ. ಇಂಗ್ಲೀಷ್ ಭಾಷೆ ತನ್ನ ಅಭಿವೃದ್ದಿಗೆ ಕರ್ನಾಟಕ ಅಥಾವಾ ಮೈಸೂರು ವಿಶ್ವವಿದ್ಯಾಲಯಗಳ ಕೈ ಹಾರೈಸುವದಿಲ್ಲ. ಜಗತ್ತಿನ ಇತರ
ಸಾವಿರಾರು ಸಂಸ್ಥೆಗಳಲ್ಲಿ ಅದು ಸುಪುಷ್ಟವಾಗಿ ಮುಂದುವರೆಯುತ್ತ ಇರುತ್ತದೆ; ಭೌತ ರಸಾಯನಾದಿ ವಿಜ್ಞಾನ ವಿಷಯಗಳ ಸಂಶೋಧನೆ ಇಲ್ಲಿ ನಡೆಯದಿದ್ದರೆ, ಜಗತ್ತಿನ ಇತರ
ಲಕ್ಷಾಂತರ ಸಂಸ್ಥೆಗಳಲ್ಲಿ ಅದು ನಡೆಯುತ್ತಲ್ಲೆ ಇರುತ್ತದೆ. ಹಿಂದಿಗೆ ಅದರ ಏಳಿಗೆಗೆ ನಮ್ಮ ಪ್ರೊತ್ಸಾಹ ಬೇಕಾಗಿಲ್ಲ. ಭಾರತದ ಸಾವಿರಾರು ಸಂಸ್ಥೆಗಳಲ್ಲಿ ಅದು ರಕ್ಷಿತ ಪೋಷಿತವಾಗಿದೆ. ಕಡೆಗೆ ಉರ್ದುವಿನಂತಹ ಭಾಷೆಗೆ ಇರುವ ರಕ್ಷೆ ನಮ್ಮ ಕನ್ನಡಕ್ಕಾಗಲಿ ,ಮರಾಠಿ, ತಮಿಳು, ಮಲೆಯಾಳಂಗಳಾಗಲಿ ಇಲ್ಲ. ಪಾಕಿಸ್ಥಾನದ ಮಾತಿರಲಿ, ಭಾರತದಲ್ಲಿಯೇ ಇರುವ ೪೫ ವಿ.ವಿಗಳಲ್ಲಿ ಒಂದೊಂದು ವಿ.ವಿದಲ್ಲಿಯೂ ಅದಕ್ಕೆ ಆಯಾ ಪ್ರಾದೇಶಿಕ ಭಾಷೆಗಳಿಗಿರುವಂತೆಯೆ ಸಮಾನಸ್ಥಾನ ಒದಗಿ, ಒಟ್ಟು ಮೊತ್ತದಲ್ಲಿ ನೋಡಿದರೆ ಅದಕ್ಕೆ ಪ್ರಾದೇಶಿಕ ಭಾಷೆಗಳಿಗೆ ಲಭಿಸುವ ಪ್ರೋತ್ಸಾಹಕ್ಕೆ ೪೫% ಹೆಚ್ಚು ಪ್ರೊತ್ಸಾಹ ಒದಗುತ್ತದೆ. ಕನ್ನಡಕ್ಕೆ ಕನ್ನಡ ನಾಡಿನಲ್ಲಿ ಹೆಚ್ಚು ಎಂದರೆ ೩-೪ ವಿ.ವಿ ಮಟ್ಟದ ಪ್ರಾಧ್ಯಪಕ ಸ್ಥಾನಗಳಿದ್ದರೆ, ಉರ್ದು,ಹಿಂದಿಯಂತಹ ಭಾಷೆಗಳಿಗೆ ಭಾರತದಲ್ಲಿಯೇ ೫೦ ಪ್ರಾಧ್ಯಪಕ ಸ್ಥಾನಗಳು ಮಿಸಲಾಗಿರುತ್ತದೆ, ಇನ್ನು ಇಂಗ್ಲೀಷ್ ಭಾಷೆಗಂತೂ ಕೇಳುವುದೇ ಬೇಡ. ಪ್ರಪಂಚದಲ್ಲಿ ಅದಕ್ಕೆ ಲಕ್ಷಾಂತರ ಪ್ರಾಧ್ಯಪಕರಿದ್ದಾರೆ. ಇರಲಿ ನಮಗೇನು
ಹೊಟ್ಟೆಕಿಚ್ಚು ಇಲ್ಲಾ. ಒಂದು ನಿದರ್ಶನಕ್ಕೆ ಅಂಕೆ ಅಂಶಗಳ ರೂಪದಲ್ಲಿ ನಾನು ಅದನ್ನು ಉಲ್ಲೇಖಿಸಿದ್ದು, ಅದನ್ನು ಯಾರೂ ಅಸೂಯೆ ಎಂದು ಭಾವಿಸಬಾರದು. ನಮ್ಮ ಪ್ರಾದೇಶಿಕ ವಿ.ವಿ ತಮ್ಮ ಪ್ರಾದೇಶಿಕ ಭಾಷೆ ಸಾಹಿತ್ಯ, ಇತಿಹಾಸವನ್ನು ನಿರ್ಲಕ್ಷಿಸಿದರೆ ಅವುಗಳಿಗೆ ಉಳಿಗಾಲವಿಲ್ಲ. ಬೇರೆ ಯಾರು ಮೂಸಿ ನೋಡುವದಿಲ್ಲ. ಅವು ದುರ್ಗತಿಗೆ ಇಳಿದು, ಅವಮಾನಿತವಾಗಿ ಇತರ ಸಶಕ್ತ ಮತ್ತು ಪ್ರಗತಿಪರ ಭಾಷೆಗಳ ದಾಳಿಗೆ ಸಿಕ್ಕಿ, ಹೇಳ ಹೆಸರಿಲ್ಲದಂತೆ ವಿಲುಪ್ತವಾಗುತ್ತವೆ ಎಂಬ ಕಠೋರ ಸತ್ಯವನ್ನು ತಮ್ಮ ಗಮನಕ್ಕೆ ತರುವ ಆಶಯದಿಂದ ಈ ಕೆಲ್ಸವನ್ನು ಮಾಡಿದ್ದೆನೆ. "ಏಳಿ..ಎಚ್ಚರಗೊಳ್ಳಿ, ಇಲ್ಲದಿದ್ದರೆ ಅನಂತ ಕಾಲಾವೂ ಪತಿತರಾಗಿ ಸರ್ವನಾಶವಾಗುತ್ತವೆ,

ಈ ಪ್ರಾದೇಶಿಕತೆಯ ವೈಶಿಷ್ಟದ ರಕ್ಷಣೆಯಿಂದ ಅಖಿಲ ಭಾರತದ ಸಮಗ್ರತೆಗೆ ಐಕ್ಯತೆಗೆ ಹಾನಿ ಉಂಟಾಗುತ್ತದೆ ಎಂದು ಗೊಂದಲವೆಬ್ಬಿಸುವರ ಹೃದಯದಲ್ಲಿರುವ ಗುಟ್ಟು ಏನು ಎಂಬುದನ್ನು ನಾವು ಹೊಕ್ಕು ನೋಡಿದರೆ ಅದರ ಹೊಳ್ಳು
ಹೊರಬರುತ್ತದೆ., ಅವರ ದುರುದ್ದೇಶ ಬಯಲಾಗುತ್ತದೆ. ಹಾಗೆ ಕೂಗಾಡುವವರ ಒಲೆವೆಲ್ಲಾ ಸಾಮನ್ಯವಾಗಿ ವಿದೇಶಿ ಭಾಷೆಯೊಂದರ ಪರವಾಗಿರುತ್ತದೆ. ಅವರೂ ಆ ವರ್ಗಕ್ಕೆ ಸೇರಿದವರು ಪರಕೀಯರ ಆಳಸರ ಕಾಲದಲ್ಲಿ ಆ ಭಾಷೆಯನ್ನು ಕಲಿತು ಅದರಿಂದ ಸ್ಥಾನಮಾನಗಳನ್ನು ಪಡೆದು, ಕೃತ್ಯಕೃತ್ಯಗಾಗಿದ್ದಾರೆ. ಆ ಸ್ಥಾನ ಮಾನ ಲಾಭಗಳನ್ನೂ ಇನ್ನೂ ಮುಂದೆಯೂ ಉಳಸಿಕೊಂಡು ಹೋಗಲು, ಈಗಾಗಲೇ ಕಷ್ತಪಟ್ಟಿ ಕಲಿತಿರುವ ಆ ಭಾಷೆಯನ್ನೆ ಮುಂದೆಯೂ ಮೊದಲಿನಂತೆಯೆ
ಉಪಯೋಗಿಸುವಂತೆ ಮಾಡಿ ಇತರಿರಿಗಿಂತ ಮುನ್ನವೇ ಸುಭದ್ರವಾಗಿ ನೆಲಸಿ, ಅದರ ಲಾಭ ಪ್ರಯೋಜನ ಪಡೆಯಬೇಕೆಂದು ಅವರ ಅಂತರರಾಷ್ಟ್ರೀಯವಾದದ ಹಿಂದಿರುವ ಹೃದಯ ರಹಸ್ಯವಾಗಿರುತ್ತದೆ.
ಸಂಖ್ಯೆಯಲ್ಲಿ ೧೦೦ಕ್ಕೆ ೧ ರಷ್ಟು ಇಲ್ಲದ ಈ ವರ್ಗದ ಜನರಿಗೆ ಉಳಿದ ೯೯ ರಷ್ಟು ಸಾಮಾನ್ಯ ಜನರ ಕ್ಷೇಮ ಚಿಂತನೆ ಬೇಡವಾಗಿದೆ.

ಆದರೆ ನಿಜವಾಗಿ ಆಲೋಚಿಸಿ ನೋಡಿದರೆ , ಈ ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ಘಾಸಿಯಾಗುವದಿಲ್ಲ. ಏಕೆಂದರೆ ಭಾಷೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆ ಪ್ರದೇಶದ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೆ ೯೫% ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲ ಸಂಸ್ಕೃತಿಯ ವಜ್ರಬೆಸುಗೆಗೆ ನಮ್ಮ ಒಗ್ಗಟ್ಟನ್ನು ಎಂದೆದಿಗೂ ಒಡೆಯಲು ಬಿಡುವದಿಲ್ಲ. ನಮಗೀಗ ಒದಗಿರುವ ರಾಜಕೀಯ ಅಖಂಡತೆಯೂ ಐಕ್ಯತೆಗೂ ಮೂಲಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೆ ಇದೆ ಎಂಬುದನ್ನು ನಮ್ಮ ಇತಿಹಾಸ ಎಂತಹ ಮಂದಗತಿಗೂ ಸುಗೋಚರವಾಗಿ ಪ್ರದರ್ಶಿಸುತ್ತದೆ."