Monday, February 26, 2007

ಗರತಿಯ ಹಾಡುಗಳು

ಹಿಂದೆ ನಮ್ಮ ಜನ ತಮ್ಮ ಮನರಂಜನೆಗೆ ಅನೇಕ ವಿಧಾನವನ್ನು ಕಂಡು ಕೊಂಡಿದ್ದರು, ಸುಖ-ದು:ಖದ ಸಂದರ್ಭದಲ್ಲಿ ಜನರು ಸೇರಿ
ತಮ್ಮ ರಸಭಾವವನ್ನು ಹಾಡಿನ ಮೂಲಕ ಹಾಡಿ ಕುಣಿಯುತ್ತಿದ್ದರು. ಇದನ್ನು ಹಿಂದೆ ಆಟ-ಪಾಟ ಅನ್ನುತ್ತಿದ್ದರು,ಇದರಲ್ಲಿ ಕುಯಿಲು,ಕುಡಿತ
ಕೋಲಾಟ,ಬೇಟೆ,ಮಧುವೆ,ಸಾವು,ವೀರರ ಬಗ್ಗೆ,ಯುದ್ದ,ದೇವರು,ದೈವಭಕ್ತಿ ಹೀಗೆ ಅನೇಕ ವಿಷಯಗಳ ಬಗ್ಗೆ ಹಾಡು ಕಟ್ಟುತ್ತಿದ್ದರು. ಹೆಂಗಸರು
ಮತ್ತು ಕೆಲಸಗಾರರು ಕೆಲಸದ ತಮ್ಮ ಬಳಲಿಕೆಯನ್ನು ದೂರ ಮಾಡಲು ಇ ಹಾಡುಗಳನ್ನು ಹಾಡುತ್ತಿದ್ದರು.
ಕುಟ್ಟುವಾಗ,ಬೀಸುವಾಗ,ಮಗುವನ್ನು ಆಡಿಸುವಾಗ ಮೈ ಮರೆತು ಹಾಡುಗಳನ್ನು ಹಾಡಿ ಮುಂದಿನ ಪೀಳಿಗೆಗೆ ಅದನ್ನು
ಉಳಿಸುತ್ತಿದ್ದರು. ಇವುಗಳನ್ನೇ ಗರತಿಯ ಹಾಡು ಎಂದು ಕರೆಯುತ್ತಾರೆ.
ಈ ಗರತಿಯ ಹಾಡುಗಳು ತ್ರಿಪದಿ ಛಂದದಲ್ಲಿ ಇರುತ್ತದೆ,ಇವುಗಳು ಬಹಳ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ
ಇರುವುದೇ ಜನರು ಇದಕ್ಕೆ ಮರಳಾಗಿರುವ ಸಾಕ್ಷಿಗೆ ಕಾರಣ.ಇದರಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ
ಇದರಲ್ಲಿ ಹೆಚ್ಚು ಸಂಸ್ಕೃತ ಶಭ್ದಗಳು ಇರದೇ ಇರುವುದು. ನೈಜ ಮತ್ತು ನೈಸರ್ಗಿಕವಾಗಿ ವಾಕ್ಯ ರಚನೆಯಲ್ಲಿ ಗಾಂಭಿರ್ಯತೆಯನ್ನು
ಒಳಗೊಂಡಿರುವುದು ಇದರ ನೈಪುಣ್ಯಕ್ಕೆ ಸಾಕ್ಷಿ.
ನಮ್ಮ ಕನ್ನಡ ನಾಡಿನ ಬಡತನದಲ್ಲಿ ಸಿಕ್ಕ ಅಕ್ಕ-ತಂಗಿಯರು,ಅಜ್ಜಿ-ಅಮ್ಮಂದಿರು ಹೃದಯ್ ಶ್ರೀಮಂತಿಕೆಯನ್ನು ಬಿಂಬಿಸುವ
ಗರತಿಯ ಹಾಡುಗಳು ನಮಗೆ ಹೆಮ್ಮೆಯನ್ನು ಉಂಟು ಮಾಡುತ್ತದೆ. ಗಮನಿಸಿ ನೋಡಿದರೆ ಇದು ನಮ್ಮ ಹೆಣ್ಣುಮಕ್ಕಳ ಮನಸ್ಸಿನ
ಒಳಗನ್ನಡಿ, ಇದರಲ್ಲಿ ಪ್ರೇಮದ ವಿವಿಧ ಆಯಾಮವಿದೆ, ಮಮತೆಯ ಮಾದುರ್ಯವಿದೆ. ಗರತಿಯು ಇಂದಿನ ಸಮಾಜದ ಹೆಣ್ಣಿಗೆ
ಎಷ್ಟರ ಮಟ್ಟಿಗೆ ಅನುರೂಪಳೋ ಗೊತ್ತಿಲ್ಲ,ಆದರೆ ಅವಳಿಗೆ ತನ್ನ ಸಂಸಾರದ ಬಗ್ಗೆ ಎಲ್ಲಿಲ್ಲದ ಒಲವು, ಗಂಡನೆಂದರೆ ದೈವ, ಉಳಿದ
ಗಂಡನ ಮನೆಯವರಿಗೆ ಇವಳೇ ತಾಯಿ. ತಾನು ಕಷ್ಟ ಪಟ್ಟರು ಚಿಂತೆ ಇಲ್ಲ,ತನ್ನ ಸಂಸಾರ ಚೆನ್ನಗಿರಬೇಕು ಎನ್ನುವ
ಉದಾರ ಭಾವನೆ.

ಹಾಲುಂಡ ತವರೀಗಿ ಏನೆಂದು ಹಾಡಲಿ
ಹೊಳೆದಂಡಿಲಿರುವ ಕರಕೀಯ ಕುಡಿಯಂಗ
ಹಬ್ಬಲೇ ಅವರ ರಸಬಳ್ಳಿ.


ಇದರಲ್ಲಿ ಗರತಿ ತನ್ನ ತವರು ಮನೆಯ ಬಗ್ಗೆ ಕೃತಜ್ಞಾಭಾವದಿಂದ ನೆನಸಿಕೊಳ್ಳುವ ಹಾಡಿದು. ಇದರ ಹಾಗೇ
ಅಪ್ಪ-ಅಮ್ಮನ ಬಗ್ಗೆ ಕೂಡ ಒಂದು ಹಾಡಿದೆ.

ತಂದೀನ ನೆನದರ ತಂಗಳೂ ಬಿಸಿಯಾಯ್ತ
ಗಂಗಾದೇವಿ ನನ್ನ ಹೆಡೆದವ್ವ ನೆನದರ
ಮಾಸೀದ ತಲೆಯೂ ಮಡಿಯಾಯ್ತು.

ಸತಿ-ಪತಿಗಳ ಮದ್ಯೆ ಕೂಡ ಅನೇಕ ಹಾಡುಗಳು ಬಂದಿವೆ, ಸಂಸಾರದಲ್ಲಿ, ನಗು,ಟೀಕೆ,ಮುನಿಸು,ವಿರಹ,ತಲ್ಲಣ
ಕೋಪಗಳು ನಮ್ಮ ಗರತಿಯ ಹಾಡಿನಲ್ಲಿ ಹಾದು ಬರುತ್ತವೆ.
ಹೆಂಡತಿ ಇಲ್ಲದೇ ಗಂಡನ ಪಾಡು
" ಅಡಗೀ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗಿ ಬಾಯಿಗೆ ರುಚಿಯಿಲ್ಲ ಹಡೆದವ್ವಾ
ಮಡದಿ ತವರೀಗೆ ಹೋಗ್ಯಾಳ."

ಗಂಡ ಇಲ್ಲದ ಹೆಂಡತಿಯ ಪಾಡು
"ಯಾಲಕ್ಕಿ ಸುರಿದು ಯಾವಡಗೀ ಮಾಡಲಿ
ಊರಿಗೊಹಗ್ಯಾರ ರಾಯರು ಬಾರದೆ
ಯಾವಡಗೀ ಮಾಡಿ ಫಲವೇನ.
ಜಗಳದ ಬಗ್ಗೆ ಒಂದು ಸುಂದರ ಹಾಡಿದ.

"ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಲಿಂಗದ ನೀರು ಹರಿದಹಂಗ ಹಿರಿ ಹೋಳಿಯ
ಗಂಗವ್ವ ಕೂಡಿ ನಲಿದಹಾಂಗ.

ಮಕ್ಕಳ ಮೇಲೆ ಒಂದು ಪ್ರಸಿದ್ದ ಗರತಿಯ ಹಾಡಿದೆ.
"ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳಹೋರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ.
ಇದೆಲ್ಲ್ಲಾ ನೆನಪಾಗಿದ್ದು ಬಹಳ ಹಿಂದೆ ನಮಗೆ ಕನ್ನಡದಲ್ಲಿ ಒಂದು ಗರತಿಯ ಹಾಡುಗಳು ಅಂತ
ಪದ್ಯವಿತ್ತು,ಮೊನ್ನೆ ಹೀಗೆ ಮಾತನಾಡುವಾಗ ಈ ವಿಷಯ ಬಂದು ನನಗೆ ಗೊತ್ತಿದ್ದ
ಒಂದೆರೆಡು ವಿಷಯಗಳನ್ನು ಇಲ್ಲಿ ಹಂಚಿಕೊಂಡಿರುವೆ,ನಿಮಗೆ ಹೆಚ್ಚಿನ ಮಾಹಿತಿ ಇದ್ದರೆ
ಹಂಚಿಕೊಳ್ಳಿ.