Saturday, May 22, 2010

ಕೈಟ್ಸ ಚಿತ್ರ ತಡೆಯೂ ಮತ್ತು ನಮ್ಮ ಜನರ ತಪ್ಪುಗ್ರಹಿಕೆಯು.

ನಮ್ಮ ದುಡ್ಡು ನಮ್ಮ ಕಾಸು, ಯಾರು ಇವರು ಕೇಳೊಕ್ಕೆ ??, ಇದು ಭಾರತ, ಅದರಲ್ಲೂ ರಾಷ್ತ್ರಭಾಷೆ ಹಿಂದಿ ಭಾಷೆ ಚಿತ್ರ ಬಿಡುತ್ತಿಲ್ಲ ಅಂದ್ರೆ ಎನು ??

ಹಿಂದಿ ಚಿತ್ರ ಯಾವುದನ್ನು ಬಿಡುವದಿಲ್ಲವಂತೆ, ನಾವೇನು ಕನ್ನಡ ಚಿತ್ರ ನೋಡಬೇಕಾ ?.

ಕ್ವಾಲಿಟಿ ಇರುವ ಚಿತ್ರ ಮಾಡಿ, ಯಾಕೆ ನೋಡೊಲ್ಲ ಹೇಳಿ, ಅದನ್ನು ಬಿಟ್ಟು ಪರಭಾಷೆ ಚಿತ್ರಗಳನ್ನು ತಡೆದರೆ ಕನ್ನಡ ಚಿತ್ರ ಬೆಳೆಯುತ್ತದೆ ಅನ್ನುವುದು ಸುಳ್ಳು. ಕರ್ನಾಟಕ ತಾಲಿಬಾನ್ ಆಗುತ್ತಿದೆ, ಶಿವಸೇನ ಮಾದರಿ ದಬ್ಬಾಳಿಕೆ ನಡೆಯುತ್ತಿದೆ,
ಕನ್ನಡ ಹೋರಾಟಗಾರರಿಗೆ ಬುದ್ದಿ ಇಲ್ಲ.

ಇದೆಲ್ಲಾ ನಿನ್ನೆ ಆಂಗ್ಲ ಮತ್ತು ಹಿಂದಿ ಪ್ರಾಯೋಜಿತ ಮಾಧ್ಯಮ ವಾಹಿನಿಯಲ್ಲಿ ಬಂದ ಸುದ್ದಿ. ಅಷ್ಟಕ್ಕೂ ಈ ಪಾಟಿ ಅತಿರೇಕ ಸುದ್ದಿಯನ್ನು ಬಿತ್ತರಿಸಿದ ಮತ್ತು ತಪ್ಪು ಸುದ್ದಿಯನ್ನು ಹರಡಿದ ಮತ್ತು ವಿಷಯವನ್ನು ತಿರುಚಿದ ಆ ಜನರಿಗೆ ಒಂದು ಸಲಾಮ್.

ಈ ಸುದ್ದಿಯನ್ನು ನೋಡಿರುವ ಅನೇಕ ಕನ್ನಡಿಗರು, ನಾವು ಅವರ ತರ ಇಲ್ಲ ಕಣ್ರಿ, ನಾವು ಕನ್ನಡಿಗರು ಸಹಿಷ್ನುರು , ಇದು ತಪ್ಪು ಅಂತ ಮೊದಲೇ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಬೇಕಿದ್ದರೆ ಆ ಮಾಧ್ಯಮಗಳ ಮುಂದೆ ಬಹು ಸಂಖ್ಯಾತ ಕನ್ನಡಿಗರಿಗೆ ಈ ಚಿತ್ರ ಬೇಕು, ಯಾವುದೋ ರೌಡಿಗಳಿಗೆ ಬೇಡ ಅಂದರೆ ನಮಗೆ ಬೇಡವೇ ??, ಇದರಿಂದ ಭಾಷೆ ಬೆಳೆಯುತ್ತದೆಯೇ ?? ಎಂದು ಪ್ರಶ್ನೆ ಹಾಕುತ್ತಾರೆ.

ಅಷ್ಟಕ್ಕೂ ವಿಷಯ ಎನು ??

ಕರ್ನಾಟಕದಲ್ಲಿ ಇರುವ ಒಪ್ಪಂದಕ್ಕಿಂತ ಹೆಚ್ಚು ಕಡೆ ಕೈಟ್ಸ ಚಿತ್ರ ಬಿಡುಗಡೆ ಮಾಡಿದ್ದರು, ಅನೇಕ ಕನ್ನಡ ಚಿತ್ರಗಳಿಗೆ ಕೊಕ್ ಕೊಡಲಾಯಿತು. ಅದ್ದರಿಂದ ಒಪ್ಪಂದದ ಪ್ರಕಾರ ನಡೆದುಕೊಳ್ಳಿ ಇಲ್ಲ ಚಿತ್ರ ಬಿಡುಗಡೆಗೆ ನಾವು ಬಿಡುವದಿಲ್ಲ ಎಂದು ಬಸಂತ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಆ ಚಿತ್ರದ ನಿರ್ಮಾಪಕರು ಮಾತುಕತೆಗೆ ಬರಬೇಕು ಎಂದು ಪಟ್ಟು ಹಿಡಿದರು. ಆದರೆ ಹಿಂದಿ ಮತ್ತು ಆಂಗ್ಲ ಮಾಧ್ಯಮಕ್ಕೆ ಅದು ಬೇಕಿರಲಿಲ್ಲ .... ಚಲನಚಿತ್ರ ಮಂದಿರದಿಂದ ಜನರನ್ನು ಓಡಿಸಿದ ಕ್ರಮ ಪುಂಡಾಟಿಕೆ ಎಂದು ಬಿಂಬಿಸುವುದು, ಇದು ಕನ್ನಡೇತರ ಚಿತ್ರಗಳ ವಿರುದ್ಧ ಹೋರಾಟ, ಪ್ರಜಾಪ್ರಭುತ್ವಕ್ಕೆ ಹೊಡೆತ ಎಂದು ತೋರಿಸುವುದೇ ಆಗಿತ್ತು.

ಕಳಪೆ ಗುಣಮಟ್ಟದ ಚಿತ್ರಮಂದಿರಗಳೂ

ನಮ್ಮ ಕನ್ನಡ ಚಿತ್ರಕ್ಕೆ ಇರುವುದೇ ಚಿಕ್ಕ ಮಾರುಕಟ್ಟೆ, ಚಿತ್ರಕ್ಕೆ ದುಡ್ಡು ಬರಬೇಕು ಎಂದರೆ ಇಲ್ಲಿನ ಚಿತ್ರಮಂದಿರದಿಂದಲೇ ಬರಬೇಕು.
ಈ ಚಿತ್ರಮಂದಿರಗಳು ಬೇರೆಯವರ ಪಾಲಾಗಿ ನಮಗೆ ಅತಿ ಕೆಟ್ಟ ಚಲನಚಿತ್ರ ಮಂದಿರಗಳು ಸಿಕ್ಕಾಗ, ಚಿತ್ರ ಚೆನ್ನಾಗಿದ್ದರೂ ಅಲ್ಲಿನ ಕೊಳಕಿಗೆ ಜನ ದೂರ ಹೊಗುವುದೇ ಹೆಚ್ಚು. ಯೋಚನೆ ಮಾಡಿ ನಮ್ಮಲ್ಲೇ ಎಷ್ಟು ಜನ ಸಲೀಸಾಗಿ ನಮ್ಮ ಕುಟುಂಬವನ್ನು
ಮೆಜಸ್ಟೀಕ್ ನ ಚಲನಚಿತ್ರ ಮಂದಿರಕ್ಕೆ ಕರೆದುಕೊಂಡು ಹೋಗುತ್ತೆವೆ ??, ಎಲ್ಲರಿಗೂ ಕಾಡುವುದು ಭಯವೇ ಮತ್ತು ಅಲ್ಲಿನ
ಕೊಳಕು ಪರಿಸರ.
ಇದೆ ಮುಂದುವರಿದರೆ ಕನ್ನಡ ಚಿತ್ರಗಳು ಅಂದರೆ ಕೊಳಕು ಅಂತ ಕ್ಲೀಷೆ ಬಂದರೂ ಆಶ್ಚರ್ಯ ಅಲ್ಲ.

ಇದರ ಮೇಲೆ ಒಳ್ಲೆ ಚಿತ್ರಮಂದಿರಗಳು ಕೇವಲ ಪರಭಾಷೆ ಚಿತ್ರಕ್ಕೆ ಮೀಸಲು. ನಿಜ ವಸ್ತುಸ್ಥಿತಿ ಬೇರೆಯದೆ ಇದೆ, ಚಲನಚಿತ್ರ ಮಂದಿರದವರೇ ಖುದ್ದಾಗಿ ಇದಕ್ಕೆ ಮುಂದಾಗಿದ್ದಾರೆ. ಬಾಡಿಗೆ ದುಡ್ಡು ಒಂದೆ ಆದರೂ ಅವರಿಗೆ ಬೇಕಾಗಿರುವುದು ಹೆಚ್ಚಿನ ದುಡ್ಡು.
ಎಲ್ಲೋ ಇರುವ ನಿರ್ಮಾಪಕರಿಗೆ ಕಿವಿಗೆ ಹೂವ ಇಟ್ಟು ಹೆಚ್ಚಿನ ಕಾಸು ಮಾಡುತ್ತಾರೆ, ಆದರೆ ಇಲ್ಲೇ ಸ್ಥಳೀಯರು ಇರುವ ಚಿತ್ರಗಳಲ್ಲಿ ಇದು ಸಾಧ್ಯವಿಲ್ಲ.




ಕುಚೇಲನ್ ಬಿಟ್ಟು ಕೈಟ್ಸ ಬಾಲಗೋಂಚಿ ಕತ್ತರಿಸಿದರೆ ಸಾಲದು.

ಆವತ್ತು ರಜನಿಕಾಂತ್ ಚಿತ್ರ ಬಂದಾಗ ಕೆ ಎಫ್ ಸಿ ಜನರೇ ನಿಂತು ಬಿಡುಗಡೆ ಮಾಡಿಸಿ, ರಜನಿ ಕನ್ನಡವನೂ ಅದು ಇದು ಅಂತ ಕಾಗೆ ಹಾರಿಸಿದ್ದು ಹಸಿರು ಇದ್ದಾಗ, ಅದನ್ನೇ ನೆಪ ಮಾಡಿಕೊಂಡು ಚಿರಂಜೀವಿ ಕೂಡ ಬರುತ್ತಾನೆ ಇಲ್ಲ ಹೃತಿಕ್ ಗಾಳಿಪಟ ಹಾರಿಸುತ್ತಾನೆ. ಎಲ್ಲರಿಗೂ ಕರ್ನಾಟಕದಿಂದ ಬರುವ ಆದಾಯ ಬೋನಸ್, ಆದರೆ ಇದು ನಮ್ಮ ಚಲನಚಿತ್ರದ ಮೇಲೆ ಪರಿಣಾಮ ಮಾಡುತ್ತದೆ. ಅದ್ದರಿಂದ ಕೇವಲ ಕೈಟ್ಸಗೆ ಬಿಟ್ಟರೆ ನಾಳೆ ರಾವಣ್ ಬರುತ್ತದೆ, ನಾಳಿದ್ದು ರಜನೀಯ ರೋಬಾಟ್ ಬರುತ್ತದೆ.
ಪ್ರತಿಭಟನೆ ಮಾಡಿದ ಅನೇಕರೂ ಸ್ವಲ್ಪ ದಿಟ್ಟತನ ಮತ್ತು ಸ್ವಾಭಿಮಾನ ತೋರಿಸಬೇಕು.

ಇಷ್ಟೆ ಮಾಡಿ ಗೆದ್ದೆವು ಎಂದು ಬಿಮ್ಮಿದರೆ ಸಾಲದು, ಕನ್ನಡ ಚಿತ್ರಮಂದಿರಗಳ ಗುಣಮಟ್ಟ ಹೆಚ್ಚು ಮಾಡಬೇಕು ಮತ್ತು ಹೆಚ್ಚು ಜನರನ್ನು
ಆಕರ್ಷಿಸುವ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಬೇಕು.

ಕನ್ನಡಕ್ಕೆ ಡಬ್ ಆಗಿ ಬರಲಿ
ಕೊನೆಯದಾಗಿ ದಕ್ಷಿಣ ಕರ್ನಾಟಕಕ್ಕೆ ಬರುವ ಪರಭಾಷೆ ಚಿತ್ರಗಳಲ್ಲಿ ೨೧ ಕಡೆಯಲ್ಲಿ ಕನಿಷ್ಟ ಪಕ್ಷ ೧೫ ಕಡೆ ಕನ್ನಡಕ್ಕೆ ಡಬ್ ಆಗಿ ಬಿಡಬೇಕು. ಭಾಷೆಗಿಂತ ಜನರು ದೊಡ್ಡವರಲ್ಲ, ನಮ್ಮ ಮನರಂಜನೆ ನಮ್ಮ ಭಾಷೆಯಲ್ಲಿ ಇರಬೇಕು ಅನ್ನುವುದೇ ದೊಡ್ಡ ಮಾನದಂಡ ಆಗಬೇಕು.


ಕೊಸರು:- ಪೇಜ್ ೩ ರಲ್ಲಿ ಕನ್ನಡ ನಟ ನಟಿಯರೇ ಈ ಹಿಂದಿ ಚಿತ್ರದ ಪ್ರೀಮಿಯರ್ ಹೋಗಿ ಬಂದಿರುತ್ತಾರೆ. ಬಹಳ ಚೆನ್ನಾಗಿದೆ ಎಂದು ಹೊಗಳುತ್ತಾರೆ ...