Saturday, May 22, 2010

ಕೈಟ್ಸ ಚಿತ್ರ ತಡೆಯೂ ಮತ್ತು ನಮ್ಮ ಜನರ ತಪ್ಪುಗ್ರಹಿಕೆಯು.

ನಮ್ಮ ದುಡ್ಡು ನಮ್ಮ ಕಾಸು, ಯಾರು ಇವರು ಕೇಳೊಕ್ಕೆ ??, ಇದು ಭಾರತ, ಅದರಲ್ಲೂ ರಾಷ್ತ್ರಭಾಷೆ ಹಿಂದಿ ಭಾಷೆ ಚಿತ್ರ ಬಿಡುತ್ತಿಲ್ಲ ಅಂದ್ರೆ ಎನು ??

ಹಿಂದಿ ಚಿತ್ರ ಯಾವುದನ್ನು ಬಿಡುವದಿಲ್ಲವಂತೆ, ನಾವೇನು ಕನ್ನಡ ಚಿತ್ರ ನೋಡಬೇಕಾ ?.

ಕ್ವಾಲಿಟಿ ಇರುವ ಚಿತ್ರ ಮಾಡಿ, ಯಾಕೆ ನೋಡೊಲ್ಲ ಹೇಳಿ, ಅದನ್ನು ಬಿಟ್ಟು ಪರಭಾಷೆ ಚಿತ್ರಗಳನ್ನು ತಡೆದರೆ ಕನ್ನಡ ಚಿತ್ರ ಬೆಳೆಯುತ್ತದೆ ಅನ್ನುವುದು ಸುಳ್ಳು. ಕರ್ನಾಟಕ ತಾಲಿಬಾನ್ ಆಗುತ್ತಿದೆ, ಶಿವಸೇನ ಮಾದರಿ ದಬ್ಬಾಳಿಕೆ ನಡೆಯುತ್ತಿದೆ,
ಕನ್ನಡ ಹೋರಾಟಗಾರರಿಗೆ ಬುದ್ದಿ ಇಲ್ಲ.

ಇದೆಲ್ಲಾ ನಿನ್ನೆ ಆಂಗ್ಲ ಮತ್ತು ಹಿಂದಿ ಪ್ರಾಯೋಜಿತ ಮಾಧ್ಯಮ ವಾಹಿನಿಯಲ್ಲಿ ಬಂದ ಸುದ್ದಿ. ಅಷ್ಟಕ್ಕೂ ಈ ಪಾಟಿ ಅತಿರೇಕ ಸುದ್ದಿಯನ್ನು ಬಿತ್ತರಿಸಿದ ಮತ್ತು ತಪ್ಪು ಸುದ್ದಿಯನ್ನು ಹರಡಿದ ಮತ್ತು ವಿಷಯವನ್ನು ತಿರುಚಿದ ಆ ಜನರಿಗೆ ಒಂದು ಸಲಾಮ್.

ಈ ಸುದ್ದಿಯನ್ನು ನೋಡಿರುವ ಅನೇಕ ಕನ್ನಡಿಗರು, ನಾವು ಅವರ ತರ ಇಲ್ಲ ಕಣ್ರಿ, ನಾವು ಕನ್ನಡಿಗರು ಸಹಿಷ್ನುರು , ಇದು ತಪ್ಪು ಅಂತ ಮೊದಲೇ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಬೇಕಿದ್ದರೆ ಆ ಮಾಧ್ಯಮಗಳ ಮುಂದೆ ಬಹು ಸಂಖ್ಯಾತ ಕನ್ನಡಿಗರಿಗೆ ಈ ಚಿತ್ರ ಬೇಕು, ಯಾವುದೋ ರೌಡಿಗಳಿಗೆ ಬೇಡ ಅಂದರೆ ನಮಗೆ ಬೇಡವೇ ??, ಇದರಿಂದ ಭಾಷೆ ಬೆಳೆಯುತ್ತದೆಯೇ ?? ಎಂದು ಪ್ರಶ್ನೆ ಹಾಕುತ್ತಾರೆ.

ಅಷ್ಟಕ್ಕೂ ವಿಷಯ ಎನು ??

ಕರ್ನಾಟಕದಲ್ಲಿ ಇರುವ ಒಪ್ಪಂದಕ್ಕಿಂತ ಹೆಚ್ಚು ಕಡೆ ಕೈಟ್ಸ ಚಿತ್ರ ಬಿಡುಗಡೆ ಮಾಡಿದ್ದರು, ಅನೇಕ ಕನ್ನಡ ಚಿತ್ರಗಳಿಗೆ ಕೊಕ್ ಕೊಡಲಾಯಿತು. ಅದ್ದರಿಂದ ಒಪ್ಪಂದದ ಪ್ರಕಾರ ನಡೆದುಕೊಳ್ಳಿ ಇಲ್ಲ ಚಿತ್ರ ಬಿಡುಗಡೆಗೆ ನಾವು ಬಿಡುವದಿಲ್ಲ ಎಂದು ಬಸಂತ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಆ ಚಿತ್ರದ ನಿರ್ಮಾಪಕರು ಮಾತುಕತೆಗೆ ಬರಬೇಕು ಎಂದು ಪಟ್ಟು ಹಿಡಿದರು. ಆದರೆ ಹಿಂದಿ ಮತ್ತು ಆಂಗ್ಲ ಮಾಧ್ಯಮಕ್ಕೆ ಅದು ಬೇಕಿರಲಿಲ್ಲ .... ಚಲನಚಿತ್ರ ಮಂದಿರದಿಂದ ಜನರನ್ನು ಓಡಿಸಿದ ಕ್ರಮ ಪುಂಡಾಟಿಕೆ ಎಂದು ಬಿಂಬಿಸುವುದು, ಇದು ಕನ್ನಡೇತರ ಚಿತ್ರಗಳ ವಿರುದ್ಧ ಹೋರಾಟ, ಪ್ರಜಾಪ್ರಭುತ್ವಕ್ಕೆ ಹೊಡೆತ ಎಂದು ತೋರಿಸುವುದೇ ಆಗಿತ್ತು.

ಕಳಪೆ ಗುಣಮಟ್ಟದ ಚಿತ್ರಮಂದಿರಗಳೂ

ನಮ್ಮ ಕನ್ನಡ ಚಿತ್ರಕ್ಕೆ ಇರುವುದೇ ಚಿಕ್ಕ ಮಾರುಕಟ್ಟೆ, ಚಿತ್ರಕ್ಕೆ ದುಡ್ಡು ಬರಬೇಕು ಎಂದರೆ ಇಲ್ಲಿನ ಚಿತ್ರಮಂದಿರದಿಂದಲೇ ಬರಬೇಕು.
ಈ ಚಿತ್ರಮಂದಿರಗಳು ಬೇರೆಯವರ ಪಾಲಾಗಿ ನಮಗೆ ಅತಿ ಕೆಟ್ಟ ಚಲನಚಿತ್ರ ಮಂದಿರಗಳು ಸಿಕ್ಕಾಗ, ಚಿತ್ರ ಚೆನ್ನಾಗಿದ್ದರೂ ಅಲ್ಲಿನ ಕೊಳಕಿಗೆ ಜನ ದೂರ ಹೊಗುವುದೇ ಹೆಚ್ಚು. ಯೋಚನೆ ಮಾಡಿ ನಮ್ಮಲ್ಲೇ ಎಷ್ಟು ಜನ ಸಲೀಸಾಗಿ ನಮ್ಮ ಕುಟುಂಬವನ್ನು
ಮೆಜಸ್ಟೀಕ್ ನ ಚಲನಚಿತ್ರ ಮಂದಿರಕ್ಕೆ ಕರೆದುಕೊಂಡು ಹೋಗುತ್ತೆವೆ ??, ಎಲ್ಲರಿಗೂ ಕಾಡುವುದು ಭಯವೇ ಮತ್ತು ಅಲ್ಲಿನ
ಕೊಳಕು ಪರಿಸರ.
ಇದೆ ಮುಂದುವರಿದರೆ ಕನ್ನಡ ಚಿತ್ರಗಳು ಅಂದರೆ ಕೊಳಕು ಅಂತ ಕ್ಲೀಷೆ ಬಂದರೂ ಆಶ್ಚರ್ಯ ಅಲ್ಲ.

ಇದರ ಮೇಲೆ ಒಳ್ಲೆ ಚಿತ್ರಮಂದಿರಗಳು ಕೇವಲ ಪರಭಾಷೆ ಚಿತ್ರಕ್ಕೆ ಮೀಸಲು. ನಿಜ ವಸ್ತುಸ್ಥಿತಿ ಬೇರೆಯದೆ ಇದೆ, ಚಲನಚಿತ್ರ ಮಂದಿರದವರೇ ಖುದ್ದಾಗಿ ಇದಕ್ಕೆ ಮುಂದಾಗಿದ್ದಾರೆ. ಬಾಡಿಗೆ ದುಡ್ಡು ಒಂದೆ ಆದರೂ ಅವರಿಗೆ ಬೇಕಾಗಿರುವುದು ಹೆಚ್ಚಿನ ದುಡ್ಡು.
ಎಲ್ಲೋ ಇರುವ ನಿರ್ಮಾಪಕರಿಗೆ ಕಿವಿಗೆ ಹೂವ ಇಟ್ಟು ಹೆಚ್ಚಿನ ಕಾಸು ಮಾಡುತ್ತಾರೆ, ಆದರೆ ಇಲ್ಲೇ ಸ್ಥಳೀಯರು ಇರುವ ಚಿತ್ರಗಳಲ್ಲಿ ಇದು ಸಾಧ್ಯವಿಲ್ಲ.




ಕುಚೇಲನ್ ಬಿಟ್ಟು ಕೈಟ್ಸ ಬಾಲಗೋಂಚಿ ಕತ್ತರಿಸಿದರೆ ಸಾಲದು.

ಆವತ್ತು ರಜನಿಕಾಂತ್ ಚಿತ್ರ ಬಂದಾಗ ಕೆ ಎಫ್ ಸಿ ಜನರೇ ನಿಂತು ಬಿಡುಗಡೆ ಮಾಡಿಸಿ, ರಜನಿ ಕನ್ನಡವನೂ ಅದು ಇದು ಅಂತ ಕಾಗೆ ಹಾರಿಸಿದ್ದು ಹಸಿರು ಇದ್ದಾಗ, ಅದನ್ನೇ ನೆಪ ಮಾಡಿಕೊಂಡು ಚಿರಂಜೀವಿ ಕೂಡ ಬರುತ್ತಾನೆ ಇಲ್ಲ ಹೃತಿಕ್ ಗಾಳಿಪಟ ಹಾರಿಸುತ್ತಾನೆ. ಎಲ್ಲರಿಗೂ ಕರ್ನಾಟಕದಿಂದ ಬರುವ ಆದಾಯ ಬೋನಸ್, ಆದರೆ ಇದು ನಮ್ಮ ಚಲನಚಿತ್ರದ ಮೇಲೆ ಪರಿಣಾಮ ಮಾಡುತ್ತದೆ. ಅದ್ದರಿಂದ ಕೇವಲ ಕೈಟ್ಸಗೆ ಬಿಟ್ಟರೆ ನಾಳೆ ರಾವಣ್ ಬರುತ್ತದೆ, ನಾಳಿದ್ದು ರಜನೀಯ ರೋಬಾಟ್ ಬರುತ್ತದೆ.
ಪ್ರತಿಭಟನೆ ಮಾಡಿದ ಅನೇಕರೂ ಸ್ವಲ್ಪ ದಿಟ್ಟತನ ಮತ್ತು ಸ್ವಾಭಿಮಾನ ತೋರಿಸಬೇಕು.

ಇಷ್ಟೆ ಮಾಡಿ ಗೆದ್ದೆವು ಎಂದು ಬಿಮ್ಮಿದರೆ ಸಾಲದು, ಕನ್ನಡ ಚಿತ್ರಮಂದಿರಗಳ ಗುಣಮಟ್ಟ ಹೆಚ್ಚು ಮಾಡಬೇಕು ಮತ್ತು ಹೆಚ್ಚು ಜನರನ್ನು
ಆಕರ್ಷಿಸುವ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಬೇಕು.

ಕನ್ನಡಕ್ಕೆ ಡಬ್ ಆಗಿ ಬರಲಿ
ಕೊನೆಯದಾಗಿ ದಕ್ಷಿಣ ಕರ್ನಾಟಕಕ್ಕೆ ಬರುವ ಪರಭಾಷೆ ಚಿತ್ರಗಳಲ್ಲಿ ೨೧ ಕಡೆಯಲ್ಲಿ ಕನಿಷ್ಟ ಪಕ್ಷ ೧೫ ಕಡೆ ಕನ್ನಡಕ್ಕೆ ಡಬ್ ಆಗಿ ಬಿಡಬೇಕು. ಭಾಷೆಗಿಂತ ಜನರು ದೊಡ್ಡವರಲ್ಲ, ನಮ್ಮ ಮನರಂಜನೆ ನಮ್ಮ ಭಾಷೆಯಲ್ಲಿ ಇರಬೇಕು ಅನ್ನುವುದೇ ದೊಡ್ಡ ಮಾನದಂಡ ಆಗಬೇಕು.


ಕೊಸರು:- ಪೇಜ್ ೩ ರಲ್ಲಿ ಕನ್ನಡ ನಟ ನಟಿಯರೇ ಈ ಹಿಂದಿ ಚಿತ್ರದ ಪ್ರೀಮಿಯರ್ ಹೋಗಿ ಬಂದಿರುತ್ತಾರೆ. ಬಹಳ ಚೆನ್ನಾಗಿದೆ ಎಂದು ಹೊಗಳುತ್ತಾರೆ ...

Sunday, May 16, 2010

ಸುಳ್ಳು ಕಲಿಸಲು ಯಾವ ಶಾಲೆ ಸೇರಿಸಿದರೂ ಒಂದೇ ?

ಯಾವ ಶಾಲೆಗೆ-ಕಾಲೇಜಿಗೆ ಮಕ್ಕಳನ್ನು ಸೇರಿಸಬೇಕು ಅನ್ನೋ ಬಗ್ಗೆ ಇವತ್ತು ಚಡ್ದಿ ಮುಖವಾಣಿ ಹೊಸ ದಿಗಂತದಲ್ಲಿ ೧೬ ಮೇ , ಹ .ಬಾ. ಮಲ್ಯ ಅವರ ಒಂದು ಲೇಖನ ಬಂದಿದೆ. ಹೊರನೋಟಕ್ಕೆ ಇದು ಶಾಲ ಕಾಲೇಜುಗಳನ್ನು ಆಯ್ಕೆ ಮಾಡುವ ಬಗ್ಗೆ ಇದೆ ಎಂದುಕೊಂಡು ಓದಿದರೆ ತಪ್ಪು. ಮೊದಲಿನಿಂದ ಕೊನೆ ತನಕ ಇದು ಅದೇ ಹಳೆ ವರಾತವನ್ನು ಎತ್ತಿ ಹಿಡಿಯುತ್ತದೆ.

ಹಿಂದೆ ನಾವು ಎಲ್ಲಾ ಕಂಡುಹಿಡಿದಿದ್ದೆವು ??

ಹಿಂದೆ ನಮ್ಮ ಭಾರತದಲ್ಲಿ ಅದರಲ್ಲೂ ಗುರುಕುಲ ಪದ್ದಿತಿಯಲ್ಲಿ ವಿದ್ಯೆ ಬಹಳ ಚೆನ್ನಾಗಿತ್ತು, ಎರೊಪ್ಲೈನ್, ನ್ಯೂಕಲಿಯರ್ ಅಸ್ತ್ರ, ಇಂಟರನೆಟ್ ಎಲ್ಲಾ ಆಗಿನ ಕಾಲದಲ್ಲೆ ಕಂಡುಹಿಡಿದಿದ್ದರು, ಆ ವಿದ್ಯೆಯನ್ನು ಅಥರ್ವಣ ವೇದದಲ್ಲಿ ಹೇಳಲಾಗಿತ್ತು. ಅದನ್ನು ಅಪಹರಿಸಿದ ಪಾಶ್ಚತ್ಯರು ಅದನ್ನು ಓದಿ ಮತ್ತೊಮ್ಮೆ ಕಂಡು ಹಿಡಿದರು ಅನ್ನೊ ಮಾತು ಇಲ್ಲ ಮಿಂಚೆ ನಿಮಗೆ ಬಂದಿರಬಹುದು. ಅದರೆ ಇನ್ನು ಕಂಡುಹಿಡಿಯಬೇಕಾಗಿರುವುದು ಇದೆ ಅಲ್ಲವೇ .. ಅವುಗಳನ್ನು ಆ ಗೀರ್ವಾಣ ಭಾಷೆಯಲ್ಲಿ ಬರೆದಿರಬೇಕಲ್ಲವೇ ?, ಅದನ್ನು ಜಗತ್ತಿಗೆ ಹೇಳುವದಕ್ಕೆ ಯಾಕೆ ಮೀನಾಮೇಷ ಎಣಿಸುತ್ತ ಇದ್ದಾರೆ ಎಂದು ತಿಳಿಯುತ್ತ ಇಲ್ಲ.

ಮಕಾಲೆ ಮಾಡಿದ ಪಾಪ
ಇನ್ನೊಂದು ಬಹಳ ಪ್ರಚಲಿತ ಮಾತು ಇಲ್ಲ ಉಲ್ಲೇಖ ಎಂದರೆ ಅಂದಿನ ಶಿಕ್ಷಣ ಬಹಳ ಚೆನ್ನಾಗಿತ್ತು, ಆ ಶಿಕ್ಷಣವನ್ನು ಪಡೆದ ಜನ ಮೌಡ್ಯಗಳಿಂದ ದೂರ ಇದ್ದರು. ಆಗ ಬತ್ತಿ ಇಡುವದಕ್ಕೆ ಮೆಕಾಲೆ ಬಂದ, ಅವನು ಅವರ ಸಂಸತ್ತಿನಲ್ಲಿ ಮಾಡಿದ ಭಾಷಣದ ಮಾತುಗಳನ್ನು ತಿರುಚಿ, ದೇಶವನ್ನು ನಾಶ ಮಾಡಬೇಕಾದರೆ ಇಲ್ಲ ಸಂಸ್ಕ್ತುತಿಯನ್ನು ಹಾಳು ಮಾಡಬೇಕಾದರೆ ಆವ್ರಿಗೆ ನಮ್ಮ ಶಿಕ್ಷಣ ಕೊಡಬೇಕು, ಇದರಿಂದ ಅವರು ನಮ್ಮ ಗುಲಾಮರಾಗುತ್ತಾರೆ ಅಂತ ಯೋಚನೆ ಮಾಡಿ ನಮ್ಮನ್ನು ಬ್ರಿಟಿಷ್ ವಿದ್ಯಾಭ್ಯಾಸಕ್ಕೆ
ಹಾಕಿದರು. ಆವತ್ತಿನಿಂದ ನಮ್ಮ ಶ್ರೇಷ್ತ ಮಟ್ಟದ ಧಾರ್ಮಿಕ, ಸಾಂಸ್ಕೃತಿಕ , ಆಧ್ಯಾತ್ಮಿಕ ನೆಲಗಟ್ಟು ನಾಶ ಆಯಿತು.

ಜಾತಿ ಪದ್ಧತಿ, ಸತಿ, ಸಹಗಮನ , ಮೇಲು-ಕೀಳು ನಂಬಿಕೆಗಳು ಇದ್ದ ಆ ಕಾಲದಲ್ಲಿ ಯಾವ ಮಟ್ಟಿಗೆ ನಮ್ಮ ಶಿಕ್ಷಣವಿತ್ತು, ಇದು ಯಾವ ಸಾಂಸ್ಕ್ರುತಿಕ ಶ್ರೀಮಂತಿಕೆಯನ್ನು ಸಾರುತ್ತಿತ್ತು ಎಂದು ಒಮ್ಮೆ ಯೋಚನೆ ಮಾಡಿದರೆ ಆಗಿನ ಕಾಲ ಚೆನ್ನಾಗಿತ್ತು ನಮ್ಮದು
ಭಾರತೀಯ ಧರ್ಮ, ಹಿಂದು ರಾಷ್ಟ್ರ ಅನ್ನೋ ಅಂತೆ ಕಂತೆಗಳ ಮಾತುಗಳು ಪೊಳ್ಳು ಅನಿಸುತ್ತದೆ.

ಅಂಗ್ಲ ಆಗಲಿಲ್ಲ ಆಮ್ಲಜನಕ

ಒಂದು ಕಡೆ ಇಂಗ್ಲೀಷ್ ಇಂದ ದೇಶ ಹಾಳಾಯಿತು ಅನ್ನುವುದು ಲೇಖಕರ ವಾದವಾದರೆ, ಇನ್ನೊಂದು ಕಡೆ ನಮ್ಮ ಭವ್ಯ ಪರಂಪರೆಯನ್ನು , ನಮ್ಮ ರಾಷ್ಟೀಯತೆಯನ್ನು ಅಳಿಸಿಹಾಕಲು ಆಗಲಿಲ್ಲ, ಹೆಗಡೆವಾರ್,ಸಾರ್ವಕರ್ ಅನ್ನೋ ದೇಶಪ್ರೇಮಿಗಳು(!!)
ಇಂಗ್ಲೀಷ ಶಿಕ್ಷಣದಿಂದ ಪ್ರಜಾಪ್ರಬುತ್ವದ ಬಗ್ಗೆ ಅರಿವು ಮೂಡಿ ರಾಷ್ಟೀಯ ಸ್ವಾತಂತ್ರ ಆಂದೋಲನಕ್ಕೆ ನಾಂದಿ ಹಾಡಿದರು ಎಂದು
ಹೇಳುತ್ತಾರೆ.
ಮುಂದೆ ನಮ್ಮ ಸಾಂಸ್ಕೃತಿಕ ರಾಷ್ಟೀಯತೆಯನ್ನು , ಧರ್ಮವನ್ನು ಅವಹೇಳನ ಮಾಡುವ ಮಟ್ಟಿಗೆ ಇಂಗ್ಲೀಷ್ ಶಿಕ್ಷಣ ಬೆಳದಿದೆ. ಈ ಕೆಲಸವನ್ನು ಹಿಂದೆ ಕೈಸ್ತ ಮಿಷನರಿಗಳು ಮಾಡುತ್ತ ಇದ್ದವೂ, ಈಗಲೂ ನಡೆಯುತ್ತ ಇದೆ.

ಹಿಂದೂ ಸಂಸ್ಥೆಗಳು
ಹಿಂದೆ ಸೇವಾ, ವಿಧ್ಯಾಬ್ಯಾಸ ಕ್ಷೇತ್ರಗಳು ಮಿಷನರಿಗೆ ಮೀಸಲಾಗಿದ್ದವು, ಅದರಲ್ಲಿ ಲಾಭಾಂಶ ನೋಡಿ ಇವತ್ತು ಎಲ್ಲರೂ ಆ ದಂದೆಗೆ ಇಳಿದಿದ್ದಾರೆ, ಇದರಲ್ಲಿ ಯಾವ ಮಿಷನರಿ, ಮಠ, ಸಂಸ್ಥೆಗಳು ಹೊರತಲ್ಲ. ಎಲ್ಲಾ ಮಠಗಳ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಕೂಡ ಇವೆ. ಇದರಿಂದ ಮತಾಂತರಕ್ಕೆ ಹಿನ್ನಡೆ ಅಗಿದೆ ಅನ್ನುವುದು ಲೇಖಕರ ವಾದವಾದರೆ, ಮತಾಂತರ ಹೆಚ್ಚುತ್ತಿದೆ ಅನ್ನೋ ಸನಾತನಿ ವಾದ ಇನ್ನೊಂದಡೆ. ಯಾವುದನ್ನು ಕೊಳ್ಳುವುದು ??
ಅಷ್ಟಕ್ಕೂ ಸೇವಾ,ಧಾರ್ಮಿಕ ,ಆರೋಗ್ಯದಲ್ಲಿ ಕೆಲಸ ಮಾಡುತ್ತಿರುವ ಮಠಗಳು ಡೊನೆಷನ್ ತೆಗೆದುಕೊಳ್ಳತ್ತ ಇಲ್ಲವೇ, ಇಂಗ್ಲೀಷ್ ಭಾಷಾ ಮಾಧ್ಯಮದಲ್ಲೇ ಬೋದಿಸುತ್ತ ಇಲ್ಲವೇ. ಅಷ್ಟ್ಯು ಯಾಕೆ ಹೆಗಡೆವಾರ್ ಹುಟ್ಟು ಹಾಕಿದ ಆರ್ ಎಸ್ ಎಸ್ ನಡೆಸುತ್ತ ಇರುವ rashtrothana Skool ಮಾಧ್ಯಮವೇನು ??,
ಅವರ ಮಿಂಬಲೆ ಯಾಕೆ ಇಂಗ್ಲೀಷನಲ್ಲಿ ಇದೆ ?
ಅಲ್ಲಿ ವಿಧ್ಯಾಭ್ಯಾಸ ಉಚಿತವೇ ??, ವ್ಯಾಪಾರೀಕರಣವಿಲ್ಲವೇ ಅನ್ನೊ ಪ್ರಶ್ನೆಗಳಿಗೆ ಲೇಖಕರು ತಮ್ಮ ಲೇಖನದಲ್ಲಿ ಹೇಳದಿರುವುದು ಸ್ವಪಕ್ಷಪಾತ ಮತ್ತು ಜಾಣಕುರುಡು ತೋರಿಸುತ್ತದೆ.

ಹಿಂದಿ ರಾಷ್ಟ್ರಭಾಷೆ. ಮತ್ತು ಸಂಸ್ಕೃತ ಎಲ್ಲಾ ಭಾಷೆಗಳ ಅಮ್ಮ

ಲೇಖಕರು ಮುಂದುವರೆಯುತ್ತ ತಮ್ಮ ಅಜ್ಣಾನವನ್ನು ಮುಂದುವರೆಸಿದ್ದಾರೆ, ಅವರ ಪ್ರಕಾರ ಇಂಗ್ಲೀಷ್ ಯಾವತ್ತು ನಮ್ಮ ರಾಷ್ತಭಾಷೆ ಹಿಂದಿಯ ಸ್ಥಾನ ಪಡೆಯಬಾರದು ಮತ್ತು ಮುಂದಿನ ದಿನಗಳಲ್ಲಿ ಅದು ಸೊರಗಿ ಸಂಪರ್ಕ ಭಾಷೆಯಾಗಿ ನಮ್ಮ ಹಿಂದಿಯು ಆಕ್ರಮಿಸಬೇಕು ಎಂಬುದು. ಯಾಕೆ ಎಂದರೆ ಹಿಂದಿ ನಮ್ಮ ನೆಲದ ಭಾಷೆ ಮತ್ತು ಇಂಗ್ಲೀಷ್ ಬೇರೆ ನೆಲದ ಭಾಷೆ.
ಹಾಗೆ ನೋಡಿದರೆ ನಮ್ಮ ಕನ್ನಡಿಗರಿಗೆ ಮೊದಲು ಪರಿಚಯ ಆಗಿದ್ದು ಇಂಗ್ಲೀಷ್ , ಹಿಂದಿಯಲ್ಲ. ಅಷ್ಟಕ್ಕೂ ಎರಡೂ ನಮ್ಮ ನೆಲದ
ಭಾಷೆಗಳಲ್ಲ, ವಿಶ್ವಕ್ಕೆ ಸಂಪರ್ಕ ಭಾಷೆಯಾಗಿ ನಾವು ಇಂಗ್ಲೀಷ್ ಬಳಸಬೇಕೆ ವಿನಹ ಹಿಂದಿಯಲ್ಲ. ಹಿಂದಿಗೆ ಆ ಸ್ಥಾನ ಕೊಟ್ಟರೆ
ಎಕ್ ದೇಶ್ - ಎಕ್ ಭಾಷೆ ಅಂತ ಬಡಬಡಿಸುವ ಬಿಮಾರು ರಾಜ್ಯದ ಗೂಂಡಾಗಳಿಗೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ.

ಲೇಖಕರು ಸ್ವಲ್ಪ ರಾಷ್ಟ್ರಭಾಷೆ- ಸಂಸ್ಕ್ರುತದ ಅಮ್ಮ ನಂಟಿನ ಬಗ್ಗೆ ಸ್ವಲ್ಪ ಗೂಗಳ್ ಮಾಡಿದರೆ ಅನೇಕ ವಿಷಯಗಳು ತಿಳಿಯುತ್ತವೆ.
ಭವ್ಯ ಭಾರತದ , ಸಾಂಸ್ಕ್ರುತಿಕ ಪ್ರತಿನಿಧಿ , ಧರ್ಮ ವಿಧ್ಯಾಬ್ಯಾಸ ಮಾಡಿರುವ ಲೇಖಕರು ಇಷ್ಟು ಕೂಡ ಮಾಡಿಲ್ಲ ಎಂದರೆ ..ಅಕಟಕಟ

ಶಿಕ್ಷಣ ಮಾತೃಭಾಷೆಯಲ್ಲೇ ... ಉನ್ನತ ಶಿಕ್ಷಣ ರಾಷ್ಟ್ರಭಾಷೆಯಲ್ಲಿ.

ಇಡಿ ಲೇಖನದಲ್ಲಿ ಇದೊಂದೆ ಮೆಚ್ಚತಕ್ಕ ಅಂಶ , ಆದ್ರೆ ಹಾಗೆ ಹೇಳಿ ಮುಂದಿನ ಸಾಲುಗಳಲ್ಲಿ ಲೇಖಕರು ಹೇಳುವುದು
ಉನ್ನತ ಶಿಕ್ಷಣವನ್ನು ಹಿಂದಿ ಇಲ್ಲ ಸಂಸ್ಕೃತದ ಮೂಲಕ ಕೊಡಿಸಬೇಕೆಂತೆ. ಅಲ್ಲ ಸ್ವಾಮಿ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲೇ
ಕೊಟ್ತರೆ ಆಗುವ ನಷ್ತವೇನು ?. ಅಷ್ಟಕ್ಕೂ ನಮ್ಮ ಎಷ್ಟೋ ಭಾಷೆಗಳು ಹಿಂದಿಗಿಂತ ಹಳೆಯದು ಮತ್ತು ಪ್ರಭಲವಾಗಿದೆ.

ನಮ್ಮ ನೆಲದಲ್ಲಿ ಮಾತೃ ಭಾಷೆಯಲ್ಲಿ ಓದಿದ ಮಕ್ಕಳು ಹಿಂದಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಸುಲಭವೇ ??, ಒಮ್ಮೆ ಹಿಂದಿ ಹೇರಿಕೆಯಲ್ಲಿ ನಲಗುತ್ತಿರುವ ಕನ್ನಡ ಕಂದಮ್ಮಗಳ ಪಾಡನ್ನು ಲೇಖಕರು ಮನಗಾಣಬೇಕು. ಜೊತೆಗೆ ಅವರ ಮಾತೃಭಾಷೆ, ರಾಷ್ಟ್ರಭಾಷೆ, ಗೀರ್ವಾಣ ಭಾಷೆ hirearchy ಬಿಟ್ಟು ಈ ಒಕ್ಕೂಟದಲ್ಲಿ ಕನ್ನಡವೂ ರಾಷ್ಟಭಾಷೆ, ಅದು ನಾವ ಭಾಷೆಗೂ ಕಮ್ಮಿ ಇಲ್ಲ
ಮತ್ತು ಉನ್ನತ ಶಿಕ್ಷಣ ಅದರಲ್ಲಿ ಆಸಾಧ್ಯ ಅನ್ನೊ ಕೀಳರಿಮೆ ಬಿಡಬೇಕು.

ಶಿಕ್ಷಣ ಮಾಧ್ಯಮದಲ್ಲಿ ರಾಷ್ಟ್ರಭಾಷೆ.

ಲೇಖಕರ ವಾದ ಇಲ್ಲಿ ಬಹಳ ಚೆನ್ನಾಗಿದೆ, ಜಗತ್ತಿನಲ್ಲಿ ಎಲ್ಲಾ ದೇಶಗಳು ತಮ್ಮ ರಾಷ್ಟ್ರಭಾಷೆಯಲ್ಲಿ ಶಿಕ್ಷಣ ಕೊಡುತ್ತಿವೆ ಅದಕ್ಕೆ ಅವು ಉದ್ದಾರೆ ಆಗಿದೆ, ಹಾಗೆ ನಮ್ಮ ದೇಶದಲ್ಲಿ ಹಿಂದಿಯಲ್ಲಿ ಉನ್ನತ ಶಿಕ್ಷಣ ಕೊಡಬೇಕು, ಇಂಗ್ಲೀಷನ್ನು ಆ ಸ್ಥಾನಕ್ಕೆ ಕೊಂಡೋಯ್ಯಬಾರದು
ಎಂದು.
ಅವರು ಕೊಟ್ಟ ಉದಾ ದೇಶದಲ್ಲಿ ಇರುವುದು ಒಂದು ಜನಾಂಗ, ಒಂದು ಭಾಷೆ. ಯಾವುದು ನಮ್ಮ ನೆಲದ ತರ ಒಕ್ಕೂಟವಲ್ಲ. ಸಾಲದಕ್ಕೆ ಅವರು ಮನಗಾಣಬೇಕಾಗಿರುವುದು ಅಲ್ಲಿ ರಾಷ್ಟ್ರಭಾಷೆ ಎಂದು ಅಲ್ಲ, ಅದು ಮಾತೃಭಾಷೆ ಎಂದು. ತಮ್ಮ ಲೇಖನದಲ್ಲಿ ಅವರೇ ಹೇಳಿದ ಹಾಗೆ ಶಿಕ್ಷಣವನ್ನು ಯಾರೇ ಆಗಲಿ ತಮ್ಮ ಮಾತೃಭಾಷೆಯಲ್ಲಿ ಓದಿದರೆ ಹೆಚ್ಚು ಪರಿಣಾಮಕಾರಿ ಎಂದು. ಅದನ್ನು ಬಿಟ್ಟು ಅದನ್ನು ತಪ್ಪು ಅರ್ಥೈಸಿ ಹಿಂದಿ ಹೇರಿಕೆಗೆ ಮುಂದಾಗುವ ಕ್ರಮ ಸಲ್ಲದು. ಇದು ಯಾವ ರೀತಿ ಮಹತ್ತರ ಹೊಣೆಗಾರಿಕೆ ಎಂದು ಲೇಖಕರೇ ಉತ್ತರಿಸಬೇಕು ??


ಪೊಳ್ಳು ರಾಷ್ತೀಯತೆ

ಕನ್ನಡ ಕೇವಲ ಮನೆಭಾಷೆ
ಹಿಂದಿ ದೇಶದ ರಾಷ್ಟ್ರಭಾಷೆ
ಕನ್ನಡಕ್ಕಿಂತ ಹಿಂದೆ ಹೆಚ್ಚು ದೊಡ್ಡದು
ಎಲ್ಲ ಭಾಷೆಗಳಿಗೆ ಅಮ್ಮ ಸಂಸ್ಕೃತ
ಸಂಸ್ಕೃತ ಮತ್ತು ಹಿಂದಿ ಬೇಡ ಅನ್ನುವುರು ದೇಶದ್ರೋಹಿಗಳು
ಕನ್ನಡ-ಕನ್ನಡಿಗ-ಕರ್ನಾಟಕ ಅಂತ ಹೇಳುವುದು ದೇಶ ಒಡೆಯುವ ಕೆಲಸ
ಹಿಂದು ಧರ್ಮ ರಕ್ಷಸಿದರೆ ದೇಶ ಉಳಿಯುವುದು

ಈ ತರಹದ ಗೊಡ್ಡು ಉಪದೇಶಗಳನ್ನು ನಾವು ಕೇಳುತ್ತಲೆ ಇರುತ್ತೆವೆ. ವಿಪರ್ಯಾಸವೆಂದರೆ ನಮ್ಮ ಆಳುವ ಪ್ರಭುಗಳಿಗೂ ಇದರ ಛಾಯೆ ಇದೆ ಎಂದರೆ ಮಿಷನರಿಗಳಿಗಿಂತ ಹೆಚ್ಚು ಸುಳ್ಳು ಪ್ರಚಾರವನ್ನು ಮಾಡಿದ್ದಾರೆ ಎಂದು ಅರ್ಥ ಅಲ್ಲವೇ ??. ಇಂತಹ ಸುಳ್ಳು ಹೇಳಿಕೆಯಿಂದ ಮಕ್ಕಳ ಸರ್ವೋತೋಮುಖ ಬೆಳವಣಿಗೆ ಸಾಧ್ಯವೇ ..ಲೇಖಕರೇ ಉತ್ತರಿಸಬೇಕು.