Saturday, September 12, 2009

ಪ್ರೇಮಕಹಾನಿ - Prem Kahani Film Review



ಒಂದು ಚಿತ್ರ ತುಂಬಾ ಹೈಪ್ ಮಾಡಿಕೊಂಡರೆ ಒಂದು ರೀತಿ ಕಷ್ತ, ಜನರಲ್ಲಿ ದಿನಕಳೆದಂತೆ ಹೆಚ್ಚು
ನಿರೀಕ್ಷೆ ಬೆಳೆಯುತ್ತದೆ, ಇದಕ್ಕೆ ಪ್ರೇಮಕಹಾನಿ ಹೊರತಲ್ಲ. ೨ ತಿಂಗಳಿಂದ ಇವತ್ತು ನಾಳೆ ಅನ್ನೋ ರೀತಿಯಲ್ಲಿ
ಬಂದು ಹೊಗುತ್ತಲೆ ಇತ್ತು. ರಾಜ್ ಜೊತೆ ತೆರೆ ಕಾಣುತ್ತದೆ, clash of titans ಆಗೊತ್ತೆ ಅಂತ ನಿರೀಕ್ಷೆ ಇತ್ತು, ಆದ್ರೆ ರಾಜ್ ಕ್ಲಿಕ್ ಆಗಿ ಅದು ಇದಕ್ಕೆ ಹೊಡೆತ ಬೀಳಬಹುದು ಅಂತ ಭಯದಲ್ಲಿ ಮತ್ತೆ ಮುಂದೂಡಲಾಯಿತು.
ಯಾವಾಗ ರಾಜ್ ಸೋತು ಸುಣ್ಣ ಆಯಿತೂ , ಎಲ್ಲರ ಗಮನ ನೆಟ್ಟಿದ್ದು ಪ್ರೇಮಕಹಾನಿ ಮೇಲೆ, ಇದೇ
ಕನ್ನಡ ಚಿತ್ರರಂಗಕ್ಕೆ ಸಂಜೀವಿನಿ ಅನ್ನೊ ಮಾತುಗಳು, ನೋಡಿದವರೆಲ್ಲಾ ವಾಹ್ ವಾಹ್ ಅಂತ ಇದ್ದಾರೆ ,ಅದ್ದರಿಂದ ಇದು ಇನ್ನೊಂದು ತಾಜಮಹಲ್ ಆಗುತ್ತದೆ ಅನ್ನೊ ಮಾತುಗಳು ಕೇಳಿ ಬರತೊಡಗಿದವು.


ಇಂತಹ ಹೈಪ ಆದ ಚಿತ್ರಗಳನ್ನು ಮೊದಲ ದಿನವೇ ನೋಡಬೇಕು, ಇಲ್ಲವಾದರೆ ಪತ್ರಿಕೆಗಳ ರಿವ್ಯೂನಲ್ಲಿ ಅನೇಕ ಅಂಶಗಳು ಕಳೆದು ಹೋಗಿತ್ತವೆ.

ನಗೆ ಹನಿ + ಕಣ್ಣೀರ ಹನಿ = ಪ್ರೇಮ ಕಹಾನಿ, ಈ ಒಂದು ನಿಯಮದಲ್ಲೇ ಇಡಿ ಚಿತ್ರದ ಕಥೆ ಅಡಗಿದೆ ಅಂದರೆ ನಂಬಲೇ ಬೇಕು. ಇದರಲ್ಲಿ + ಅನ್ನೊಂದು ಮಧ್ಯಂತರ ಅಷ್ಟೆ. ಚಂದ್ರು ತಾವು ತಾಜಮಹಲ್ ನಲ್ಲಿ ಮಾಡಿದ ಜಾದೂವನ್ನು ಇದರಲ್ಲೂ ಮಾಡಲೇಬೇಕು ಅನ್ನೊ ಅವಸರದಲ್ಲಿ ಸ್ವಲ್ಪ ಕುರುಡು ನಂಬಿಕೆಗೆ ಮಾರು ಹೋಗಿದ್ದಾರೆ. ಅದರಲ್ಲಿ ಮಾಡಿದ ಹಂದರವನ್ನೇ ಇದರಲ್ಲಿ ಮಾಡಲು ಹೋಗಿದ್ದಾರೆ, ಒಂದು ಲೆಕ್ಕದಲ್ಲಿ ಗೆದ್ದೆತ್ತಿನ ಬಾಲಕ್ಕೆ ಜೋತು ಬಿದ್ದಿದ್ದಾರೆ.

ನೀವು ತಾಜಮಹಲ್ ಮತ್ತು ಪ್ರೇಮಕಹಾನಿ ನೋಡಿದರೆ ಕೆಲವು ಸಾಮನ್ಯ ಅಂಶ ಕಾಣುತ್ತದೆ

೧) ನಾಯಕ ಬಡವ, ನಾಯಕಿ ಶ್ರೀಮಂತೆ ಅವರಿಬ್ಬರ ಮಧ್ಯೆ ಪ್ರೇಮಾಂಕುರ.

೨) ನಾಯಕ ಮನೆಯಲ್ಲಿ ಕಿತ್ತು ತಿನ್ನೋ ಬಡತನ, ಆದ್ರೆ ನಾಯಕ ಮಾತ್ರ ಶೋಕಿ ಹುಡುಗ.

೩) ಸಿನೆಮಾ ಮುಗಿಯುವುದು ನಾಯಕನ ಸಾವಿನಲ್ಲಿ.

೪) ಅದೇ ನಟ ನಟಿಯರು

ನಾಯಕ ಮಂಜ , KR Market ನಲ್ಲಿ ಮೂಟೆ ಹೋರುತ್ತ, ಸಿಂಗಾಪುರ ಅನ್ನೋ ಸ್ಲಂನಲ್ಲಿ ವಾಸ ಮಾಡುತ್ತ ಇರುತ್ತಾನೆ. ದಿನ ಬೆಳಿಗ್ಗೆ ೫ ರಿಂದ ೧೧ ಗಂಟೆ ತನಕ ಕೆಲ್ಸ ಆಮೇಲೆ ಅವನ ಪೋಕರಿ ಗೆಳೆಯರ ಜೊತೆ ಊರುರು ಸುತ್ತವ ಕೆಲ್ಸ. ಇವನ ಗೆಳಯರಿಗೆ ಬ್ಲೇಡ್ ಅನ್ನುವ ನಾಯಕ, ಇವನ ಗಾಡಿಯಲ್ಲಿ ಅವನಿಗೆ ಡವ್ ಹುಡುಕುವ ಕಾಯಕಕ್ಕೆ ಇಡಿ ದಿನ ಮೀಸಲು ಇಟ್ಟಿರುತ್ತಾರೆ. ಎಲ್ಲಾ ಹೆಣ್ಣುಮಕ್ಕಳ ಕಾಲೇಜಿನ ಮುಂದೆ ಜೊಲ್ಲು ಸುರಿಸಿಕೊಂಡು, ನಗುವುದು ಚೀ ತೂ ಅನಿಸಿಕೊಳ್ಳುವುದು, ಇಲ್ಲ ಪೋಲಿಸರ ಕೈಗೆ ಸಿಕ್ಕಿ ಒದೆ ತಿನ್ನುವುದು ಕಾಯಕ ಆಗಿರುತ್ತದೆ. ಅವರ ನಾಯಕನಿಗೆ ಎಲ್ಲರೂ ಕಿವಿಗೆ ಹೂವಾ ಇಡುತ್ತ ಸಿಗರೇಟ್ ಮತ್ತು ಪಾನ್ ಪರಾಗ್
ತೆಗೆಸಿಕೊಳ್ಳುವುದು, ರಾತ್ರಿ ಎಣ್ಣೆ ಕುಡಿದು ಟೈಟ್ ಆಗುವುದು ಇದೆ ಇವರ ನಿತ್ಯ ಕಾಯಕ ಆಗಿರುತ್ತದೆ.

ಇತ್ತ ಒಂದು ತುಂಬು ಸಂಸಾರ, ಅದರ ಅದಿಪತ್ಯ ರಂಗಾಯಣ ರಘುವಿನದು. ಬ್ಯಾಂಕಿನಲ್ಲಿ ಉತ್ತಮ ಕೆಲ್ಸ, ಮನೆ ತುಂಬ ಮಕ್ಕಳು , ಆವರ ಜೊತೆ ಗೆಳೆಯನಾಗಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತ ಇರುತ್ತಾನೆ. ಆ ಮನೆಯಲ್ಲಿ ಅನ್ಯೋನತೆ ಮತ್ತು ಸಹಬಾಳ್ವೆ ಎದ್ದು ಕಾಣುವ ಹಾಗೆ ನಿಗಾ ವಹಿಸಿರುತ್ತಾನೆ.
ಆ ಮೂರು ಮಕ್ಕಳಲ್ಲಿ ಒಬ್ಬಳೆ ಶೀಲಾ ( ಇವಳು ತೆಲುಗು ಪಿಲ್ಲ, ಮುಖ ನೋಡಿದರೆ ಜಗ್ಘೇಶ್ ಜೋತೆಗೆ ನಟಿಸಿದ್ದ ಉಧಯಬಾನು ಜ್ಞಾಪಕಕ್ಕೆ ಬರುತ್ತಾಳೆ).

ಲಂಗದಾವಣಿಯಲ್ಲಿ ಕಾಲೇಜಿಗೆ ಹೋದಾಗ ಬ್ಲೇಡ ಕಣ್ಣಿಗೆ ಬೀಳುತ್ತಾಳೆ, ಅಲ್ಲೇ ಲವ್ ಆಗಿ ಇವಳೇ ನನ್ನ ಹೆಂಡ್ರು ಅಂತ ಅಂದುಕೊಳ್ಳುವದಕ್ಕೂ , ಅದಕ್ಕೆ ಹುಡುಗರು ಕಾಗೆ ಹಾರಿಸುವದಕ್ಕೂ ಸರಿ ಹೋಗುತ್ತದೆ. ಆ ಗುಂಪಿನಲ್ಲಿ
ಅವಳಿಗೆ ಮಂಜ ಕಣ್ಣಿಗೆ ಬಿದ್ದು ಅವನ ಪೊರ್ಕಿ ಸ್ಟೈಲ್ ಇಷ್ಟ ಆಗುತ್ತದೆ. ಮುಂದೆ ಒಂದು ದಿನ ಅವನು ಒಂದು ಮಗುವನ್ನು ಕಾಪಡಿದ್ದು ಕಂಡು,ಅವನಿಗೆ ಮನಸ್ಸು ಕೊಡುತ್ತಾಳೆ. ಇಲ್ಲಿ ಬ್ಲೇಡ ದಿನ ಮಂಜನ್ನ ಆ ಹುಡುಗಿ ನೋಡ್ತಾ ಇದ್ದರೆ ತನ್ನನ್ನೇ ನೋಡ್ತಾ ಇದ್ದಾಳೆ, ತನ್ನ ಬಗ್ಗೆ ಮಾತಾಡುತ್ತ ಇದ್ದಾಳೆ ಅಂತ ಮಂಡಿಗೆ ತಿನ್ನುತ್ತ ಇರುತ್ತಾನೆ, ಆದ್ರೆ ಒಂದು ದಿನ ಆ ಹುಡುಗಿ ಬಂದು ಮಂಜನಿಗೆ ILU ಹೇಳಿದಾಗ , ಬ್ಲೇಡನ ಆಶಾಗೋಪುರ ಬೀಳುತ್ತದೆ, ಅದಕ್ಕೆ ದೊಡ್ಡ ಗಲಾಟೆ ಆಗಿ ಮಂಜ ಅವರ ಗುಂಪಿನಿಂದ ಆಚೆ ಬರುತ್ತಾನೆ.

ಪ್ರೀತಿಯಲ್ಲಿ ಹೃದಯ ಶ್ರೀಮಂತಿಕೆ ಬೇಕು, ಪ್ರಾಣ ಕೊಡೊ ಗಂಡ ಬೇಕು ಅನ್ನುವ ಇವಳಿಗೆ ಮಂಜನೆ ಅನರೂಪ ವರ ಅನಿಸಿರುತ್ತಾನೆ. ದಿನ ಅವನು ೨ ಪ್ಯಾಕ್ ಸಿಗರೇಟ್, ೨೦ ಗುಟ್ಕಾ , ೨ ಬೀರು ಕುಡಿಯುವ ವಿಷಯ ಗೊತ್ತಿದ್ದರು, ಅವನ ದುಶ್ಚಟಗಳನ್ನು ಮುಂದು ಒಂದು ದಿನ ಬಿಡಿಸಬಹುದು ಅಂತ ನಂಬಿ ಅವನ ಜೊತೆ ಸುತ್ತತ್ತ ಇರುತ್ತಾಳೆ. ಪ್ರೀತಿಸಿದ ಮೇಲೆ ಚಳಿ ಎನು ಮಳೆ ಎನು, ಅವನ ಸಲುವಾಗಿ ನೂರಾರು ಸುಳ್ಳ್ಯ್ ಹೇಳುತ್ತ , ಸರ ಮಾರಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತ ಇರುತ್ತಾಳೆ. ಇಲ್ಲಿ ಮಂಜನ ಪಾಲಿಗೆ ಇದು ಕನಸೇ, ಅಷ್ಟು ಸುಂದರಿ ಹುಡುಗಿ ಎಲ್ಲಾ ಬಿಟ್ಟು ತನ್ನ ಹಿಂದೆ ಬಿದ್ದಿರುವಾಗ ಇದು ನನ್ನ ಪಾಲಿನ ಪುಣ್ಯ ಅಂತ
ಅವಳನ್ನೇ ಜೀವನ ಅಂತ ನಂಬಿರುತ್ತಾನೆ.

ಮುಂದೆ ಒಂದು ದಿನ ರಂಗಾಯಣ ರಘು ಇವಳ ಮಧುವೆಯನ್ನು ಬೇರೊಬ್ಬರ ಜೊತೆ ಬಲವಂತವಾಗಿ ನಡೆಸುತ್ತಾರೆ, ಆದ್ರೆ ಮೊದಲ ರಾತ್ರಿ ದಿನ ಅವಳು ಎಲ್ಲಾ ಕಥೆಯನ್ನು ಹೇಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಮರುದಿನ ಅವನು ಅವಳನ್ನು ಅವಳ ಪ್ರೇಮಿ ಜೊತೆ ಸೇರಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಇವರ ನಿಜವಾದ ಪ್ರೇಮಕಹಾನಿ. ಪ್ರೀತಿಸಿದವರಿಗೆ ೧೦೯ ಕಷ್ಟ ಅನ್ನೋ ಹಾಗೆ
ಇವರ ಬಳಿ ವಾಸಿಸೊಕ್ಕೆ ಮನೆ ಇರೊಲ್ಲ, ಕೆಲ್ಸ ಇರೊಲ್ಲ ಮತ್ತೆ ಸಂಸಾರ ನಡೆಸೊಕ್ಕೆ ವ್ಯವ್ಸಸ್ಥೆ ಇರುವದಿಲ್ಲ.
ಕೊನೆಗೆ ಯಾರೊಬ್ಬರ ಸಹಾಯದಿಂದ ಆಟೋ ಓಡಿಸುವ ಕೆಲ್ಸಕ್ಕೆ ಮುಂದಾಗುತ್ತಾನೆ ಮಂಜ. ದಿನಕ್ಕೆ ೧೫೦ ರೂಪಾಯಿ ಬಾಡಿಗೆ ಕೊಡಬೇಕು ಅನ್ನೊ ಕರಾರಲ್ಲಿ ಜೀವನ ಶುರು ಮಾಡುತ್ತಾರೆ.

ಇವರ ಜೀವನ ಒಂದು ಹಾಡಿನಲ್ಲಿ ೫ ವರುಷ ಓಡುತ್ತದೆ, ಒಂದು ಗಂಡು ಮಗು ಕೂಡ ಆಗುತ್ತದೆ , ಆದ್ರೆ ಅಲ್ಲಿಂದ ಚಿತ್ರದ ಓಟ ಕಮ್ಮಿ ಆಗುತ್ತದೆ.
ಪ್ರೀತಿಸುವುದು ಹೆಚ್ಚಲ್ಲ, ಸಂಸಾರ ಮಾಡುವುದು ಮತ್ತು ವಾಸ್ತವಕ್ಕೆ ಪ್ರೀತಿ ಉತ್ತರವಲ್ಲ, ಒಂದು ಹಂತದಲ್ಲಿ
ಯಾಕದ್ರು ಈ ಕ್ರಮ ಕೈಗೊಂಡೆವು ಅನ್ನೊ ಬೇಸರಿಕೆ ಕಾಡುವುದು ಸಹಜ, ಅದೇ ಇಬ್ಬರ ಬಾಳಲ್ಲಿ ಆಗುತ್ತ ಇರುತ್ತದೆ. ಎಷ್ಟು ಕಷ್ತ ಪಟ್ಟರೂ ಸಂಸಾರವನ್ನು ತೂಗಲಾರದೇ ಇರುವ ನಾಯಕ, ದುಡ್ಡಿಲ್ಲದೇ ಬಾಡಿಗೆ ಕಟ್ಟಲಾಗದೇ ಬೈಸಿಕೊಳ್ಖುವ ನಾಯಕಿ. ಎಲ್ಲಾ ಮಕ್ಕಳ ಹಾಗೆ ನನಗೂ ಎಲ್ಲ ಸವಲತ್ತು ಬೇಕು ಅನ್ನುವ
ಮಗು ಇವರ ಮಧ್ಯೆ ಕಥೆ ಗಿರಕಿ ಹೊಡೆಯುತ್ತ ಇರುತ್ತದೆ. ಇವರು ಪಡುವ ಪಾಡು, ಬಡವರನ್ನು ಸಮಾಜ ನೋಡುವ ರೀತಿ. ಅತಿಯಾದ ಸ್ಭಾಭಿಮಾನ ಇವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡುತ್ತದೆ. ಕೊನೆಗೆ
ಇವನ ಕೆಲ್ಸ ಹೋಗಿ, ಹೆಂಡತಿ ಕೆಲ್ಸಕ್ಕೆ ಸೇರಿಕೊಂಡು ದುಡಿಯುವ ಹಾಗೆ ಆಗುತ್ತದೆ. ಇವನಿಗೆ ಮನೆಯಲ್ಲಿ ಸಮಯ ಕಳೆಯುವುದೇ ಕಷ್ತ ಆಗಿ, ದಿನೇ ದಿನೇ ಕೊರಗುತ್ತ ಇರುತ್ತಾನೆ. ಆದ್ರೆ ಭವಿಷ್ಯತ್ ಬಗ್ಗೆ ಯೋಚನೆ ಮಾಡುತ್ತ ಕಷ್ತ ಪಡುತ್ತ ನಾಯಕಿ ಎಲ್ಲ ಕಷ್ಟವನ್ನು ನುಂಗಿ ಜೀವನ ಮಾಡುತ್ತ ಇರುತ್ತಾಳೆ.

ಹೀಗಿರುವಾಗ ಅವನ ಹಿಂದಿನ ಗೆಳೆಯ ಬ್ಲೇಡ್ ಸಿಕ್ಕಿ ಇವನಿಗೆ ಮಂಗಳಾರತಿ ಮಾಡುತ್ತಾನೆ
ಒವರ್ ಟೂ ಬ್ಲೇಡ್ ..

" ಲೇ ಮಂಜ ನೀನಾ ಇದು, ಸಿಗರೇಟ್ ಸೇದಿಕೊಂಡು ರಿಂಗ್ ಬಿಡುತ್ತಾ ಹೀರೋ ತರ ಇದ್ದೇಯಲ್ಲೊ ಇವತ್ತು ಮೋಟು ಬೀಡಿ ಸೇದೊ ಲೆವಲ್ಲಿಗೆ ಬಂದಿದ್ದೀಯಾ. ಅಲ್ಲ ಆ ದೇವತೆ ಅಂತ ಹುಡುಗಿ ನಿನಗೆ ಎಲ್ಲಾ ತ್ಯಾಗ ಮಾಡಿದಳು, ನೀನು ಎನು ಕೊಟ್ಟೆ. ಅವಳನ್ನು ಡಿಟಿಪಿ ಕೆಲ್ಸಕ್ಕೆ ಹಾಕಿ ಅವಳ ದುಡ್ಡಿನಲ್ಲಿ ಮಜಾ ಮಾಡ್ತಾ ಇದ್ದೀಯಾ. ಬೆನ್ನ ಹಿಂದೆ ಬಂದ ಹೆಣ್ಣನ್ನು ಕಣ್ಣಿಗೆ ಕಣ್ಣು ಹಾಗೆ ಕಾಪಾಡೊನೆ ಗಂಡಸು, ನೀನು ಅಲ್ಲ
ಬದಕಿದ್ದು ನೀನು ಅವಳನ್ನು ಮಗನನ್ನು ಬದುಕೊಕ್ಕೆ ಬಿಡೊಲ್ಲ, ಸಾಯಿ ಆಗ ಅವಳು ತನ್ನ ಅಪ್ಪನ ಮನೆಗೆ ಹೋಗುತ್ತಾಳೆ "

ಅಂತ ದಿವ್ಯ ಐಡಿಯಾ ಕೊಡುತ್ತಾನೆ. ಅದನ್ನೇ ನಾಯಕ ಅಕ್ಷರಷ ಮಾಡುತ್ತಾನೆ.

ಅಲ್ಲಿ ಇದು ಗೊತ್ತಿರದ ನಾಯಕಿ, ಮೊದಲ ಸಂಬಳದಲ್ಲಿ ನಾಯಕನಿಗೆ ಸಿಗರೇಟು,ಬೀರ್ ಎಲ್ಲಾ ತಂದು ಅವನಿಗೆ ಸರಪ್ರೈಸ್ ಕೊಡೊಣ ಅಂತ ಹೋದಾಗ ಕಾಣುವುದು ನಾಯಕ ಬಿದಿರು ಮೋಟರ್ ಹತ್ತಿರುವುದು. ಇದನ್ನು ಕಂಡು ಆವಳಿಗೆ ದು:ಖ ಬರೊಲ್ಲ, ಅಸಹ್ಯ ಆಗೊತ್ತೆ , ಆಗ ಅವಳ ಬಾಯಿಂದ ಬರುವುದೇ ಹೈಲಟ್ ಆಫ್ ದಿ ಫಿಲ್ಮ್ ..

"ಚೀ,,ನೀನು ಒಬ್ಬ ಗಂಡಸಾ, ನಿನ್ನ ನಂಬಿಕೊಂಡು ಎಲ್ಲಾ ಬಿಟ್ಟು ಬಂದನಲ್ಲೊ , ಆದ್ರೆ ನೀನು ಹೇಡಿ ತರ ಸತ್ತಿದ್ದೀಯಾ. ನಾಚಿಕೆ ಆಗೊತ್ತೆ ನನಗೆ, ನಿನಗೆ ಒಂದು ಕಣ್ಣಿರು ಹಾಕಿದರು ಅದೂ ವೇಸ್ಟೇ. ಪ್ರೇಮಿಗಳೆಲ್ಲಾ
ಸತ್ತು ಲೈಲಾ ಮಜನು,ಶಹಜಹಾನ ಆಗಬೇಕಾಗಿಲ್ಲ, ಬದುಕಿದ್ದು ಎನಾದರು ಸಾಧಿಸಬೇಕು. ನನ್ನ ಮಗನನ್ನು
ನಿನ್ನ ತರ ಮಾಡೊಲ್ಲ. ಅವನನ್ನು ಐನಸ್ಟೈನ್ ಮಾಡುತ್ತೆನೆ ಅಂತ ಶಪಥ ಮಾಡಿ ನಿನಗೆ ಒಂದು ಹಿಡಿ ಮಣ್ಣು ಹಾಕೊಲ್ಲ ಅಂತ ಹೋಗುತ್ತಾಳೆ.

ಹೀಗೆ ಒಂದು ಪಕ್ಕಾ ಲವ್ ಸ್ಟೋರಿ ಕೊನೆಯಾಗುತ್ತದೆ.




ಪ್ರಮುಖ ಅಂಶಗಳು.

೧) ಚಿತ್ರಿಕರಣ
೨) ಮೊದಲಾರ್ಧ
೩) ಶೀಲಾ ನಟನೆ
೪) ಹಾಡುಗಳು ಮತ್ತು ಹಿನ್ನಲೆ ಸಂಗೀತಾ
೫) ಚಿಕ್ಕ ಚಿಕ್ಕ ವಿಷಯಕ್ಕೂ ಚಂದ್ರು ಗಮನ ಕೊಟ್ಟಿರುವುದು.
೬) ಕ್ಲೈಮ್ಯಾಕ್ಸ
೭) ಸಮಾಜಿಕ ಸಂದೇಶ

-ve ಅಂಶಗಳು

೧) ದ್ವೀತಿಯಾರ್ಧ ಕಥೆ ಸಾಗುವ ವೇಗ
೨) ಸಾಕಪ್ಪ ಅನಿಸೋ ತೊಂದರೆಗಳು, ಪ್ರೇಕ್ಷಕ ಬರುವುದು ಚಿತ್ರಕ್ಕೆ ಮನರಂಜನೆಗೆ, ತನ್ನ ಎಲ್ಲ ದು:ಖವನ್ನು ಕ್ಷಣ ಮಾತ್ರಕ್ಕೆ ಆದರೂ ಮರೆಯೊಕ್ಕೆ. ಅದ್ರೆ ಕಣ್ಣಿರು ಬರೆಯುವ ಸೀನುಗಳು ನೋಡುವದಕ್ಕೆ ಹಿಂಸೆ ಅನಿಸುತ್ತದೆ ಮತ್ತು ಅಂತ ಚಿತ್ರಗಳು ಗೆಲ್ಲೊಲ್ಲ.
೩) ಪೊರಿಕಿ ಹುಡಗನನ್ನು ಒಂದೆರೆಡು ವಿಷಯಕ್ಕೆ ಲವ್ ಮಾಡುವ ಹುಡುಗಿ ನಿಜಕ್ಕೂ ನಿಜ ಅನಿಸುವದಿಲ್ಲ.
೪) ಕೆಲವು ಕಡೆ ಅಜಯ್ ಸಪ್ಪೆ ನಟನೆ
೫) ಆಟೋ ಚಾಲಕರ ಬಗ್ಗೆ ಒಳ್ಳೆ ಮಾತು ತುರುಕಿದ ಹಾಗೆ ಇದೆ.

ಒಟ್ಟಿನಲ್ಲಿ ಪ್ರೀತಿಯೇ ಬೇರೆ, ವಾಸ್ತವವೇ ಬೇರೆ, ಪ್ರೀತಿಸೊರು ತಾವು ಕಷ್ತ ಪಡೊದು ಸರಿ, ಆದ್ರೆ ತಮ್ಮ ಮಕ್ಕಳನ್ನು ಯಾಕೆ ಅದಕ್ಕೆ ಬಲಿಪಶು ಮಾಡಬೇಕು ಅನ್ನೊ ಸಂದೇಶದ ಜೊತೆ ಕೊನೆಗಾಣೋತೆ.

No comments: