Friday, April 21, 2006

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು
ಮಾನವ ವಿಕಸನ ಹೊಂದಿದ ಹಾಗೆ ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು.
ಆ ಸಮಯಕ್ಕೆ ತಕ್ಕ ಹಾಗೆ ಅದನ್ನು ರೂಪಿಸಿರಬಹುದು ಅದು ಪ್ರಶ್ನೆ ಅಲ್ಲ. ಆದರೆ ಅದನ್ನು ಶತಮಾನ ಕಳೆದ ಮೇಲು ಸುಮ್ಮನೆ ಅನುಸರಿಸಿಕೊಂಡು ಬಂದರೆ ಅದು ಪ್ರಶ್ನಾರ್ಹ.

ಹಾಗಿದ್ದರೆ ಯಾವುದು ಮೂಡನಂಬಿಕೆಯ ಪಟ್ಟಿಗೆ ಸೇರುತ್ತದೆ ??

ಯಾವ ನಂಬಿಕೆಗೆ ಒಂದು ಆಧಾರವಿಲ್ಲವೊ ,
ಯಾವ ನಂಬಿಕೆಯ ಹಿನ್ನಲೆ ಗೊತ್ತಿಲ್ಲವೊ,
ಯಾವ ನಂಬಿಕೆ ನವೀಕರಿಸಿಲ್ಲವೊ,
ಯಾವ ನಂಬಿಕೆಯ ಆಚರಣೆಯ ಮಹತ್ವ ತಿಳಿದಿಲ್ಲವೊ ಅದನ್ನು ಮೂಡನಂಬಿಕೆ ಅಂತ ಕರೆಯಬಹುದು.

ಆದರೆ ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನಲೆ ಮತ್ತು ಉಪಯೋಗ ತಿಳಿದಿರಬೇಕು, ಸುಮ್ಮನೆ ನಮ್ಮ ಹಿರಿಯರು ಆಚರಿಸಿದರು ಅಂತ ನಾವು ಅದನ್ನು ಪಾಲನೆ
ಮಾಡಲು ಆಗುವದಿಲ್ಲ. "ದೊಡ್ಡವರೆಲ್ಲಾ ಜಾಣರಲ್ಲ" , ಇಲ್ಲಿ ದೊಡ್ದವರು ಅಂದರೆ ನಮಗೆ ಅದರ ಹಿನ್ನಲೆ ಮತ್ತು ಉಪಯೋಗ ತಿಳಿಸದೆ,ಸಂಪ್ರದಾಯಗಳನ್ನು ಭೊದಿಸಿದವರು.
ನಾವು ಅದನ್ನು ಪ್ರಶ್ನೆ ಮಾಡಿದರೆ ತಮಗೆ ಗೊತ್ತಿರುವ ಉತ್ತದವನ್ನು ಹೇಳಿ ಇಲ್ಲಾ ಸುಮ್ಮನೆ ನಮ್ಮ ಬಾಯಿ ಮುಚ್ಚಿಸುವ ಹೊಸ ಸಂಪ್ರದಾಯವನ್ನು ಆರಂಭಿಸಿದರು.

ಸಂಪ್ರದಾಯಗಳು ಕಾಲನುಕ್ರಮೇಣ ನಶಿಸುತ್ತದೆ ಅಂತ ನಮ್ಮ ಕಲ್ಪನೆಯಲ್ಲಿ ಇಲ್ಲ, ಹಿಂದಿನವರು ಮಾಡಿದ್ದು ಶತಮಾನಗಳಿಗೂ ಅನ್ವಯವಾಗುತ್ತದೆ ಅನ್ನುವ ಪೊಳ್ಳು ನಂಬಿಕೆಯಿಂದ ನಾವು
ಈ ಕೂಪದಲ್ಲಿ ಸೇರಿದ್ದಿವೆ. ಪ್ರಶ್ನೆ ಮಾಡಿದರೆ ನಮ್ಮ ಹಿರಿಯರಿಗೆ ತೊರಿಸುವ ಅವಮಾನ ಅಂತ ಭಾವಿಸಿ ಸುಮ್ಮನೆ ಅದನ್ನು ಕಾಟಚಾರವಾಗಿ ಆಚರಿಸುತ್ತಿದ್ದೆವೆ, ಅದಕ್ಕೆ ಸಂಸ್ಕ್ರುತಿ ಅಂತ ಬೇರೆ ಹೆಸರು ಕೊಟ್ಟಿದ್ದಿವೆ.

ನಮ್ಮ ಹಿರಿಯರು ಪ್ರಶ್ನೆ ಮಾಡುವ ಯೊಗ್ಯತೆ ಇಲ್ಲದಿದ್ದರೂ ಸಹ, ಮುಂದಿನ ಪೀಳಿಗೆ ಅದನ್ನು ಆಚರಿಸಬೇಕೆಂದು ಪ್ರತಿಯೊಂದು ನಂಬಿಕೆಯ ಜೊತೆ ಒಂದು ಕತೆಯನ್ನು ಸೇರಿಸಿದರು, ಅದೇ ಅದನ್ನು ಆಚರಿಸಿದರೆ ಆಗುವ ಲಾಭ ಮತ್ತು ಅದನ್ನು ದಿಕ್ಕರಿಸಿದರೆ ಆಗುವ ನಷ್ಟ. ಮಾನವ ಎಷ್ಟೆ ಓದಿದರೂ ಸಹ ಇಂತಹ ಪೊಳ್ಳು ಕತೆಗಳಿಗೆ ಒಗೊಟ್ಟು ಅದನ್ನು ಪಾಲಿಸುತ್ತಾನೆ, ನೋಡಿರಬಹುದು
ವಾರಕ್ಕೆ ಬರುವ ವಿ-ಅಂಚೆಯಲ್ಲಿ ಈ ಪತ್ರವನ್ನು ೧೦ ಜನರಿಗೆ ಕಳುಹಿಸಿ, ನಿಮಗೆ ಒಳ್ಳೆಯಾದಗುತ್ತದೆ. ತಿರುಪತಿ ಸ್ವಾಮಿಯ ಆಶೀರ್ವಾದವಿರಬಹುದು ಇಲ್ಲಾ ಸಾಯಿಬಾಬ ಮಾಂತ್ರಿಕ ಇರಬಹುದು, ನಮ್ಮ ಜನ ದಿಕ್ಕರಿಸಿದರೆ ಆಗುವ ನಷ್ಟಕ್ಕೆ ಹೆದರಿ, " ಅಯ್ಯೊ ನಾನು ಕಳುಹಿಸಿದರೆ ನನಗೆ ಆಗುವ ನಷ್ಟ ಏನು?, ಸುಮ್ಮನೆ ನೋಡೆ ಬಿಡುವ ಅನ್ನುವ ತೀರ್ಮಾನಕ್ಕೆ ಬರುವುದು ನಿಜಕ್ಕೂ ಘೊರವೇ ಸರಿ.

ಇದನ್ನು ಲಾಭ ಪಡೆಯುವವರೂ ಶತಮಾನಗಳಿಂದಲೂ ಇದ್ದೆ ಇರುತ್ತಾರೆ, ಜನರ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಾರೆ, ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ
ಕೆಲವು ವರ್ಷಗಳಿಂದ ಹುಟ್ಟಿರುವ ದೇವರುಗಳು ಮತ್ತು ಅದರ ಉಪಕಥೆಗಳು. ಹೆಚ್ಚಾಗಿ ಇದಕ್ಕೆ ಬಲಿಯಾಗುವರು ಹೆಂಗಸರು ಅದಕ್ಕೆ ಈ "ವೈಭವ ಲಕ್ಶ್ಮಿ" ಮತ್ತು "ಕಲ್ಕಿ" ದೇವರುಗಳು ಪ್ರತಿ ಮನೆಯನ್ನು ಹೊಕ್ಕಿವೆ, ನಮ್ಮ ಲಲನಾಮಣಿಗಳು ಆಸೆಗೆ ಬಿದ್ದು ಪೂಜೆ ಮಾಡಿದ್ದು ಮಾಡಿದ್ದೆ. ಯಾರಿಗೆ ವೈಭವ ಬಂತೊ ಇಲ್ಲವೋ ಆದರೆ ಈ ದೇವರ ಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ
ಮುದ್ರಾಲಯದವನಿಗೆ ವೈಭವದ ದರ್ಶನವಾಯಿತು.
ಇದನ್ನು ಹುಟ್ಟು ಹಾಕಿದ ಭೂಪನಿಗೆ ನಿಜಕ್ಕೂ ಅಭಿನಂದಿಸಬೇಕು,ಇಷ್ಟು ಚೆನ್ನಾಗಿ ಜನರನ್ನು ವಂಚಿಸುವ ವಿಧಾನ ಬೇರೊಂದಿಲ್ಲ.

ಪ್ರತಿವಾರ ಮುತೈದೆಯರು ಇತರ ೫ ಮುತೈದೆಯರಿಗೆ ಈ ವೈಭವ ಲಕ್ಶ್ಮಿಯ ಬಾಗಿನ ಕೊಡಬೇಕು, ಕೊಡುವಾಗ ಒಂದು ಪುಸ್ತಕದ ಜೊತೆ ಕೊಡಬೇಕು, ಆ ತರ ಅವರು ಇಷ್ಟು ವಾರಗಳ ಕಾಲ ಮಾಡಿದರೆ ಇಷ್ಟು ಪುಣ್ಯಕ್ಕೆ ಒಳಗಾಗುತ್ತಾರೆ ಅಂತ ಇದೆ. ಆದರೆ ಮೆಚ್ಚುಗೆಯ ಅಂಶವೆನೆಂದರೆ ಬಾಗಿನ ತೆಗೆದುಕೊಳ್ಳುವ ಹೆಂಗಸರು ಕೂಡ ಇದನ್ನು ಆಚರಿಸಬೇಕು. ಹೀಗೆ ಇದು chain reaction ಆಗಿ ಆ ಪ್ರಕಾಶಕನಿಗೆ ದುಡ್ಡೊ ದುಡ್ಡು.

ಕಳೆದ ಶತಮಾನದಿಂದ ಹುಟ್ಟಿರುವ ಮತ್ತು "powerful" ದ್ಯಾವ್ರು ಅಂದರೆ ಶ್ರೀ ಶ್ರೀ ಸತ್ಯನಾರಯಣ. ತುಂಬಾ "flexible" ಪೂಜೆ ಇದು, ಯಾವಾಗ ಬೇಕಾದರೂ ಮಾಡಬಹುದು, ವರ್ಷಕ್ಕೆ ಒಮ್ಮೆ ಅಂತ ಕಾಯುವ ಗೊಜಿಲ್ಲ. ಈ ದೇವರಿಗೆ ಅಬ್ಬಬ್ಬಾ ಅಂದರೆ ೧೨೦-೧೩೦ ವರ್ಷಗಳ ಇತಿಹಾಸವಿದೆ ಅಷ್ಟೆ. ಈ ದ್ಯಾವ್ರು ಬಗ್ಗೆ ಇನ್ನೊಮ್ಮೆ ಹೇಳುವೆನು.

ದುರಂತವೆಂದರೆ ಅನೇಕ ಮಹಾನ್ ಪುರುಷರು ಬಂದು ಹೊದರು ನಾವು ಬದಲಾಗಿಲ್ಲ, ನಾಯಿ ಬಾಲ ಡೊಂಕು ಅನ್ನುವ ಹಾಗೆ ಆ ಮಹಾತ್ಮರ ಅನುನಾಯಿ ಅಂತ ಹೇಳಿಕೊಂಡರು, ಅವರ ಮಾತುಗಳನ್ನು ಅನುಸರಿಸದೆ, ದೇವರ ಗುಡಿಯಲ್ಲಿ ಅವರ ಭಾವಚಿತ್ರ ಹಾಕಿ ನಮಗೆ ಬಂದ ಹಾಗೆ ಇದ್ದೆವೆ. ಇದು ಹಣ್ಣಿನ ಸಿಪ್ಪೆ ತಿಂದು ತಿರುಳನ್ನು ಎಸೆದ ಹಾಗೆ.
ದುಃಖದ ಸಂಗತಿ ಎಂದರೆ ಮಹಾತ್ಮರು ಎಲ್ಲರೂ ಈ ಮುಡನಂಬಿಕೆಗಳ ವಿರುದ್ಧ ದ್ವನಿ ಎತ್ತಿದವರೇ !!!

ಸಂಪ್ರದಾಯ ಸರಿ, ಆ ಕಾಲಕ್ಕೆ ಅನುಗುಣಕ್ಕೆ ಹುಟ್ಟು ಹಾಕಿರಬಹುದು. ಉದಾ:- ೧೦೦ ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ತುಂಬಾ ಹಿಮ ಬೀಳುತ್ತ ಇದ್ದರೆ, ಸಂಕ್ರಾತಿಯ ಸಮಯದಲ್ಲಿ ಎಲ್ಲರೂ ಬೆಚ್ಚನೆಯ ಉಣ್ಣೆ ಬಟ್ಟೆ ಕೊಂಡುಕೊಳ್ಳುವುದು ಮತ್ತು ಹಾಕಿಕೊಳ್ಳುವುದು ಸಂಪ್ರದಾಯವಾಗುತ್ತದೆ. ಅದೇ ಕಾಲಕ್ರಮೇಣ ಜನರಲ್ಲಿ ಅಭ್ಯಾಸವಾಗುತ್ತದೆ, ೧೦೦ ವರ್ಷಗಳ ನಂತರ ಪ್ರಕೃತಿಯ ವೈಪರಿತ್ಯದಿಂದ ಜನವರಿ ತಿಂಗಳಲ್ಲಿ ಸುಡು ಬಿಸಿಲು ಬಂದರೂ ಸಹಾ, ನಮ್ಮ ಹಿರಿಯರು ಹಾಕಿದ ಸಂಪ್ರದಾಯ ಅಂತ ಜೋತು ಬಿದ್ದು ಸಂಕ್ರಾತಿಗೆ ಉಣ್ಣೆ ಬಟ್ಟೆ ಹಾಕಿಕೊಂಡರೆ ನಗೆಪಾಟಲಿಗೆ ಒಳಗಾಗುತ್ತೆವೆ.

ಪ್ರಶ್ನೆ ಮಾಡಿಕೊಂಡು ಇಂದಿಗೆ ಎಷ್ಟು ಅದು ಸರಿ ಅಂತ ಯೋಚಿಸಿ ಆಚರಿಸಿದರೆ ಸಂಪ್ರದಾಯಗಳಿಗೆ ಒಂದು ಅರ್ಥವಿರುತ್ತದೆ.

- ಪ್ರ

No comments: