
ಮೊದಲಿಗೆ ಸಮಸ್ತ ಭಾಂಧವರಿಗೆ ದಸರಾ ಹಬ್ಬದ ಶುಭಾಶಯಗಳು, ದಸರಾ ಬಂತು ಅಂದರೆ ಚಿಕ್ಕ ವಯಸ್ಸಿನಿಂದ ಮನಸ್ಸಲ್ಲಿ ಎನೊ ಉತ್ಸಾಹ. ಅದು ೧೦ ದಿನ ಬರುವ ರಜೆಗೆ ಒಂದು ಕಾರಣ ಇದ್ದರೆ ಬೊಂಬೆ ಹಬ್ಬಕ್ಕೆ ಇನ್ನೊಂದು. ನಮಗೆ ದಸರಾ ಅಂದರೆ ಬೊಂಬೆ ಹಬ್ಬ ಅಂತಲೇ ಬಾಯಿಗೆ ಬರುವುದು, ಆ ರೀತಿ ಎರಡೂ ಸಮನಾರ್ಥಾ ಆಗಿದೆ. ಬೊಂಬೆಗಳನ್ನು ಚಿಕ್ಕವರಿದ್ದಾಗ ಕೂರಿಸುವ ಮಜವೇ ಬೇರೆ ಇತ್ತು, ಅದರಲ್ಲಿ ನಮ್ಮ ಬೊಂಬೆಗಳು ಇಲ್ಲೇ ಕೂರಬೇಕು ಅನ್ನೊ ಹಟ, ಅವುಗಳು ಚೆನ್ನಾಗಿ ಕಾಣಲು ಸಿಂಗಾರ ಮಾಡುತ್ತಿದ್ದ ಪರಿ
ಆ ಸಂಭ್ರಮಗಳೇ ಹಬ್ಬವನ್ನು ಎದುರು ನೋಡಲು ಮಾಡುತ್ತಿದ್ದವು. ಸಿಂಗಾರಕ್ಕೆ ಬಳಸಲು ಎಲ್ಲ ಕಸಗಳು ಬಳಕೆ ಆಗುತ್ತಿದ್ದವು. ಸಿಗರೇಟಿನ ಬಂಗಾರದ ಕಾಗದ, ಚಾಕಲೇಟಿನ ಪೇಪರ್ ಹೀಗೆ ಹತ್ತು ಹಲುವಾರು.
ಪ್ರತಿ ದಿನ ಸಾಯಂಕಾಲ ನಮ್ಮ ಚಾಳಿನ(ವಠಾರ) ಎಲ್ಲಾ ಮಕ್ಕಳು ಮನೆಗೆ ಬರುತ್ತಿದ್ದರೂ, ಅವರಿಗೆ ನಮ್ಮ ಮನೆಯಲ್ಲಿ ಇಷ್ತೋಂದು ಬೊಂಬೆ ಇವೆ ಅಂತ ತೋರಿಸಿಕೊಳ್ಳುವ ಖುಷಿ ನಮಗೆ. ಹಾಗೆ ಬಂದ ಮಕ್ಕಳನ್ನು ಒಂದು ಕಡೆ ಕೂರಿಸಿ ಅವರನ್ನು ನಮ್ಮ ಹದ್ದಿನ ಕಣ್ಣಿನಿಂದ ಕಾಯುತ್ತ ಇದ್ದೇವು. ಎಲ್ಲಿ ಅವರು ಯಾವುದಾರರೂ ಬೊಂಬೆ ಮುಟ್ಟಿದರೆ ಅವರಿಗೆ ಗದರಿಸುವ ಪರಿ ನೆನಸಿಕೊಂಡರೆ ನಗು ಬರುತ್ತದೆ. ಬಂದ ಮಕ್ಕಳೆಲ್ಲ್ಲ ನಮಸ್ಕಾರ ಮಾಡಿ, ಹಾಡು ಹೇಳಿ, ಶ್ಲೋಕ ಹೇಳಿದ ಮೇಲೆ ದಿನಕ್ಕೆ ಒಂದು ಪ್ರಸಾದ ಕೊಡುತ್ತಿದೆವು.
ಅವುಗಳಲ್ಲಿ ಉಸಲಿ, ಮೈಸ್ರೂರು ಪಾಕ್, ಭರ್ಫಿ, ಉಂಡೆ, ಸಿಹಿದೋಸೆ, ಚಕ್ಕಲಿ, ಗನಪೌಡರ್, ನಿಪ್ಪಟ್ಟು, ಹೀಗೆ ದಿನಕ್ಕೆ ಒಂದು ಅಪ್ಪಚ್ಚಿ ಇರುತ್ತಿದವು. ನಮಗೋ ದಿನ ಒಂದು ತಿಂಡಿ ತಿನ್ನುವುದೇ ಒಂದು ಸಂತೋಷ.
ಎಲ್ಲ ಗೆಳೆಯರನ್ನು ಬೀಳ್ಕೋಟ್ಟು, ನಾಳೆ ನಮ್ಮ ಮನೆಗೆ ತಪ್ಪದೇ ಬರಬೇಕು ಅಂತ ಹೇಳಿ ಇನ್ನೊಬ್ಬರ ಮನೆಗೆ ದೌಡಾಯಿಸುತ್ತ ಇದ್ದೇವು. ಅಲ್ಲಿ ಎಲ್ಲರ ಮನೆಯಲ್ಲಿ ಪ್ರಸಾದ ತಿಂದು ಮನೆ ಸೇರುವಷ್ಟರಲ್ಲಿ ಕತ್ತಲು ಆಗಿರುತ್ತ ಇತ್ತು. ಇವುಗಳ ಮಧ್ಯೆ ಟಿವಿ ಹೊಸದಾಗಿ ಬಂದ ಕಾಲವದು, ನಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ನೋಡುವ ಅವಸರದಲ್ಲಿ ಹೋದ ಮನೆಗೆ ಬೇಗ ಪ್ರಸಾದ ಕೊಡಲು ಹೇಳುತ್ತ ಇದ್ದೆವು ಕೂಡ. ಕೆಲವೊಂದು ಸಾರಿ ಟಿವಿಯಿಂದಲೇ ಅನೇಕ ಮಕ್ಕಳು ಮನೆಗೆ ಬರುತ್ತ ಇದ್ದೆವು.

ಇದರಲ್ಲಿ ಒಂದು ದಿನ( ಸಪ್ತಮಿ) ಸರಸ್ವತಿ ಪೂಜೆ, ನಾವು ನಮ್ಮ ಪುಸ್ತಕಗಳನ್ನು ಇಡಬೇಕು. ಇದನ್ನು ತುಂಬಾ ಚೆನ್ನಾಗಿ ಮಾಡುತ್ತ ಇದ್ದೆವು, ಓದಿ ಕೊಳ್ಳಿ ಎಂದು ಹೇಳಿದರೆ ಪುಸ್ತಕ ಇಲ್ಲ ಅನ್ನೊ ನೆಪ, ನಮಗೆ ಒಳಗೊಳಗೆ ಖುಷಿ, ಆ ಪುಸ್ತಕಗಳು ೩ ದಿನ ಲಾಕ್ ಆಗಿರುತ್ತ ಇದ್ದವು. ೩ ದಿನ ನಮಗೆ ನೋ ಪಾಠ, ಬರೀ ಆಟ.
ಕಾಲಕ್ರಮೇಣ ದೊಡ್ಡವರಾದ ಹಾಗೆ ಇದರ ಬಗ್ಗೆ ಆಸಕ್ತಿ ಹೋಯಿತು, ಚಿಕ್ಕ ವಯಸ್ಸಲ್ಲಿ ಇದ್ದ ಉತ್ಸಾಹ ಕಮರಿತ್ತು. ತಿಂಡಿಗಳು-ಬೊಂಬೆಗಳು ಎರಡೂ ಆಸಕ್ತಿ ಹುಟ್ಟಿಸದಂತ ವಯಸ್ಸು. ಆದರೂ ಶಾಸ್ತ್ರಕ್ಕೆ ಬೊಂಬೆ ಕೂರಿಸುತ್ತ ಇದ್ದೆವು. ಹಳೆ ಬೊಂಬೆಗಳನ್ನು ಮತ್ತೆ ತೆಗೆದು ವರೆಸಿ ಕೂರಿಸುವಾಗ ಮನಸ್ಸಲಿ ಒಂಥಾರ ಸಂತೋಷ, ಮನಸ್ಸು ಒಮ್ಮೆಯೇ ಗತಕಾಲಕ್ಕೆ ಜಾರಿರುತ್ತ ಇತ್ತು.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಆ ಉತ್ಸಾಹ ಕಾಣುತ್ತ ಇಲ್ಲ, ಶಾಸ್ತ್ರಕ್ಕೆ ಸರಸ್ವತಿ ಪೂಜೆ ದಿನ ಒಂದೆರೆಡು ಪಟ್ಟದ ಬೊಂಬೆಗಳನ್ನು ಕೂರಿಸಿ ಶಾಸ್ತ್ರ ಮುಗಿಸುವ ಸಂಪ್ರಾದಾಯ ಬಂದಿದೆ. ಮನೆಯಲ್ಲಿ ಮಕ್ಕಳು ಹೆಚ್ಚಾದ ಹಾಗೆ ಅವು ನಮ್ಮ ಕಾಲದಲ್ಲಿ ನಾವು ಅನುಭವಿಸಿದ ಸಂತೋಷ ಅನುಭವಿಸಲು ಎಂದು ಮತ್ತೆ ಆ ರೀತಿಯಲ್ಲೇ ಆ ಮಟ್ಟದಲ್ಲೇ ಬೊಂಬೆ ಕೂರಿಸಲು ಶುರು ಮಾಡಿದೆವು. ಸಾಲದಕ್ಕೆ ನಮ್ಮ ಎರಿಯಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಕೂಡ ಪಾಲ್ಗ್ಲೊಂಡೆವು. ಇದರ ಉದ್ದೇಶ ನಮ್ಮಲ್ಲಿ ಒಂದು
ಸ್ಪರ್ಧೆ ಮೂಡಿ, ನಾವು ಇನ್ನಾ ಚೆನ್ನಾಗಿ ಮಾಡಬೇಕು ಅನ್ನೊ ಹುಮ್ಮಸಿಗೆ.
ಮಕ್ಕಳಿಗೆ ಇದು ನಮ್ಮ ಹಬ್ಬ ಅನಿಸೋ ಹಾಗೆ ಮಾಡಲು ಮಕ್ಕಳನ್ನೇ ಎಲ್ಲರ ಮಕ್ಕಳಿಗೆ ಕಳಿಸಿ ಎಲ್ಲ ಮಕ್ಕಳನ್ನು ಕರೆಯುವುದು,
ಮಕ್ಕಳಿಂದ ಬೊಂಬೆ ಬಾಗಿನ ಕೊಡಿಸುವುದು. ಮಕ್ಕಳೆಲ್ಲಾ ಸೇರಿದಾಗ ಅವುಗಳ
ಅದಕ್ಕೆ ಎನು ಇಡಬೇಕು ಅಂತ ಯೋಚಿಸುತ್ತ ಇದ್ದಾಗ ಅನಿಸಿದ್ದು ಈ ಬಾರಿ ಕೆಲವು ತೀಮ್ ಇಟ್ಟುಕೊಂಡು ಮಾಡೊಣ. ಪ್ರತಿ ತೀಮ್ ಬಗ್ಗೆ ಮಕ್ಕಳಲ್ಲಿ ಹೇಳಿ, ಕೊನೆ ದಿನ ರಸಪ್ರಶ್ನೆ ಎರ್ಪಡಿಸೋಣ ಅಂತ. ಇದರಿಂದ ಬಂದ ಮಕ್ಕಳಿಗೆ ಸ್ವಲ್ಪ ಮಜಾ ಮಾದರಿಯಲ್ಲಿ ಇರಲಿ ಅಂತ.
ಈ ಸಾರಿ ಹೇಗೆ ಕೂರಿಸಬೇಕು ಅಂತ ಮಾತನಾಡುತ್ತ ಇದ್ದಾಗ ಅನಿಸಿದ್ದು, ೩೫ ವರುಷಗಳ ಹಳೇ ಬೊಂಬೆಗಳನ್ನೇ ಮತ್ತೆ ಇಡುವ ಬದಲು ಹೊಸ ಬೊಂಬೆಗಳನ್ನು ಇಡೋಣ ಅಂತ. ಯಾಕೆ ಎಂದರೆ ಅನೇಕ ಬೊಂಬೆಗಳು ಮುರಿದು ಭಗ್ನವಾಗಿದ್ದವು, ಇಲ್ಲ ಬಣ್ಣ ಕಳೆದುಕೊಂಡು ಸವಕಲು ಆಗಿತ್ತು. ಅದಕ್ಕೆ ಅಂತಲೇ ಶಾಪಿಂಗ್ ಮಾಡುವ ನಿರ್ಧಾರಕ್ಕೆ ಬಂದು, ಯಾವ ಯಾವ ಬೊಂಬೆಗಳನ್ನು ತರಬೇಕು ಎಂದು ಪಟ್ಟಿ ಮಾಡಿಕೊಂಡೆವು.
ಆದರೆ ಈ ಬೊಂಬೆಗಳು ಎಲ್ಲಿ ಸಿಗುತ್ತವೆ ಅನ್ನೋದೆ ದೊಡ್ಡ ಜಿಜ್ಞಾಸೆ ಆಗಿತ್ತು, ಮಲ್ಲೇಶ್ವರಂ ಮತ್ತು ಬಸವನಗುಡಿ ಇಲ್ಲಿ ಸಿಗುತ್ತವೆ ಅಂತ ಹೋದೆವು. ಅಲ್ಲಿ ಹೊಸ ಬೊಂಬೆಗಳ ಸಾಗರವೇ ಇದ್ದವು. ನಾನು ಬೊಂಬೆಗಳ ಬೆಲೆ ಕೇಳಿ ಹಾಹಾರಿ ಹೋದೆ. ಚಿಕ್ಕ ಪುಟ್ಟ ಬೊಂಬೆಗಳೇ ೧೫೦ ರೂಪಾಯಿ. ೧ ಸಾವಿರ ರೂಪಾಯಲ್ಲಿ ಎಲ್ಲಾ ಬೊಂಬೆ ತೆಗೆದುಕೊಂಡು ಬರೋಣ ಅನ್ನೋ ನಮ್ಮ ಕಲ್ಪನೆಗೆ
ತಣ್ಣಿರು ಎರಚಿದ ಹಾಗೆ ಆಯಿತು. ಅದು ನನ್ನ ಒಬ್ಬನ ಪಾಡು ಆಗಿರಲ್ಲಿಲ್ಲ , ಬಂದವರಿಗೆಲ್ಲಾ inflation ತಾಪ ತಟ್ಟಿತ್ತು. ವಿಧಿ ಇಲ್ಲದೇ
ಬಂದವರೆಲ್ಲಾ ತೆಗೆದುಕೊಂಡು ಹೋದರು. ನಾವೇನೋ ಒಂದು ಹನುಮಂತನ ಬಾಲ ಪಟ್ಟಿ ಮಾಡಿಕೊಂಡಿದ್ದೆವು, ಅದರಲ್ಲಿ ಅರ್ಧ
ಇಲ್ಲ ಈಗ ಮಾಡುತ್ತ ಇಲ್ಲ ಅನ್ನೊ ಉತ್ತರ ಬಂದರೆ, ಇನ್ನ ಕೆಲವು sold out ಆಗಿವೆ ಅನ್ನೊ ಉತ್ತರ ಬಂದವು.
ಉಳಿದವುಗಳಲ್ಲಿ ಬೇಕಾದವುಗಳನ್ನು ಆರಿಸಿಕೊಂಡು ಬರುವಷ್ಟರಲ್ಲಿ ಅಂದುಕೊಂಡ ಖರ್ಚಿಗಿಂತ ಹತ್ತು ಪಟ್ಟು ಆಗಿದ್ದವು.
ಅಂಗಡಿಯವನಿಗೆ ಯಾಕೆ ಈ ಪಾಟಿ ರೇಟು ಅಂತ ಕೇಳಿದಾಗ ಅಯ್ಯೋ ದೊಡ್ಡ ಕಥೆ ಅಂದ ..
ಹಿಂದೆ ಮಣ್ಣಿನ ಬೊಂಬೆ ಮಾಡುತ್ತ ಇರುವರು ಸಿಕ್ಕುತ್ತ ಇದ್ದರು, ಈಗ ಕೈಗೆ ಸಿಗುತ್ತ ಇಲ್ಲ, ಹಾಗೋ ಹೀಗೊ ಹಿಡಿದರು ಅವರನ್ನು
೫ ಲಕ್ಷ ಅಡ್ವಾನ್ಸ ಕೇಳುತ್ತಾರೆ, ಒಂದು ವಾರ ಕೆಲ್ಸ ಮಾಡಿ ಆಮೇಲೆ ಪರಾರಿ ಆಗುತ್ತಾರೆ. ಸಿಗುತ್ತಿರುವ ಬೊಂಬೆಗಳೆಲ್ಲಾ ತಮಿಳುನಾಡಿನವು ಅಂದ. ಅದೇನೊ ಆ ಅಂಗಡಿಯಲ್ಲಿ ವ್ಯಾಪರಕ್ಕೆ ಬಂದವರು ೯೫% ತಮಿಳರೇ ಇದ್ದರು.
ಮುಂದಿನ ಸಂಚಿಕೆಯಲ್ಲಿ ಬೊಂಬೆಗಳನ್ನು ಕೂರಿಸುವ ವಿಧಾನ ಮತ್ತು ಸಲಹೆಗಳನ್ನು ಕೊಡುವೆ... ನಿರೀಕ್ಷಿಸಿ.
No comments:
Post a Comment