Monday, September 01, 2008

ಮತ್ತೆ ಬಂದ ಗಣೇಶ


ಭಾದ್ರಪದ ಮಾಸ ಬಂತು ಅಂದರೆ ಸಾಕು ಎಲ್ಲಿಲ್ಲದ ಸಡಗರ, ಅದಕ್ಕೆ ಕಾರಣ ಗಣೇಶನ ಹಬ್ಬ. ಗಣೇಶನ ಬಗ್ಗೆ ನಮ್ಮ ಭಾರತದಲ್ಲಿ ಅತಿಯಾಗಿ ಭಕ್ತಿ ಇದೆ, ಎಲ್ಲಾ ವರ್ಗದ ಜನ ಪೂಜಿಸುವುದು, ಹೆಚ್ಚು ದೇವಸ್ಥಾನ ಇರುವ ಶಕ್ತಿಶಾಲಿ ದೇವರು ಎಂದರೆ ಅತಿಶಯೋಕ್ತಿ ಆಗಲಾರದು. ನಿರಾಕಾರ, ಓಂಕಾರ ರೂಪಿ , ಅದಿಮೂಲ ಎಂದು ಒಂದು ಕಡೆ ಕರೆದರೆ, ಇನ್ನೊಂದು ಕಡೆ ಗೌರಿ ಪುತ್ರ, ಶಿವಸುತ ಅಂತ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಎಕರೂಪ ಅಭಿಪ್ರಾಯವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.

ಈ ಹಬ್ಬ ಬಂತು ಅಂದರೆ ಸಾಕು, ಬೀದಿ ಬೀದಿಯಲ್ಲಿ ಇರುವ ಹೈಕಳಿಗೆ ಕೈ ತುಂಬ ಕೆಲಸ, ನಿಮ್ಮ ಮನೆಗೆ ಗೊತ್ತು ಗುರಿ ಇಲ್ಲದ ದಂಡು ಬಂದು ಚಂದಾ ಕೇಳುತ್ತದೆ,
"ಇಲ್ಲೇ ಪಕ್ಕದ ರಸ್ತೆಯಲ್ಲಿ ಗಣೇಶ ಕೂರಿಸ್ತಾ ಇದ್ದೀವಿ, ಚಂದಾ ಕೊಡಿ" ಅಂತ ಕೇಳ್ತಾರೆ.
"ಅಲ್ಲಾಪ್ಪಾ ಮೊನ್ನೆ ತಾನೇ ಇಬ್ಬರೂ ಹೀಗೆ ಹೇಳಿ ಚಂದಾ ತೆಗೆದುಕೊಂಡು ಹೋದರಲ್ಲಾ " ಅಂತ ಕೇಳಿದರೆ, ಅದಕ್ಕೆ ತಕ್ಷಣ ಉತ್ತರ ರೆಡಿ ಇರೊತ್ತೆ.
"ಅಯ್ಯೊ ಅವರು ಬೇರೆ ನಾವು ಬೇರೆ, ಅವರಿಗೆ ಕೊಟ್ರಿ ಅಂದರೆ ನಮಗೂ ಕೊಡಬೇಕು" ಅಂತ ದಂಬಾಲು ಬೀಳುತ್ತಾರೆ.

ಇದು ವಿನಂತಿ ಆಗಿರುವದಿಲ್ಲ, ಹಿಂಸೆ, ಒತ್ತಾಯ ಇರುತ್ತದೆ. ಕೆಲ ಪುಂಡರಂತು ಮೊದಲೆ ರಸೀತಿ ಬರೆದು ಕೈಗೆ ಕೊಟ್ಟು ಬಿಡುತ್ತಾರೆ.
ದುಡ್ಡು ಕೊಡುವ ತನಕ ಬಿಡುವದಿಲ್ಲ. ಅದೂ ೧೦.,೨೦ ತೆಗೆದುಕೊಳ್ಳುವ ಜಯಾಮಾನ ಅಲ್ಲ, ೧೦೦,೫೦೦ ಕೊಡಬೇಕಂತೆ. ರೂ ೧೦ ಕೊಟ್ಟು ನೀವೆ ಇಟ್ಕೊಳ್ಳಿ ಅಂತ ಹೇಳಿ ಹೋದ ಪಡ್ಡೆಗಳು ಕಮ್ಮಿ ಇಲ್ಲ.

ಅಲ್ಲಾ ... ಗಲ್ಲಿ ಗಲ್ಲಿಗೆ ಗಣೇಶನನ್ನು ಯಾಕೆ ಕೂರಿಸಬೇಕು ಅಂತ ಪ್ರತಿ ವರುಶ ನನ್ನನ್ನು ನಾನು ಕೇಳಿಕೊಳ್ಳುವ ಪ್ರಶ್ನೆ??

* ರಸ್ತೆಯನ್ನು ಆಕ್ರಮಿಸಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು
* ಬೆಳಿಗ್ಗೆಯಿಂದ ರಾತ್ರಿ ತನಕ ಕೆಟ್ಟ ಸಂಗೀತ ಹಾಕಿ ಜನರ ನೆಮ್ಮದಿ ಕೆಡಸುವುದು.
* ದಾರಿಯಲ್ಲಿ ಹೋಗಿ ಬರುವ ಹುಡುಗಿಯರನ್ನು ರೇಗಿಸುವ ಪೋಲಿಗಳು.
* ಗಣೇಶನ ವಿಸರ್ಜನೆ ಸಮಯದಲ್ಲಿ ಅಸಭ್ಯ ನೃತ್ಯ, ಕುಡಿತಗಳನ್ನು ನೋಡುವ ಕರ್ಮ.
* ಪಟಾಕಿ ಹೋಡಿಯುವ ನೆಪದಲ್ಲಿ, ಪಟಾಕಿಯನ್ನು ಗಾಡಿಯ ಕೆಳಗೆ ಹಾಕುವ ಭಕ್ತವೃಂದ.
* ಕೆಟ್ಟ ಬಣ್ಣಗಳಿಂದ ಪರಿಸರಕ್ಕೆ ಹಾನಿ.

ಗಣೇಶನನ್ನು ಕೂರಿಸ್ತಾ ಇದ್ದೀವಿ ಅನ್ನೋ ಸಾರ್ವಜನಿಕರಿಗೆ ಕಷ್ಟ ಕೊಡುವ ಬಂಡರಿಗೆ

* ಯಾಕೆ ಗಣೇಶನನ್ನು ಕೂರಿಸ್ತಾ ಇದ್ದೀರಾ, ಇವತ್ತಿಗೆ ಅದರ ಪ್ರಸ್ತುತತೆ ಏನಿದೆ ಎಂದು ಕೇಳಿ.
* ನಮ್ಮ ಮನೆಯಲ್ಲೂ ಕೂರಿಸ್ತಾ ಇದ್ದೀವಿ, ನೀವೆ ಕೊಡಿ ಅಂತ ಕೇಳಿ

ಉತ್ತರ ಗೊತ್ತಿಲ್ಲದ ಪುಂಡು ಪೋಕರಿಗಳು, ಅಯ್ಯೊ ..ಬಾ ಮಗ ಸುಮ್ಮನೆ ಈ ವಯ್ಯ ಕೊಡೊಲ್ಲ ಅಂತ ಬಂದ ದಾರಿ ನೋಡಿಕೊಳ್ಳುತ್ತಾರೆ.

ಸರ್ಕಾರ ಒಂದು ಊರಿಗೆ ೧,೨ ಅಬ್ಬಾ ೫-೬ ಕಡೆ ಮಾತ್ರ ಕೂರಿಸಲು ಅನುಮತಿ ಕೊಡಬೇಕು. ಇಲ್ಲದಿದ್ದರೆ ದೇವರ ಹೆಸರಿನಲ್ಲಿ ತಮ್ಮ ಪೈಶಾಚಕ ಮನಸ್ಸನ್ನು ತೋರಿಸುವ ಜನರಿಗೆ ಬ್ರೇಕ್ ಹಾಕಿದ ಹಾಗೆ ಆಗುತ್ತದೆ. ಈ ನಿಟ್ಟಿನಲ್ಲಿ ನನಗೆ ಬಹಳ ಖುಷಿ ಕೊಟ್ಟಿದ್ದು ತುಮಕೂರಿನ ವ್ಯವಸ್ಥೆ. ಅದು ನಮ್ಮ ರಾಜ್ಯದ ಎಲ್ಲೆಡೆ ಮಾದರಿ ಆಗಲಿ...

ಕೊಸರು.....:-

ಗಣೇಶ ಎದ್ದ
ಪುಂಡು ಪೋಕರಿ ಆದ ಸಿದ್ದ
ಮನೆ ಮನೆಗೂ ಬಂದ
೧೦೦,೨೦೦ ಕೊಡಿ ಎಂದ
ಗಲ್ಲಿ ಗಲ್ಲಿಗೂ ತಂದ್ರು
ಕೆಟ್ಟ ಸಂಗೀತ ಹಾಕಿದ್ರು
ಕೊನೆಗೆ ...
ಟಪಾಲ್ ಗುಚ್ಚಿ ಹಾಕಿ ನದಿಗೆ ಎತ್ತಿ ಹಾಕಿ ಬಂದ್ರು.

No comments: