Friday, April 08, 2011

ಜನ್ ಲೋಕಪಾಲ್ ಹೋರಾಟ ..ಅವಲೋಕನ


ಜನಸಾಮನ್ಯರ ಹೋರಾಟಗಳು ಹೊಸದಲ್ಲ, ಅನೇಕ ಬಾರಿ ಅನೇಕ ಸಂಘ ಸಂಘಟನೆಗಳು ಮಾಡಿಕೊಂಡು ಬಂದಿವೆ. ಆದರೆ ಜನರು ಅದನ್ನು ಕೇವಲ ಬೂಟಾಟಿಕೆ, ಮಾಧ್ಯಮಗಳ ಮುಂದೆ ಬರಲು, ಪ್ರಚಾರಕ್ಕೆ ಎಂದು, ಇಲ್ಲ ರಾಜಕೀಯವಾಗಿ ತೆಗೆದುಕೊಂಡು
ನಮಗಲ್ಲ ಎಂದು ಅಂದುಕೊಂಡಿರುವುದೇ ಹೆಚ್ಚಿವೆ. ಇದರಿಂದ ಅನೇಕ ಹೋರಾಟಗಳು ನೇಪಥ್ಯಕ್ಕೆ ಸೇರಿವೆ. ಹೋರಾಟ ಮಾಡುವ ಜನರು ಮುಂದೊಂದು ದಿನ ಜನಸಾಮಾನ್ಯರು ನಮ್ಮೊಂದಿಗೆ ಬರುತ್ತಾರೆ ಎನ್ನುವ ವಿಶ್ವಾಸ, ಸರ್ಕಾರಕ್ಕೆ ಜಾಗೃತಿಯಾಗಬಹುದು ಎನ್ನುವ ಉದ್ದೇಶಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಹಾಗಿದ್ದಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.


ಜನಸಾಮನ್ಯರ ಜನಪ್ರಿಯ ಭಾವನೆ

ಭ್ರಷ್ಟಚಾರ ಎನ್ನುವುದು ಇವತ್ತು ಪ್ರತಿಯೊಬ್ಬರನ್ನು ಕಾಡುತ್ತ ಇದೆ, ಕೆಳವರ್ಗದಿಂದ ಹಿಡಿದು ಹಣವಂತರನ್ನು ಕಾಡುತ್ತ ಇದೆ. ಒಂದಲ್ಲ ಒಂದು ರೀತಿಯಲ್ಲಿ ನಾವುಗಳು ಲಂಚ ಕೊಟ್ಟಿರುತ್ತೆವೆ, ಕೊಡುವಾಗ ಬೈದುಕೊಂಡು, ಶಾಪ ಹಾಕಿಕೊಂಡೇ ಕೊಟ್ಟಿರುತ್ತೆವೆ. ಆ ಸಿಟ್ಟು, ಹತಾಷೆ ಎಲ್ಲೊ ಒಂದು ಕಡೆ ನಮ್ಮ ಸಮಾಜವೇ ಹೀಗೆ, ಸುಮ್ಮನೆ ನಾವು ಬೇಜಾರು ಮಾಡಿಕೊಳ್ಳುವುದು ಗಾಳಿಗೆ ಗುದ್ದಿದ ಹಾಗೆ ಎಂದು ನಾವು ಅಂದುಕೊಳ್ಳುತ್ತೆವೆ. ಆದರೆ ಮುಂದೊಂದು ದಿನ ಇದು ಕೊನೆಯಾಗಬೇಕು, ಭ್ರಷ್ಟಚಾರವಿಲ್ಲದ ದೇಶ ನಮ್ಮದು ಆಗಬೇಕು ಎನ್ನುವ ಕನಸು ಕಾಣುವದನ್ನು ನಾವು ಮರೆಯುವದಿಲ್ಲ.

ಇತ್ತಿಚಿನ ಬೆಳವಣಿಗೆಗಳು.

ಇವತ್ತು ನಮ್ಮ ದೇಶದ ಸ್ಥಿತಿ ಹೇಗಿದೆ ಎಂದರೆ ಹಗರಣ ಎಂದರೆ ಕನಿಷ್ಠ ೫೦೦ ಕೋಟಿಗಿಂತ ಮೇಲೆ ಇರಬೇಕು, ಅದಕ್ಕಿಂತ ಕಮ್ಮಿ ಇದ್ದರೆ ಮಾಧ್ಯಮಗಳಿಗೂ ಒಂದು ರೀತಿ ಅಸಡ್ಡೆ. ಇದು ಒಂದು ರೀತಿಯಲ್ಲಿ ಅಧಿಕಾರ ಇರುವರಿಗೂ ಇಂಬು ಕೊಟ್ಟಿದೆ. ಅವರು ಕೊಟಿ ತಿನ್ನೋವಾಗ ನಾನು ಸಾವಿರ ತಿಂದರೆ ತಪ್ಪೇನು ಎಂಬ ಧೈರ್ಯ ಮೂಡಿ ಕೊನೆಗೆ ಅವನು ರಾಜರೋಷವಾಗಿ ಲಂಚ ತೆಗೆದುಕೊಳ್ಲಲು ಶುರು ಮಾಡುತ್ತಾನೆ. ೨G, ಕಾಮನ್ ವೆಲ್ತ, ಆದರ್ಶ ಬಿಲ್ಡರ್ಸ, ಯಡ್ಡಿ ಮತ್ತು ಕುಟುಂಬದವರ ಭೂಹಗರಣ, ಕೋಟ್ಯಾಂತರ ರೂಫಾಯಿ ತೆರಿಗೆ ವಂಚನೆ ಹೀಗೆ ಹತ್ತು ಹಲವಾರು ನಮ್ಮ ಮುಂದೆ ಇದೆ. ದಿನ ಬೆಳಗಾದರೆ ನಮ್ಮ ಮುಖ್ಯಮಂತ್ರಿಯ ಹೊಸ ಹಗರಣ ಆಚೆ ಬಂದರೆ, ಅಲ್ಲಿ ಕೇಂದ್ರದಲ್ಲಿ ಅಧಿಕಾರ ಪಕ್ಷಗಳ ಇನ್ನೊಂದು ಹಗರಣ ಆಚೆ ಬರುತ್ತಲೇ ಇದೆ.
ಭ್ರಷ್ಟರು CVC ಅಧ್ಯಕ್ಷರಾಗಿದ್ದ ಈ ಕಾಲದಲ್ಲಿ ಅದರಿಂದ ಎನು ಮಹತ್ತರ ಬೆಳವಣಿಗೆ ಎಣಿಸಬಹುದು ? . ಇಂತಹ ಸುದ್ದೀಗಳೇ ನಮ್ಮ ಮಾಧ್ಯಮಗಳಲ್ಲಿ ಕಾಣುತ್ತ ಜನಸಾಮನ್ಯರ ಸಹನೆಯು ಕಟ್ಟೆ ಒಡೆದಿದೆ.

ಜೊತೆಗೆ ಈಜಿಪ್ಟ, ಲಿಬಿಯಾ, ಅಭುದಾಬಿ ಮುಂತಾದ ದೇಶದಲ್ಲಿ ಆಗುತ್ತಿರುವ ಜನಾಂದೊಲನಗಳು ಜನರಲ್ಲಿ ಹೆಚ್ಚಿನ ಸ್ಥೈರ್ಯವನ್ನು ಕೊಟ್ಟಿವೆ ಮತ್ತು ಇದರಿಂದ ಗೆಲವು ಪಡಿಯಬಹುದು ಎಂಬ ಸಂದೇಶವನ್ನು ಸಾರಿದೆ.

ಕಾಂಗ್ರೆಸ್ ಪಕ್ಷದ ನಿರ್ಲಕ್ಷತನ

ಮೊದಲು ದೇಶವೇ ವಿಶ್ವಕಫ್ ಗೆದ್ದ ಗುಂಗಿನಲ್ಲಿ ಇದ್ದಾಗ , ಅಣ್ಣಾ ಹಜಾರೆಯ ಹೋರಾಟವನ್ನು ಕಾಂಗ್ರೆಸ್ ಗಂಭಿರವಾಗಿ ಪರಿಗಣಿಸಲಿಲ್ಲ. ಇದಕ್ಕೆ ಅನೇಕ ಕಾರಣಗಳು ಇದ್ದವು ಹಿಂದೆ ನಡೆಸಿದ್ದ ಅಣ್ಣಾ ಹಜಾರೆ ಹೋರಾಟಗಳು, ಕೇವಲ ಒಂದು ವರ್ಗದ ಜನರ ಬೆಂಬಲ ಇವುಗಳು ಮೊದಲಿಗೆ ಕಾಂಗ್ರೆಸ್ ಪಾಳಯದ ಲಘು ಹೇಳಿಕೆಗಳು ಬರಲು ಶುರುವಾದವು. ಇದರ ಜೊತೆಗೆ
ಜೊತೆಗೆ ಕೆಲ ಮಾಧ್ಯಮಗಳಲ್ಲೂ ಇದು ಅವಸರದ ಕ್ರಮ , ಇದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸಿನ್ನ ವಿಚಾರಧಾರೆಯನ್ನು ಬಿಂಬಿಸಲಾಯಿತು.

ಇ ತರಹದ ವಿಷಯಗಳು ಕೇಂದ್ರ ವಲಯದಲ್ಲಿ ಇದ್ದಾಗ ಅದರ ಲಾಭ ಪಡೆಯಲು ಅನೇಕ ಪಕ್ಷಗಳು ಕಾಯುತ್ತ ಇರುತ್ತದೆ, ಅದರಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ, ಆದರೆ ತನ್ನ ತಟ್ಟೆಯಲ್ಲೇ ಹೆಗ್ಗಣ್ಣ ಬಿದ್ದಿರುವುದನ್ನು ಬಿಟ್ಟು ಇನ್ನೊಂದು ತಟ್ಟೆಯಲ್ಲಿ ನೋಣ ಬಿದ್ದಿರುವದನ್ನು
ತೋರಿಸುವ ಕ್ರಮ ನಿಜಕ್ಕೂ ನಗೆಪಾಟಲಿಗೆ ಗುರಿಯಾಗಿ ಅನೇಕ ಪಕ್ಷಗಳು ಬೆಂಬಲ ಕೋರಿ ಸುಮ್ಮನೆ ಆದವು. ಅಲ್ಲಿಗೆ ಇದರಲ್ಲಿ ರಾಜಕೀಯ ಪಕ್ಷಗಳ ಹೈಜಾಕ್ ಇಲ್ಲ ಕೇಂದ್ರ ರಾಜಿನಾಮೆ ಇಂತಹ ರಾಜಕೀಯ ಪ್ರೇರಿತ ಬೇಡಿಕೆಗಳು ಬರದೇ ಜನ್ ಲೋಕಪಾಲ್ ಮಸೂದೆ ಜಾರಿಯಾಗಬೇಕು ಎನ್ನುವ ಒಂದಂಶದ ಕಾರ್ಯಕ್ರಮಕ್ಕೆ ನಿಂತಿತು.

ಕೆಲ ಆಂಗ್ಲ ಮಾಧ್ಯಮಗಳು ಇದು ದೊಡ್ಡ ಹೋರಾಟ ಆಗುತ್ತದೆ, ಈಜ್ಜಿಪ್ಟ ಮಾದರಿ ಎಂದು ಬಿಂಬಿಸುತ್ತ ಇದಕ್ಕೆ ಪ್ರಚಾರ ಕೊಟ್ಟು ಜನ ಸಾಮನ್ಯರಲ್ಲಿ ಸಂಚಲನ ತಂದವು. ದಿನ ಬೆಳಗಾದರೆ ಇದರದೇ ಚರ್ಚೆ, ಅದೇ ಮುಖಪುಟ ಮತ್ತು ದಿನೇ ದಿನೇ ಜನಸಾಮಾನ್ಯರಲ್ಲಿ
ಇದನ್ನು ಬೆಂಬಲಿಸಿ ಬರೆಯುವ ವಾಲ್, ಮಿಂಚೋಲೆ, ಮಿಂಚೆ ಹರಿದಾಡ ತೊಡಗಿತು. ೨ ದಿನಗಳಲ್ಲಿ ಈ ಜ್ವರ ಹೆಚ್ಚುತ್ತ ಹೋಯಿತು.
ಯಾವಗ ಕೇಂದ್ರ ತನ್ನ ವರಸೆ ಬದಲಾಯಿಸುತ್ತ ಬಂತು ಜನರಲ್ಲೂ ಇದು ನಿಲ್ಲುವ ಹೊರಾಟ ಅಲ್ಲ, ಗೆಲ್ಲುವ ಹೋರಾಟ ಮತ್ತು ಇದರಲ್ಲಿ ಇರುವರು ರಾಜಕೀಯ ಪ್ರೇರಿತರು ಅಲ್ಲ ಎಂದೆಣಿಸಿ ಅವರ ಊರಿನಲ್ಲಿ ನಡೆಯುತ್ತ ಇದ್ದ ಉಪವಾಸಕ್ಕೆ ನಿಂತರೂ.

ಅನೇಕರಿಗೆ ಇದು ಸ್ವಾತಂತ್ರ ಹೋರಾಟ ಅನಿಸಿ, ಅಣ್ಣ ಹಜಾರೆಯಲ್ಲಿ ಬಾಪುವನ್ನು ನೋಡಿ ಅವರ ಬೆಂಬಲಕ್ಕೆ ನಿಂತರು. ಬೆಂಗಳೂರಿನ ಸ್ವಾತಂತ್ರ ಮೈದಾನದಲ್ಲಿ ಕಳೆದ ೩ ದಿನಗಳಲ್ಲಿ ಜನರು ಬರುತ್ತ ಇರುವುದು ಗಣನೀಯವಾಗಿ ಎರುತ್ತಲೇ ಇದೆ, ಇದಕ್ಕೆ ಯಾರು ಯಾರನ್ನು ಬನ್ನಿ ಎಂದು ಕೇಳಿಲ್ಲ, ಹೇಳಿಲ್ಲ. ಎಲ್ಲರ ಬಾಯಲ್ಲೂ ಅದೇ ಜೈಕಾರಗಳು. ವಯಸ್ಸು, ವರ್ಣ,ಜಾತಿ, ಧರ್ಮ, ಭಾಷೆ ಎಲ್ಲ ಮರೆತೂ ಒಂದೆಡೆ ನಿಂತು ತಮ್ಮ ಬೆಂಬಲವನ್ನು ತೋರಿಸುತ್ತ ಇದ್ದಾರೆ.

ಬೀಸುವ ದೊಣ್ಣೆ ತಪ್ಪಿದರೆ ಸಾಕು ..

ಅಲ್ಲಿಗೆ ಕಾಂಗ್ರೆಸ್ ಒಂದು ದಿಕ್ಕಿನಲ್ಲಿ ಕಡಿಮೆ ಅಂದಾಜು ಮಾಡಿದ್ದು ಬೂಮರಾಂಗ್ ಆಯಿತು. ಕಾಂಗ್ರೆಸ್ಸಿನ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಬಹಳ ಟೀಕೆಗೆ ಗುರಿಯಾದವು. ದಿನೇ ದಿನೇ ಇದು ಬೆಳೆಯುತ್ತ ಹೋದ ಈ ಹೋರಾಟವನ್ನು ತಕ್ಷಣ ಚಿವುಟದೇ ಇದ್ದರೆ ಇದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸಿಗೆ ದೊಡ್ಡ ತಲೆನೋವು ಆಗಬಹುದು ಎಂದೆಣಿಸಿ, ಬೀಸಿದ ದೊಣ್ಣೆಯನ್ನು ತಪ್ಪಿಸಿಕೊಳ್ಳುವ ಕ್ರಮಕ್ಕೆ ಮುಂದಾಯಿತು. ಬೇಡಿಕೆಗಳನ್ನು ಒಪ್ಪಿತು, ಅದಕ್ಕೂ ಗೊತ್ತು ಸಂಸದಿನಲ್ಲಿ ಇದನ್ನು ಆಟವಾಡಿಸಬಹುದು ಎಂದು, ಸಾಲದಕ್ಕೆ ಎಲ್ಲಾ ಗಾಜಿನ ಮನೆಯಲ್ಲಿ ಇರುವ ಪಕ್ಷಗಳೇ, ಯಾರು ಕಲ್ಲು ಎಸೆಯಲು ಹೋಗುವದಿಲ್ಲ ಎಂದು.
ಜನರ ಗೆಲುವು ಎಂದು ಸಾರಿ, ಜನಾಂದೋಲನಕ್ಕೆ ಸೇರಿದ್ದ ಜನರನ್ನು ಮೊದಲು ಚದರಿದರೆ ಆ ಜನರಿಗೆ ತಾವು ಗೆದ್ದೆವು ಎಂದು ಬೀಗಿ, ಕೆಲವರು ಎಣ್ಣೆ ಹೋಡೆದು ಸಂಭ್ರಮ ಆಚರಿಸಿಕೊಂಡು ಐಪಿಲ್ ಮುಂತಾದ ದಿನದ ಚಟುವಟಿಕೆಯಲ್ಲಿ ಬಾಗಿಯಾಗುತ್ತಾರೆ ಎಂಬ ದೊಡ್ಡ ಆಟಕ್ಕೆ ಕೈ ಹಾಕಿದೆ.


ಭ್ರಷ್ಟಚಾರ ಎನ್ನುವುದು ದೊಡ್ಡ ಶತ್ರು.

ದೇಶದ ವ್ಯವಸ್ಥೆ ಮತ್ತು ಪ್ರಗತಿ ಒಂದು ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರಿನ ಹಾಗೆ. ಇದನ್ನು ದುಷ್ಟ ಶಕ್ತಿಗಳಿಂದ ಕಾಪಾಡಬೇಕು. ಇದಕ್ಕೆ ಕಲ್ಲು ಹೊಡೆಯುವ ಜನರನ್ನು ಹತ್ತಿಕ್ಕಬೇಕು ಎನ್ನುವುದು ಎಷ್ಟು ಸರಿಯೋ ಹಾಗೆ ಮಡಿಕೆ ತೂತಾಗಿದ್ದರೆ ಅದನ್ನು ಸರಿ ಪಡಿಸದೇ ಕೇವಲ ಮಡಿಕೆಯನ್ನು ಕಾಯುತ್ತ ಕೂತರೆ ನಷ್ಟೆವೇ ಆಗುವುದು. ಇವತ್ತು ನಮ್ಮ ದೇಶದ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಿಲ್ಲ. ಭ್ರಷ್ಟಚಾರ ಅನ್ನುವುದು ಮಡಿಕೆಯ ತೂತಿನ ಹಾಗೆ , ಇದು ಎಲ್ಲಕ್ಕಿಂತ ದೊಡ್ಡ ಶತ್ರು. ಇದನ್ನು ನಾವು ದಮನ ಮಾಡದೇ ಕೇವಲ ಪಾಕಿಸ್ತಾನ ಜಪ ಮಾಡಿಕೊಂಡರೆ ದೇಶ ಸೊರಿ ಹೋಗುವದರಲ್ಲಿ ಸಂದೇಹವಿಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟುವರು ಯಾರು ?

ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ತೋರುವ ಕಳ್ಳ ಕಾಳಜಿ ಹೇಗಿರುತ್ತದೆ ಎಂದರೆ, ಸುಮ್ಮನೆ ಕಾಟಾಚಾರಕ್ಕೆ ಮಾಡಿದ ಹಾಗೆ ಇರುತ್ತದೆ, ಇಲ್ಲ ಒಬ್ಬರನ್ನು ಬಲಿಪಶು ಮಾಡಿ, ೧೦೦ ಜನ ಬದುಕುವ ಹಾಗೆ ಇರುತ್ತದೆ. ೧೦೦ ಲೋಕಾಯುಕ್ತ ದಾಳಿ ಆದವು, ಕೋಟ್ಯಾಂತರ ರೂಪಾಯಿ ಸಿಕ್ಕಿ ಬಿದ್ದವು, ಆ ಅಧಿಕಾರಿಗಳಿಗೆ ಒಮ್ಮೆಯೂ ಶಿಕ್ಷೆ ಆಗಿಲ್ಲ. ಮತ್ತೆ ವಿಚಾರಣೆ ಅದು ಇದು ಎಂದು ಅವರ ಬಳಿ ಕಿತ್ತು ಅಧಿಕಾರದಲ್ಲಿ ಕೂರಿಸುವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ನಂಬಿಕೆ ಇಡುವುದು ಆದರೂ ಹೇಗೆ.


ಭ್ರಷ್ಟ ಅಧಿಕಾರಿಗೆ ಮಾತ್ರ ಶಿಕ್ಷೆಯಾ ??
ನಾನು ನೋಡಿದ ಹಾಗೆ ಎಲ್ಲೆಡೆ ಅಧಿಕಾರಿಗಳು, ರಾಜಕೀಯ ನಾಯಕರು ಮಾತ್ರ ಭ್ರಷ್ಟರು ನಮ್ಮ ಮಂದಿ ಸಾಚ ಎಂದೆ ನೋಡುತ್ತ ಇದ್ದೇವೆ. ಲಂಚ ತೆಗೆದುಕೊಳ್ಳುವ, ದುಡ್ಡು ಹೋಡೆಯುವ ಜನರಿಗೆ ಶಿಕ್ಷೆಯಾಗಬೇಕು ಎನ್ನುವುದು ಎಷ್ಟು ಸರಿಯೋ, ಒಂದು ಭ್ರಷ್ಟ ಅಧಿಕಾರಿಯ ಹಿಂದೆ ಒಬ್ಬ ಜನಸಾಮನ್ಯ ಇದ್ದೆ ಇರುತ್ತಾನೆ, ಅವನೇ ಅಧಿಕಾರಿಯನ್ನು ಭ್ರಷ್ಟನ್ನಾಗಿ ಮಾಡಿರುತ್ತಾನೆ. ಇನ್ನು ಅನೇಕ ಕಡೆ ಈ ಕಾರ್ಪೊರೆಟ್ ಪ್ರಪಂಚ ಎಲ್ಲವನ್ನು ದುಡ್ಡಿನಿಂದ ಅಳೆಯುತ್ತದೆ, ಬೇಗ ಆಗಬೇಕಾದರೆ ಎಷ್ಟು ಹೆಚ್ಚು ಕೊಡಬೇಕು ಎಂಬ ಹೊಸ ಬೇಡಿಕೆಯನ್ನು ಇಡುತ್ತದೆ. ಅವರಿಗೆ ಸಮಯವೇ ದುಡ್ಡು, ಕಾಯುವ ವ್ಯವಧಾನವಿಲ್ಲ. ಇದರಿಂದ ಅನೇಕ ಅಧಿಕಾರಿಗಳು ಭ್ರಷ್ಟರಾಗುತ್ತಾರೆ. ಮುಂದೊಂದು ದಿನ ಸಿಕ್ಕಿ ಬಿದ್ದರೆ ಆ ಅಧಿಕಾರಿಗೆ ಶಿಕ್ಷೆ ಆಗುತ್ತದೆ ವಿನಹ ಯಾರು ಆ ಕಾರ್ಪೊರೆಟ್ ಅವರನ್ನು ಕೇಳುವದಿಲ್ಲ. ಜನ್ ಲೋಕಪಾಲ್ ನಲ್ಲಿ ಲಂಚ್ ಕೋಡುವ ಮತ್ತು ತೆಗೆದುಕೊಳ್ಳುವ ಇಬ್ಬರಿಗೂ ಶಿಕ್ಷೆ ಎಂದರೆ ಮಾತ್ರ ಅದು ಯಶಸ್ವಿಯಾಗಿ ಮಾಡಲು ಆಗುತ್ತದೆ. ಇಲ್ಲವಾದಲ್ಲಿ ದುಡ್ಡು ಕೊಡುವ ಜನರು ಇದ್ದೆ ಇರುತ್ತಾರೆ, ಅವರಿಗೆ ಎಂದು ಶಿಕ್ಷೆಯ ಭಯ ಇರುವದಿಲ್ಲ.

ಈ ಹೋರಾಟ ನಿಲ್ಲಬಾರದು ಮತ್ತು ಇದು ಸಂಘಟನೆಗಳ ಪ್ರಚಾರಕ್ಕೆ ಬಲಿಯಾಗದರಿಲಿ

ನಿನ್ನೆ ಅನೇಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ ಮೈದಾನಕ್ಕೆ ಬಂದಿದ್ದು ಒಳ್ಲೆಯ ಬೆಳವಣಿಗೆ, ಆದರೆ ತಾವು ಬಂದಿದ್ದೇವೆ ಎನ್ನುವುದೇ ದೊಡ್ಡ ಪ್ರಮಾಣದಲ್ಲಿ ತೋರಿಸುವ ಮಟ್ಟಿಗೆ ಬ್ಯಾನರ್, ಭಿತ್ತಿಪತ್ರ ಹಿಡಿದುಕೊಂಡು, ತಮ್ಮದೇ ಗುಂಪು ಮಾಡಿಕೊಂಡು ಹೋಗುತ್ತ ಇದ್ದಿದ್ದು. ದೇಶ ಭಕ್ತರೂ ಎಂದರೆ ನಾವೇ, ಇದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಎಂದೇ
ಮಾಧ್ಯಮಗಳ ಮುಂದೆ ಅದನ್ನು ಎದ್ದು ಕಾಣುವ ಹಾಗೆ ಪ್ರದರ್ಶನ ಮಾಡುತ್ತ ಇದ್ದೀದ್ದು ಸ್ವಲ್ಪ ಅತಿಯಾಯಿತು ಅನಿಸಿತು. ಇದರಲ್ಲಿ ಜನರು ತಮ್ಮ ಸಂಘಟನೆ,ಸಂಘ, ಪಕ್ಷವನ್ನು ಬಿಟ್ಟು ಪಾಲ್ಗೋಳ್ಳಬೇಕು. ಆಗಲೇ ಹೋರಾಟಕ್ಕೆ ಒಂದು ಅರ್ಥ.

ಜನಸಾಮಾನ್ಯರು ಇಲ್ಲಿಗೆ ಬಿಡಬಾರದು, ಇದು ನಮಗೆ ಗೆಲುವು ಮತ್ತು ಒಗ್ಗಟ್ಟಿಗೆ ಸಂದ ಜಯ. ಎಲ್ಲಾ ಜನಸಾಮಾನ್ಯರ ಸಮಸ್ಯೆಗಳಿಗೆ ಇದೇ ರೀತಿ ನಾವು ನಿಂತರೆ ಅಧಿಕಾರದಲ್ಲಿ ಇರುವರು ೨ ಬಾರಿ ಯೋಚನೆ ಮಾಡುತ್ತಾರೆ, ಇಲ್ಲವಾದಲ್ಲಿ ಅವರಿಗೂ ನೀವು ಹೊಡೆದ ಹಾಗೆ ಮಾಡಿ, ನಾವು ಕಿರುಚಿದ ಹಾಗೆ ಮಾಡ್ತಿವಿ ಎನ್ನುವುದು ಆಗುತ್ತದೆ.

ಕೊನೆಯ ಗುಟುಕು
ನಮ್ಮ ರಾಜ್ಯದ ಮುಖ್ಯಮಂತ್ರಿ ಅಣ್ಣಾ ಹಜಾರೆ ಹೋರಾಟಕ್ಕೆಬೆಂಬಲ ಕೊಟ್ಟಿರುವುದು ಮತ್ತು ಆವರು ದಿನ ತಿನ್ನುವ ೪ ಹೊತ್ತಿನ ಊಟದಲ್ಲಿ ಒಂದನ್ನು ಉಪವಾಸ ಮಾಡಿ ಬೆಂಬಲ ಸೂಚಿಸಿರುವುದು ನಿಜಕ್ಕೂ ಹೋರಾಟಕ್ಕೆ ಆನೆ ಬಲ ಬಂದಿದೆ. ಇದು ಬಿಜೆಪಿಯ ಗೆಲುವು ಎಂದು ತಮ್ಮ ೨ ಬೆರಳನ್ನು V ಆಕಾರದಲ್ಲಿ ಅಲ್ಲಾಡಿಸುತ್ತ ಹೇಳಿದರೂ ಆಶ್ಚರ್ಯವಿಲ್ಲ.