Wednesday, June 13, 2007

ಕನ್ನಡ ಭಾಷೆಗೆ ಮಡಿವಂತಿಕೆ ಬೇಕೆ ??

ನನಗೆ ಹೊಸಬರ ಜೊತೆ ಮಾತನಾಡುವಾಗ ಇಲ್ಲಾ ಚಲನಚಿತ್ರದ ವಿಷಯಕ್ಕೆ ಬಂದಾಗ ಕೇಳಿಬರುವ ಒಂದು ಮಾತು ಅಂದರೆ ನಮ್ಮಲ್ಲಿ ಹಿಂದಿನ ಹಾಗೆ ಚಿತ್ರಗಳು ಬರುತ್ತಿಲ್ಲ, ಈಗ ಕಾಲ ಕೆಟ್ಟುಹೋಗಿದೆ. ಬರಿ ಡಬಲ್ ಮೀನಿಂಗ್ ಮಾತ್ರ ಕಾಣಸಿಗುತ್ತಿದೆ ಎಂದು. ಆದರೆ ಇದನ್ನು ಮಾತನಾಡುವರು ಇಂದಿನ ಪೀಳಿಗೆ ಆಗಿರುವುದು ನನಗೆ ಹೆಚ್ಚು ಆಶ್ಚರ್ಯ ತಂದ ವಿಷಯ. ಈ ಮಾತು ಆ ಕಾಲದವರ ಬಾಯಿಯಲ್ಲಿ ಬಂದಿದ್ದರೆ , ಸರಿ ಅನ್ನಬಹುದಿತ್ತು. ಸರಿ ಹೋಗಲಿ, ಆ ಕಾಲದ ಯಾವ ಚಿತ್ರಗಳು ಇಷ್ಟವಾದವು ಅಂದರೆ ಒಂದೆರೆಡು ಪುಟ್ಟಣ್ಣ, ಇಲ್ಲಾ ಡಾ||ರಾಜ್ ಚಿತ್ರ ಹೇಳುತ್ತಾರೆ. ಗಮನಿಸಬೇಕಾದ ಅಂಶ ಅಂದರೆ ಅವರು ಹೇಳಿದ ಮೊದಲ ಚಿತ್ರಕ್ಕೂ ಕೊನೆಯ ಚಿತ್ರಕ್ಕೂ ಇರುವ ಅವಧಿ ಸರಿ ಸುಮಾರು ೩೦ ವರುಷಗಳು. ಈ ೩ ದಶಕಗಳಲ್ಲಿ ಇವರಿಗೆ ಇಷ್ಟವಾಗಿರುವುದು ಬರೀ ಬೆರಳಣಿಕೆಯ ಚಿತ್ರಗಳು ಮಾತ್ರ, ಅಂದರೆ ಕೇವಲ ೧% ಚಿತ್ರಗಳನ್ನು ಮೆಚ್ಚಿರುವ ಇವರಿಗೆ ಆ ಕಾಲದಲ್ಲಿ ಚೆನ್ನಾಗಿತ್ತು ಎಂದು ಹೇಳುವ ಮಾತು ಎಷ್ಟರ ಮಟ್ಟಿಗೆ ಸರಿ ಅನಿಸುತ್ತದೆ ನೀವೇ ಹೇಳಿ. ಸುಮ್ಮನೆ ಇಂದಿನ ಚಿತ್ರಗಳನ್ನು ನೋಡದೆ ಇರಲು ಇವರು ಕೊಡುವ ಕಾರಣ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದು ಲಾಸ್ಟ ಚಿತ್ರ ನೋಡಿದ್ದು ಅಂದರೆ ದಶಕಗಳ ಹಿಂದಿನ ಒಂದು ಡಬ್ಬಾ ಚಿತ್ರವನ್ನು ಹೇಳುತ್ತಾರೆ. ಆವರ ಪ್ರಕಾರ ಅದೇ ತರಹ ಎಲ್ಲಾ ಚಿತ್ರಗಳು ಇವೆ , ಇಂದೂ ಕೂಡ ಅದೇ ನಡೆಯುತ್ತ ಇದೆ ಎಂದು.
ಇನ್ನ ಮುಂದೆ ಹೋಗಿ ೧೯೮೮-೯೩ ಸಮಯದಲ್ಲಿ ಬರುತ್ತಿದ್ದ ಕಾಶೀನಾಥ ಚಿತ್ರಗಳನ್ನು ಉದಾಹರಣೆ ಕೊಡುತ್ತಾರೆ.
ಇಷ್ಟೆಲ್ಲಾ ಕೇಳಿದ ಮೇಲೆ ಅನಿಸುವುದು ಎನೆಂದರೆ ಸಮಸ್ಯೆ ಇರುವುದು ಇಂದಿನ ಚಿತ್ರದಲ್ಲಿ ಅಲ್ಲ, ಇವರ ಕೀಳೆರಿಮೆಯಲ್ಲಿ ಮತ್ತು ಇವರ ಅಜ್ಞಾನದಲ್ಲಿ.
ಇವರಿಗೆ ಕನ್ನಡ ಚಿತ್ರಗಳನ್ನು ನಾನು ನೋಡುತ್ತೆನೆ ಎಂದು ಬೇರೆಭಾಷಿಕರ ಮುಂದೆ ಹೇಳಿಕೊಳ್ಳುವುದು, ಪಬ್ಲಿಕ್‍ನಲ್ಲಿ ಕಾಚಾ ಹಾಕಿಕೊಂಡು ನಿಂತ ಹಾಗೆ ಆಗುತ್ತದೆ. ತಮ್ಮ ಈ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಇವರು ಕಾರಣ ಕೊಡುವುದು quality ಇಲ್ಲಾ ಕಣಮ್ಮ, ಸಾಧುಕೋಕಿಲ ಕಾಮೆಡಿ ನೋಡಿದರೆ ಅಸಹ್ಯ ಆಗುತ್ತದೆ, ಇದೇ ಜನ ತಮಿಳಿನಲ್ಲಿ ಗೌಂಡಾಮಣಿ, ಸೆಂಥಿಲ್ ಇಲ್ಲಾ ಹಿಂದಿಯಲ್ಲಿ ಜಾನಿಲೀವರ್ ಮಾಡುವ ಅಪಹಾಸ್ಯವನ್ನು ನೋಡಿ ನಗುತ್ತಾರೆ. ಇದು ಇವರ hyppocrism ತೋರಿಸುತ್ತದೆ.
ಈ ವರ್ಗದ ಜನರಿಗೆ ನಾನು ಹೇಳುವುದು ಒಂದೇ, ನೋಡದೆ ಮಾತಾನಾಡುವುದು ಉಚ್ಚೆಯನ್ನು ಪಂಚಾಮೃತಾ ಎಂದು ಕರೆದ ಹಾಗೆ. ತಿಳಿದುಕೊಂಡು ಮಾತನಾಡಿ, ನಿಮ್ಮ ಅಜ್ಞಾನವನ್ನೂ ಭಾಷೆಯ ಕುಂಠಿತಕ್ಕೆ ಬಳಸಿ ಮಾರಕ ಮಾಡಬೇಡಿ ಎಂದು.

ಮುಂದುವರೆಯುತ್ತ, ನನಗೆ ಇನ್ನೊಂದು ವರ್ಗದ ಜೊತೆ ಸ್ವಲ್ಪ ಟಕ್ಕರ್ ಆಗುತ್ತದೆ, ಆ ವರ್ಗ ಸ್ವಲ್ಪ ಸಂಸ್ಕೃತ ಪ್ರಿಯರು ಮತ್ತು ತುಂಬಾ ಮಡಿವಂತರೂ. ಅವರ ದೃಷ್ಟಿಯಲ್ಲಿ ಜಗ್ಗೇಶ್ ಮಾತು ಎಂದರೆ ಮೈ ಮೇಲೆ ಜೋಡ್ಯ್ಗಾ(ಜಿರಳೆ) ಬಿಟ್ಟು ಕೊಂಡ ಹಾಗೆ.
ಇಂತಾ ಮಾತುಗಳು ಭಾಷೆಯನ್ನು ಹಾಳು ಮಾಡುತ್ತಿವೆ, ಇನ್ನೂ ಮುಂದೆ ಹೀಗೆ ಬಿಟ್ಟರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎಂದು ಸಂಸ್ಕೃತಿಯನ್ನು ಉಡಿದಾರಕ್ಕೆ ಸಿಕ್ಕಿಸಿಕೊಂಡ ಹಾಗೆ ಮಾತನಾಡುತ್ತಾರೆ. ಯಾಕೆ ಇಷ್ಟು ಕೋಪ, ಸ್ವಲ್ಪ ಸಮಾದಾನ ಮಾಡಿಕೊಳ್ಳಿ ಅಂದರೆ , ಎನ್ರಿ ಸಮಧಾನ ಮಾಡಿಕೊಳ್ಳೊದು, ಮುಂದೆ ನಮ್ಮ ಮಕ್ಕಳು "ಡಗಾರ್""ಫಿಗರ್" "ಬೊಂಬಾಟ್", "ಸಖತ್" ಎಂದರೆ ನಾವು ಕೇಳುತ್ತ ಇರಬೇಕಾ, ೭ ಜ್ನಾನಪೀಠ ಪಡೆದ ನಮ್ಮ ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಬೊಬ್ಬಿಡುತ್ತಾರೆ.
ಅದರೆ ನನಗೆ ಹೀಗೆ ಅವರು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅನಿಸುವುದು, ಕಲಿತರೆ ಎನು ತಪ್ಪು ಎಂದು. ನನಗೆ ಸರಿಯಾಗಿ ನೆನಪಿದೆ, ೧೯೯೮-೯೯ ಸಮಯದಲ್ಲಿ ಕನ್ನಡ ಸ್ಲಾಗ್ಸ ಮೇಲ್ ಒಂದು ಹರಿದಾಡುತ್ತ ಇತ್ತು. ಇದು ನನಗೆ ಬಂದಾಗ ಇದಕ್ಕೆ ನಾನು ಮತ್ತು ನನ್ನ ಸ್ನೇಹಿತರು ೩ ತಿಂಗಳಲ್ಲಿ ನಾನು ಮಾತನಾಡುವ ಅನೇಕ ಶಬ್ಧಗಳನ್ನು ಹಾಕಿದೆವು. ಇದರಲ್ಲಿ ಒಂದು ಊರಿಗೆ ಸೀಮಿತವಾದ ಪದಗಳು ಇದ್ದವು. ಅವೆಲ್ಲವನ್ನೂ ಒಂದಡೇ ಸೇರಿಸಿ ಆಗಿನ ಕಾಲದಲ್ಲಿ ಹಾಕಬಹುದಿತ್ತ "ಧಾರವಾಡ.ಕಾಂ" ಗೆ ಹಾಕಿದೆ. ಯಾಕೆ ಈ ಕೆಲ್ಸಕ್ಕೆ ಕೈ ಹಾಕಿದ ಎಂದರೆ, ನಾವು ಜಗತ್ತಿಗೆ ಕೆಲ ಶಬ್ದಗಳನ್ನು ಕೊಡಬಹುದಾದರೆ ಅವು ಇವು ಮಾತ್ರ. ಇವು ನಮ್ಮ ಸ್ವಂತ ಪದಗಳು, ಮತ್ತು ಇದರಲ್ಲಿ ನಮ್ಮ ಸೊಗಡು ಇದೆ. ಬಾಕಿ ಪದಗಳನ್ನು ನಾವು ಇಂಗ್ಲೀಷ್ ಅಥವಾ ಸಂಸ್ಕೃತದದಿಂದ ಪಡೆದಿದ್ದೆ ಆಗಿದೆ. "ಬಸ್ಸು, ಕಾರು, ಲಾರಿ ..ಟೇಬಲು ... ಈ ಪದಗಳನ್ನು ನಾವು ಮುಂದೆ ವೆಬಸ್ಟರಗೆ ಹಾಕಿಕೊಳ್ಲಿ ಎಂದರೆ ಜನ ನಗುತ್ತಾರೆ ಅಷ್ಟೆ. ಅದೇ "ಸಖತ್", ಬೊಂಬಾಟ್" ಇವು ಒಂದು ದಿನ ಸೇರುವ ಛಾನ್ಸಗಳು ಇವೆ. ಅದಕ್ಕೂ ಹೆಚ್ಚು ಅಂದರೆ ಆಡುವ ಮಾತು ಮತ್ತು ಬರೆಯುವುದು ಒಂದಕ್ಕೆ ಒಂದು ಭಿನ್ನ ನಮ್ಮ ಭಾಷೆಯಲ್ಲಿ. ನನ್ನ ಈ ಊಹೆ ತಪ್ಪಾಗಲಿಲ್ಲ, ಇಂದು ನೋಡಿ ಬೆಂಗಳೂರಿನ
ಅಲಿಖಿತ ಭಾಷೆಯಾಗಿ ಈ ಪದಪುಂಜಗಳು ಬಳಕೆಯಲ್ಲಿವೆ. ಇದಕ್ಕೆ ಆದರೂ ನಾವು ಜಗ್ಗೇಶ & Co ಅಭಾರಿಯಾಗಿರಬೇಕು.

ಇನ್ನೂ ಮುಂದೆ ಹೋಗಿ ಮಡಿವಂತಿಕೆ ತೋರುವ ನಮ್ಮ ಜನ ಕನ್ನಡದಲ್ಲಿ ಕೇವಲ ಒಳ್ಳೆಯ ಕೃತಿಗಳು(ಪ್ರಫುಲ್ಲ ಸಾಹಿತ್ಯ) ಬರಬೇಕು, ಸೆಕ್ಸಗೆ ಸಂಬಂದಿಸಿದ (ಅಶ್ಲೀಲ) ಬರಬಾರದು. ಇದರಿಂದ ಭಾಷೆ ಮಲೀನ ಆಗುತ್ತದೆ ಎಂದು ವಾದಿಸುತ್ತಾರೆ. ಅಲ್ಲಾ ಸ್ವಾಮಿ, ಕವನ-ಕಥೆ-ಕಾದಂಬರಿ ಬಿಟ್ಟು ನಾವು ಇನ್ನೇನು ಯೋಚಿಸಲು ಸಾಧ್ಯವೇ ಇಲ್ಲವೇ. ಈ ಕಥೆ-ಕಾದಂಬರಿ ಎಲ್ಲಾ ದುಡ್ದಿದ್ದು , ಒಳ್ಳೆಯ ಕೆಲ್ಸ ಇದ್ದು ಅದರ ಜೊತೆಗೆ ಸಮಯ ಇರುವ ವರ್ಗಕ್ಕೆ. ಆದರೆ ಸಾಮನ್ಯ ಜನಕ್ಕೆ ಬಡವನಿಗೆ ಅವನ ಕೆಲಸಕ್ಕೆ ಸಹಾಯ ಮಾಡುವ ಇಲ್ಲಾ ಅವನಿಗೆ ಬೇಕಾದ ಒಂದು ವಿಷಯದಲ್ಲಿ ಸಾಹಿತ್ಯ ಇರಬೇಕು ಎಂದು ಆಸೆ ಇರುತ್ತದೆ. ಉದಾ:- ಸೈಕಲ್ ಬಿಡಿಭಾಗಗಳನ್ನು ಬಿಚ್ಚಿ , ಮತ್ತೆ ಜೋಡಿಸುವುದು ಹೇಗೆ. ವಾಚ್ ಬಿಡಿ ಪಾರ್ಟುಗಳ ಬಗ್ಗೆ ಲೇಖನ. ಇಲ್ಲಾ ನಾವು ಬಳಸುವ ಪ್ರತಿಯೋಂದು ವಸ್ತುವಿನ "user guide". ಹಾಗೇಯೆ ಪ್ರತಿ ಜೀವಿಯು necessary evil ಆಗಿರುವ ಲೈಂಗಿಕ ಶಿಕ್ಷಣ ನಮ್ಮ ಭಾಷೆಯಲ್ಲಿ ಮಾತ್ರ ಬರಬೇಕು. ಬೇಡ ಅಂದರೂ ಈ ವಿಷಯದಲ್ಲಿ ಪ್ರತಿ ಪ್ರಜೆಗೂ ಬೇಕು, ನಮ್ಮ ಭಾಷೆಯಲ್ಲಿ ಕೊಡದಿದ್ದರೆ, ಒಂದು ವರ್ಗ ಬೇರೆ ಭಾಷೆಗೆ ಮೊರೆಹೋಗುತ್ತದೆ , ಇನ್ನೊಂದು ವರ್ಗ assume ಮಾಡಿಕೊಂಡು ಇಲ್ಲಾ quality ಇಲ್ಲದ ಅಗ್ಗದ ಸಾಹಿತ್ಯಕ್ಕೆ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಬೇಕಾ ??

ಒಂದು ಭಾಷೆ ಅನ್ನುವುದು ಮದುವೆಯ ಊಟ ಹಾಗೇ ಇರಬೇಕು, ಅದರಲ್ಲಿ ನಮ್ಮ ಜನರು ಹೇಳುವ ಕೆಟ್ಟದ್ದು-ಒಳ್ಳೆದು ಎಲ್ಲಾ ಇರಬೇಕು. ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಹಾಗೆಂದ ಮಾತ್ರಕ್ಕೆ ಊಟವೇ ಉಪ್ಪಿನಕಾಯಿ ಆಗಬಾರದು.

ಕೊಸರು:- ಕನ್ನಡದಲ್ಲಿ ಕೆಟ್ಟ ಮಾತು ಇರಬಾರದೆಂದು ಅನೇಕರು ನನ್ಗೆ ಹೇಳಿದ್ದಾರೆ, ಯಾಕೆ ಎಂದು ನನಗೆ ಅರ್ಥ ಆಗಿಲ್ಲ. ಒಂದು ಅಭಿವ್ಯಕ್ತಿಯನ್ನು ಬಿಂಬಿಸುವ ಎಲ್ಲಾ ಪದಗಳು ನಮ್ಮ ಭಾಷೆಯಲ್ಲಿ ಇರಬೇಕು. ದೇವರ ಭಾಷೆಯಾದ ಸಂಸ್ಕೄತದಲ್ಲಿ ಕೂಡ ಬೈಗಳ ಇದ್ದವು ಎಂದು ಎಲ್ಲೊ ಓದಿದ ನೆನಪು.