Saturday, March 01, 2008

inthi ninna preethiya - FILM REVIEW


ತಾರಾಂಗಣ

ರಾಜೀವ್ - ಕೃಷ್ಣ

ಪರಿಮಳ- ಭಾವನ

ನಯನ -ಸೋನು

ಮಾವ - ರಘು

ಅಣ್ಣ - ಕಿಶೋರ್

ಕನ್ನಡ ಚಿತ್ರರಂಗದಲ್ಲಿ ಅನೇಕ ವಿಷಯಗಳಲ್ಲಿ ಕುತೂಹಲ ಮೂಡಿಸಿದ್ದ ಈ ಚಿತ್ರ, ೨೯ನೇ ತಾರೀಖು ತೆರೆಗೆ ಬಂದಿದೆ. ಸೂರಿ ಈ ಚಿತ್ರವನ್ನು ಹೇಗೆ ಮಾಡಿರಬಹುದು, ದುನಿಯಾ ಮ್ಯಾಜಿಕ್ ಉಂಟಾ ಅಂತ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊದಲನೇ ದಿನವೇ ಚಿತ್ರ ನೋಡಿದೆ.

ಚಿತ್ರದ ಹೆಸರು ನನಗೆ ಹೆಚ್ಚು ಕುತೂಹಲ ಮೂಡಿಸಿತ್ತು, ಇತ್ತಿಚಿಗೆ ಅಷ್ಟೆ PS.I LOVE YOU ಅನ್ನುವ ಚಿತ್ರವನ್ನು ನೋಡಿದ್ದೆ, ಅದರ ನೆರಳು ಇದರ ಮೇಲೆ ಇದೆಯಾ ಅಂತ ನನಗೆ ತುಂಬಾ ಅನಿಸಿತ್ತು. ಹೆಸರು ನೋಡಿ ಚಿತ್ರದಲ್ಲಿ ಪತ್ರಗಳ ಝಲಕ್ಕು ಇರುತ್ತದೆ ಅಂತ ಭಾವಿಸಿದ್ದೆ, ಆದರೆ ನೋಡಿದ ಮೇಲೆ ಚಿತ್ರಕ್ಕೆ ಈ ಒಳ್ಳೆ ಹೆಸರು ಯಾಕೆ ಸೂರಿ ಇಟ್ಟರು ಅಂತ ಆಶ್ಚರ್ಯವಾಯಿತು. ಕೆಲವು ಕಡೆ ಆ ಹೆಸರನ್ನು ಬಳಸಿದ್ದು ಬಿಟ್ಟರೆ, ಶೀರ್ಷಿಕೆಗೆ ಸಂಭಂದವೇ ಇಲ್ಲಾ.

ಚಿತ್ರದ ಆರಂಭ ಬಹಳ ಚೆನ್ನಾಗಿ ಆಗುತ್ತದೆ, ರಾಜೀವನ ಮಾವನ ಕಥೆಯನ್ನು ತೆರೆದಿಡುವ ಮೂಲಕ. ಇವನ ಮಾವ ಒಂದು ಟೆಂಟಿ ನಲ್ಲಿ ಕೆಲಸ ಮಾಡುತ್ತ, ಸಾವಿತ್ರಿ ಅನ್ನೊ ಹುಡುಗಿಯನ್ನು ಪ್ರೀತಿಸುರುತ್ತಾನೆ. ಆದರೆ ಅದು ದುರಂತವಾಗುತ್ತದೆ. ಬೇಸರಾವಾಗಿ ಹಿಮಾಲಯ ಸುತ್ತಾಡಿ ಬರುವ ವೇಳೆಗೆ ಮೂಕ ಆಗಿರುತ್ತಾನೆ. ಇದು ನಮಗೆಲ್ಲಾ ಶಾಕ್, ಜೈ ಟಿಪ್ಪು ಸುಲ್ತಾನ್ ಅನ್ನೋ ಡೈಲಾಗ್ ನಿರೀಕ್ಷಿಸಿದ್ದ ರಘುವಿನ ಬಾಯಿಗೆ ಬೀಗ ಹಾಕಿರುವುದು ಸ್ವಲ್ಪ ಆಶ್ಚರ್ಯವಾಯಿತು. ಆದರೆ ಮೂಕ ಪಾತ್ರದಲ್ಲಿ ಕೂಡ ಹೇಗೆ ನಟಿಸಬೇಕು, ಸಂಘ್ನೆಗಳಿಂದ ಹೇಗೆ ಮನಸ್ಸನ್ನು ಗೆಲ್ಲಬಹುದು ಅಂತ ರಂಗಾಯಣ ರಘು ತೋರಿಸಿದ್ದಾರೆ.
ಅನಾಥ ಶವಗಳನ್ನು ದಫನ್ ಮಾಡುವ ಕೆಲ್ಸ ಮಾಡುತ್ತ ಜೀವನ ಕಳೆಯುತ್ತಿರುತ್ತಾನೆ ಇವನು.

ಚಿತ್ರದ ನಾಯಕ ಒಬ್ಬ ಚಿತ್ರ ಕಲಾವಿದ, ತನ್ನ ಮಾವನ ಜೊತೆ ಸ್ಮಶಾನಗಳಿಗೆ ಹೋಗಿ ಹೆಣಗಳ ಚಿತ್ರಗಳನ್ನು ಬರೆಯುವ ವಿಲಕ್ಷಣ ಹುಡುಗ. ಹೆಣಗಳ ಜೊತೆ ಮಾತಾನಾಡುವ ಒಂದರೆಡು ದೃಶ್ಯ ತುಂಬಾ ಮನ ಮಿಡಿಯುತ್ತದೆ. ಇವನಿಗೆ ತನ್ನ ಸಹಪಾಠಿ ನಯನ ಮೇಲೆ ಅನುರಾಗ. ಇವರ ಇಬ್ಬರ ನಡುವೆ ಪ್ರೀತಿ ತುಂಬಾ ಲವಲವಿಕೆಯಲ್ಲಿ ಇರುತ್ತದೆ. ಇಬ್ಬರೂ ಒಬ್ಬರಿಗೆ ಒಬ್ಬರು ಕಚ್ಚಾಡುತ್ತ, ಪ್ರೀತಿ ಮಾಡುತ್ತ ಇರುತ್ತಾರೆ. ಈ ಹುಡುಗಿಯ ಅಣ್ಣ ಕೂಡ ನಮ್ಮ ನಾಯಕನ ಚೆಡ್ಡಿ ದೋಸ್ತ್.

ನಾಯಕನ ಕಂಪನಿಯಲ್ಲಿ ಮುರುಗ ಅನ್ನೋ ಪೇಟಿಂಗ್ ಮಾಡುವನು, ಪೊಸ್ಟಮಾರ್ಟಮ್ ಮಾಡುವ ಗಡ್ಡಾ, ಮಾವ ಇರುತ್ತಾರೆ. ಕತ್ತಲಾದರೆ ಸಾಕು, ಇವರು ತೀರ್ಥ ಸೇವನೆ ಮಾಡುವ ಕಾರ್ಯಕ್ರಮ. ಆದರೆ ನಾಯಕ ಎಣ್ಣೆ ಮುಟ್ಟದೆ ಇರುತ್ತಾನೆ.
ಮನೆಯಲ್ಲಿ ನಾಯಕನಿಗೆ ಒಳ್ಳೆ ಅತ್ತಿಗೆ, ಕೋಪಿಷ್ಠ ಅಣ್ಣ ,ಅಜ್ಜಿ ಮತ್ತು ಅಣ್ಣನ ಮಗಳು ಇರುತ್ತಾರೆ. ಮನೆ ಚಿಕ್ಕಾದಾದರೂ ಮನ ದೊಡ್ಡದಾಗಿರುವ ತುಂಬು ಕುಟುಂಬ ಅದು.

ಕಲಾವಿದನನ್ನು ಮದುವೆಯಾದರೆ ಎನಿದೆ ಅಂತ ಅನಿಸಿ, ಇವನಿಂದ ದೂರ ಹೋಗಿ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾಳೆ ನಯನ. ಇದನ್ನು ಸಹಿಸಲಾಗದೇ ನಾಯಕ ಕುಡಿತದ ದಾಸ ಆಗುತ್ತಾನೆ. ಸಿಕ್ಕ ಸಿಕ್ಕಲ್ಲಿ ಬಿದ್ದು ಹೊರಳಾಡುತ್ತ, ಪ್ರೀತಿಯ ಬಗ್ಗೆ ಬಡಬಡಿಸುತ್ತಾ ದೇವದಾಸಗೆ ಸಡ್ದು ಹೊಡೆಯುತ್ತಾನೆ. ಇವನ ಈ ಕರುಣಾಮಯ ಸ್ಥಿತಿಯನ್ನು ನೋಡುತ್ತಾಳೆ ಅವನ ಹಿಂದಿನ ಪ್ರೇಯಸಿ, ಅಲ್ಲಿಗೆ ಎರಡು ವರುಷ ಕಳೆದಿರುತ್ತದೆ ಮತ್ತು ಮಧ್ಯಂತರ ಆಗಿರುತ್ತದೆ.

ಈ ಮಧ್ಯದಲ್ಲಿ ಚಿತ್ರದ ಕೊನೆ ತನಕ , ಹೇಗೆ ಎಣ್ಣೆ ಬಾಟಲಿಯನ್ನು ತೆಗೆಯಬೇಕು, ಯಾವುದರ ಜೊತೆ ಮಿಕ್ಸ ಮಾಡಿಕೊಳ್ಳಬೇಕು, ನಂಚಿಕೊಳ್ಳಲು ಎನು ಬೇಕು , ಯಾವ ಚರಂಡಿಯಲ್ಲಿ ಬಿದ್ದು ಒದ್ದಾಡಬೇಕು. ಕುಡಿಯಲು ಹಣಕ್ಕೆ ಯಾವ ರೀತಿ ದುಡ್ಡು ಅರೆಂಜ್ ಮಾಡಿಕೊಳ್ಳಬೇಕು , ಕುಡುಕರು ಸಂಸಾರದಲ್ಲಿ ಹೇಗೆ ಮುಳ್ಳು ಆಗುತ್ತಾರೆ, ಅವರನ್ನು ಸರಿ ದಾರಿಗೆ ತರಲು ಎನು ಮಾಡಬೇಕು
ಅಂತ ತುಂಬಾ ಆರ್&ಡಿ ಮಾಡಿ ಸೂರಿ ತೋರಿಸಿದ್ದಾರೆ.

ಕುಡಕರನ್ನು ಸರಿ ಮಾಡಬೇಕು ಅಂದರೆ ಅವನಿಗೆ ಒಂದು ಮದುವೆ ಮಾಡದರೆ ಸರಿ ಹೋಗುತ್ತದೆ ಅಂತ ಅವನಿಗೆ ಪರಿಮಳ ಅನ್ನೊ ಅನಾಥೆ ಜೊತೆ ಮದುವೆ ಮಾಡುತ್ತಾರೆ. ಮದುವೆಯ ಮೊದಲ ರಾತ್ರಿಯ ದಿನವೇ ಹಾಲು ಕುಡಿಯಬೇಕಾದ ಈ ನಾಯಕ ಆಲ್ಕೊಹಾಲು ಕುಡಿಯುತ್ತಾನೆ. ಅಲ್ಲಿಗೆ ಅವನ ಹೆಂಡತಿಗೆ ಅವನ ನಿಜ ಸ್ವರೂಪ ಗೊತ್ತಾಗುತ್ತದೆ. ಅಣ್ಣನ ಮನೆಯಲ್ಲಿ ಇರಲಾಗದೇ ಬೇರೆ ಸಂಸಾರ ಮಾಡುತ್ತಾರೆ, ಆ ಸಂಸಾರ ತೂಗಿಸಲು ಇದ್ದ ಬದ್ದ ವಸ್ತುಗಳನ್ನು ಮಾರುತ್ತಾರೆ. ದಿನಾ ರಾತ್ರಿ ಕುಡಿದುಕೊಂಡು ಬಂದು ಬಾಗಿಲು ಬಡಿಯುವ ೃಶ್ಯವೇ ಹದಿನೈದು ಸಾರಿ ತೋರಿಸಿದ್ದಾರೆ. ಹಾಗೆ ತೋರಿಸುತ್ತ, ಅವರ ಕೈಗೆ ಒಂದು ಮಗು ಕೂಡ ಬರುತ್ತದೆ. ಈ ಕುಡುಕ ಕುಡಿಯಲು ಮಗುವಿನ ಉಂಗುರ ಕೂಡ ಕದಿಯುತ್ತಾನೆ.

ಕುಡುಕನ ಹೆಂಡತಿಯನ್ನು ಸಮಾಜ ನೋಡುವ ರೀತಿ ಬಗ್ಗೆ ಪರಿಮಳ ಒಂದು ದಿನ ತಿಳಿಹೇಳುತ್ತಾಳೆ, ಅದು ಇವನ ತಲೆಯಲ್ಲಿ ನಾಟಿ ಕುಡಿತವನ್ನು ಬಿಡುತ್ತಾನೆ, ಸ್ವಲ್ಪ ಜವಾಬ್ದಾರಿ ಕಲಿಯುತ್ತಾನೆ. ಅಲ್ಲಿಗೆ ಅವನ ಮಗು ಸ್ಕೂಲ್ ಹೋಗಲು ಆರಂಭಿಸಿರುತ್ತದೆ. ಎಲ್ಲಾ ಸರಿ ಇದೆ ಅಂದುಕೊಳ್ಳುವಾಗ ಪರಿಮಳ ಕರೆಂಟ್ ಹೋಡೆದು ಸಾಯುತ್ತಾಳೆ. ಮತ್ತೆ ನಮ್ಮ ನಾಯಕನ ಕೈನಲ್ಲಿ ಬಾಟಲಿ ಬರುತ್ತದೆ.
ಹೀಗೂ ಹಾಗೂ ಮಗಳನ್ನು ಸಾಕುತ್ತ, ಕುಡಿತದ ಬಗ್ಗೆ spb ಬಗ್ಗೆ ಕುಯ್ಯಿಸಿಕೊಂಡು ಸಹಾ ನಾಯಕ ಜೀವನ ಸಾಗಿಸುತ್ತ ಹೋಗುತ್ತಾನೆ, ಅಲ್ಲಿಗೆ ೨ ಗಂಟೆ ೪೦ ನಿಮಿಶದ ಚಿತ್ರ ಅಂತ್ಯ ಕಾಣುತ್ತದೆ.

ಒಟ್ಟಿಗೆ ಬಹು ನಿರೀಕ್ಷಿತ ಚಿತ್ರ ಹೀಗೆ ಕುಡುಕನ ಕಥೆಯಲ್ಲಿ ಪೇಲವ ಆಗುತ್ತದೆ.

ಮೆಚ್ಚ ಬೇಕಾದ ಅಂಶಗಳು

೧) ಪಾತ್ರಗಳು ಮತ್ತು ಅವರ ನಟನೆ

೨) ಹಾಡುಗಳು ಮತ್ತು ಅದರ ಚಿತ್ರೀಕರಣ

೩) ಸ್ಮಶಾನದಲ್ಲಿ ಚಿತ್ರೀಕರಣ

೪) ಭಾವನ

ಬೇಸರವಾಗುವ ಅಂಶಗಳು

೧) ಪದೇ ಪದೇ ಕುಡಿತದ ಬಗ್ಗೆ ತೋರಿಸುವುದು, ಕುಡಿಯುವದನ್ನೇ ಪ್ರತಿ ಫ್ರೆಮನಲ್ಲಿ ತೋರಿಸುವುದು ಅಸಹ್ಯ ಆಗುತ್ತದೆ
೨) ಕಥೆಯ ಮೇಲೆ ಇಲ್ಲದ ಹಿಡಿತ
೩) ಚಿತ್ರದ ಉದ್ದೇಶವೇ ಸ್ಪಷ್ಟ ಇಲ್ಲಾ

೫ ಅಂಕಗಳಿಗೆ ೨ ಅಂಕ ಪಡೆದುಕೊಳ್ಳುತ್ತದೆ.