Monday, March 31, 2008

ಹೊಗೆನಕಲ್ ನಮ್ಮದು...

Sunday, March 16, 2008

೧೯೬೬ರ ಕುವೆಂಪು ಭಾಷಣ ..


ಆವತ್ತು ಫೆಬ್ರವರಿ ೨೭ನೇ ತಾರೀಖು, ೧೯೬೬ ಇಸವಿ. ಅಂದರೆ ೩೨ ವರುಷಗಳ ಹಿಂದಿನ ಮಾತು. ಆವತ್ತಿನ ವಿಶೇಷವೆಂದರೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಪದವಿಯನಿತ್ತು ಸನ್ಮಾನಿಸಿದರು. ಆ ಸಂಧರ್ಬದಲ್ಲಿ ಕುವೆಂಪು ಮಾತಾಡಿದ ಭಾಷಣ ನಿಜಕ್ಕೂ ಅದ್ಭುತ, ಇಂದಿಗೂ ಪ್ರಸ್ತುತ ಅನ್ನುವ
ಹಾಗೆ ಆಗಿನ ಕಾಲದಲ್ಲಿ ಕನ್ನಡ ಕಣ್ಣಿನಲ್ಲಿ ಕನಸು ಕಂಡ ಮಹಾನ್ ಜೀವಿ.

ಅವರ ಭಾಷಣದ ಕೆಲ ತುಣುಕುಗಳನ್ನು ನಿಮ್ಮ ಮುಂದೆ ಇಡುತ್ತ ಇದ್ದೇನೆ.

" ಭಾಷಾನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದಾಗಲೇ ನಮ್ಮ ಪ್ರಜಾಸತ್ತಾತ್ಮಕವಾದ ರಾಜ್ಯಾಂಗ ಈ ಪ್ರಾದೇಶಿಕ ವೈಶಿಷ್ಟವನ್ನು ಕಾನೂನುಭದ್ಧವಾಗಿಯೆ ಗುರುತಿಸಿದಂತಿದೆ.
ಆದ್ದರಿಂದ ಆಯಾ ಪ್ರದೇಶದ ಭಾಷಾ ಪ್ರದೇಶದ ರಾಜ್ಯ್ದದಲ್ಲಿ ಇರುವ ವಿಶ್ವವಿಧ್ಯಾಲಯಗಳು ಆಯಾ ಪ್ರದೇಶದ ಭಾಷಾ ಸಾಹಿತ್ಯ ಕಲಾ ಸಂಸ್ಕೃತಿಗಳಿಗೆ ವಿಶೇಷ ಪ್ರೋತ್ಸಾಹವೀಯುವುದು ಅತ್ಯಗತ್ಯ.
ಏಕೆಂದರೆ ಆಯಾ ಪ್ರಾದೇಶಿಕ ವಿಶ್ವವಿದ್ಯಾಲಯಗಳು ಆ ಕೆಲ್ಸ ಮಾಡದೆ ಇದ್ದರೆ ಪ್ರಪಂಚದ ಇನ್ಯಾವ ವಿದ್ಯಾಸಂಸ್ಥೆಗಳು ಅದನ್ನು ಮಾಡುವದಿಲ್ಲ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳು ಕನ್ನಡ ನುಡಿಯ,ಸಾಹಿತ್ಯದ,ಇತಿಹಾಸದ ,ಕಲೆಯ ಮತ್ತು ಸಂಸ್ಕೃತಿಯ ರಕ್ಷಣೆ ಪೋಷಣೆಗಳನ್ನು ನಿರ್ಲಕ್ಷಿಸಿದರೆ ಅದು ಕಡಲ ಪಾಲಾದಂತೆಯೆ. ಇಂಗ್ಲೀಷ್ ಭಾಷೆ ತನ್ನ ಅಭಿವೃದ್ದಿಗೆ ಕರ್ನಾಟಕ ಅಥಾವಾ ಮೈಸೂರು ವಿಶ್ವವಿದ್ಯಾಲಯಗಳ ಕೈ ಹಾರೈಸುವದಿಲ್ಲ. ಜಗತ್ತಿನ ಇತರ
ಸಾವಿರಾರು ಸಂಸ್ಥೆಗಳಲ್ಲಿ ಅದು ಸುಪುಷ್ಟವಾಗಿ ಮುಂದುವರೆಯುತ್ತ ಇರುತ್ತದೆ; ಭೌತ ರಸಾಯನಾದಿ ವಿಜ್ಞಾನ ವಿಷಯಗಳ ಸಂಶೋಧನೆ ಇಲ್ಲಿ ನಡೆಯದಿದ್ದರೆ, ಜಗತ್ತಿನ ಇತರ
ಲಕ್ಷಾಂತರ ಸಂಸ್ಥೆಗಳಲ್ಲಿ ಅದು ನಡೆಯುತ್ತಲ್ಲೆ ಇರುತ್ತದೆ. ಹಿಂದಿಗೆ ಅದರ ಏಳಿಗೆಗೆ ನಮ್ಮ ಪ್ರೊತ್ಸಾಹ ಬೇಕಾಗಿಲ್ಲ. ಭಾರತದ ಸಾವಿರಾರು ಸಂಸ್ಥೆಗಳಲ್ಲಿ ಅದು ರಕ್ಷಿತ ಪೋಷಿತವಾಗಿದೆ. ಕಡೆಗೆ ಉರ್ದುವಿನಂತಹ ಭಾಷೆಗೆ ಇರುವ ರಕ್ಷೆ ನಮ್ಮ ಕನ್ನಡಕ್ಕಾಗಲಿ ,ಮರಾಠಿ, ತಮಿಳು, ಮಲೆಯಾಳಂಗಳಾಗಲಿ ಇಲ್ಲ. ಪಾಕಿಸ್ಥಾನದ ಮಾತಿರಲಿ, ಭಾರತದಲ್ಲಿಯೇ ಇರುವ ೪೫ ವಿ.ವಿಗಳಲ್ಲಿ ಒಂದೊಂದು ವಿ.ವಿದಲ್ಲಿಯೂ ಅದಕ್ಕೆ ಆಯಾ ಪ್ರಾದೇಶಿಕ ಭಾಷೆಗಳಿಗಿರುವಂತೆಯೆ ಸಮಾನಸ್ಥಾನ ಒದಗಿ, ಒಟ್ಟು ಮೊತ್ತದಲ್ಲಿ ನೋಡಿದರೆ ಅದಕ್ಕೆ ಪ್ರಾದೇಶಿಕ ಭಾಷೆಗಳಿಗೆ ಲಭಿಸುವ ಪ್ರೋತ್ಸಾಹಕ್ಕೆ ೪೫% ಹೆಚ್ಚು ಪ್ರೊತ್ಸಾಹ ಒದಗುತ್ತದೆ. ಕನ್ನಡಕ್ಕೆ ಕನ್ನಡ ನಾಡಿನಲ್ಲಿ ಹೆಚ್ಚು ಎಂದರೆ ೩-೪ ವಿ.ವಿ ಮಟ್ಟದ ಪ್ರಾಧ್ಯಪಕ ಸ್ಥಾನಗಳಿದ್ದರೆ, ಉರ್ದು,ಹಿಂದಿಯಂತಹ ಭಾಷೆಗಳಿಗೆ ಭಾರತದಲ್ಲಿಯೇ ೫೦ ಪ್ರಾಧ್ಯಪಕ ಸ್ಥಾನಗಳು ಮಿಸಲಾಗಿರುತ್ತದೆ, ಇನ್ನು ಇಂಗ್ಲೀಷ್ ಭಾಷೆಗಂತೂ ಕೇಳುವುದೇ ಬೇಡ. ಪ್ರಪಂಚದಲ್ಲಿ ಅದಕ್ಕೆ ಲಕ್ಷಾಂತರ ಪ್ರಾಧ್ಯಪಕರಿದ್ದಾರೆ. ಇರಲಿ ನಮಗೇನು
ಹೊಟ್ಟೆಕಿಚ್ಚು ಇಲ್ಲಾ. ಒಂದು ನಿದರ್ಶನಕ್ಕೆ ಅಂಕೆ ಅಂಶಗಳ ರೂಪದಲ್ಲಿ ನಾನು ಅದನ್ನು ಉಲ್ಲೇಖಿಸಿದ್ದು, ಅದನ್ನು ಯಾರೂ ಅಸೂಯೆ ಎಂದು ಭಾವಿಸಬಾರದು. ನಮ್ಮ ಪ್ರಾದೇಶಿಕ ವಿ.ವಿ ತಮ್ಮ ಪ್ರಾದೇಶಿಕ ಭಾಷೆ ಸಾಹಿತ್ಯ, ಇತಿಹಾಸವನ್ನು ನಿರ್ಲಕ್ಷಿಸಿದರೆ ಅವುಗಳಿಗೆ ಉಳಿಗಾಲವಿಲ್ಲ. ಬೇರೆ ಯಾರು ಮೂಸಿ ನೋಡುವದಿಲ್ಲ. ಅವು ದುರ್ಗತಿಗೆ ಇಳಿದು, ಅವಮಾನಿತವಾಗಿ ಇತರ ಸಶಕ್ತ ಮತ್ತು ಪ್ರಗತಿಪರ ಭಾಷೆಗಳ ದಾಳಿಗೆ ಸಿಕ್ಕಿ, ಹೇಳ ಹೆಸರಿಲ್ಲದಂತೆ ವಿಲುಪ್ತವಾಗುತ್ತವೆ ಎಂಬ ಕಠೋರ ಸತ್ಯವನ್ನು ತಮ್ಮ ಗಮನಕ್ಕೆ ತರುವ ಆಶಯದಿಂದ ಈ ಕೆಲ್ಸವನ್ನು ಮಾಡಿದ್ದೆನೆ. "ಏಳಿ..ಎಚ್ಚರಗೊಳ್ಳಿ, ಇಲ್ಲದಿದ್ದರೆ ಅನಂತ ಕಾಲಾವೂ ಪತಿತರಾಗಿ ಸರ್ವನಾಶವಾಗುತ್ತವೆ,

ಈ ಪ್ರಾದೇಶಿಕತೆಯ ವೈಶಿಷ್ಟದ ರಕ್ಷಣೆಯಿಂದ ಅಖಿಲ ಭಾರತದ ಸಮಗ್ರತೆಗೆ ಐಕ್ಯತೆಗೆ ಹಾನಿ ಉಂಟಾಗುತ್ತದೆ ಎಂದು ಗೊಂದಲವೆಬ್ಬಿಸುವರ ಹೃದಯದಲ್ಲಿರುವ ಗುಟ್ಟು ಏನು ಎಂಬುದನ್ನು ನಾವು ಹೊಕ್ಕು ನೋಡಿದರೆ ಅದರ ಹೊಳ್ಳು
ಹೊರಬರುತ್ತದೆ., ಅವರ ದುರುದ್ದೇಶ ಬಯಲಾಗುತ್ತದೆ. ಹಾಗೆ ಕೂಗಾಡುವವರ ಒಲೆವೆಲ್ಲಾ ಸಾಮನ್ಯವಾಗಿ ವಿದೇಶಿ ಭಾಷೆಯೊಂದರ ಪರವಾಗಿರುತ್ತದೆ. ಅವರೂ ಆ ವರ್ಗಕ್ಕೆ ಸೇರಿದವರು ಪರಕೀಯರ ಆಳಸರ ಕಾಲದಲ್ಲಿ ಆ ಭಾಷೆಯನ್ನು ಕಲಿತು ಅದರಿಂದ ಸ್ಥಾನಮಾನಗಳನ್ನು ಪಡೆದು, ಕೃತ್ಯಕೃತ್ಯಗಾಗಿದ್ದಾರೆ. ಆ ಸ್ಥಾನ ಮಾನ ಲಾಭಗಳನ್ನೂ ಇನ್ನೂ ಮುಂದೆಯೂ ಉಳಸಿಕೊಂಡು ಹೋಗಲು, ಈಗಾಗಲೇ ಕಷ್ತಪಟ್ಟಿ ಕಲಿತಿರುವ ಆ ಭಾಷೆಯನ್ನೆ ಮುಂದೆಯೂ ಮೊದಲಿನಂತೆಯೆ
ಉಪಯೋಗಿಸುವಂತೆ ಮಾಡಿ ಇತರಿರಿಗಿಂತ ಮುನ್ನವೇ ಸುಭದ್ರವಾಗಿ ನೆಲಸಿ, ಅದರ ಲಾಭ ಪ್ರಯೋಜನ ಪಡೆಯಬೇಕೆಂದು ಅವರ ಅಂತರರಾಷ್ಟ್ರೀಯವಾದದ ಹಿಂದಿರುವ ಹೃದಯ ರಹಸ್ಯವಾಗಿರುತ್ತದೆ.
ಸಂಖ್ಯೆಯಲ್ಲಿ ೧೦೦ಕ್ಕೆ ೧ ರಷ್ಟು ಇಲ್ಲದ ಈ ವರ್ಗದ ಜನರಿಗೆ ಉಳಿದ ೯೯ ರಷ್ಟು ಸಾಮಾನ್ಯ ಜನರ ಕ್ಷೇಮ ಚಿಂತನೆ ಬೇಡವಾಗಿದೆ.

ಆದರೆ ನಿಜವಾಗಿ ಆಲೋಚಿಸಿ ನೋಡಿದರೆ , ಈ ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ಘಾಸಿಯಾಗುವದಿಲ್ಲ. ಏಕೆಂದರೆ ಭಾಷೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆ ಪ್ರದೇಶದ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೆ ೯೫% ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲ ಸಂಸ್ಕೃತಿಯ ವಜ್ರಬೆಸುಗೆಗೆ ನಮ್ಮ ಒಗ್ಗಟ್ಟನ್ನು ಎಂದೆದಿಗೂ ಒಡೆಯಲು ಬಿಡುವದಿಲ್ಲ. ನಮಗೀಗ ಒದಗಿರುವ ರಾಜಕೀಯ ಅಖಂಡತೆಯೂ ಐಕ್ಯತೆಗೂ ಮೂಲಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೆ ಇದೆ ಎಂಬುದನ್ನು ನಮ್ಮ ಇತಿಹಾಸ ಎಂತಹ ಮಂದಗತಿಗೂ ಸುಗೋಚರವಾಗಿ ಪ್ರದರ್ಶಿಸುತ್ತದೆ."

Saturday, March 08, 2008

ಕಾಣದಂತೆ ಮಾಯವಾದರೋ..ನಮ್ಮ ಕನ್ನಡಿಗರು.


ಐ.ಟಿ ಕನ್ನಡಿಗರು ಕಾಣೆಯಾಗಿದ್ದಾರಾ ?, ಎನಪ್ಪಾ ಈ ಪ್ರಶ್ನೆ ಕೇಳುತ್ತಾ ಇದ್ದೀನಿ ಅಂತ ನಿಮಗೆ ಅನಿಸಿರಬಹುದು. ಯಾಕೆ ಎಂದರೆ, ಐ.ಟಿ ಕ್ಷೇತ್ರದಲ್ಲಿ ಅನುಭವ ಇರುವ ವೃತ್ತಿಪರರು ಸಿಗುತ್ತಾ ಇಲ್ಲಾ ಅಂತ ಸಾಮನ್ಯ ಕೊರಗು. ಇದು ನನ್ನ ಅಭಿಮತವು ಕೂಡ.


ಕಾಣದಂತೆ ಮಾಯವಾದರೋ ..

ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇರದಿದ್ದರೆ, ನೀವೆ ಒಂದು ಉದ್ಯೋಗ ಅವಕಾಶವಿರುವ
ಒಂದು ಮಿಂಚೆಯನ್ನು ಕಳಿಸಿ ನೋಡಿ. ಒಂದು ತಿಂಗಳೂ ಅಲ್ಲಾ , ಒಂದು ವರ್ಷದ ನಂತರವೂ ನಿಮಗೆ ಸಿಗುವ ಕನ್ನಡಿಗರ ಸಿ.ವಿ ಬೆರಳಣಿಕೆ ಅಷ್ಟು. ಇದೇ ಸಮಯದಲ್ಲಿ
ನಿಮ್ಮ ಮಿಂಚೆ, ಸಾಗರೋತ್ತರ ದಾಟಿ, ಎಲ್ಲಾ ರಾಜ್ಯದವರಿಗೂ ದೊರಕಿ, ಬಿಮಾರು ರಾಜ್ಯಗಳಿಂದ ಡಜನ್ ಅಷ್ಟು ಸಿ.ವಿ ನಿಮ್ಮ ಇನಬಾಕ್ಸನಲ್ಲಿ ಕುಳಿತಿರುತ್ತದೆ. ಇನ್ನೂ ನಮ್ಮ ನೆರೆ ರಾಜ್ಯಗಳ
ಜನರಿಗೆ ಮಿಂಚಿನ ಹಾಗೆ ವಿಷಯ ತಿಳಿದಿರುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟಿದ್ದರೆ ಮುಗಿಯಿತು. ಯಾರೋ ವರ್ಮ, ಇಲ್ಲಾ ಪಳನಿ ನಮ್ಮ ತಮ್ಮನಿಗೆ ಕೆಲ್ಸ ನೋಡುತ್ತ ಇದ್ದೇವೆ
ಯಾವ ಕಂಪೆನಿ, ಎಷ್ತು ಸಂಬಳ ಕೊಡುತ್ತಾರೆ, ಸಿ.ವಿ ಫಾರ್ವಡ್ ಮಾಡೋದಾ ಅಂತ ಪ್ರಶ್ನೆಗಳ ಸುರಿಮಳೆ ಹಾಕುತ್ತಾರೆ. ಲೋ .. ಅಣ್ಣಾ ಮುಚ್ಕೋಂಡು ಫೊನ್ ಮಡಗು, ಆ ಕೆಲ್ಸ ಈಗ ಖಾಲಿ ಇಲ್ಲಾ
ಅಂತ ನಯವಾಗಿ ಹೇಳಿದರೂ ಸಹಾ, ಸಿ.ವಿ ಕಳಿಸಿರುತ್ತೆನೆ ಮುಂದೆ ಅವಕಾಶ ಬಂದರೆ ಮೊದಲು ನನ್ನ ತಮ್ಮನ ಸಿ.ವಿ ಕಳಿಸಿ ಅಂತ ಹೇಳಿ ಮಾತು ಮುಗಿಸುತ್ತಾರೆ. ಎಪ್ಪಾ ಯಾಕಪ್ಪಾ ಈ ಮಿಂಚೆ ಕಳಿಸಿದೆ,
ಕನ್ನಡದಲ್ಲಿ ಕಳಿಸಿದರೂ, ಅದು ಭಾಷಾಂತರವಾಗಿ ಹೋಗಿ ಈ ಮಟ್ಟಿಗೆ ಪ್ರತ್ಯುತ್ತರ ಸಿಗುತ್ತದೆ ಎಂದು ಆಶ್ಚರ್ಯ ಆಗುತ್ತದೆ.

ಬದಲಾವಣೆ ಬೇಡವೇ ?

ಇವೆಲ್ಲಾ ನಡೆದ ಮೇಲೆ ಪ್ರಶ್ನೆ ಬರುವುದೇ ನಮ್ಮ ಕನ್ನಡಿಗರಿಗೆ ಕೆಲ್ಸ ಬೇಡವೇ?, ಒಂದು ಕೆಲ್ಸಕ್ಕೆ ಸೇರಿಕೊಂಡ ಮೇಲೆ ಅವರು ಅಲ್ಲಿ ಫೆವಿಕಾಲ್ ಹಾಕಿ ಕುಳಿತಿರುತ್ತಾರಾ ?, ಹೊಸ ಹೊಸ ತಂತ್ರಜ್ಞಾನ ಮತ್ತು ಹೊಸ
ಅನುಭವಗಳಿಗೆ ಕನ್ನಡಿಗರ ಮನ ಮಿಡಿಯುವದಿಲ್ಲವೇ ?. ಪ್ರತಿ ವರುಷ ಲಕ್ಷಾಂತರ ಸಂಖ್ಯೆಯಲ್ಲಿ ಆಚೆ ಬರುವ ನಮ್ಮ ಕನ್ನಡಿಗ ಪಧವಿದರರು, ಎಲ್ಲಿ ಮಾಯ ಆಗಿರುತ್ತಾರೆ ?. ಅದು ಹಿಂದಿನ ೧೦ ವರುಷಗಳ ಲೆಕ್ಕ ತೆಗೆದುಕೊಂಡರೆ
ಸಿಗುವ ಸಂಖ್ಯೆ ಎಷ್ಟು ??. ಅಂದರೆ ೪-೫ ಲಕ್ಷದಲ್ಲಿ ಕೇವಲ ೨-೩ ಜನ ಮಾತ್ರ ಕೆಲ್ಸ ಬದಲಾಯಿಸುತ್ತಾರ ಎಂದು ನೆನೆಸಿಕೊಂಡರೆ ಮೈ ನಡುಕ ಆಗುತ್ತದೆ.
ಕೆಲ್ಸ ಸಿಗುತ್ತಿಲ್ಲಾ, ಕನ್ನಡಿಗರಿಗೆ ಕೆಲ್ಸದಲ್ಲಿ ಅನ್ಯಾಯ ಮಾಡುತ್ತ ಇದ್ದಾರೆ ಅನ್ನೊ ಮಾತುಗಳು ಸಪ್ಪೆ ಅನಿಸುವದಿಲ್ಲವೇ. ಕೆಲ್ಸಕ್ಕೆ ಪ್ರಯತ್ನ ಪಟ್ಟರೆ ತಾನೇ ಅನ್ಯಾಯ ಅಗುತ್ತಿದೆ ಎನ್ನಬಹುದು. ಸುಮ್ಮನೆ ಪ್ರಯತ್ನ ಪಡದೆ
ದೊರಕಬೇಕು ಅನ್ನುವದಕ್ಕೆ ಇದೇನು ಮಂತ್ರದಿಂದ ಉದರುವ ಮಾವಿನ ಹಣ್ಣೇ ?.

ನನ್ನ ಅನುಭವ ಮಾತ್ರ ಅಲ್ಲಾ

ಇದು ಕೇವಲ ನನ್ನ ಅನುಭವ ಅಲ್ಲಾ, ಈ ಹಿಂದೆ ಕೆಲ ಸಂಸ್ಥೆಗಳ HR ಆಗಿದ್ದ ನನ್ನ ಗೆಳಯರಿಗೆ ಕನ್ನಡಿಗರಿಗೆ ಮೊದಲು ಆದ್ಯತೆ ಕೊಡ್ರಪ್ಪಾ ಅಂತ ದಂಬಾಲು ಬೀಳುತ್ತಿದ್ದೆ. ಆಗ ಅವರು " ಅಯ್ಯೋ ಗುರು... ನಮ್ಮ ಜನ
ಕೆಲ್ಸಕ್ಕೆ ಅರ್ಜಿ ಹಾಕುವುದೇ ಇಲ್ಲ್ದಾ, ಅರ್ಜಿ ಹಾಕಿದರೆ ತಾನೇ ಕೊಡೊದು" ಅಂತ ಹೇಳುತ್ತ ಇದ್ದಿದ್ದನ್ನು ನಾನು ಸಬೂಬು, ಇಲ್ಲಾ ಯಾರದೋ ಕಿತಾಪತಿ ಎಂದು ಕೊಳ್ಳುತ್ತಿದೆ. ಸಾಲದಕ್ಕೆ ನಮ್ಮ ಹಿಂದಿನ ಪೀಳಿಗೆ ಜನ
ಕನ್ನಡಿಗರು ಅರ್ಜಿ ಹಾಕಿಲ್ಲ, ಅಂತ ಕನ್ನಡಿಗರು ಹಾಕಿದ್ದ ಅರ್ಜಿಗಳನ್ನು ಹರಿದು ಹಾಕಿದ್ದು ಜ್ಞಾಪಕ ಬರುತ್ತಿತ್ತು. ನಮ್ಮ ಕನ್ನಡ ಗೂಗಲ್ ಗುಂಪುಗಳಲ್ಲಿ ದಿನಕ್ಕೆ ೧೦-೧೨ ಉದ್ಯೋಗ ಅವಕಾಶಗಳು ಬರುತ್ತಾ ಇರುತ್ತದೆ, ಅದು ಉತ್ತಮ ಮತ್ತು ಅತ್ಯುತ್ತಮ ಸಂಸ್ಥೆಗಳಿಗೆ, ಆದರೆ ಇವು ಯಾಕೋ ನಮ್ಮ ಕನ್ನಡಿಗನ ಗಮನ ಸೆಳೆಯುವದಿಲ್ಲ. ಅದು ಕೇಳಿರುವ ಪರಿಣಿತಿ ಎನು ರಾಕೆಟ್ ಸೈಸ್ನ ಅಲ್ಲಾ, ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಸುವ ತಂತ್ರಜ್ಜಾನ ಕೇಳಿದರೂ ಸಿಗುವ ಉತ್ತರ ಸೊನ್ನೆಯೇ

ಹೊಗ್ಲಿ ಬರುವ ಒಂದಿಬ್ಬರ ಕಥೆ ಎನೂ ?

ಹೋಗ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಅನ್ನುವ ಹಾಗೇ ಕೇಳಿರದ ಸಂಸ್ಥೆಗಳಲ್ಲಿ ಕೆಲ್ಸ ಮಾಡಿರುವ ಕನ್ನಡಿಗರಿಗೆ ಸಂದರ್ಶನಕ್ಕೆ ಕರೆದರೆ, ಅವರೂ ಮಾನ ಕಳೆಯುತ್ತಾರೆ. ಯಾಕಪ್ಪಾ ಅಂದರೆ
ಅಯ್ಯೊ ಓದಿಕೊಂಡು ಬಂದಿರಲಿಲ್ಲ, ತುಂಬಾ ಕಠಿಣ ಆಗಿತ್ತು ಅಂತಾರೆ. ಇವರು ಕೊಟ್ಟ ಉತ್ತರಗಳನ್ನು ನೋಡಿದರೆ ನಿಮಗೆ ಯಾಕಾದರೂ ಇವರನ್ನು ಸಂದರ್ಶನಕ್ಕೆ ಕಳಿಸಿದೆವೋ ಅಂತ ಅನಿಸುತ್ತದೆ.
ಸಂದರ್ಶನಕ್ಕೆ ಬರುವಾಗ ಓದಿಕೊಂಡು ಬರಬೇಕು ಅಂತ ಬಾಯಿ ಬಿಟ್ಟು ಹೇಳಬೇಕಾ.
ಹೊಗ್ಲಿ..ಬರೋ ಜನಕ್ಕೆ ಸ್ವಲ್ಪ ಮಟ್ಟಿಗೆ ಓದಿಕೊಂಡು ಬನ್ನಿ ಅಂತ ಹೇಳಿದರೂ ಪರಿಣಾಮ ಅಷ್ಟೆ. ನಾನು ತುಂಬಾ ಚೆನ್ನಾಗಿ ಮಾಡಿದ್ದೆ, ಆದ್ರೂ ನನ್ನ ಆರಿಸಲಿಲ್ಲ, ಕನ್ನಡಿಗರಿಗೆ ಅನ್ಯಾಯ ಅಂತ ಬೊಂಬಡ ಹೊಡೆಯುತ್ತಾರೆ.
ಬೇರೆ ಭಾಷೆ ಜನ ನೋಡಿ, ಸುಮ್ಮನೆ ಸಂದರ್ಶನ ಇಲ್ಲದೇ ಇದ್ದರೂ ಆಯ್ಕೆ ಮಾಡೊಲ್ವಾ, ನೀವು ಯಾಕೆ ಹಾಗೆ ಮಾಡಬಾರದು ಅಂತ ಪ್ರಶ್ನೆಗಳನ್ನೇ ಸುರಿಸುತ್ತಾರೆ. ಹಸಿವಾಗಿದೆ ಎಂದು ಹುಲ್ಲು ತಿನ್ನಬೇಕೆ, ಜೊಳ್ಳನ್ನು ತೆಗೆದುಕೊಂಡು
ಮುಂದೆ ನಾವು ಅನುಭವಿಸಬೇಕೆ ಎಂದು ಮಾತಿಲ್ಲದೆ ಸುಮ್ಮನೆ ಆಗುತ್ತೆವೆ.

ಇನ್ನೂ.. ತ್ವರಿತವಾದ ಉದ್ಯೊಗ ಖಾಲಿ ಇದೆ ಅಂತ ಗೆಳೆಯರಿಗೆ ಹೇಳಿ, ಸಂಕಷ್ತದಲ್ಲಿ ಇರುವ ಕನ್ನಡಿಗರಿಗೆ ಸಹಾಯ ಮಾಡೋಣ ಅಂತ ಕರೆ ಮಾಡಿದರೆ, ನನಗೆ ಟೆಸ್ತ ಬರೆಯಲು ಸಮಯ ಇಲ್ಲಾ, ಮುಂದಿನ ವಾರ
ಬರುತ್ತೆನೆ ಅನ್ನುತ್ತಾರೆ. ಗುರು..ತುಂಬಾ ಅರ್ಜೆಂಟು ಇದೆ, ನೋಡು ಒಳ್ಳೆಯ ಅವಕಾಶ ಅಂತ ಅಂಗಲಾಚಿದರೂ ಬರುವದಿಲ್ಲಾ. ಇಷ್ತೆಲ್ಲಾ ಮಾಡಿದ ಮೇಲೆ ಅನಿಸುವುದು ಯಾಕೆ ನಾನು ಇಷ್ಟೊಂದು ಇವರನ್ನು ಕಾಡಿ ಬೇಡಬೇಕು
ಬೇಕಿದ್ದರೆ, ಅವರೇ ಬರುತ್ತಾರೆ. ಹಸಿವಿಲ್ಲದವನಿಗೆ ಮೃಷ್ಟಾನಾ ತೋರಿಸಿದರೂ ತಿನ್ನೊಲ್ಲಾ ಅಂತ ನನಗೆ ನಾನು ಸಮಧಾನ ಮಾಡಿಕೊಂಡಿದ್ದೆನೆ.

ಕೆಲ್ಸದ ಬದಲಾವಣೆಗೆ ಕನ್ನಡಿಗನ ಆಸರೆ ಬಯಸುವದಿಲ್ಲ.

ಇದು ನನಗೆ ಕಂಡು ಬಂದ ಇನ್ನೊಂದು ಅಂಶ. ಕನ್ನಡಿಗರೂ ಕನ್ನಡಿಗರ ಮುಖಾಂತರ ಕೆಲಸಕ್ಕೆ ಪ್ರಯತ್ನ ಪಡುವದಿಲ್ಲ, ಇದಕ್ಕೆ ಎನು ಕಾರಣವೋ ಗೊತ್ತಿಲ್ಲ.ಅದಕ್ಕೆ ಪ್ರತಿ ಬಾರಿ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಅನುಭವ ಆಗುತ್ತದೆ.
ಸರಿ , ಅವರಿಗೆ ಸರಿ ಅನಿಸುವ ಮಾರ್ಗದಲ್ಲಿ ಕೆಲಸವನ್ನು ಅರಿಸುತ್ತಾರೆ ಎಂದುಕೊಂಡು ಸುಮ್ಮನೆ ಇರಬೇಕು ಅಷ್ಟೆ.

Saturday, March 01, 2008

inthi ninna preethiya - FILM REVIEW


ತಾರಾಂಗಣ

ರಾಜೀವ್ - ಕೃಷ್ಣ

ಪರಿಮಳ- ಭಾವನ

ನಯನ -ಸೋನು

ಮಾವ - ರಘು

ಅಣ್ಣ - ಕಿಶೋರ್

ಕನ್ನಡ ಚಿತ್ರರಂಗದಲ್ಲಿ ಅನೇಕ ವಿಷಯಗಳಲ್ಲಿ ಕುತೂಹಲ ಮೂಡಿಸಿದ್ದ ಈ ಚಿತ್ರ, ೨೯ನೇ ತಾರೀಖು ತೆರೆಗೆ ಬಂದಿದೆ. ಸೂರಿ ಈ ಚಿತ್ರವನ್ನು ಹೇಗೆ ಮಾಡಿರಬಹುದು, ದುನಿಯಾ ಮ್ಯಾಜಿಕ್ ಉಂಟಾ ಅಂತ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊದಲನೇ ದಿನವೇ ಚಿತ್ರ ನೋಡಿದೆ.

ಚಿತ್ರದ ಹೆಸರು ನನಗೆ ಹೆಚ್ಚು ಕುತೂಹಲ ಮೂಡಿಸಿತ್ತು, ಇತ್ತಿಚಿಗೆ ಅಷ್ಟೆ PS.I LOVE YOU ಅನ್ನುವ ಚಿತ್ರವನ್ನು ನೋಡಿದ್ದೆ, ಅದರ ನೆರಳು ಇದರ ಮೇಲೆ ಇದೆಯಾ ಅಂತ ನನಗೆ ತುಂಬಾ ಅನಿಸಿತ್ತು. ಹೆಸರು ನೋಡಿ ಚಿತ್ರದಲ್ಲಿ ಪತ್ರಗಳ ಝಲಕ್ಕು ಇರುತ್ತದೆ ಅಂತ ಭಾವಿಸಿದ್ದೆ, ಆದರೆ ನೋಡಿದ ಮೇಲೆ ಚಿತ್ರಕ್ಕೆ ಈ ಒಳ್ಳೆ ಹೆಸರು ಯಾಕೆ ಸೂರಿ ಇಟ್ಟರು ಅಂತ ಆಶ್ಚರ್ಯವಾಯಿತು. ಕೆಲವು ಕಡೆ ಆ ಹೆಸರನ್ನು ಬಳಸಿದ್ದು ಬಿಟ್ಟರೆ, ಶೀರ್ಷಿಕೆಗೆ ಸಂಭಂದವೇ ಇಲ್ಲಾ.

ಚಿತ್ರದ ಆರಂಭ ಬಹಳ ಚೆನ್ನಾಗಿ ಆಗುತ್ತದೆ, ರಾಜೀವನ ಮಾವನ ಕಥೆಯನ್ನು ತೆರೆದಿಡುವ ಮೂಲಕ. ಇವನ ಮಾವ ಒಂದು ಟೆಂಟಿ ನಲ್ಲಿ ಕೆಲಸ ಮಾಡುತ್ತ, ಸಾವಿತ್ರಿ ಅನ್ನೊ ಹುಡುಗಿಯನ್ನು ಪ್ರೀತಿಸುರುತ್ತಾನೆ. ಆದರೆ ಅದು ದುರಂತವಾಗುತ್ತದೆ. ಬೇಸರಾವಾಗಿ ಹಿಮಾಲಯ ಸುತ್ತಾಡಿ ಬರುವ ವೇಳೆಗೆ ಮೂಕ ಆಗಿರುತ್ತಾನೆ. ಇದು ನಮಗೆಲ್ಲಾ ಶಾಕ್, ಜೈ ಟಿಪ್ಪು ಸುಲ್ತಾನ್ ಅನ್ನೋ ಡೈಲಾಗ್ ನಿರೀಕ್ಷಿಸಿದ್ದ ರಘುವಿನ ಬಾಯಿಗೆ ಬೀಗ ಹಾಕಿರುವುದು ಸ್ವಲ್ಪ ಆಶ್ಚರ್ಯವಾಯಿತು. ಆದರೆ ಮೂಕ ಪಾತ್ರದಲ್ಲಿ ಕೂಡ ಹೇಗೆ ನಟಿಸಬೇಕು, ಸಂಘ್ನೆಗಳಿಂದ ಹೇಗೆ ಮನಸ್ಸನ್ನು ಗೆಲ್ಲಬಹುದು ಅಂತ ರಂಗಾಯಣ ರಘು ತೋರಿಸಿದ್ದಾರೆ.
ಅನಾಥ ಶವಗಳನ್ನು ದಫನ್ ಮಾಡುವ ಕೆಲ್ಸ ಮಾಡುತ್ತ ಜೀವನ ಕಳೆಯುತ್ತಿರುತ್ತಾನೆ ಇವನು.

ಚಿತ್ರದ ನಾಯಕ ಒಬ್ಬ ಚಿತ್ರ ಕಲಾವಿದ, ತನ್ನ ಮಾವನ ಜೊತೆ ಸ್ಮಶಾನಗಳಿಗೆ ಹೋಗಿ ಹೆಣಗಳ ಚಿತ್ರಗಳನ್ನು ಬರೆಯುವ ವಿಲಕ್ಷಣ ಹುಡುಗ. ಹೆಣಗಳ ಜೊತೆ ಮಾತಾನಾಡುವ ಒಂದರೆಡು ದೃಶ್ಯ ತುಂಬಾ ಮನ ಮಿಡಿಯುತ್ತದೆ. ಇವನಿಗೆ ತನ್ನ ಸಹಪಾಠಿ ನಯನ ಮೇಲೆ ಅನುರಾಗ. ಇವರ ಇಬ್ಬರ ನಡುವೆ ಪ್ರೀತಿ ತುಂಬಾ ಲವಲವಿಕೆಯಲ್ಲಿ ಇರುತ್ತದೆ. ಇಬ್ಬರೂ ಒಬ್ಬರಿಗೆ ಒಬ್ಬರು ಕಚ್ಚಾಡುತ್ತ, ಪ್ರೀತಿ ಮಾಡುತ್ತ ಇರುತ್ತಾರೆ. ಈ ಹುಡುಗಿಯ ಅಣ್ಣ ಕೂಡ ನಮ್ಮ ನಾಯಕನ ಚೆಡ್ಡಿ ದೋಸ್ತ್.

ನಾಯಕನ ಕಂಪನಿಯಲ್ಲಿ ಮುರುಗ ಅನ್ನೋ ಪೇಟಿಂಗ್ ಮಾಡುವನು, ಪೊಸ್ಟಮಾರ್ಟಮ್ ಮಾಡುವ ಗಡ್ಡಾ, ಮಾವ ಇರುತ್ತಾರೆ. ಕತ್ತಲಾದರೆ ಸಾಕು, ಇವರು ತೀರ್ಥ ಸೇವನೆ ಮಾಡುವ ಕಾರ್ಯಕ್ರಮ. ಆದರೆ ನಾಯಕ ಎಣ್ಣೆ ಮುಟ್ಟದೆ ಇರುತ್ತಾನೆ.
ಮನೆಯಲ್ಲಿ ನಾಯಕನಿಗೆ ಒಳ್ಳೆ ಅತ್ತಿಗೆ, ಕೋಪಿಷ್ಠ ಅಣ್ಣ ,ಅಜ್ಜಿ ಮತ್ತು ಅಣ್ಣನ ಮಗಳು ಇರುತ್ತಾರೆ. ಮನೆ ಚಿಕ್ಕಾದಾದರೂ ಮನ ದೊಡ್ಡದಾಗಿರುವ ತುಂಬು ಕುಟುಂಬ ಅದು.

ಕಲಾವಿದನನ್ನು ಮದುವೆಯಾದರೆ ಎನಿದೆ ಅಂತ ಅನಿಸಿ, ಇವನಿಂದ ದೂರ ಹೋಗಿ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾಳೆ ನಯನ. ಇದನ್ನು ಸಹಿಸಲಾಗದೇ ನಾಯಕ ಕುಡಿತದ ದಾಸ ಆಗುತ್ತಾನೆ. ಸಿಕ್ಕ ಸಿಕ್ಕಲ್ಲಿ ಬಿದ್ದು ಹೊರಳಾಡುತ್ತ, ಪ್ರೀತಿಯ ಬಗ್ಗೆ ಬಡಬಡಿಸುತ್ತಾ ದೇವದಾಸಗೆ ಸಡ್ದು ಹೊಡೆಯುತ್ತಾನೆ. ಇವನ ಈ ಕರುಣಾಮಯ ಸ್ಥಿತಿಯನ್ನು ನೋಡುತ್ತಾಳೆ ಅವನ ಹಿಂದಿನ ಪ್ರೇಯಸಿ, ಅಲ್ಲಿಗೆ ಎರಡು ವರುಷ ಕಳೆದಿರುತ್ತದೆ ಮತ್ತು ಮಧ್ಯಂತರ ಆಗಿರುತ್ತದೆ.

ಈ ಮಧ್ಯದಲ್ಲಿ ಚಿತ್ರದ ಕೊನೆ ತನಕ , ಹೇಗೆ ಎಣ್ಣೆ ಬಾಟಲಿಯನ್ನು ತೆಗೆಯಬೇಕು, ಯಾವುದರ ಜೊತೆ ಮಿಕ್ಸ ಮಾಡಿಕೊಳ್ಳಬೇಕು, ನಂಚಿಕೊಳ್ಳಲು ಎನು ಬೇಕು , ಯಾವ ಚರಂಡಿಯಲ್ಲಿ ಬಿದ್ದು ಒದ್ದಾಡಬೇಕು. ಕುಡಿಯಲು ಹಣಕ್ಕೆ ಯಾವ ರೀತಿ ದುಡ್ಡು ಅರೆಂಜ್ ಮಾಡಿಕೊಳ್ಳಬೇಕು , ಕುಡುಕರು ಸಂಸಾರದಲ್ಲಿ ಹೇಗೆ ಮುಳ್ಳು ಆಗುತ್ತಾರೆ, ಅವರನ್ನು ಸರಿ ದಾರಿಗೆ ತರಲು ಎನು ಮಾಡಬೇಕು
ಅಂತ ತುಂಬಾ ಆರ್&ಡಿ ಮಾಡಿ ಸೂರಿ ತೋರಿಸಿದ್ದಾರೆ.

ಕುಡಕರನ್ನು ಸರಿ ಮಾಡಬೇಕು ಅಂದರೆ ಅವನಿಗೆ ಒಂದು ಮದುವೆ ಮಾಡದರೆ ಸರಿ ಹೋಗುತ್ತದೆ ಅಂತ ಅವನಿಗೆ ಪರಿಮಳ ಅನ್ನೊ ಅನಾಥೆ ಜೊತೆ ಮದುವೆ ಮಾಡುತ್ತಾರೆ. ಮದುವೆಯ ಮೊದಲ ರಾತ್ರಿಯ ದಿನವೇ ಹಾಲು ಕುಡಿಯಬೇಕಾದ ಈ ನಾಯಕ ಆಲ್ಕೊಹಾಲು ಕುಡಿಯುತ್ತಾನೆ. ಅಲ್ಲಿಗೆ ಅವನ ಹೆಂಡತಿಗೆ ಅವನ ನಿಜ ಸ್ವರೂಪ ಗೊತ್ತಾಗುತ್ತದೆ. ಅಣ್ಣನ ಮನೆಯಲ್ಲಿ ಇರಲಾಗದೇ ಬೇರೆ ಸಂಸಾರ ಮಾಡುತ್ತಾರೆ, ಆ ಸಂಸಾರ ತೂಗಿಸಲು ಇದ್ದ ಬದ್ದ ವಸ್ತುಗಳನ್ನು ಮಾರುತ್ತಾರೆ. ದಿನಾ ರಾತ್ರಿ ಕುಡಿದುಕೊಂಡು ಬಂದು ಬಾಗಿಲು ಬಡಿಯುವ ೃಶ್ಯವೇ ಹದಿನೈದು ಸಾರಿ ತೋರಿಸಿದ್ದಾರೆ. ಹಾಗೆ ತೋರಿಸುತ್ತ, ಅವರ ಕೈಗೆ ಒಂದು ಮಗು ಕೂಡ ಬರುತ್ತದೆ. ಈ ಕುಡುಕ ಕುಡಿಯಲು ಮಗುವಿನ ಉಂಗುರ ಕೂಡ ಕದಿಯುತ್ತಾನೆ.

ಕುಡುಕನ ಹೆಂಡತಿಯನ್ನು ಸಮಾಜ ನೋಡುವ ರೀತಿ ಬಗ್ಗೆ ಪರಿಮಳ ಒಂದು ದಿನ ತಿಳಿಹೇಳುತ್ತಾಳೆ, ಅದು ಇವನ ತಲೆಯಲ್ಲಿ ನಾಟಿ ಕುಡಿತವನ್ನು ಬಿಡುತ್ತಾನೆ, ಸ್ವಲ್ಪ ಜವಾಬ್ದಾರಿ ಕಲಿಯುತ್ತಾನೆ. ಅಲ್ಲಿಗೆ ಅವನ ಮಗು ಸ್ಕೂಲ್ ಹೋಗಲು ಆರಂಭಿಸಿರುತ್ತದೆ. ಎಲ್ಲಾ ಸರಿ ಇದೆ ಅಂದುಕೊಳ್ಳುವಾಗ ಪರಿಮಳ ಕರೆಂಟ್ ಹೋಡೆದು ಸಾಯುತ್ತಾಳೆ. ಮತ್ತೆ ನಮ್ಮ ನಾಯಕನ ಕೈನಲ್ಲಿ ಬಾಟಲಿ ಬರುತ್ತದೆ.
ಹೀಗೂ ಹಾಗೂ ಮಗಳನ್ನು ಸಾಕುತ್ತ, ಕುಡಿತದ ಬಗ್ಗೆ spb ಬಗ್ಗೆ ಕುಯ್ಯಿಸಿಕೊಂಡು ಸಹಾ ನಾಯಕ ಜೀವನ ಸಾಗಿಸುತ್ತ ಹೋಗುತ್ತಾನೆ, ಅಲ್ಲಿಗೆ ೨ ಗಂಟೆ ೪೦ ನಿಮಿಶದ ಚಿತ್ರ ಅಂತ್ಯ ಕಾಣುತ್ತದೆ.

ಒಟ್ಟಿಗೆ ಬಹು ನಿರೀಕ್ಷಿತ ಚಿತ್ರ ಹೀಗೆ ಕುಡುಕನ ಕಥೆಯಲ್ಲಿ ಪೇಲವ ಆಗುತ್ತದೆ.

ಮೆಚ್ಚ ಬೇಕಾದ ಅಂಶಗಳು

೧) ಪಾತ್ರಗಳು ಮತ್ತು ಅವರ ನಟನೆ

೨) ಹಾಡುಗಳು ಮತ್ತು ಅದರ ಚಿತ್ರೀಕರಣ

೩) ಸ್ಮಶಾನದಲ್ಲಿ ಚಿತ್ರೀಕರಣ

೪) ಭಾವನ

ಬೇಸರವಾಗುವ ಅಂಶಗಳು

೧) ಪದೇ ಪದೇ ಕುಡಿತದ ಬಗ್ಗೆ ತೋರಿಸುವುದು, ಕುಡಿಯುವದನ್ನೇ ಪ್ರತಿ ಫ್ರೆಮನಲ್ಲಿ ತೋರಿಸುವುದು ಅಸಹ್ಯ ಆಗುತ್ತದೆ
೨) ಕಥೆಯ ಮೇಲೆ ಇಲ್ಲದ ಹಿಡಿತ
೩) ಚಿತ್ರದ ಉದ್ದೇಶವೇ ಸ್ಪಷ್ಟ ಇಲ್ಲಾ

೫ ಅಂಕಗಳಿಗೆ ೨ ಅಂಕ ಪಡೆದುಕೊಳ್ಳುತ್ತದೆ.