Thursday, December 29, 2016

ಭಾಯಿಯೋ ಬೆಹನೋ ..

ಸ್ವಾತಂತ್ರ  ಪೂರ್ವದ ಸಮಯ ,  ಎಲ್ಲ ಕಡೆ ಇದ್ದ ಹಾಗೆ ಬೆಂಗಳೂರಿನಲ್ಲೂ ಹೋರಾಟದ ಕಾವು ತೀವ್ರವಾಗಿತ್ತು ,  ಕಾದಿ  ಧಾರಣೆ  , ವಿದೇಶಿ ವಸ್ತುಗಳ ಬಹಿಷ್ಕಾರ , ಸ್ವಾವಲಂಬನೆ ಇವೆಲ್ಲ ಹುಡುಗರನ್ನು ಆಕರ್ಷಿಸಿತು. ಅನೇಕರು ಕಾಂಗ್ರೆಸ್ ಸೇರಿದ್ದರು.  ಇಂದಿನ ಮೆಜಸ್ಟಿಕ್ ಸುತ್ತ ಮುತ್ತ ಅನೇಕ ಸಭೆಗಳು ನಡೆಯುತ್ತಾ ಇದ್ದವು.
ಇದರಲ್ಲಿ ಹೆಚ್ಚಾಗಿ ಉತ್ತರ ಭಾರತದ ಜನರೇ ಭಾಷಣ ಮಾಡುತ್ತಾ ಇದ್ದರು,  ದೇಶಭಕ್ತಿ ಪಾಠ ದಕ್ಷಿಣದವರಿಗೆ ಹೆಚ್ಚು ಬೇಕು , ಇವರು ಸ್ವಾಬಿಮಾನವಿಲ್ಲದ ಬ್ರಿಟಿಷರ ಗುಲಾಮರು ಅನ್ನುವ ಮನಸ್ಥಿತಿ ನಮ್ಮ ಉತ್ತರ ಭಾರತದ ನಾಯಕರಲ್ಲಿ ಅದರಲ್ಲು  ನಮ್ಮ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿತ್ತು.   ಅವರುಗಳ ಜೊತೆ ನಮ್ಮ ನಾಯಕರು ಮಾತನಾಡುತ್ತ ಇದ್ದರು ಅನ್ನೋದು ಬೇರೆ ಮಾತು, ಅದು ಕೊಸರಾಗಿತ್ತು.

ಅಂತಹ ದಿನಗಳಲ್ಲಿ ಒಂದು ಸಾರಿ ಲಾಲಾಲಜಪತ್ ರಾಯರು ಬೆಂಗಳೂರಿಗೆ ಬಂದು ಭಾಷಣ ಮಾಡುವುದಿತ್ತು , ಅಂದಿನ ದಿನಗಳಲ್ಲಿ ಲಾಲಾಜಿ ಹೆಸರು ಬಹಳ ಪ್ರಸಿದ್ಧಿಯಲ್ಲಿ ಇತ್ತು, ಪಂಜಾಬಿನ ಕೇಸರಿ ಎಂಬ ಬಿರುದು ಬೇರೆ ಇತ್ತು.ತುಂಬಾ ಓದಿಕೊಂಡಿದ್ದ ಆವರು ಅನೇಕ ವಿಷಯಗಳ ಬಗ್ಗೆ ಮಾತಾನಾದಬಲ್ಲರಾಗಿದ್ದರು, PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಸ್ಥಾಪಿಸುತ್ವದರಲ್ಲೂ  ಕೂಡ ಇವರ ಕೊಡುಗೆ ಇದೆ.

ಜನರಿಗೆ ಅವರ ಭಾಷಣ ಕೇಳುವ ತವಕ.  ಕಲಾಸಿಪಾಳ್ಯದ  "ರತ್ನಾವಳಿ ನಾಟಕ ಶಾಲೆ" ಇದಕ್ಕೆ  ವ್ಯವಸ್ಥಿತವಾಗಿತ್ತು.  ಆಗ ಜನರನ್ನು ಇಂದಿನ ಭಾಷಣಗಳಿಗೆ ಬಿರಿಯಾನಿ ಕೊಟ್ಟು ಕರೆ ತರುತ್ತ ಇರಲಿಲ್ಲ .  ಜನ ತಾವಾಗಿಯೇ ಸೇರಿದ್ದರು.  ಇವರಗಿಂತ ಮುಂಚೆ ಕೆಲವು ಹಿಂದಿ ನಾಯಕರು  ಜನರಿಗೆ ಅರ್ಥವಾಗದ ಹಿಂದಿಯಲ್ಲಿ ಮಾತನಾಡಿದರು, ಜನ ಕನ್ನಡ/ಇಂಗ್ಲಿಷ್ ಎಂದು ವಿನಂತಿಸಿಕೊಂಡರು, ನಾಯಕರು ಹಿಂದಿಯಲ್ಲೇ ಮುಂದುವರೆಸಿದರು. ಜನರಿಗೆ ಅರ್ಥ ಆಗದೆ ಶಾಂತಿಯಿಂದ ಲಾಲಾಜಿ ಭಾಷಣಕ್ಕೆ ಕಾದರು. ಲಾಲಾಜಿ ಬಂದು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆರಂಬಿಸಿದರು , ಮೊದಲಿಗೆ  "ಭಾಯಿಯೋ ಬೆಹನೋ"  ಎಂದಾಗ ಅಲ್ಲಿದ್ದ ಜನ ಒಕ್ಕೊರಲಿನಿಂದ  " ದಯವಿಟ್ಟು ಇಂಗ್ಲೀಷಿನಲ್ಲಿ ಮಾತನಾಡಿ" ಎಂದು ಒತ್ತಾಯ ತಂದರು.  ಇದನ್ನು ಕೆಲ ಹುಡುಗರು ಜೋರಾಗಿಯೇ ಕೂಗಿದರು,  ಆಗ ಲಾಲಾಜಿ ಅಲ್ಲೇ ಸಭೆಯಲ್ಲಿ ಇದ್ದ  ಹಿಂದಿ ನಾಯಕರನ್ನು ನೋಡಿ ಏನು ಮಾಡಲಿ ಎಂದಾಗ ,  ಅಲ್ಲಿದ್ದವರು ಇಂಗ್ಲೀಷಿನಲ್ಲಿ ಮಾತನಾಡಿ ಎಂದು ಸೂಚಿಸಿದರು. ಜನರ ಒತ್ತಾಯಕ್ಕೆ ಸಮಯೋಚಿತವಾಗಿ ಲಾಲಾಜಿ ಇಂಗ್ಲೀಷಿನಲ್ಲಿ ಭಾಷಣ ಮಾಡಿದರು. ನೆರೆದಿದ್ದ ಜನರು ಕರಾಡತನದಲ್ಲಿ ಅದನ್ನು ಸ್ವಾಗತಿಸಿದರು.

ಸ್ವಲ್ಪ ಫಾಸ್ಟ ಫಾರ್ವಡ್ ಮಾಡೋಣ.

ನಮಗೆ ಹೆಸರಿಗೆ ಸ್ವಾತಂತ್ರ ಸಿಕ್ಕಿದೆ, ಭಾರತವಾಗಿದೆ,  ಭಾಷಣಗಳ ತಾಣ ಕಲಾಸಿಪಾಳ್ಯ ಹೋಗಿ ಬಸವನಗುಡಿ , ಪ್ಯಾಲೇಸ್ ಮೈದಾನ ಆಗಿದೆ.  ಆದರೆ ನಮ್ಮನ್ನು ಉದ್ದೇಶಿಸಿ ಇಂದೂ ಕೂಡ ರಾಷ್ಟ್ರೀಯ ನಾಯಕರು ಭಾಷಣ ಮಾಡುತ್ತಾ ಇದ್ದಾರೆ,   ಮೂರು ನಾಲ್ಕು ಪೀಳಿಗೆ ಆಗಿದ್ದರು  ಉತ್ತರ ಭಾರತದ ನಾಯಕರಲ್ಲಿ ಏನು ಬದಲಾವಣೆ ಆಗಿಲ್ಲ , ಇವರಿಗೆ ಏನು ಗೊತ್ತಿಲ್ಲ ನಾವೇ ಹೇಳಿಕೊಡಬೇಕು ಧೋರಣೆ.
ನಮಗೋ ಉತ್ತರದ ನಾಯಕರೆ  ದೇವರುಗಳು , ಆವರು ಹೇಳದೆ ಒಂದು ಹುಲ್ಲು ಅಲಗಾಡುವದಿಲ್ಲ ಅನ್ನೋ ಕೀಳರಿಮೆ ಹಾಗಿಯೇ ಕೂತಿದೆ.
ನಮ್ಮನ್ನು ಉದ್ದೇಶಿಸಿ ಈಗಲೂ ಉತ್ತರದ ನಾಯಕರು  ಮೊದಲಿಗೆ  "ಭಾಯಿಯೋ ಬೆಹನೋ"  ( @ 1:22 ) ಎಂದೆ ಸಂಭೋಧಿಸುತ್ತಾರೆ , ಆದರೆ ಹಿಂದಿ ಹೇರಿಕೆಯನ್ನು ಒಪ್ಪದ , ಕನ್ನಡ/ಇಂಗ್ಲಿಶ್ ಬೇಕು ಎನ್ನುವ ಸ್ವಾಭಿಮಾನದ   ಕನ್ನಡಿಗರು ಮಾತ್ರ ಮಿಸ್ಸಿಂಗ್ ಅಷ್ಟೇ.

ಸಿಕ್ಕರೆ ಹುಡುಕಿಕೊಡಿ.