Friday, March 11, 2011

ನಾರಾಯಣ ಮೂರ್ತಿಯವರು ಕಂಡಿದ್ದೇನು, ಕಾಣದಿದ್ದು ಎನು ?

ಮೊದಲಿಗೆ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯಿತು, ಬೆಳಗಾವಿ ಮಾಡಿದ್ದೇ ಒಂದು ದೊಡ್ಡ ಸಾಧನೆ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ ನಾರಾಯಣ ಮೂರ್ತಿ ಅವರ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದವು. ಮುಖ್ಯವಾಗಿ ಗೌರಿ ಲಂಕೇಶ್ ಮತ್ತು ಇತರರ ವರ್ಗ ಅದನ್ನು ಸರಿಯಿಲ್ಲ ಅನ್ನು ಭರದಲ್ಲಿ ಮೂರ್ತಿಗಳು ಸರಿಯಿಲ್ಲ ಎಂದು ವೈಯಕ್ತಿಕ ಟೀಕೆ ಮಾಡಿದರು. ಕೊನೆಗೆ ಇದು ಅಂದುಕೊಂಡ ಹಾಗೆ ಅವರ ಜಾತಿಗೂ ಹೋಗಿದ್ದು ವಿಷಾದಕರ. ಅಲ್ಲಿಗೆ ಆ ವರ್ಗ ಕಾಮಲೆ ಕಣ್ಣಿನಿಂದ ಇಷ್ಟೆ ನನಗೆ ನೋಡಲು ಸಾಧ್ಯ ಎಂದು ತೋರಿಸಿಕೊಟ್ಟಿತು.


ಇನ್ನು ಆ ಕಡೆ ಮೂರ್ತಿಗಳು ಮೊದಲ ಬಾರಿಗೆ ಎಲ್ಲಾ ಕನ್ನಡ ದಿನಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಗಳಿಗೂ ( ವಿಶೇಷ) ಸಂದರ್ಶನ ಕೊಟ್ಟರು. ಅದರಲ್ಲಿ ಆ ಟೀಕೆಗಳಿಗೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವದಕ್ಕೆ ಸೀಮಿತ ಇಟ್ಟಿದ್ದರು. ದೊಡ್ಡವರು ಅನಿಸಿಕೊಂಡವರು ಕೂಡ ಈ ಸಮರ್ಥನೆಗೆ ಇಳಿದಾಗ ಇಲ್ಲ ತಾವೂ ಕನ್ನಡಿಗರು ಎಂದು ತೋರಿಸಲು ಹೋದಾಗ ಆಗುವ ಆವಾಂತರಕ್ಕೆ ಇವರೇನು ಹೊಸತಲ್ಲ ಬಿಡಿ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಒಂದು ತಿಂಗಳು ಆಗಿಲ್ಲ , ಮುಖ್ಯವಾಗಿ ವಿಶ್ವಕನ್ನಡ ಸಮ್ಮೇಳನ ಯಾಕೆ ಮಾಡುತ್ತ ಇದ್ದೀರಿ, ಇದು ಹೇಗೆ ನಾಡು ಕಟ್ಟಲು ಸಹಾಯ ಮಾಡುತ್ತದೆ ಎಂದು ಮೊದಲು ನನಗೆ ಸರಿಯಾಗಿ ತಿಳಿಸಿಕೊಡಿ ಆಮೇಲೆ ನಾನು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತೆನೆ ಎಂದು ಹೇಳಿದ್ದರೆ ಚೆನ್ನ ಇರುತ್ತಿತ್ತು. ಅದನ್ನು ಅವರು ತಿಳಿದುಕೊಂಡ ಹಾಗೆ ಇಲ್ಲಿ ತನಕ
ನನಗೆ ಅನಿಸಿಲ್ಲ. ಇದು ವಿಶ್ವದ ಎಲ್ಲಾ ಕನ್ನಡಿಗರ get together ಅನ್ನುವುದೇ ಆಗಿದ್ದಲ್ಲಿ ಮೂರು ದಿನ ಅದೇ ಕಮ್ಮಟಗಳು ಬೇಕಿತ್ತ ಎಂದು ಎಲ್ಲರಿಗೂ ಸಹಜವಾಗಿ ಮೂಡುವ ಪ್ರಶ್ನೆ ಐ.ಟಿ ದಿಗ್ಗಜರಿಗೆ ಬರದಿರುವುದು ಆಶ್ಚರ್ಯವೇ ಸರಿ.


ಮೊದಲಿಗೆ ಮೂರ್ತಿಗಳು ನಾನು ಕನ್ನಡಿಗ ಎಂದು ಪದೇ ಪದೇ ಸಾರಲು ಹೋಗಿದ್ದು. ಆ ಪ್ರಶ್ನೆ ಅವರಲ್ಲೇ ಮೂಡಿದ್ದು ಆದರೂ ಯಾಕೆ ?. ಅಷ್ಟಕ್ಕು ಕನ್ನಡಿಗ ಎಂದರೆ ಅದರ ಪರಿಧಿ ಮತ್ತು ಆಳ ಅವರಿಗೆ ಗೊತ್ತಿದೆ ಅನಿಸುತ್ತೆದೆಯಾ ?. ಕರ್ನಾಟಕದಲ್ಲಿ ಹುಟ್ಟಿದರೆಲ್ಲರೂ ಕನ್ನಡಿಗರೇ, ಇದು ನಮ್ಮ ಸಂವಿಧಾನದಿಂದ ಎತ್ತಿಕೊಂಡು ಹೇಳಿದರೆ ಅದು ಸ್ವಾಭಾವಿಕವಾಗಿ ಬಂದ ಹಕ್ಕು ಅದನ್ನು ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಅವರು ನಾನು ನನ್ನ ಹೆಂಡತಿ ಜೊತೆ ಕನ್ನಡಲ್ಲಿ ಮಾತನಾಡುತ್ತೆನೆ, ನಮ್ಮ ಮನೆಯ ಆಳುಗಳ ಜೊತೆ ಕನ್ನಡದಲ್ಲಿ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡ ಪುಸ್ತಕ ಪ್ರಕಟಿಸುತ್ತಾರೆ ಹೀಗೆ ಹೇಳುತ್ತ ನಾನು ಕನ್ನಡಿಗ ಎಂದು ಹೇಳಲು ಹೊರಟಿದ್ದು ನಿಜಕ್ಕೂ ಬಾಲಿಶ ಅನಿಸಿದ್ದು ನಿಜ.

ಮುಂದೆ ಅವರು ತಮ್ಮ ಹಿಂದಿನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಕೆಲವು ಉತ್ತಮ ವಿಚಾರಗಳನ್ನು ಹೇಳುತ್ತಾರೆ.
೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ. ೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು. ೩. ಬೆಂಗಳೂರಿನಲ್ಲಿ ಕನ್ನಡಿಗರೂ ಯಾವಾಗಲೂ ಬಹುಸಂಖ್ಯಾತರೇ

ಇವು ಬಹಳ ಉತ್ತಮವಾದ ಮತ್ತು ನನ್ನ ಮನಸ್ಸಿನ ಭಾವನೆಗಳು. ಆದರೆ ಸಂದರ್ಶನ ಮುಂದೆ ಓದುತ್ತ ಹೋದ ಹಾಗೆ ಅವರೆ ಅದನ್ನು ಒಡೆಯುತ್ತಾರೆ. ಹೇಗೆ ಎಂದು ನೋಡೊಣ.

೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ.

ಪ್ರಭಲತೆ ಒಂದು ಭಾಷೆಗೆ ಬರುವುದು ಅದಕ್ಕೆ ಇರುವ ಹೊಟ್ಟೆಗೆ ಹಿಟ್ಟು ಕೊಡುವ ಶಕ್ತಿ ಇಂದ. ಕೇವಲ ೧೦೮ ಸಾಹಿತ್ಯ ಪ್ರಕಾರ, ೭ ಜ್ಞಾನಪೀಠಗಳಿಂದ ಅದು ಬರುವದಿಲ್ಲ. ಭಾಷೆಗೆ ಉದ್ಯೋಗ ಕೊಡುವ ಶಕ್ತಿ ಇದ್ದರೆ ಮಾತ್ರ ಸಮಾಜದಲ್ಲಿ ಒಂದು ಬೆಲೆ ಮತ್ತು ನೆಲೆ ಇರುತ್ತದೆ. ಇಲ್ಲದಿದ್ದರೇ ಕೇವಲ ಶ್ರೀಮಂತರ ಮನೆಯ ಶಾಡಿಲ್ಯಗಳ ಹಾಗೆ ಕಾಣುತ್ತದೆ ಅಷ್ತೆ.
ಮೂರ್ತಿಗಳು ಉದ್ಯೋಗ ಸೃಷ್ಟಿ ಮಾಡುದವರಿಂದ ಮಾತ್ರ ಪ್ರಭಲತೆ ಸಾಧ್ಯ ಎಂದು ಹೇಳಿರುವ ಮಾತು ಸರಿ ಇದೆ, ಆದರೆ ಅದರಲ್ಲಿ
ಭಾಷ ಆಯಾಮ ಇಲ್ಲದಿದ್ದರೆ ಅವರೇ ಹೇಳಿರುವ ಹಾಗೆ ಕ-ಕ-ಕ ಯಾವುದು ಪ್ರಭಲ ಆಗುವದಿಲ್ಲ. ಇನ್ನು ಅವರ ಜಗತ್ತೇ ಆಗಿರುವ ಇನ್ಫೊಸಿಸ್ ಆ ಕೆಲಸ ಮಾಡಿದ್ದರೆ ಅವರನ್ನು ಯಾರು ಪ್ರಶ್ನೆ ಮಾಡುತ್ತ ಇರಲಿಲ್ಲ ಮತ್ತು ಅವರು ತಮ್ಮ ಸಮರ್ಥನೆ ಕೋಡುವ ಕೆಲಸಕ್ಕೂ ಕೈ ಹಾಕಬೇಕಾಗಿರಲಿಲ್ಲ. ಅವರೇ ಅನೇಕ ಕಡೆ ಹೇಳಿರುವ ಹಾಗೆ ಮಾತಿಗಿಂತ ಕೃತಿಗಳು ಮಾತಾಡಲಿ ಎಂದು, ಅದೇ ಆಗಿದ್ದರೆ ಮಾತಿಗೆ ಮುಂದೆ ನಮ್ಮ ಇನ್ಫೊಸಿಸ್ ಇದು ಮಾಡಿದೆ, ಅದು ಮಾಡಿದೆ ಎಂದು ಸ್ವಪ್ರಚಾರ ಮಾಡುವ ಗೋಜಿಗೆ ಅವರೇ ಇಳಿಯುತ್ತ ಇರಲಿಲ್ಲ. ಅವರಿಗೂ ಗೊತ್ತು ಕ-ಕ-ಕ ಪ್ರಭಲ ಆಗದೇ ಇರುವದಕ್ಕೆ ನಾವು ೧೦೮ ಸಮ್ಮೇಳನಗಳು, ೧೦೮ ಹೋರಾಟಗಳನ್ನು ಮಾಡುತ್ತ ಇರುತ್ತೆವೆ ಎಂದು. ಆ ಕೆಲ್ಸ ಇನ್ಫೊಸಿಸ್ ಇಂದ ಅವರೇ ಹೇಳಿದ ಹಾಗೆ ಆಗಿದ್ದರೆ ಇಂದು ಇಸ್ರೇಲ್ ಮಾದರಿಯಲ್ಲಿ ಇರುತ್ತಿದ್ದೆವೂ ಎಂದು. ಇನ್ನು ಅವರಿಗೆ ಇನ್ಫೊಸಿಸ್ ಕಟ್ಟಿರುವದಕ್ಕೆ ಹೆಮ್ಮೆ ಇರಬೇಕೆ ವಿನಹ ಕ-ಕ-ಕ ಪ್ರಭಲತೆ
ಇನ್ಫೊಸಿಸ್ ಮಾಡಿದೆ ಅನ್ನು ತಪ್ಪು ಕಲ್ಪನೆ ಬಗ್ಗೆ ಹೆಮ್ಮೆ ಬೇಡ.

೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು.

ನಾವು ಹೇಳುತ್ತ ಇರುವುದು ಕೇವಲ ಇಂಜಿನೇರಿಂಗ್ ಮಾಡಿ ಇನ್ಫೋಸಿಸ್ ಸೇರುವರ ಬಗ್ಗೆ ಅಲ್ಲ. ಕೇವಲ ವಿಜ್ಞಾನ ಮತ್ತು ಗಣಿತ ಅಲ್ಲದೇ ಜಗತ್ತಿನ ಆಗುಹೋಗುಗಳು ಮತ್ತು ಹೊಟ್ಟೆಯ ಹಿಟ್ಟಿನ ವಿಷಯಗಳು ಎಲ್ಲಾ ಕನ್ನಡದಲ್ಲಿ ಸಿಗುವ ಹಾಗೆ ಆಗಬೇಕು. ಆಗ ಮಾತ್ರ ಅದು ಪ್ರಭಲಗೊಳ್ಳಲು ಸಾಧ್ಯ. ಆದರೆ ಅವರೇ ಹುಟ್ಟುಹಾಕಿದ ಗುಳ್ಳೆಯನ್ನು ಅವರು ಹೀಗೆ ಒಡೆಯುತ್ತಾರೆ

"ಬೈರಪ್ಪ, ಅನಂತಮೂರ್ತಿ ಕೃತಿಗಳನ್ನು ಓದಿದಾಗ ನನಗೆ ಸಂತಸ ಆಗುತ್ತದೆ, ಅದೇ ವಿಜ್ಞಾನ ಮತ್ತು ಗಣಿತದ ವಿಷಯಕ್ಕೆ ಇಂಗ್ಲೀಶ್ ಸೂಕ್ತ ಮತ್ತು ಆಪ್ತ. ಯಾವ ವಿಷಯವನ್ನು ಯಾವ ಭಾಷೆಯಲ್ಲಿ ವ್ಯವಹರಿಸಿದರೆ ಸೂಕ್ತವೋ ಅದೇ ಮುಖ್ಯ."

ಇದನ್ನು ನೊಡಿದರೆ ಇವರ ಮನಸ್ಸಿನಲ್ಲಿ ಕನ್ನಡ ಯಾವಗಲೂ ಕೇವಲ ಕಥೆ ಕಾದಂಬರಿಗಳಿಗೆ ಮಾತ್ರ ಸರಿ ಮತ್ತು ಸೂಕ್ತ. ಹೊಟ್ಟೆ
ಹಿಟ್ಟಿನ ಎಲ್ಲಾ ವಿಷಯಗಳಿಗೆ ಇಂಗ್ಲೀಶ್ ಆಪ್ತ ಎಂದು ಹೇಳುವ ಪರಿ ನಿಜಕ್ಕೂ ಬೇಸರ ತರಿಸುತ್ತದೆ. ಬಹುಪಾಲು ಜನರು ಅಂದುಕೊಂಡ ಹಾಗೆ ಕನ್ನಡ ಎಂದರೆ ಕಥೆ,ಕವಿತೆಗಳಿಗೆ ಮಾತ್ರ ಸೀಮಿತ. ಇವರ‍ೆ ಹೇಳುವ ಹಾಗೆ ಕಥೆ-ಕಾದಂಬರಿಗಳಿಂದ ಇಲ್ಲಾ
ಅದನ್ನು ಓದಿ ಆಗುವ ಸಂತಸದಿಂದ ನಮಗೆ ಪ್ರಭಲತೆ ಬರುತ್ತೆದೆಯಾ. ಒಂದು ಕಡೆ ಅದು ಬರಬೇಕು, ಇದು ಬರಬೇಕು ನಮ್ಮ ಭಾಷೆಯಲ್ಲಿ ಹೇಳಿ ಇನ್ನೊಂದು ಕಡೆ ಕನ್ನಡ ಅದಕ್ಕೆಲ್ಲಾ ಸೂಕ್ತ ಅಲ್ಲ, ಅದಕ್ಕೆಲ್ಲಾ ಇಂಗ್ಲೀಶ್ ಸರಿ ಮತ್ತು ಆಪ್ತ ಎಂದು ಹೇಳುವುದು
ಅವರ ಎಡಬಿಂಡಗಿತನ ಎತ್ತಿ ತೋರಿಸುತ್ತದೆ. ಮುಂದೆ ಅವರ ಈ ನಿಲುವೇ ಕನ್ನಡ ಮಾಧ್ಯಮ ತೆಗೆದು ಇಂಗ್ಲೀಷ್ ಮಾಧ್ವಮ ಬೇಕು ಎನ್ನುವದಕ್ಕೆ ಹೊಗುತ್ತದೆ.

ಈಗಲೂ ಕಾಲ ಮಿಂಚಿಲ್ಲ, ಯಾರು ಅವರಿಂದ ಹೊಸತಾಗಿ ಶೌಚಾಲಯವನ್ನೊ ಇಲ್ಲ ಕನ್ನಡ ಸಾಫ್ಟವೇರನ್ನು ಬಯಸುತ್ತ ಇಲ್ಲ.
ಅವರು ಅನೇಕ ಕನ್ನಡ ಮನಸ್ಸುಗಳಲ್ಲಿ ಇಂದಿಗೂ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರ ಕನಸು
ಮತ್ತು ಅನೇಕರ ಕನ್ನಡಿಗರ ಕನಸು ಒಂದೆ. ಆ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮಾಡಿ, ಅದನ್ನು ಸರಕಾರಕ್ಕೆ
ತಿಳಿಸಿ ಇಲ್ಲ ಅವರೇ ಹೇಳುವ ಅವರ ಹೆಮ್ಮೆಯ ಇನ್ಫೊಸಿಸ್ ಟ್ರಸ್ಟನಿಂದ ಅಲ್ಲೇ ಇರುವ ಅನೇಕ ಕನ್ನಡ ಮನಸ್ಸುಗಳನ್ನು ಇದಕ್ಕೆ ತೊಡಗಿಸಬಹುದು ಮತ್ತು ೧೦ ವರುಷದಲ್ಲಿ ಹೊಟ್ಟೆಗೆ ಹಿಟ್ಟು ಕೊಡುವ ಅತ್ಯುತ್ತಮ ಪುಸ್ತಕಗಳನ್ನು ಕನ್ನಡದಲ್ಲ್ಲಿ ತರಬಹುದು.

ಅವರಲ್ಲಿ ಇರುವ ಹಣದ ಬಳಕೆಯಿಂದ ಅನೇಕ ಕನ್ನಡ ಪ್ರಭಲತೆ ತರುವ ಕೆಲ್ಸಗಳಿಗೆ ಸಹಾಯ ಮಾಡಬಹುದು. ಎನೂ ಇಲ್ಲ ಅಂದರೂ ಒಂದು ಪ್ಲಾಟಫಾರ್ಮ್ ಹಾಕಿಕೊಟ್ಟು ಅಲ್ಲಿ ಕನ್ನಡ ಮನಸ್ಸುಗಳನ್ನು ಸೇರಿಸಿದರೆ, ಇವತ್ತು ಬ್ಲಾಗಿನಲ್ಲಿ ಕವಿತೆ-ಕಥೆಗಳನ್ನು ಬರೆದುಕೊಂಡು ಅದನ್ನೇ ಕನ್ನಡ ಸೇವೆ ಎಂದು ನಂಬಿರುವ ಕನ್ನಡ ಮನಸ್ಸುಗಳು ನಾಳಿನ ದಿನಗಳಿಗೆ ತಮ್ಮ ಸೇವೆ ಕೊಡುತ್ತಾರೆ. ಆದರೆ ದಯವಿಟ್ಟು ಇದನ್ನು ಸಮಾಜ ಸೇವೆ ಎಂದು ಟ್ಯಾಗ್ ಮಾಡದೇ ನಾಳಿನ ಭವಿಷ್ಯತ್ತಿಗೆ ನಮ್ಮ ಕಾಣಿಕೆ ಎಂದು ಮನಗಂಡು ಮಾಡಿದರೆ ಅನಕೂಲ.ಕೊಸರು;-
1.
ನಾನು ಉತ್ತರ ಕರ್ನಾಟಕ ಅಳಿಯ, ನನ್ನ ಹೆಂಡತಿ ಜೊತೆ ಕನ್ನಡ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡದಲ್ಲಿ ಬರೆಯುತ್ತಾರೆ, ಕನ್ನಡ ಧಾರವಾಹಿಯಲ್ಲಿ ನಟಿಸಿದ್ದಾರೆ ..etc ಅದಕ್ಕೆ ನಾನು ಕನ್ನಡಿಗ ಮತ್ತು ಉದ್ಘಾಟನೆಗೆ ಅರ್ಹ.
ಇದೆಲ್ಲಾ ಒಮ್ಮೆ ಓದಿದಾಗ ನಮ್ಮ ಅಜ್ಜಿಗೆ ಹೇಳಿದ್ದು ಎನು ಗೊತ್ತೆ.. ಅಲ್ಲ ಆ ಅಯ್ಯಮ್ಮನೇ ಉದ್ಘಾಟನೆ ಮಾಡಿದ್ದರೆ ಚೆನ್ನಾ ಇರ್ತಿತ್ತು ಅಲ್ವಾ, ಆಕಿ ಅಲ್ಲಿನ ನೆಲದಲ್ಲಿ ಹುಟ್ಟಿದವಳೂ ಬೇರೆ.
ಇದು ನಿಜಕ್ಕೂ ನಿಜ ಅನಿಸಿತು, ವಿಶ್ವ ಮಹಿಳಾದಿನದ ೧೦೦ ನೇ ವರ್ಶಕ್ಕೆ ಅವರನ್ನು ಆಯ್ಕೆ ಮಾಡಿದ್ದರೆ ನಿಜಕ್ಕೂ ಅರ್ಥಪೂರ್ಣ ಆಗಿರುತ್ತ ಇತ್ತು. ಅಷ್ಟಕ್ಕೂ ಕನ್ನಡಿಗ ಕನಸುಗಳಿಗೆ ಚಾಲನೆ ಕೊಡಲು, ಸಂವೇದನೆ ಇರುವ ಆ ತಾಯಿಯೇ ಸೂಕ್ತ ವ್ಯಕ್ತಿ ಎಂದು ನಮ್ಮ
ಅಜ್ಜಿಗೆ ಅನಿಸಿದ್ದೇ ನನಗೂ ಅನಿಸಿತು.