Monday, May 08, 2006

ಕನ್ನಡ ಸಂಸ್ಕೃತ ಜನ್ಯ ಭಾಷೆಯೇ ????

ಎಪ್ಪ್ಪಾ ಎಪ್ಪಾ ಈ ವಿಷಯದ ಬಗ್ಗೆ ಅನೇಕ ಕಡೆ ಬರಿದಿದ್ದೆನೆ, ಆದರೂ ನಮ್ಮ ಜನ ಇಂದಿಗೂ ಕನ್ನಡ ಸಂಸ್ಕೃತ ಜನ್ಯ ಭಾಷೆ, ಭಾರತದ ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ತಾಯಿ ಅಂತ ಹೇಳುತ್ತಾರೆ. ಈ ಕಾರಣಕ್ಕೆ ಅನೇಕ ಬಾರಿ ಕನ್ನಡ ಸಂಸ್ಕೃತದ ಎದುರು ಸೋತಿದೆ.

ಕನ್ನಡಕ್ಕೆ ಅಷ್ಟೆ ಅಲ್ಲ, ದ್ರಾವಿಡ ಭಾಷೆಗಳೆಲ್ಲವೂ ತಮ್ಮದೇ ಆದ ವೈಶಿಷ್ಟ ಹೊಂದಿವೆ. ಕನ್ನಡದ ಅಸಾಧರಣ ಲಕ್ಷಣಗಳನ್ನು ಹಿಂದೆ ಕೇಶಿರಾಜ ಹೇಳಿದ್ದ.

ಕನ್ನಡ ಯಾಕೆ ಸಂಸ್ಕೃತ ಜನ್ಯವಲ್ಲ ಎಂದು ತಿಳಿದುಕೊಳ್ಳೊಣ.

೧) ಕನ್ನಡದಲ್ಲಿ ನಿರ್ಜೀವ ಮತ್ತು ಬುದ್ಧಿಹೀನ ವಿಷಯಗಳ ಪದಗಳು ನಪುಸಂಕವೇ ಆಗಿವೆ. ಸಂಸ್ಕೃತದಲ್ಲಿ ಹಾಗಿಲ್ಲ.

೨) ವಿಶೇಷಣಗಳಿಗೆ ವಿಭಕ್ತಿಪ್ರತ್ಯಯಗಳು ಅನ್ವಯವಾಗುವದಿಲ್ಲ.

೩) ಕರ್ಮಣಿ ಪ್ರಯೋಗ ಕನ್ನಡದಲ್ಲಿ ಕಾಣುವದಿಲ್ಲ.

(Ref :- Dr.Coldwel)

೪) ಶಬ್ಧಾಂತ್ಯ ಸ್ವರ :- ದ್ರಾವಿಡ ಭಾಷೆಗಳ ಶಬ್ಧಗಳು ವ್ಯಂಜನಾಂತವಾಗುವುದು ಕಡಿಮೆ.
ಅಂದರೆ ಅಂಗ್ಲ ಭಾಷೆಯಲ್ಲಿ ಕ್ಯಾಪ್ ಇದ್ದರೆ ಕನ್ನಡದಲ್ಲಿ ಅದು ಕ್ಯಾಪು ಅಂತ ಆಗಿರುತ್ತದೆ.
ಅಹಂ ಸಂಸ್ಕೃತದಲ್ಲಿ ವ್ಯಂಜನಾಂತವಾದರೆ, ನಾನು ಅಂತ ಕನ್ನಡದಲ್ಲಿ ಸ್ವರಾಂತ್ಯವಾಗುತ್ತದೆ.

೫) Vocalic Harmony:- ಇದಕ್ಕೆ ಸ್ವರಾನುರೂಪತೆ ಎಂದು ಕರೆಯುತ್ತಾರೆ. ವ್ಯಾಕರಣ ನಿಯಮಗಳ ಪ್ರಕಾರ
"ನಿಲ್ಲು" ಎಂಬ ಧಾತುವಿನ ವರ್ತಮಾನ ರೂಪ "ನಿಲ್ಲುತ್ತೇನೆ" ಎಂದಾಗುತ್ತದೆ. ಆದರೆ ಸ್ವರಾನುರೂಪತೆ ಇಂದ ಅದು
"ನಿಲ್ತಿನಿ" ಅಂತ ಬದಲಾಯಿಸುತ್ತದೆ. ಇದು ಸಂಸ್ಕೃತದಲ್ಲಿ ಇಲ್ಲಾ.

೬) ನಮ್ಮ ಭಾಷೆಯಲ್ಲಿ ಲಿಂಗ-ವಿವಕ್ಶೆಯು ಅಸ್ಪಷ್ಟವಾಗದೇ ಕ್ರಮಭದ್ದವಾಗಿದೆ, ಅದೇ ಅರ್ಯ ಭಾಷೆಗಳಲ್ಲಿ ಒಂದು ವಸ್ತುವಿನ ಬುದ್ಧಿಶಕ್ತಿ ಇದ್ದುದೇ or ಇಲ್ಲವೇ ಎಂಬುವುದರ ಮೇಲೆ ಅವಲಂಬಿಸಿದೆ.

೭) ನಮ್ಮ ಭಾಷೆಯಲ್ಲಿ ದ್ವಿ-ವಚನವಿಲ್ಲ.

ಸಂಸ್ಕೃತದಲ್ಲಿ ಗಜ: ಗಜೌ ಗಜಾ: ಆದರೆ
ಕನ್ನಡದಲ್ಲಿ ಗಜಂ ಗಜರ್ ಆಗುತ್ತದೆ.

ಸಂಸ್ಕೃತದಲ್ಲಿ ಎಕವಚನ ಮತ್ತು ಬಹುವಚನಕ್ಕೆ ಬೇರೆ ವಿಭಕ್ತಿ ಪ್ರತ್ಯಯ ಇರುತ್ತದೆ, ಹಾಗೇ ನಮ್ಮ ಭಾಷೆಯಲ್ಲಿ ಇಲ್ಲ.

೮) ಸಂಖ್ಯಾವಾಚಕಗಳು:- ನೋಡಿ ನಮ್ಮ ಸಂಖ್ಯಾವಾಚಕಗಳಿಗೂ ಮತ್ತು ಸಂಸ್ಕೃತದ ಸಂಖ್ಯಾವಾಚಕಗಳಿಗೆ ಸಂಬಂಧವೇ ಇಲ್ಲಾ. ನಾವು ಹತ್ತು ಅಂದರೆ ಅವರು ದಶ ಅನ್ನುತ್ತಾರೆ. ಅದೇ ಹಿಂದಿ ಭಾಷೆಯನ್ನು ತೆಗೆದುಕೊಂಡರೆ ನಿಮಗೆ ಅದರಲ್ಲಿ ಸಂಸ್ಕೃತದ ಛಾಯೆ ಕಾಣುತ್ತದೆ. ಸಂಸ್ಕೃತದ "ದಶ", ಹಿಂದಿಯಲ್ಲಿ ದಸ್ ಆಗುತ್ತದೆ.

೯) ಸರ್ವನಾಮಗಳಲ್ಲಿ ನಮ್ಮ ಭಾಷೆಯಲ್ಲಿ inclusive and Exclusive ಎಂಬ ಎರಡು ಬಗೆಯ ಸರ್ವನಾಮಗಳು ಕಂಡು ಬರುತ್ತವೆ. ಇದು ಸಂಸ್ಕೃತದಲ್ಲಿ ಇಲ್ಲಾ.

೧೦) ಗುಣವಾಚನಕ್ಕೆ ಲಿಂಗಭೇದವಿಲ್ಲ :- ಸಂಸ್ಕೃತದಲ್ಲಿ ಗುಣವಾಚನ ಲಿಂಗ ಅನುಸಾರಿಯಾಗಿ ಕೆಲಸ ಮಾಡುತ್ತದೆ.

ಉದಾ:- "ಪಾವನ" ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಪಾವನ ಭಗವಾನ್
ಸ್ಥ್ರೀಲಿಂಗ:- ಪಾವನೀ ಭಗವತೀ
ನಪುಂಸಕ:- ಪಾವನ: ಅನಿಲ:
ಹಾಗೆಯೇ "ಶುದ್ಧ" ಗುಣವಾಚನವು.

ಅದೇ ನಮ್ಮ ಭಾಷೆಯಲ್ಲಿ ವಿಭಕ್ತಿಪ್ರತ್ಯಯ ಹಚ್ಚುವ ಗೋಜಿಲ್ಲ.
ಉದಾ:- "ಸುಂದರ " ಅನ್ನುವುದು ಒಂದು ಗುಣವಾಚನ,
ಪುಲ್ಲಿಂಗ:- ಸುಂದರ ರಾಮ

ಸ್ಥ್ರೀಲಿಂಗ:-ಸುಂದರ ಸೀತೆ
ನಪುಂಸಕ:-ಸುಂದರ ಮೃಗ


೧೧) ಕ್ರಿಯಾಪದಗಳು:- ನಮ್ಮ ಕ್ರಿಯಾಪದಗಳು ಧಾತುಗಳೂ ನಾಮಪದಗಳೂ ಎರಡು ಆಗಿವೆ. ಮತ್ತು ನಮ್ಮಲ್ಲಿ ಎರಡು ನಿಷೇಧ ರೂಪಗಳಿವೆ "ಅಲ್ಲ" ಮತ್ತು "ಇಲ್ಲ". ಒಂದರ ಗುಣವನ್ನು ಇನ್ನೊಂದು ನಿರಾಕರಿಸುತ್ತದೆ.
ಅವನು ರಾಮನಲ್ಲ :- ಇದರಲ್ಲಿ ಅವನು ಬೇರೆ ಯಾರೋ, ಅಸ್ತಿತ್ವದ ಪ್ರಶ್ನೆ ಮಾಡುತ್ತದೆ.
ಅವನು ಸುಂದರನಲ್ಲ:- ಇದರಲ್ಲಿ ಗುಣಗಳನ್ನು ನಿರಾಕರಿಸುತ್ತದೆ.

೧೨) ನಮ್ಮ ಭಾಷೆಯಲ್ಲಿ ರಕ್ತ ಸಂಬಂಧವು ಚೆನ್ನಾಗಿ ಬಿಡಿಸಲಾಗಿದೆ.
ಉದಾ:- ಸೋದರ ಅನ್ನುವುದು ಸಂಸ್ಕೃತದಲ್ಲಿ ಒಂದೇ, ಆದರೆ ದೊಡ್ಡವರೇ ಇಲ್ಲಾ ಚಿಕ್ಕವರೇ ಎಂದು ಹೇಳಲು ಆಗುವದಿಲ್ಲ.
ನಮ್ಮ ಭಾಷೆಯಲ್ಲಿ "ಅಣ್ಣ" ಮತ್ತು "ತಮ್ಮ" ಅಂತ specific ಆಗಿ ಇದೆ.

೧೩) ಲಿಪಿ:- ಯಾವ ವಿಧದಲ್ಲೂ ನಮಗೂ ದೇವನಾಗಿರಿ ಲಿಪಿಗೂ ತಾಳೆ ಹಾಕಲು ಆಗುವದಿಲ್ಲ.

೧೪) ನಮ್ಮ ಭಾಷೆಗಳಲ್ಲಿ "ಟವರ್ಗ" ಹೆಚ್ಚೆಂದು ಪಂಡಿತರ ಅಭಿಮತ ಇದು ಸಂಸ್ಕೃತದಲ್ಲಿ ಕಾಣ ಸಿಗುವದಿಲ್ಲ.

೧೫) ನಮ್ಮ ಭಾಷೆಯ ಉಚ್ಚಾರಣೆ ಪ್ರಥಮ ವರ್ಣದ ಮೇಲೆ ಇದೆ, ಅದೇ ಸಂಸ್ಕೃತದ ಭಾಷೆಗಳಲ್ಲಿ ಅದು ತೃತೀಯ ವರ್ಣದ ಮೇಲೆ ಇದೆ.
ಕನ್ನಡ:- ಪುಸ್ತಕ
ಮರಾಠಿ:- ಪುಸ್ತSಕ್

(Ref:- RU Dharwadkar)


ಇನ್ನೂ ಭಾಷ ಬೆಳವಣಿಗೆಗೆ ಬಂದರೆ ಭಾಷ ತಜ್ಞರ ಅಭಿಮತದಲ್ಲಿ ಯಾವ ಭಾಷೆಗೆ ತೆಗೆದುಕೊಂಡು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದೋ ಆ ಭಾಷೆ ಬೆಳೆಯುತ್ತದೆ. ಇಂದು ಆಂಗ್ಲ ಭಾಷೆಯನ್ನು ತೆಗೆದುಕೊಂಡರೆ ಅದು ಎಲ್ಲಾ ಭಾಷೆಯಿಂದ ಪದಗಳನ್ನು ಎರವಲು ಪಡೆದಿದೆ. ಭಾಷ ಬೆಳವಣಿಗೆಯಲ್ಲಿ ಇದು ಸರ್ವೇ ಸಾಮನ್ಯ. ಕನ್ನಡದ ಗಿಡಕ್ಕೆ ಸಂಸ್ಕೃತ ಜೀವಸತ್ವ(vitamin) ಇಲ್ಲಾ ಗೊಬ್ಬರ ಆಗಿದೆ. ಕನ್ನಡ ಬೆಳೆಯಲು ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಉಪಸರ್ಗದಿಂದ(ಪ್ರ,ವೀ) ಆರಂಭವಾಗುವ ಅನೇಕ ಶಬ್ದಗಳು ಕನ್ನಡಕ್ಕೆ ಸಂಸ್ಕೃತದಿಂದ ಬಂದಿವೆ, ಆ ಪದಗಳನ್ನು ಬರೆಯಲು ಕೆಲವು ಅಕ್ಷರಗಳು ಬಂದಿವೆ. ಇದರಿಂದಲೇ ಕನ್ನಡ ದೄಷಿಕ ಮತ್ತು ಶ್ರವಣದಲ್ಲಿ ಎಕರೂಪತೆ ಸಾಧಿಸಿದೆ. ತಮಿಳ್ ಕೂಡ ಪದಗಳ ಎರವಲು ಪಡೆದಿದೆ, ಆದರೆ ಅದನ್ನು ಬರೆಯಲು ಅಕ್ಷರವನ್ನು ಪಡೆಯದೆ ಅವರ ಭಾಷೆ ಇಂದೂ ಗೊಂದಲ ಗೂಡಾಗಿದೆ.


ಹಾಗೇ ಅಲ್ಲ ಕನ್ನಡವೂ ಸಂಸ್ಕೃತಕ್ಕೆ ಅನೇಕ ಪದಗಳನ್ನು ನೀಡಿದೆ. ಅದ್ದರಿಂದ ಇದು ಕೊಟ್ಟು-ತೆಗೆದುಕೊಳ್ಳುವ ಒಂದು ಸಂಸ್ಕೃತಿ ಅಷ್ಟೆ.

ಅದ್ದರಿಂದ ಇಲ್ಲಿ ತಾಯಿ-ಮಗು ಸಂಬಂಧ ಬರುವದಿಲ್ಲ, ಇದು ಪಕ್ಕದ ಮನೆಯ aunty ಸಂಭಂದ ಬರುತ್ತದೆ. ಪಕ್ಕದ ಮನೆಯ aunty ಸಹಾಯ ಪಡೆದ ಕ್ಷಣ ನಾವು ಅವರಿಂದ ಜನ್ಯ(ಹುಟ್ಟಿದವರು) ಆಗುವದಿಲ್ಲ.ಆ ಸಂಬಂಧ ಬಂದಾಗ ಅನೇಕ ವಂಶವಾಹಿನಿಯ ಗುಣಗಳು ಕಾಣಿಸಬೇಕು, ಮೇಲೆ ಹೇಳಿದ ಹಾಗೆ ಅದು ಕನ್ನಡದಲ್ಲಿ ಸ್ವಲ್ಪವೂ ಕಾಣುವದಿಲ್ಲ, ಅದೇ ನೋಡಿ ಹಿಂದ್ವಿಯ ಬೆಳವಣಿಗೆಯನ್ನು ಅಲ್ಲಿ ಆ ತಾಯಿ-ಮಗುವಿನ ಸಂಬಂಧ ಎದ್ದು ಕಾಣುತ್ತದೆ.


ಕೊಸರು:- ಸುಮ್ಮನೇ ಇಲ್ಲದಿರುದನ್ನು ಹೇಳಿ ನಮ್ಮ ಭಾಷೆಯ ಬಗ್ಗೆ ಕೀಳೆರಿಮೆ ಬೆಳಸಿಕೊಳ್ಳಬೇಡಿ.