Monday, November 01, 2010

ಡಬ್ಬಿಂಗ್ ಬೇಕೇ ಬೇಡವೇ

ವಿಜಯ ಕರ್ನಾಟಕದ ನವೆಂಬರ್ ೧ ರ ವಿಶೇಶ ಲೇಖನ ಡಬ್ಬಿಂಗ್ ಕನ್ನಡವನ್ನು ಚಿರನಿದ್ರೆಗೆ ದೂಡಲಿದೆ ಹುಷಾರ್
ಲೇಖನವನ್ನು ಮೊದಲಿಗೆ ಓದಿದಾಗ ನನಗೆ ನಿಜಕ್ಕೂ ಭಯ ಆಯಿತು, ಅಯ್ಯೊ ನನ್ನ ಕನ್ನಡ , ೨೦೦೦ ಸಾವಿರ ವರುಷ ಹಳೆಯ ಇತಿಹಾಸ ಇರುವ ಕನ್ನಡ, ವಿಶ್ವ ಲಿಪಿಗಳ ರಾಣಿ ಎಂದು ಹೆಸರು ಪಡೆದಿರುವ ಕನ್ನಡ, ಜ್ಞಾನಪೀಠ ಪ್ರಶಸ್ತಿಗಳನ್ನು ಹೆಚ್ಚು ಪಡೆದಿರುವ ಕನ್ನಡ ..ಕೇವಲ ಡಬ್ಬಿಂಗ್ ಮಾಡಿದರೆ ಚಿರನಿದ್ರೆಗೆ ಜಾರುವ ಮಟ್ಟಿಗೆ ಬಂದಿದೆಯಾ ?. ಇವತ್ತು ಕನ್ನಡ ಚಿತ್ರಗಳ ಮೇಲೆ ನಮ್ಮ ಭಾಷೆ ನಿಂತಿದೆಯಾ ಅನ್ನೋ ಗೊಂದಲವನ್ನು ಮೊದಲಿಗೆ ಈಡು ಮಾಡಿತು.


ಇದು ಶೀರ್ಶಿಕೆಯಾಗಿ ಇದಕ್ಕೆ ತಕ್ಕ ಉತ್ತರ ಮತ್ತ್ತು ಯಾಕೆ ವಿರೋಧಿಸಬೇಕು ಎನ್ನುವ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಇಡಿ ಲೇಖನದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಿದರೂ ಬೇಕಾದ ವಿಷಯ ಸಿಗುವುದು ಕಮ್ಮಿಯೇ ಅಥಾವ ಇಲ್ಲವೇ ಇಲ್ಲ ಎನ್ನಬಹುದು.
ಲೇಖಕರು ಮೊದಲಿಗೆ ಕನ್ನಡ ಸಾಯುತ್ತ ಇದೆ ಎಂದು ತಿರ್ಮಾನಿಸಿ ಬಿಟ್ಟಿದ್ದಾರೆ, ಇನ್ನು ಅವರು ಯಾರಿಗೆ ಹುಷಾರ್ ಹೇಳುತ್ತ ಇದ್ದಾರೋ ಗೊತ್ತಿಲ್ಲ. ಲೇಕನ ಶುರುವಾಗುವುದೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಕೈಲಾಗತನ ಮತ್ತು ಅದರಲ್ಲಿ ಕುಳಿತಿರುವ ಅಧಿಕಾರಶಾಹಿಗಳ ಇಬ್ಬಂದಿತನ ಮತ್ತು ಇದರಿಂದ ಆಗಿರುವ ದುಷ್ಪರಿಣಾಮಗಳ ಬಗ್ಗೆ. ಅದರೆ ಲೇಖಕರು ಒಂದು ಕಡೆ ಇ ವರ್ಗವೇ ಇವತ್ತಿನ ಅವಸಾನಕ್ಕೆ ಕಾರಣ ಎಂದು ಬೈದು, ಅದೇ ಅವಸರದಲ್ಲಿ ಮುಂದೆ ಆ ಜನರೇ ಬಡಬಡಿಸುವ ಸವಕಲು ವಿಷಯವನ್ನೇ ಹೇಳುತ್ತ ಇದ್ದಾರೆ.

ಮೊದಲ ಅರ್ಧ ಭಾಗ , ಶೀರ್ಶಿಕೆ ಕನ್ನಡ ಚಲನಚಿತ್ರೋದ್ಯಮ ಬೆಳೆಯದಿರಲು ಕಾರಣಗಳೇನು ಎಂದು ಆಗಿದ್ದರೆ ಲೇಖನಕ್ಕೆ ಸ್ವಲ್ಪ ಅರ್ಥ ಬರುತ್ತ ಇತ್ತು, ಇದು ಸರಿ ಇಲ್ಲ, ಅಯ್ಯೊ ಆ ಕಡೆ ಜನ ಹೀಗೆ , ನಮ್ಮ ಅನೇಕ ಜಿಲ್ಲೆ ನಮ್ಮ ಕೈ ತಪ್ಪಿ ಹೋಗಿವೆ. ನಮ್ಮ ಸ್ವಾಭಿಮಾನದ ಕೊರತೆ, ಇದಕ್ಕೆಲ್ಲಾ ನೀವು ಕನ್ನಡಿಗರೇ ಕಾರಣ ಎಂದು ಬೈದು, ಆ ಸಮಸ್ಯೆಗಳ ಮೂಲಕ್ಕೆ ಇಳಿಯದೇ ದೂರುವ ಪ್ರವೃತ್ತಿಯನ್ನೇ ಮುಂದುವರೆಸುತ್ತಾರೆ.

ತದನಂತರ ಡಬ್ಬಿಂಗ್ ಸಮರ್ಥಿಸುವ ಜನರ ಮೇಲೆ ಇವರ ಕೋಪ ತಿರುಗಿ ಅವರನ್ನು ಆಡಿಕೊಂಡು, ಅವರಿಗೆ ಕೆಲವು ಅಡ್ಡ ಹೆಸರಿಟ್ಟು
ಅವರನ್ನು ಎಲ್ಲಾ ಸಮಸ್ಯೆಗಳಿಗೆ ದೂರುವುದು ಮತ್ತೊಮ್ಮೆ ಲೇಖಕರ ಬ್ರಾಂಡಿಂಗ್ ಸಂಸ್ಕ್ರುತಿ ತೋರಿಸುತ್ತದೆ. ಡಬ್ಬಿಂಗ್ ಬೇಕು ಅನ್ನುವ ಕನ್ನಡದ ಕಂದಮ್ಮಗಳು , ಯಾಕೆ ಬೇಕು ಎನ್ನುತ್ತಿವೆ ಎಂಬ ಮಾತನ್ನು ಕೇಳಿಸಿಕೊಳ್ಲದೇ, ಅದಕ್ಕೆ ಸರಿಯಾದ ಉತ್ತರ ಕೊಡದಿರುವ ಲೇಖಕರ ಸೂಕ್ಷ್ಮ ಮತ್ತು ಸಂವೇದನೆ ಬಗ್ಗೆ ಮಾತನಾಡುತ್ತಾರೆ ಮತ್ತು ತಾವೇ ಕನ್ನಡ ವೀರಪುತ್ರರೂ, ತಮ್ಮ ವಿಚಾರವನ್ನು ವಿರೋಧಿಸುವರು ಖನ್ನಡ ವೀರಪುತ್ರರು ಎಂಬ ಫರ್ಮಾನು ಹೊರೆಡಿಸುತ್ತಾರೆ.

ಮುಂದೆ ಯಾರಿಗೂ ಗೊತ್ತಿಲ್ಲದ ಇನ್ನೊಂದು ವಿಸ್ಮಯ ಕೂತೂಹಲಕಾರಿ ವಿಷಯವನ್ನು ನಮಗೆ ಹೊರಗೆಡುವುತ್ತಾರೆ.ಅದೆನೆಂದರೆ
ಅಸ್ಸಾಮಿ, ಬೆಂಗಾಳಿ, ಚೈನೀಸ್. ಭೋಜಪುರಿ, ಮರಾಠಿ ಚಿತ್ರಗಳು ಬೆಂಗಳೂರಿನ ಮಲ್ಟಿಪ್ಲೆಕ್ಸನಲ್ಲಿ ರಾಜರೋಷವಾಗಿ ಪ್ರದರ್ಶನಗೊಳ್ಳುತ್ತ ಇದೆ ಎನ್ನುತ್ತಾರೆ. ಆ ಭಾಷೆಗಳ ಚಿತ್ರಗಳು ಬೆಂಗಳೂರಿನ ಯಾವ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತ ಇದೆ ಎಂದು ಹೇಳಿದರೆ, ಅಲ್ಲಿನ ಜನಕ್ಕೆ ಈ ಮಾಹಿತಿಯನ್ನು ಕೊಡೋಣ, ಯಾಕೆಂದರೆ ಅಲ್ಲಿಯ ಚಿತ್ರಗಳು ಅಲ್ಲಿಯೇ ಓಡುತ್ತ ಇಲ್ಲ, ಅವಸಾನವಾಗಿದೆ ಎಂದು ಅಲ್ಲಿ ಜನ ನಂಬಿದ್ದಾರೆ. ಲೇಖಕರ ಡಿಸ್ಕವರಿಯನ್ನು ಅವರಿಗೆ ತಿಳಿಸಿದರೆ
ನಿಜಕ್ಕೂ ಅಲ್ಲಿಯ ಜನ ತುಂಬ ಸಂತೋಶ ಪಡುತ್ತಾರೆ.


ಒಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನುವದಕ್ಕೆ ಲೇಖಕರು ಅದೇ ಹಳಸಲು, ಸವಕಲು ಕಾರಣಗಳನ್ನು ಕೊಟ್ಟಿದ್ದಾರೆ .

A) ಕನ್ನಡ ಸಂಸ್ಕ್ರುತಿ- ನೆಲೆಗಟ್ಟು ನಾಶ ಆಗುತ್ತದೆ ಎಂದು.

ಏನು ಹಾಗೆಂದರೆ? ಯಾವ ಕನ್ನಡ ಸಂಸ್ಕೃತಿ ಸಿನಿಮಾ ನೋಡುವುದರಿಂದ ಉಳಿದಿದೆ ಅಥವಾ ಅಳಿದಿದೆ ತಿಳಿಸಿ. ನೀವು ಸಂಸ್ಕೃತಿ ಉಳಿಯಲು ಡಬ್ಬಿಂಗ್ ಬರಬಾರದು ಅನ್ನುವುದು ಗಟ್ಟಿಯಾದ ವಾದವಲ್ಲ. ಡಬ್ಬಿಂಗ್ ಮಾಡಿದರೆ ಸಂಸ್ಕೃತಿ ಹಾಳಾಗುತ್ತೆ ಅನ್ನುವವರು ನೇರವಾಗಿ ಆಯಾ ಭಾಷೆಗಳಲ್ಲೇ ಸಿನಿಮಾ ಬಂದಲ್ಲಿ ಸಂಸ್ಕೃತಿ ಜೊತೆಗೆ ಭಾಷೇನೂ ಹೋಗುತ್ತೆ ಅನ್ನೋದನ್ನು ಯಾಕೆ ಒಪ್ಪಲ್ಲ. ಭಾಷೆ ವಿಷಯಕ್ಕೆ ಬಂದರೆ ಸಿನಿಮಾದಿಂದಾನೆ ಭಾಷೆ ಉಳಿಯಲ್ಲ, ಅನ್ನುವರ್ಥದಲ್ಲಿ ಭಾಷೆ ಉಳಿಸೋದು ಭ್ರಮೆ ಅನ್ನೋ ಮಾತಾಡ್ತೀರಿ. ಆದ್ರೆ ಸಂಸ್ಕೃತಿ ಅಂದ ಕೂಡ್ಲೆ ಡಬ್ ಮಾಡುದ್ರೆ ಸಂಸ್ಕೃತಿ ಹಾಳಾಗುತ್ತೆ ಅಂತೀರಿ. ಯಾಕೀ ದ್ವಂದ್ವ ನಿಲುವು?

ಸಿನಿಮಾ ಅನ್ನುವುದು ಹುಟ್ಟುವ ಮುಂಚೆ ನಾಟಕ ಯಕ್ಷಗಾನ ಹರಿಕಥೆ ಇತ್ಯಾದಿ ದೇಸಿ ಕಲೆಗಳಿದ್ದವಲ್ಲಾ, ಅವೆಲ್ಲಾ ಸಿನಿಮಾ ಬಂದಿದ್ದರಿಂದ ಅಳಿದು ಹೋದವೇ? ಅಳಿದಿಲ್ಲಾ ಅನ್ನುವುದು ನಿಮ್ಮ ಉತ್ತರವಾದರೆ ಕನ್ನಡ ಚಿತ್ರರಂಗವೂ ಡಬ್ಬಿಂಗ್‍ ಸಿನಿಮಾಗಳ ನಡುವೆ ಉಳಿಯುವುದಿಲ್ಲ ಅನ್ನುವ ಆತಂಕ ಇಲ್ಲ. ಅಕಸ್ಮಾತ್ ನಿಮ್ಮ ಉತ್ತರ ಅಳಿದಿವೆ ಅನ್ನುವುದಾದರೆ ಸಾವಿರಾರು ವರ್ಷದ ಇತಿಹಾಸ ಇರುವ ಇಂತಹ ಕಲೆಗಳನ್ನು ಸಿನಿಮಾ ನಾಶ ಮಾಡುತ್ತಿರುವುದರಿಂದ ಚಿತ್ರರಂಗಕ್ಕೆ ಬೀಗ ಜಡಿಯಬೇಕು ಅನ್ನುವ ವಾದ ಒಪ್ಪಬೇಕಾಗುತ್ತದೆ.

ಮಚ್ಚು ಲಾಂಗು ಸೆಕ್ಸು ಕ್ರೈಮು ಇಲ್ಲದ ಕನ್ನಡ ಚಿತ್ರಗಳು ಎಲ್ಲಿವೆ ಹೇಳಿ? ಕನ್ನಡ ಜನತೆ ಸಿನಿಮಾ ನೋಡಿ ಸಂಸ್ಕೃತಿ ಉಳಿಸಿಕೊಳ್ಳೋ ಅಗತ್ಯ ಇದೆಯಾ ಸಾರ್? ಸಂಸ್ಕೃತಿಯ ನಾಶ ಅನ್ನುವುದು ಸರಿಯಾದ ಬಳಕೆಯಲ್ಲ, ಅದು ಸಂಸ್ಕೃತಿಯ ಬದಲಾವಣೆ ಅಷ್ಟೆ. ಚಿತ್ರಮಂದಿರದಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣದ, ಕಂಡರೂ ವಾರದಲ್ಲಿ ಎತ್ತಂಗಡಿಯಾಗುವ ಕಲಾತ್ಮಕ ಚಿತ್ರದ ಹಣೆಪಟ್ಟಿಯ “ಗುಬ್ಬಚ್ಚಿಗಳು” ಥರದ ಸಿನಿಮಾ ತೆಕ್ಕೊಂಡು ಕೂತರೆ ಜನಾ ನೋಡಬೇಕಲ್ಲಾ ಸ್ವಾಮಿ?


ಇದನ್ನು ಹಿಂದೆ ತುಂಡು ಲಂಗದಲ್ಲಿ ನೃತ್ಯ ಮಾಡುತ್ತ, ಅಂಗ ಪ್ರದರ್ಶನ ಮಾಡುತ್ತ ಇರುವ ಅಂದಿನ ನಟಿಯರೂ ಕೂಡ ಹೇಳುತ್ತಾ ಬಂದಿದ್ದಾರೆ. ಇಲ್ಲ, ಕೈನಲ್ಲಿ ಮಚ್ಚು ಲಾಂಗ್ ಹಿಡಿದುಕೊಂಡು ಮಾರುದ್ದ ಡೈಲಾಗ್ ಹೊಡೆಯುವ ನಮ್ಮ ನಟರು ಪುನರ್ ಉಚ್ಚಾರ ಮಾಡಿದ್ದಾರೆ, ಅವರ ಭಕ್ತರ ಹಾಗೆ ಲೇಖಕರು ಅದನ್ನೆ ಉಚ್ಚರಿಸಿರುವುದು

ಮಚ್ಚು-ಲಾಂಗ್ - ಹೊಡೆತ- ಬಡೆತ ಚಿತ್ರಗಳು ನಮ್ಮ ಕನ್ನಡದಲ್ಲಿ ೧೦.ಕ್ಕೆ ೭ ರ ಹಾಗೆ ಬರುತ್ತಾ ಇದೆ. ಇದೇನಾ
ನಮ್ಮ ನೆಲೆಗಟ್ಟು ?

ಬೇರೆ ಭಾಶೆಯ ಚಿತ್ರವನ್ನು ಮಕ್ಕಿ-ಕಾಮಕ್ಕಿ ಇಳಿಸುವಾಗ ಆ ಭಾಷೆಯ ಗಿರಿಜಾ ಮೀಸೆ, ಬಟ್ತೆ, ಗೌಂಡರ್ ಉಡುಗೆ ( ಪುಟ್ನಂಜ , ಯಜಮಾನ ನೆನಪಿಸಿಕೊಳ್ಳಿ) ನಮ್ಮ ಸಂಸ್ಕ್ರುತಿಯನ್ನು ತೋರಿಸುತ್ತ ಇದೆಯಾ.

ವರ್ಶಕ್ಕೆ ೧೨೦+ ಚಿತ್ರಗಳು ತೆರೆಕಾಣುತ್ತವೆ, ಇವುಗಳಲ್ಲಿ ಕನ್ನಡ ಸಂಸ್ಕ್ರುತಿಯನ್ನು ತೋರಿಸುವ, ನಮ್ಮ ನೆಲೆಗಟ್ಟನ್ನು ಸಾರುವ
ಯಾವ ಚಿತ್ರ ಬಂದಿದೆ ?... ಅಲ್ಲ ಪ್ರೇಕ್ಷಕ ಕನ್ನಡಿಗರು ಸಂಸ್ಕ್ರುತಿ, ಆಚಾರ ಹೀನರೇ ??. ಕನ್ನಡ ಚಿತ್ರಗಳಿಂದ ನಾವು ನಮ್ಮ ಸಂಸ್ಕ್ರುತಿ, ಆಚಾರ ಕಲಿಯುವ ಕರ್ಮ ಬಂದಿದೆಯಾ ?. ಅಷ್ತಕ್ಕೂ ಕನ್ನಡದ ಸಂಸ್ಕ್ರುತಿಯನ್ನು ಕಲಿಸುವ ಮೇಷ್ಟ್ರ ಸ್ಥಾನವನ್ನು
ಚಿತ್ರರಂಗದ ಮಂದಿ ಹೊಂದಿದ್ದಾರಾ ?. ಚಿತ್ರರಂಗ ಇಲ್ಲದೇ ಇದ್ದಾಗ ಕನ್ನಡಿಗರು ಅನಾಗಾಗರಿಕರು ಆಗಿದ್ದರಾ ಇಲ್ಲ ಶಿಲಾಯುಗದಲ್ಲಿ ಇದ್ದರಾ ?. ಹೊಸದಾಗಿ ನಮ್ಮ ಸಂಸ್ಕ್ರುತಿಯನ್ನು ಕಲಿಯಲು ಇಲ್ಲ ಉಳಿಸಲು.

ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನುವುದು ಕನ್ನಡಿಗರ ಮೂಲಭೂತ ಹಕ್ಕು. ಅದನ್ನು ಬೇಡ ಅನ್ನೋದು ವ್ಯಕ್ತಿ ಸ್ವಾತಂತ್ರ ಹರಣ ಮಾಡಿದಂತೆ ಅಲ್ಲವೇನು?

B) ಲಕ್ಷಾಂತರ ಜನ ಬೀದಿಗೆ ಬೀಳುತ್ತಾರೆ.

ಅಲ್ಲ ಸ್ವಾಮಿ ಲೇಖನದಲ್ಲಿ ಭಾಷೆ ಭಾಷೆ ಎಂದು ಹೇಳಿ ಕೊನೆಗೆ ಬಂದು ನಿಂತಿದ್ದು ೨೫ ಸಾವಿರ ಕಾರ್ಮಿಕ ವರ್ಗಕ್ಕೆ. ಸ್ವಾಮಿ ಪ್ರೇಕ್ಷಕ ಜನ ಇದಕ್ಕಿಂತ ಹೆಚ್ಚಿಗೆ ಇದೆ, ಅದರಲ್ಲೂ ಕೋಟಿಯಲ್ಲಿ ಇದೆ. ಮೊನ್ನೆ ಒಬ್ಬರು ಕನ್ನಡ ನಿರ್ಧೇಶಕರು ಹೇಳಿದ ಹಾಗೆ ಕನ್ನಡ ಚಿತ್ರರಂಗ ಕಾರ್ಮಿಕ ವರ್ಗದಲ್ಲಿ ಮೂಲತ ಕನ್ನಡಿಗರು ಎಷ್ತು ಜನ ಇದ್ದಾರೆ, ಮುಕ್ಕಾಲು ಭಾಗ ವಲಸೆ ಬಂದವರೇ ಎಂದು. ಸುಮ್ಮನೆ ಉದಯ ಟಿವಿಯ ಸಿಬ್ಬಂದಿ ವರ್ಗ ಇಲ್ಲ ವಾಹಿನಿಗಳ ತಂತ್ರಜ್ಹರ ವರ್ಗದ ಹೆಸರನ್ನು ನೋಡಿ, ನಿಮಗೆ ತಿಳಿಯತ್ತದೆ. ಕನ್ನಡ ಚಿತ್ರವೂ ಇಲ್ಲದಿದ್ದಾಗ ಕೂಡ ಕೆಲಸ ಇಲ್ಲದೇ ನಿರುದ್ಯೋಗವಿರಲಿಲ್ಲ. ೫ ಲಕ್ಷ ಜನ ನಂಬಿಕೊಂಡಿದ್ದ ಲಾಟರಿ ಮುಚ್ಚಿದಾಗ ಇರದ ಅಕ್ಕರೆ
ಈಗ ನಮ್ಮ ಜನರಿಗೆ ಬಂದಿರುವುದು ವಿಪರ್ಯಾಸ. ೬ ಕೋಟಿ ಜನಕ್ಕೆ ಸಹಾಯ ಆಗುತ್ತದೆ ಎಂದರೆ ೨೫ ಸಾವಿರ ಯಾವ ಮಹಾ ?
ಅಷ್ತಕ್ಕೂ ಭಾಷೆಗಿಂತ ದೊಡ್ಡದು ಯಾವುದು ಇದೆ ?


ಯಾಕೆ? ಡಬ್ಬಿಂಗ್ ಶುರುವಾದರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯೋದು ನಿಂತುಹೋಗುತ್ತಾ? ವರ್ಷಕ್ಕೆ 125 ಸಿನಿಮಾ ತೆಗೆಯೋ ಉದ್ಯಮ ಯಾಕೆ ಬೀದಿಗೆ ಬೀಳುತ್ತೆ ಹೇಳಿ. ರಿಮೇಕು ರಾಜರು ಮನೆ ಸೇರ್ಕೋತಾರೆ ಅಷ್ಟೆ. ಈ ನೆಲದ ಸೊಗಡಿನ ಸಂಸ್ಕೃತಿಯ ಚಿತ್ರಣವನ್ನು ಯಾವ ಡಬ್ಡ್ ಸಿನಿಮಾನೂ ಕೊಡಕ್ಕಾಗಲ್ಲ. ಡಬ್ಬಿಂಗ್ ನಿಷೇಧ 60ರ ದಶಕದಲ್ಲಿ ಶುರುವಾಗಿದ್ದು. ಆದರೆ ಅದಕ್ಕೂ ಮುನ್ನ ಡಬ್ಬಿಂಗ್ ಇದ್ದ ಕಾಲದಲ್ಲಿ ಮಾಯಾಬಜಾರ್ ಥರದ ಚಿತ್ರಗಳು ಡಬ್ ಆಗಿ ಬರುತ್ತಿದ್ದ ಕಾಲದಲ್ಲಿ ಕನ್ನಡದಲ್ಲಿ ಡಾ.ರಾಜ್‍ಕುಮಾರ್ ಎನ್ನುವ ಪ್ರತಿಭೆ ಹೊರಬಂದಿದ್ದು, ರಣಧೀರ ಕಂಠೀರವ ಥರದ ಸಿನಿಮಾ ಬಂದಿದ್ದು. ಇಷ್ಟಕ್ಕೂ ಆಗ ಡಬ್ಬಿಂಗ್ ಇತ್ತು, ಇಲ್ಲಿ ಸಿನಿಮಾ ತೆಗೆಯೋ ಅನುಕೂಲಗಳೇ ಇರಲಿಲ್ಲ. ನಿರ್ಮಾಪಕರು, ನಿರ್ದೇಶಕರು, ಸ್ಟೂಡಿಯೊ, ಸಂಗೀತ, ಕ್ಲಾಪ್ ಬಾಯ್, ಲೈಟ್ ಬಾಯ್ ಎಲ್ಲಕ್ಕೂ ಚನ್ನೈಯನ್ನೇ ಅವಲಂಬಿಸುವಂತಹ ಪರಿಸ್ಥಿತಿ ಇದ್ದಾಗಲೂ ಕನ್ನಡ ಚಿತ್ರಗಳು ಬರುತ್ತಿದ್ದವಲ್ಲ ಸ್ವಾಮಿ? ಯಾಕೆಂದರೆ ನಮ್ಮತನ ಅನ್ನೋದನ್ನು ಡಬ್ ಚಿತ್ರಗಳು ಬಿಂಬಿಸಲು ಸಾಧ್ಯವೇ ಇಲ್ಲ. ಹಾಗಾಗಿ ಕನ್ನಡ ಚಿತ್ರಗಳು ಆಗಲೂ ಬರುತ್ತಿದ್ದವು.
ಮುಂದೂ ಬರುತ್ತಿರುತ್ತವೆ

೬೦ ದಶಕದಲ್ಲಿ ಇದ್ದ ಸ್ಥಿತಿಯೇ ಇನ್ನು ಇದೆಯಾ , ನಾವು ೫೦ ವರುಷದಲ್ಲಿ ಎನು ಉದ್ದಾರ ಆಗಿಲ್ವ್ವ, ಹಾಗಿದ್ದಲ್ಲಿ ಇನ್ನು ಮುಂದೆ ಆಗುತ್ತಿವಿ ಅನ್ನೋದು ಎಷ್ಟರ ಮಟ್ಟಿಗೆ ಸತ್ಯ ?. ಆಗಿದ್ದ ನಿಜಾವಾದ ಸಮಸ್ಯೆಯನ್ನು ಇನ್ನೂ ಸುಮ್ಮನೆ ಗುಮ್ಮ ತೋರಿಸುವುದು ಹೇಗಪ್ಪ ಇದೆ ಎಂದರೆ

ಹಿಂದೆಲ್ಲಾ STD ಬೂತ್ ಅಂದ್ರೆ ಸಕ್ಕತ್ ದುಡ್ಡು ಹುಟ್ತಿತ್ತು, ಪರಊರಿಗೆ ಕರ ಮಾಡಬೇಕು ಎಂದರೆ
ಬೂತ್ ಮುಂದೆ ಸಾಲು ಸಾಲು ನಿಲ್ಲಬೇಕಿತ್ತು, ಅನೇಕರಿಗೆ ಅದು ಉದ್ಯೋಗ ಕೊಟ್ಟಿತ್ತು, ಅದರಲ್ಲೂ ಹೆಚ್ಚಾಗಿ ಅಂಗವಿಕಲರಿಗೆ.

ಮೊಬೈಲ್ ಬಂತು, ಆಗ ಆ ಜನ ನಮ್ಮ ಕೆಲ್ಸ ಹೋಗೊತ್ತೆ, ಬೀದಿಗೆ ಬೀಳ್ತಿವಿ ಯಾರು ಕರ್ನಾಟಕದಲ್ಲಿ ಮೊಬೈಲ್ ಬಳಸಬಾರದು, ಎಲ್ಲಾ ನಮ್ಮ ಬೂತ್ ಬಳಸಬೇಕು ಅಂತ ಹಠ ಮಾಡಿದ್ದರೆ ನೀವೆಲ್ಲಾ ಒಪ್ಪಿಕೊಂಡು ಸುಮ್ಮನೆ ಇರುತ್ತಿದ್ದರಾ, ಅಲ್ಲ ಈಗ ಮೋಬೈಲ್ ಬಳಸುವಾಗ ಆ ಕುಟುಂಬಗಳ ಬಗ್ಗೆ ಯೊಚನೆ ಮಾಡಿದ್ರಾ ಯಾವಗಾಲಾದರೂ ??
ಹೀಗೆ ಹೊಸತನ, ತಂತ್ರಜ್ಞಾನ ಬೇಡ ಅಂತ ಹೇಳುವುದು ಬರಿ ಕಲಾವಿದರಲ್ಲ ಇಡಿ ಕನ್ನಡಿಗರೇ ಎಲ್ಲರ ಮುಂದೆ ಬೀದಿಗೆ ಬೀಳುವ ಹಾಗೆ ಮಾಡುತ್ತದೆ


C) ಇವಾಗಿನ ಕನ್ನಡ ಚಿತ್ರಗಳಿಂದ ಕನ್ನಡಿಗರಿಗೆ ಸಂಪೂರ್ಣ ನ್ಯಾಯ ಮತ್ತು ಕೆಲ್ಸ ಸಿಗುತ್ತ ಇದೆಯಾ ?

೧) ಪರಭಾಷೆಯ ಹಿರೋಯಿನ್ ಯಾಕೆ ಬೇಕು ??, ಹಾಗೆ ಮಾಡಿದಾಗ ನಮ್ಮ ಕನ್ನಡ ನಟಿಯರಿಗೆ ಕೆಲ್ಸ ಹೋಗೊಲ್ವಾ

೨) ಪರಭಾಷೆಯ ಸವೆದ ಸಂಗೀತ ಯಾಕೆ ಬೇಕು, ಅದನ್ನು ಕೇಳಿದವರಿಗೆ ನೇಟಿವಿಟಿ ಅನಿಸುತ್ತದೆಯಾ , ಇಲ್ಲ ಸ್ವಂತಿಕೆ ಇದೆ ಅನಿಸುತ್ತೆದಾ. ಅಷ್ಟಕ್ಕೂ ಸಂಗೀತ ನಿರ್ಧೇಶಕರ ಕೆಳಗಡೆ ಅನೇಕ ಕೆಲ್ಸ ಮಾಡುವರಿಗೆ ಕೆಲಸ ಹೋಗುವದಿಲ್ಲವಾ ?

೩) ಕನ್ನಡ ಗಾಯಕರು ಬೇಡ, ಎಲ್ಲರಿಗೂ ಕುಮಾರ್ ಸಾನು, ಸೋನು ನಿಗಮ್, ಚಿತ್ರಾನೇ ಬೇಕು. ಯಾಕೆ ಕನ್ನಡದ ಗಾಯಕರಿಗೆ ಇದರಿಂದ ಅವಕಾಶ ತಪ್ಪಿ ಹೋಗೋಲ್ವಾ

೪) ಕ್ಯಾಮೆರಾಮೆನ್ ಕೂಡ ಬೇರೆ ಭಾಶೆಯವರೆ ಬೇಕು, ಆಗ ಯಾಕೆ ಯಾರೂ ಚಕಾರ ಎತ್ತೊಲ್ಲ ?

೫) ಶೂಟಿಂಗ್ ಮಾಡೊಕ್ಕೆ ಪರದೇಶವೇ ಬೇಕಾ, ನಮ್ಮ ಕನ್ನಡದ ನೆಲದಲ್ಲಿ ತೆಗೆದರೆ ಎಷ್ಟೋಂದು ಪ್ರವಾಸೋದ್ಯಮಕ್ಕೆ ನೆರವಾಗಿ ಕನ್ನಡಿಗರಿಗೆ ಸಹಾಯ ಆಗೊಲ್ವಾ, ಇದರಿಂದ ಅನೇಕ ಕನ್ನಡ ಕುಟುಂಬಗಳಿಗೆ ಅನ್ಯಾಯ ಆಗೊಲ್ವಾ

೫) ಹಾಡಿನಲ್ಲಿ ಕುಣಿಯುವದಕ್ಕೆ ವಿದೇಶಿ ಕಲಾವಿದರೇ ಬೇಕಾ , ನಮ್ಮ ನೆಲದ ಮಕ್ಕಳು ಗೆಜ್ಜೆ ಹಾಕೊಂಡು ಇದ್ದಾರ ಕುಣಿಯದೇ ಇರೊಕ್ಕೆ ?, ಅವರಿಗೆ ಕೆಲ್ಸ ಹೋಗೊಲ್ವಾ

೬) ಮಚ್ಚು,ಲಾಂಗುಗಳ ಸಾಲು ಸಾಲು ಚಿತ್ರ ಬರುತ್ತಿದೆಯೆಲ್ಲಾ, ಅದೇನು ಈ ಕನ್ನಡ ಮಣ್ಣಿನ ಸಂಸ್ಕೃತಿ ತೋರಿಸುತ್ತದಾ ಇಲ್ಲಾ ನಮ್ಮ ನೇಟಿವಿಟಿ, ಕ್ರಿಯೇಟಿವಿಟಿ ತೋರಿಸುತ್ತದೆಯಾ ?

೭) ಪರಭಾಶೆಯ ಚಿತ್ರವೂ ಬೆಂಗಳೂರಿನಲ್ಲಿ ಆ ಭಾಶೆಯಲ್ಲಿ ತೆರೆಕಂಡು ೧-೨ ವರುಶ ಆದಮೇಲೆ ಕನ್ನಡಕ್ಕೆ ಡಿಫೆರೆಂಟ್ ಅಂತ ಹಳಸು ಕೊಟ್ಟು, ಆ ಚಿತ್ರಕ್ಕೆ ಸರ್ಕಾರದ ಸಬ್ಸಿಡಿ, ತೆರಿಗೆ ವಿನಾಯತಿ ಕೇಳುವ ಬದಲು ಅದನ್ನೇ ಮೊದಲೆ ಕನ್ನಡದಲ್ಲಿ ತಂದರೆ ತಪ್ಪೇನು ?

ಹೀಗೆ ಸಾಲು ಸಾಲು ಕೊಡಬಹುದು, ಎಷ್ಟೊಂದು ಜನರಿಗೆ ಅನ್ಯಾಯ ಆಗುತ್ತಿದೆ ಎಂದು, ಇದೆಲ್ಲಾ ಇದ್ದರೂ ನಾವು ಅದನ್ನು ಕನ್ನಡ ಸಿನೆಮಾ ಅನ್ನುವುದು ಆದರೆ ಡಬ್ಬಿಂಗ್ ಮಾಡಿದ ಚಿತ್ರ ಯಾಕೆ ಕನ್ನಡ ಚಿತ್ರ ಆಗುವದಿಲ್ಲ ??

ಡಬ್ಬಿಂಗ್ ಬೇಡ ಅನ್ನುವವರು ಮೊದಲು ಅಪ್ಪಟ್ತ ಕನ್ನಡ ಚಿತ್ರ ಮಾಡಲಿ ಆಮೇಲೆ ಪರ-ವಿರೋಧ ಮಾತಾಡೊಣ ಅಲ್ವಾ


D) ಪ್ರೇಕ್ಷಕ ಚಲನಚಿತ್ರ ನೋಡುವುದು ಸಂಸ್ಕ್ರುತಿ ಕಲಿಯುವದಕ್ಕೆ

ಕನ್ನಡಿಗರೇ ಅಲ್ಲ ಜಗತ್ತಿನಲ್ಲಿ ಯಾವುದೇ ಪ್ರೇಕ್ಷಕ ಚಲನಚಿತ್ರ ಮಂದಿರಕ್ಕೆ ಹೋಗುವುದು ಮನರಂಜನೆಗೆ. ತನ್ನ ಮನಸ್ಸಿನಲ್ಲಿ ೧೦೮ ಅಡ್ಡಿ,ಚಿಂತೆಗೆಳಿದ್ದರೂ ದುಡ್ಡು ಕೊಟ್ಟು ೩ ಗಂಟೆ ಅವುಗಳನು ಮರೆಯಲು ಪ್ರಯತ್ನ ಮಾಡುತ್ತಾನೆ. ಅವನಿಗೆ ನಾವು ಕೊಟ್ಟಿದ್ದು ನೀನು ನೋಡಬೇಕು, ಹೆಚ್ಚಿನದು ಕೇಳಬಾರದು ಎಂದರೆ ಅವನು ತನ್ನ ಮನರಂಜನೆಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಆ ಸೂಕ್ಷತೆಯನ್ನು ಅರ್ಥ ಮಾಡಿಕೊಳ್ಳದೇ ಅಯ್ಯೊ .. ನಮ್ಮ ಕನ್ನಡಿಗರಿಗೆ ಸ್ಬಾಭಿಮಾನವಿಲ್ಲ , ನಮ್ಮ ಕೈ ತಪ್ಪಿ ಹೋಗಿವೆ ಆ ಜಿಲ್ಲೆಗಳೂ ಎಂದು ಬಾಯಿ ಬಡಿದುಕೊಂಡರೆ ವಾಸ್ತ್ವವ ಅರ್ಥ ಮಾಡಿಕೊಳ್ಳದ ಲೂಸ್ ಟಾಕ್ ಆಗುತ್ತದೆ. ಬಡವ ನೀ ಮಡಗಿದಂಗೆ ಇರು ಎಂದು ಕನ್ನಡ ಪ್ರೇಕ್ಷಕರನ್ನು ಕಾಣುವ ತಾತ್ಸರವೇ ಕನ್ನಡ ಚಿತ್ರರಂಗವನ್ನು ಈ ಪರಿಗೆ ನಿಲ್ಲಿಸಿದೆ.

ಅಷ್ತಕ್ಕೂ ಸ್ವಂತ ಕಥೆಯನ್ನು ಕೊಟ್ಟ ಚಿತ್ರಗಳನ್ನು ಕನ್ನಡಿಗ ಅಪ್ಪಿಕೊಂಡಿಲ್ಲವೇ ??


E) ಕನ್ನಡ ಚಿತ್ರರಂಗ ಮಸಣದ ಕಡೆ ಮುಖ ಮಾಡಿದೆ.

ಇದಕ್ಕೆ ಪ್ರೇಕ್ಷಕ ಕಾರಣರಲ್ಲ, ಇದು ಸ್ವಂಕೃತ ಅಪರಾಧ, ಅದಕ್ಕೆ ಡಬ್ಬಿಂಗ್ ಬೇಡ ಅನ್ನುವುದು ನಿಜವಾದ ಸಮಸ್ಯೆಯಿಂದ ದೂರ ಹೋದ ಹಾಗೆ. ಅಷ್ತಕ್ಕೂ ಮಾತಿಗೆ ಮುಂಚೆ ತಮಿಳ್-ತೆಲುಗು ಕಡೆ ನೋಡಿ ಅನ್ನುವ ಜನರಿಗೆ ಅಲ್ಲಿರುವ ಡಬ್ಬಿಂಗ್ ಕಾಣುವದಿಲ್ಲವೇ ?

ಕಾರಣಗಳನ್ನು ಹುಡುಕುತ್ತ ಹೋದರೆ ..ನಮಗೆ ಕಾಣುವುದು

೧) ಸರಿಯಾದ ವರ್ಗ ಅಧಿಕಾರದಲ್ಲಿ ಇಲ್ಲದೇ ಇರುವುದು.
೨) ಕನ್ನಡ ಚಲನಚಿತ್ರೋದ್ಯಮವನ್ನು ನಡೆಸುತ್ತ ಇರುವವರು ಭಟ್ಟಂಗಿತನ
೩) ಚಲನಚಿತ್ರ ಮಂದಿರದ ಕೊರತೆ
೪) ಸವಕಲು ರಿಮೇಕ್ ಚಿತ್ರಗಳು.
೫) ಮಾರುಕಟ್ಟೆ ವಿಸ್ತರಣೆ ಮಾಡದೇ ಇರುವುದು
೬) ಸಮರ್ಥ ನಾಯಕತ್ವದ ಕೊರತೆ.
೭) ಮುಖ್ಯವಾಗಿ ಕನ್ನಡ ಪ್ರೇಕ್ಷಕರನ್ನು ಕಡೆಗಣಿಸಿ, ಇವರು ನೋಡಿ ಇಷ್ಟ ಪಟ್ಟು ತೆಗೆದರೆ ನೋಡಬೇಕು ಇಲ್ಲವಾದರೆ ಇಲ್ಲ ಅನ್ನೊ ದೋರಣೆ.

ಪರಭಾಷೆಯನ್ನು ಕಲಿತು ಆಯಾ ಭಾಷೆಯನ್ನು ನೋಡಿದರು ತಪ್ಪಿಲ್ಲ, ಆದರೆ ಅದು ಕನ್ನಡದಲ್ಲಿ ಬರುವುದು ಬೇಡ ಅನ್ನುವ ದೋರಣೆಯಿಂದ ಅನುಭವಿಸುವುದು ಬರೀ ಭಾಷೆ ಅಷ್ಟೆ. ಕನ್ನಡಿಗನಿಗೆ ತನ್ನ ಮನರಂಜನೆ ತನ್ನ ಭಾಷೆಯಲ್ಲೇ ಸಿಕ್ಕರೆ ಮಾತ್ರ ಕನ್ನಡ ಉಳಿಯುವುದು ಇಲ್ಲ ಅದು ಚಿರನಿದ್ರೆಗೆ ಜಾರುವುದು.