Tuesday, May 02, 2006

ನಾವೇಕೆ ಹೀಗೆ ???


ಕರ್ನಾಟಕ ಕಂಡ ಸಾರ್ವಭೋಮರಲ್ಲಿ ರಾಷ್ಟ್ರಕೂಟರು,ಚಾಲುಕ್ಯರು,ಹೋಯ್ಸಳರು,ವಿಜಯನಗರ ಮತ್ತು ಕದಂಬರು ಅನೇಕರು ನಮ್ಮ ರಾಜ್ಯಗಳನ್ನು ೧೦೦೦-೧೫೦೦ ವರ್ಷಗಳು ಆಳಿದರು. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಪೂರ್ವಜರೇ ನಮ್ಮ ಪೂರ್ವಜರು, ಇವರಲ್ಲಿನ ಹರಿದ ರಕ್ತವೇ ನಮ್ಮಲ್ಲಿ ಇಂದು ಹರಿಯುತ್ತಿರುವುದು, ಆದರೆ ಅವರಲ್ಲಿದ್ದ ಕಿಚ್ಚು, ಸ್ವಾಭಿಮಾನ ಮರೆಯಾಗಿ ಷಂಡತನ ಮತ್ತು ಕೀಳರಿಮೆ ಆವರಿಸಿದೆ.

ನಮ್ಮ ರಾಜರ ಮತ್ತು ಪೂರ್ವಿಕರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರದ ಕಾರಣವೇ ನಮಗೆ ಅನಿಸಿರುವುದು ನಾವು ಯಾವುದೋ ಹೇಡಿಗಳ ರಕ್ತಕ್ಕೆ ಹುಟ್ಟಿದೆವು, ನಮ್ಮಲ್ಲಿ ಅಥಿರಥ-ಮಹಾರಥರು ಇಲ್ಲಾ ಅಂತ. ನಿಮಗೆ ಗೊತ್ತಾ ಬೇರೆ ಭಾಷಿಕರನ್ನು ಕೇಳಿ ನೋಡಿ ಅವರ ಮಹಾನ್ ಅರಸುಗಳ ಬಗ್ಗೆ ಅಶೋಕ,ಚಂದ್ರಗುಪ್ತ ಎಂದು ಹೇಳುತ್ತಾರೆ, ಆದರೆ ಅವರು ಆಡುತ್ತ ಇದ್ದ ಭಾಷೆಯೇ ಬೇರೆ ಇಂದಿನವರು ಆಡುವ ಭಾಷೆಯೆ ಬೇರೆ. ಆದರೆ ನಮ್ಮ ರಾಜರು ಆಡುತ್ತಿದ್ದ ಭಾಷೆಯನ್ನೆ ನಾವು ಇಂದು ಕೂಡ ಆಡುತ್ತ ಇದ್ದೇವೆ. ಆ ಮಹಾನ್ ಚೇತನಗಳು ನಡೆದಾಡಿದ ನೆಲವನ್ನೇ ನಾವು ಇಂದು ತುಳಿಯುತ್ತಿರುವುದು. ನಮ್ಮ ಸ್ವಂತ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲಾಗದೇ ನಾವು ಇತರರ ಜೊತೆ ಇಲ್ಲಾ ರಾಷ್ಟ್ರೀಯತೆಯ ಹೆಸರಲ್ಲಿ ಹಿಂದೂಸ್ಥಾನಿ ಎಂದು ಗುರುತಿಸಿಕೊಳ್ಳುವುದು
ನಿಜಕ್ಕೂ ಕೀಳೆರಿಮೆಯ ಸಂಗತಿ.

ಆನಾದಿ ಕಾಲದಿಂದಲೂ ಮೆರೆದ, ಇತಿಹಾಸದಲ್ಲಿ ಹೆಸರು ಮಾಡಿದ ಈ ಪ್ರದೇಶವೇ ನಮ್ಮ ಜನುಮಭೂಮಿ. ಈ ಹಿಂದೂಸ್ಥಾನ ಅನ್ನುವುದು ಮೊಗಲರು ಬಂದಾಗ ಹುಟ್ಟಿದ ಪದ, ಆದರೆ ನಿಮಗೆ ಗೊತ್ತಾ ಮಹಭಾರತದ ಸಮಯದಲ್ಲಿ ನಮ್ಮ ಕರ್ನಾಟಕದ ಹೆಸರಿದೆ.
"ಕರ್ಣಾಟಕ ಮಹಿಷಕಾ ವಿಕಲ್ಪ ಮೂಷಕಸ್ತದಾ ಝೀಲ್ಲಿಕಾ:"
-ಭೀಷ್ಮಪರ್ವ

ಅಂದರೆ ನಮ್ಮ ಈ ನಾಡು ೫೦ ವರುಷಗಳ ಕೆಳಗೆ ಒಂದಾಗಿದ್ದು ಅಲ್ಲ. ಹರಪ್ಪ-ಮೊಹೆಂಜದಾರೋನಲ್ಲಿ ನಮ್ಮ ನಾಡನ್ನು ಪ್ರತಿಬಿಂಬಿಸುವ ಚಿತ್ರಗಳು ಇವೆ. ನಾಗರೀಕತೆಯ ತೊಟ್ಟಿಲಿನ ಸಮಯದಲ್ಲೂ ನಮ್ಮ ನಾಡು ಇತ್ತು ಎಂದು ತಿಳಿಯುತ್ತದೆ.
ಇಷ್ಟು ಹಳೆಯ ಪ್ರಾಚೀನ ಸಂಸ್ಕೃತಿ ಇರುವ ನಾವು ಇಂದು ಷಂಡರ ಹಾಗೆ ಇತರರ ಜೊತೆ ಗುರುತಿಸಿಕೊಳ್ಳುವ ಔಚಿತ್ಯವೇನು ??
ಅವರ ಭಾಷೆಯನ್ನು ಕಲಿತು, ಅವರ ಹಾವ-ಭಾವಗಳನ್ನು ಅನುಕರೀಣಿಸುವ ಕರ್ಮವೇನು ??

ನಮ್ಮ ರಾಜರು ಯಾರು ಚಿನ್ನದ ಚಮಚದ ಜೊತೆ ಹುಟ್ಟಿದವರಲ್ಲ, ಪ್ರತಿ ವಂಶವನ್ನು ಕಟ್ಟಿದವರ ಹಿಂದೆ ಒಂದು ದೊಡ್ಡ ಕಥೆ ಇದೆ. ಶೌರ್ಯ ಮತ್ತು ಸಾಧನೆಯ ಸಂಕೇತವಿದೆ. ಬೆವರು, ರಕ್ತ ಸುರಿಸಿ ರಾಜ್ಯವನ್ನು ಕಟ್ಟಿದರು, ಉತ್ತರದವರ ಜೊತೆ ಮತ್ತು ತಮಿಳರ ಜೊತೆ ಕಾದಾಡಿ ತಿಪ್ಪೆಗಳನ್ನು ಉಪ್ಪರಿಗೆಯಾಗಿ, ಸೆರೆಮನೆಯನ್ನು ಅರಮನೆಯಾಗಿ ಬದಲಾಯಿಸಿದ ಮಹಾನ್ ಪುರುಷರು ಕೇವಲ ನಮ್ಮ ಪೂರ್ವಜರು ಮಾತ್ರ.

೧೦೦೦-೧೫೦೦ ವರ್ಷಗಳು ಅವ್ಯಾಹತವಾಗಿ ನಮ್ಮ ಕನ್ನಡ ವಂಶದವರ ಕೈಯಲ್ಲಿ ಆಳಿದ ಪುಣ್ಯಭೂಮಿ ನಮ್ಮದು. ಕರ್ನಾಟಕವೆಂದರೇ ಇಂದಿನ ಭೌಗೋಳಿಕ ನಾಡೇ ? ಈ ಪ್ರದೇಶವನ್ನು ನಮ್ಮವರೂ ಆಳಿದರೆ ಎಂದು ನಮ್ಮಲ್ಲಿ ಪ್ರಶ್ನೆ ಮೂಡಬಹುದು.

"ಕಾವೇರಿಯಿಂದಮಾ ಗೋದಾವರಿ ವರಮಿರ್ಥ ನಾಡದ ಕನ್ನಡದೊಳ್ ಭಾವಿಸಿದ
ಜನಪದಂ ವಸುಧಾ ವಳಯ ವೀಲಿನ ವಿಶದ ವಿಷಯ ವಿಶೇಷಂ"
-ಕವಿರಾಜ ಮಾರ್ಗ

ಇದು ೯ನೇ ಶತಮಾನದ ಶ್ರೀವಿಜಯನ "ಕವಿರಾಜಮಾರ್ಗ"ದ ಸಾಲುಗಳು. ಅಂದಿನ ರಾಜಧಿರಾಜ ಕನ್ನಡವೀರ ನೃಪತುಂಗನ ಕಾಲದಲ್ಲಿ ಕರ್ನಾಟಕದ ವಿಸ್ತಿರ್ಣ ಮತ್ತು ಅಲ್ಲಿನ ಜನರ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದಾನೆ ನೋಡಿ. ಗಮನಿಸಬೇಕಾದ ಅಂಶವೆಂದರೆ ಅಂದಿನ ಭಾಷೆ ನಾವು ಇಂದು ಆಡುತಿದ್ದ ಭಾಷೆ ಅಲ್ಲವೇ ??

ಸುಲಭವಾಗಿ ನಮಗೆ ಇದು ಅರ್ಥವಾಗುತ್ತದೆ, " ಉತ್ತರದ ಗೋದಾವರಿಯಿಂದ , ದಕ್ಷಿಣದ ಕಾವೇರಿವರೆಗೆ ಆ ರಾಜನ ಸಂಸ್ಥಾನ ಹಬ್ಬಿತ್ತು. ಅಲ್ಲಿನ ಕನ್ನಡ ಜನರು ವಿವೇಕಿಗಳು,ಧೈರ್ಯಶಾಲಿಗಳು ಮತ್ತು ಇಲ್ಲಿನ ಸಮಾಜ ಈಡಿ ಜಗತ್ತಿನಲ್ಲಿ ವಿಶೇಷ".
ಅಲ್ಲಿನವರೆಗೂ ನಮ್ಮ ರಾಜ್ಯ ಹಬ್ಬಿತ್ತು ಅಂತ ಅಲ್ಲಿ ಸಿಕ್ಕ ಕಲ್ಲಿನ ಅವಶೇಷಗಳೇ ಪುರಾವೆ. ಅಷ್ಟೆ ಅಲ್ಲ ಇಂದಿನ ಮಹರಾಷ್ಟ ರಾಜ್ಯದ ಅನೇಕ ಊರಿನ ಹೆಸರುಗಳು ಕನ್ನಡದಲ್ಲಿ ಇರುವುದೇ ಇದಕ್ಕೆ ನಿದರ್ಶನ.
"ಕೆಂದೂರು,ಕಣಕವಲ್ಲಿ,ಗಾಣಗಪುರ,ಶಿರೋಳ, ಕಲ್ಲಮಠ,ಪೊಯನಾಡು,ಕಳಸ" ಇದಲ್ಲದೇ "ಕೃಷ್ಣಂಭಟ್ಟ, ಅಣ್ಣಂಭಟ್ಟ ಊರುಗಳ ಹೆಸರಲ್ಲಿ "ಮಂ"ಕಾರವು ಕನ್ನಡ ಪ್ರತ್ಯಯವಾಗಿದೆ.


ಯಾಕೆ ನಮಗೆ ನಮ್ಮ ಪುಲಕೇಶಿ,ತೈಲಪ,ಮಯೂರವರ್ಮ,ಗೊವಿಂದ-೩,ವಿಕ್ರಮಾದಿತ್ಯ ಆದರ್ಶರಾಗುವದಿಲ್ಲ, ಅವರ ಕಥೆ ಕೇಳುತ್ತಿದ್ದರೆ ನಮಗೆ ರೋಮಾಂಚನ ಏಕೆ ಆಗುವದಿಲ್ಲ, ಇವರು ನಮ್ಮ ಪೂರ್ವಜರು ಎಂದು ಎದೆ ತಟ್ಟಿ ಹೇಳಲು ಸಂಕೋಚವೇಕೆ.ಗಾಂಡುಗಳಾಗಿ ಬದುಕಿದ್ದು ಸಾಕು, ಗಂಡುಗಲಿಯಾಗಿ ಎಂದು ಇವರು ನಮಗೆ ನೀತಿಪಾಠ ಹೇಳುತ್ತಿಲ್ಲವೇ ?


ಕೊಸರು:- ಮಕ್ಕಳಿಗೆ ನಮ್ಮ ಇಂದಿನ ಪಾಲಕರು ಹೆಚ್ಚಾಗಿ ನಮ್ಮ ರಾಜರ ಕಥೆಗಳನ್ನು ಹೇಳುವದಿಲ್ಲ, ಯಾಕೆ ಅಂದರೆ ಅವರಿಗೆ ಗೊತ್ತಿರುವದಿಲ್ಲ. ಅಮರಚಿತ್ರಕಥಾ ಮುಂತಾದ ಮಕ್ಕಳ ಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ ಚಕಾರವಿಲ್ಲ. ರಾಜರು ಅಂದರೆ ಅಶೋಕ,ಚಂದ್ರಗುಪ್ತ,ಶಿವಾಜಿ ಕಥೆಗಳು ಕಾಣುತ್ತದೆ. ಅದ್ದರಿಂದ ನಮ್ಮ ರಾಜರ ಕಥೆಗಳ ಅಮರಚಿತ್ರಕಥೆಯನ್ನು ಪ್ರಕಟಿಸಬೇಕು.
ಇಲ್ಲಾ ನನ್ನಂತ ಸಾವಿರಾರು ಜನರಿಗೆ ಕನ್ನಡ ಕಿಚ್ಚನ್ನು ಹತ್ತಿಸಿದ ಕನ್ನಡ ಕುಲಪುರೋಹಿತ ದಿ ಶ್ರೀ ಆಲೂರು ವೆಂಕಟರಾಯರು ಮತ್ತೆ ಹುಟ್ಟಿ ಬರಬೇಕು.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಬಗ್ಗೆ ತಿಳಿಸದಿದ್ದರೆ ನಾವು ಹೇಡಿಗಳ ಸಮಾಜ ಕಟ್ಟುವದರಲ್ಲಿ ಸಂಶಯವಿಲ್ಲ.